ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳು ಕಾಳಗ

ಪಿಕ್ಚರ್ ಪ್ಯಾಲೆಸ್
Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಳಿಗ್ಗೆ ವಾಕಿಂಗ್ ಹೋಗುವಾಗ ಏನಾದರೂ ತಿಂಡಿ ಕೈಯ್ಯಲ್ಲಿ ಹಿಡಿದುಕೊಂಡು ಹೋಗುವುದು ಹೆಚ್ಚಿನವರ ಅಭ್ಯಾಸ. ವಾಕಿಂಗ್ ಮಾಡುತ್ತಾ ಸಾಗಿದಂತೆ ತಾವು ಒಯ್ದ ತಿಂಡಿಯನ್ನು ಪಕ್ಷಿಗಳಿಗೆ ನೀಡಿ ಅವುಗಳ ಹೊಟ್ಟೆ ತಣ್ಣಗಿಡುವ ಮೂಲಕ ಖುಷಿಪಡುತ್ತಾರೆ. ವಾಕಿಂಗ್ ಮಾಡುವವರು ಹಾಕುವ ಬ್ರೇಕ್ ಫಾಸ್ಟ್ ಸಮಯ, ಆ ಪ್ರದೇಶದ ಪ್ರಾಣಿ ಪಕ್ಷಿಗಳಿಗೆ ತಿಳಿದಿದೆ. ಹಾಗಾಗಿ ಅವರ ಬರುವಿಕೆಯನ್ನು ಸ್ವಾಗತಿಸಲು ಅವು ಕಾದು ಕುಳಿತಿರುತ್ತವೆ.

ಇತ್ತೀಚಿಗೆ ‘ಚಳಿ’ಯನ್ನು ಸೆರೆಹಿಡಿಯಲು ಕಬ್ಬನ್ ಪಾರ್ಕ್ ಗೆ ಹೋಗಿದ್ದಾಗ ಆಹಾರಕ್ಕಾಗಿ ಪ್ರಾಣಿ-–ಪಕ್ಷಿಗಳ ಮಧ್ಯೆ ನಡೆಯುವ ಜಗಳವೊಂದಕ್ಕೆ ಕ್ಯಾಮೆರಾ ಸಾಕ್ಷಿಯಾಯಿತು. ಯಾರೋ ಪುಣ್ಯಾತ್ಮರು ಹಾಕಿದ್ದ ಕಾಳುಗಳನ್ನು ಪಾರಿವಾಳ ಮತ್ತು ಗಿಳಿಗಳು ಖುಷಿಯಿಂದ ತಿನ್ನುತ್ತಿದ್ದವು. ಅದೇ ಸಮಯಕ್ಕೆ ಅಳಿಲು ಹೈಜಂಪ್ ಮಾಡುತ್ತಾ ಅಲ್ಲೇ ಪಕ್ಕದ ಮರವನ್ನು ತಲುಪಿತು. ಕಳ್ಳ ಹೆಜ್ಜೆ ಹಾಕುತ್ತಾ ಮೆಲ್ಲಮೆಲ್ಲನೇ ಕಾಳು ಹಾಕಿದ್ದ ಕಲ್ಲು ಹಾಸಿನ ತುದಿಗೆ ಬಂದ ಅಳಿಲು ಒಂದೊಂದೇ ಕಾಳು ತಿನ್ನತೊಡಗಿತು. ಅದನ್ನು ನೋಡಿದ ಪಾರಿವಾಳಕ್ಕೆ ಇದ್ಯಾಕೋ ಸರಿ ಬರಲಿಲ್ಲ.

ಮತ್ತಷ್ಟು ಪಾರಿವಾಳಗಳನ್ನು ಸೇರಿಸಿ ಎಲ್ಲಾ ಆಹಾರವೂ ತಮಗೇ ಸೇರಿದ್ದು ಎಂದು ವಾದ ಮಾಡಿದಂತೆ ಗಬಗಬನೆ ತಿನ್ನತೊಡಗಿದವು. ಒಂದು ತುದಿಯಲ್ಲಿ ನಿಂತು ತನ್ನಷ್ಟಕ್ಕೆ ಕಾಳು ತಿನ್ನುತ್ತಿದ್ದ ಗಿಳಿಗೆ ಇದನ್ನೆಲ್ಲಾ ನೋಡಿ ಭಯವಾಯಿತು. ಒಂದೊಂದೇ ಕಾಳು ಹೆಕ್ಕುತ್ತಾ ಅತ್ತಿತ್ತ ನೋಡತೊಡಗಿತು. ಅದೇ ಸಮಯಕ್ಕೆ ಯಾರೋ ಒಂದೆರಡು ಬ್ರೆಡ್ ಚೂರುಗಳನ್ನು ಕಾಳುಗಳ ಪಕ್ಕಕ್ಕೆ ಹಾಕಿದರು. ಅದರ ಮೇಲೆ ಪಾರಿವಾಳ ಕಣ್ಣು ಹಾಕಿದ್ದಷ್ಟೇ, ಮರದಲ್ಲಿ ಕೂತು ಕೆಳಗೆ ಇದ್ದ ಬ್ರೇಕ್ ಫಾಸ್ಟ್ ನೋಡುತ್ತಿದ್ದ ಕಾಗೆ ಕಾವ್ ಕಾವ್ ಎನ್ನುತ್ತಾ ತನ್ನ ಎಲ್ಲಾ ಪರಿವಾರವನ್ನು ಬ್ರೆಡ್ ಚೂರಿನ ಬಳಿಗೆ ಕರೆತಂದಿತು. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಬಂದ ಕಾಗೆಗಳೆಲ್ಲಾ ಒಂದೊಂದೇ ಚೂರನ್ನು ಹೊಟ್ಟೆಗೆ ಸೇರಿಸತೊಡಗಿದವು.

ಆಕಾರದಲ್ಲಿ ದೊ­­ಡ್ಡದಾಗಿರುವ ಕಾಗೆ ಬ್ರೆಡ್ ತಿನ್ನುತ್ತಿರುವುದನ್ನು ನೋಡುತ್ತಿದ್ದ ಇತರ ಪಕ್ಷಿಗಳು ಒಂದು ಹೆಜ್ಜೆ ಮುಂದೆ ಇಡುವುದು, ಹೆದರಿಕೆಯಿಂದ ಇನ್ನೊಂದು ಹೆಜ್ಜೆ ಹಿಂದೆ ಇಡುವುದು ಮಾಡುತ್ತಾ ಬ್ರೆಡ್ ಖಾಲಿಯಾಗುವವರೆಗೆ ಹೊಟ್ಟೆ ಉರಿಯಿಂದಲೇ ನೋಡುತ್ತಿದ್ದವು. ಇದ್ಯಾವುದಕ್ಕೂ ಕ್ಯಾರೇ ಎನ್ನದ ಕಾಗೆಗಳ ನಾಯಕ ಪ್ರಾರಂಭದಿಂದ ಕೊನೆಯವರೆಗೆ ಅಲ್ಲೇ ನಿಂತು ತಮ್ಮ ಗುಂಪಿನವರನ್ನು ಕರೆದು ಬ್ರೆಡ್ ಖಾಲಿ ಮಾಡಿಸಿತು. ಇದೆಲ್ಲವನ್ನೂ ನೋಡಿ ಬೇಸತ್ತ ಉಳಿದ ಪಕ್ಷಿಗಳೆಲ್ಲಾ ಪಾಲಿಗೆ ಬಂದದ್ದೇ ಪಂಚಾಮೃತ ಎಂಬಂತೆ ನೆಲದ ಮೇಲೆ ಬಿದ್ದಿದ್ದ ಕಾಳುಗಳನ್ನು ಹೆಕ್ಕತೊಡಗಿದವು.­­­­
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT