ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಾವಾ' ಕಣ್ಣಲ್ಲಿ ಮೈಸೂರು ಅರಮನೆ!

Last Updated 13 ಡಿಸೆಂಬರ್ 2012, 10:53 IST
ಅಕ್ಷರ ಗಾತ್ರ

ಮೈಸೂರು: ಅಂಬಾವಿಲಾಸ ಅರಮನೆಯ ಒಳಾಂಗಣ ವಿನ್ಯಾಸ, ಪೇಂಟಿಂಗ್, ಇಂಡೊ ಸಾರ್ಸೆನಿಕ್ ಶೈಲಿಯ ವಾಸ್ತುಶಿಲ್ಪಗಳನ್ನು ತಮ್ಮ ಕ್ಯಾಮೆರಾ ಕಣ್ಣಿನ ಮೂಲಕ ಕಾವಾ ವಿದ್ಯಾರ್ಥಿಗಳು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.

ಮೈಸೂರು ಅರಮನೆಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದವರು `ಈ ದೃಶ್ಯಾವಳಿಗಳು ನಮ್ಮ ಕಣ್ಣಿಗೆ ಇಷ್ಟು ಚೆಂದವಾಗಿ ಅರಮನೆಯಲ್ಲಿ ಕಾಣಿಸಲೇ ಇಲ್ಲವಲ್ಲ' ಎನ್ನುವ ಉದ್ಘಾರ ಇಲ್ಲಿನ ಛಾಯಾಚಿತ್ರ ಗಳ ವೈಶಿಷ್ಟ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಹೌದು, ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ (ಕಾವಾ) ಡಿ.12ರಿಂದ 15ರವರೆಗೆ ಏರ್ಪಡಿಸಿರುವ `ಮೈಸೂರು ಅರಮನೆ ಛಾಯಾಚಿತ್ರ ಪ್ರದರ್ಶನ' ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕಾಲೇಜಿನ ಫೋಟೊಗ್ರಫಿ ಅಂಡ್ ಫೋಟೊ ಜರ್ನಲಿಸಂ ವಿಭಾಗದ ಪ್ರಥಮ , ದ್ವಿತೀಯ, ಅಂತಿಮ ವರ್ಷದ ಒಟ್ಟು 15 ವಿದ್ಯಾರ್ಥಿಗಳು  ಮೈಸೂರು ಅರಮನೆಯ ಹೊರಾಂಗಣ ಮತ್ತು ಒಳಾಂಗಣ ದೃಶ್ಯಗಳ ಚಿತ್ರಗಳನ್ನು ತಮ್ಮ ಕ್ಯಾಮೆರಾ ಗಳಲ್ಲಿ ದಾಖಲಿಸಿದ್ದಾರೆ. ಅರಮನೆ ಮಂಡಳಿಯ ವಿಶೇಷ ಅನುಮತಿ ಮೇರೆಗೆ ಸೆ. 8ರಿಂದ 15 ರವರೆಗೆ ಒಂದು ವಾರ ಕಾಲ ತೆಗೆದಿರುವ ಛಾಯಾಚಿತ್ರ ಗಳನ್ನು ಒಪ್ಪವಾಗಿ ಜೋಡಿಸಿ ಕಾವಾದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶಿಸಿದ್ದಾರೆ.

ಅರಮನೆಯಲ್ಲಿನ ಖಾಸಗಿ ದರ್ಬಾರ್ ಹಾಲ್, ಸಾರ್ವಜನಿಕ ದರ್ಬಾರ್‌ಹಾಲ್, ವಿವಾಹ ಸಭಾಂಗಣ, ಜಟ್ಟಿ ಕಾಳಗದ ಅಂಗಳ, ಒಡೆಯರು ಬಳಸುತ್ತಿದ್ದ ಪೀಠೋಪಕರಣ, ಹಳೆ ಮೈಸೂರು ಅರಮನೆಯ ಕಲಾಕೃತಿ, ಗಂಡ ಭೇರುಂಡ ಇರುವ ಸಿಂಹ ಲಾಂಛನದ ಗೇಟ್, ವಿಶಿಷ್ಟ ವಿನ್ಯಾಸದ ಕಂಬಗಳು, ವಿವಿಧ ಚಿತ್ತಾರದ ಚಾವಣಿ, ಮಿನುಗು ದೀಪ, ವಿದ್ಯುತ್ ಬಲ್ಬ್ ಮೂಲಕ ಕಂಗೊಳಿಸುವ ಅರಮನೆ ಮುಂತಾದ ಚಿತ್ರಗಳು ಕಾವಾ ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಮೈಸೂರು ಅರಮನೆಯ ಭವ್ಯತೆಗೆ ಮೆರುಗು ನೀಡಿವೆ.

ಛಾಯಾಚಿತ್ರ ಪ್ರದರ್ಶನವನ್ನು ಪತ್ರಕರ್ತ ಎಂ.ಬಿ.ಮರಮಕಲ್ ಬುಧವಾರ ಉದ್ಘಾಟಿಸಿದರು. ಅತಿಥಿಯಾಗಿ ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಕಾವಾ ಡೀನ್ ವಿ.ಎ.ದೇಶಪಾಂಡೆ ಇತರರು ಹಾಜರಿದ್ದರು.

`ಅರಮನೆಯಲ್ಲೂ ಚಿತ್ರಾವಳಿ'
ಮೈಸೂರು ಅರಮನೆಯ ಫೋಟೊಗಳನ್ನು ಲಕ್ಷಾಂತರ ಪ್ರವಾಸಿಗರು ತೆಗೆದಿದ್ದಾರೆ. ಆದರೆ `ರವಿ ಕಾಣದ್ದನ್ನು ಕವಿ ಕಂಡ' ಎಂಬಂತೆ, ಕಾವಾ ವಿದ್ಯಾರ್ಥಿಗಳು ಸೆರೆ ಹಿಡಿದ ಛಾಯಾಚಿತ್ರಗಳಿಗೆ ವಿಶೇಷ ಹೊಳಹು ದಕ್ಕಿದೆ. ಹೊಸ ಕೋನ, ನೆರಳು-ಬೆಳಕು ಸಂಯೋಜನೆ, ಸೃಜನಶೀಲತೆ ಈ ಚಿತ್ರಗಳಲ್ಲಿ ಎದ್ದು ಕಾಣುತ್ತವೆ. ಆದ್ದರಿಂದ ಈ 52 ಛಾಯಾಚಿತ್ರಗಳನ್ನು ಅರಮನೆಯ `ಬಿಡದಿ ಬ್ಲಾಕ್'ನಲ್ಲಿ ಶಾಶ್ವತವಾಗಿ ಪ್ರದರ್ಶಿಸಲು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ.

ಒಡೆಯರ ಅನುಮತಿ ಪಡೆದು, ಮಹಾರಾಣಿಯವರ ಬೆಡ್‌ರೂಮ್‌ನಿಂದ ಬ್ರಹ್ಮಪುರಿ ಗೇಟ್‌ವರೆಗಿನ ಅರಮನೆಯ ಎಲ್ಲ ದೃಶ್ಯಗಳನ್ನು ಕಾವಾ ವಿದ್ಯಾರ್ಥಿಗಳು ಫೋಟೊ ತೆಗೆಯಲು ಅವಕಾಶ ಕಲ್ಪಿಸಲಾಗುವುದು.
ಟಿ.ಎಸ್.ಸುಬ್ರಹ್ಮಣ್ಯಂ
ಉಪನಿರ್ದೇಶಕ, ಅರಮನೆ ಮಂಡಳಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT