ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರನು ಹರಿಯಲು ಬಿಟ್ಟು...

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯದಿಂದ ಬಿಟ್ಟ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ನಾಲೆಗೆ ಬಿಟ್ಟ ನೀರು ಜಮೀನಿನತ್ತ ಹರಿದು ಬರುತ್ತಿದೆ. ತಮಿಳುನಾಡಿಗೆ ಬಿಟ್ಟ ನೀರು ತಡೆಯಲು ಹೋರಾಟಕ್ಕೆ ಧುಮುಕಿದರೆ ನಾಲೆ ನೀರು ವ್ಯರ್ಥವಾಗಿ ಹೋಗುತ್ತದೆ. ನಾಲೆ ನೀರು ಬಳಸಿಕೊಂಡು ವ್ಯವಸಾಯಕ್ಕೆ ಇಳಿದರೆ ನದಿ ನೀರು ತಮಿಳುನಾಡಿನ ಪಾಲಾಗುತ್ತದೆ.

ಕಾವೇರಿ ಕಣಿವೆಯಲ್ಲಿರುವ ಬಹುತೇಕ ರೈತರ ಸಂಕಷ್ಟ ಇದು. ಕಾವೇರಿ ಹೋರಾಟ ಆರಂಭವಾಗಿ ಈಗಾಗಲೇ 22 ದಿನ ಕಳೆದು ಹೋಗಿದೆ. ಹೋರಾಟಕ್ಕೆ ಕೈಜೋಡಿಸಿದರೆ ಈಗ ಹೊಲದಲ್ಲಿ ಬೆಳೆದು ನಿಂತಿರುವ ಪೈರನ್ನು ರಕ್ಷಣೆ ಮಾಡುವವರು ಯಾರು ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.

ಮಂಡ್ಯ ಜಿಲ್ಲೆಯಲ್ಲಿ 46,815 ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬೆಳೆಯಲಾಗಿದೆ. ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಇದೆ. ಅದರಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದ ಕಬ್ಬು ಕಟಾವಿಗೆ ಬಂದಿದೆ. ಸಕಾಲಕ್ಕೆ ಕಟಾವು ಮಾಡದಿದ್ದರೆ ಕಬ್ಬು ಸುಮ್ಮನೆ ಒಣಗಿ ಹೋಗುತ್ತದೆ. ಕೆಲವು ಪ್ರದೇಶದಲ್ಲಿ ಕಬ್ಬಿಗೆ ಈಗ ದೊಡ್ಡಮರಿ ಮಾಡುವ ಕಾಲ. ರೈತರಿಗೆ ಈಗ ಕೈತುಂಬಾ ಕೆಲಸ.

ಬತ್ತದ ಗದ್ದೆಗಳಲ್ಲಿ ಈಗ ಕಳೆ ಕೀಳುವ, ಗೊಬ್ಬರ ನೀಡುವ ಕಾಲ. ಕಳೆ ಕೀಳಲು, ಗೊಬ್ಬರ ಹಾಕಲು ಕೂಲಿಗಳು ಬರುತ್ತಿದ್ದಾರೆ. ಈ ಸಮಯದಲ್ಲಿ ಹೋರಾಟಕ್ಕೆ ಹೋದರೆ ಕಳೆ ಬೆಳೆದು, ಗೊಬ್ಬರವೂ ಇಲ್ಲದೆ ಇಳುವರಿ ಕಡಿಮೆಯಾಗುತ್ತದೆ. ಮುಂದಿನ ಬೆಳೆಗಂತೂ ನೀರು ಸಿಗುವುದಿಲ್ಲ ಎನ್ನುವುದು ಗ್ಯಾರಂಟಿಯಾಗಿದೆ. ಈಗ ಹೊಲದಲ್ಲಿ ಇರುವ ಬೆಳೆಯನ್ನಾದರೂ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವ ತವಕ ಅವರದ್ದು. ಅದಕ್ಕೇ ಬಹುತೇಕ ರೈತರು ಈಗ ಹೊಲ ಬಿಟ್ಟು ಹೊರಕ್ಕೆ ಬರುತ್ತಿಲ್ಲ.

ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ ತಾಲ್ಲೂಕಿನ ಹಲವಾರು ಕಡೆ ತರಕಾರಿಗಳನ್ನು ಬೆಳೆಯಲಾಗುತ್ತದೆ. ಇದರಲ್ಲಿ 365 ದಿನವೂ ಕೆಲಸ. ಒಂದು ದಿನ ಬಿಟ್ಟರೂ ಮಾಡಿದ ಶ್ರಮವೆಲ್ಲಾ ವ್ಯರ್ಥ. `ತಮಿಳುನಾಡಿಗೆ ಕಾವೇರಿ ಹರಿದು ಹೋಗುತ್ತಿರುವುದು ದುಃಖದ ಸಂಗತಿ ನಿಜ. ಆದರೆ ಹೊಲದಲ್ಲಿ ಇರುವ ಬೆಳೆಯನ್ನು ರಕ್ಷಿಸಿಕೊಳ್ಳದಿದ್ದರೆ ಮುಂದೆ ತುತ್ತು ಅನ್ನ ತಿನ್ನೋಕೆ ಏನ್ ಮಾಡಾಣ~ ಎಂದು ಬೆಳಗೊಳದ ರೈತ ದೇವರಾಜು ಪ್ರಶ್ನೆ ಮಾಡುತ್ತಾರೆ.

`ಮನೆ ಬಾಗಿಲಿಗೆ ಭಾಗೀರಥಿ ಬಂದಾಗ ಕಣ್ಣು ಮುಚ್ಚಿ ಕುಳಿತರೆ ಆಯ್ತದಾ ಸಾಮಿ~ ಎಂದು ಹುಲಿಕೆರೆಯ ರಂಗಣ್ಣ ಕೇಳುತ್ತಾರೆ. ತಾನೂ ಒಂದು ದಿನ ಕಾವೇರಿ ಹೋರಾಟಕ್ಕೆ ಹೋಗಿ ಬೆಂಬಲ ಸೂಚಿಸಿ ಬಂದಿದ್ದಾಗಿ ತಿಳಿಸುತ್ತಾರೆ. ಅವರ ಹಾಗೆಯೇ ಸಾಕಷ್ಟು ಮಂದಿ ಆಗ ಈಗ ಹೋರಾಟಕ್ಕೆ ಹೋಗಿ ಬಂದಿದ್ದಾರೆ.

ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಸಹಸ್ರಾರು ರೈತರು ಇತ್ತೀಚೆಗೆ ಕೃಷ್ಣರಾಜ ಸಾಗರಕ್ಕೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿಯೂ ಕೃಷ್ಣರಾಜ ಸಾಗರದ ಸುತ್ತ ಇರುವ ಹೊಲಗಳಲ್ಲಿ ರೈತರು ದುಡಿಯುತ್ತಲೇ ಇದ್ದರು.

ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನೂ ಬರ ಪೀಡಿತ ಎಂದು ಘೋಷಿಸಲಾಗಿದೆ. ಮಳೆಯ ಕೊರತೆಯಿಂದ ಆಹಾರ ಧಾನ್ಯಗಳ ಉತ್ಪಾದನೆ ಕುಂಠಿತವಾಗಬಹುದು ಎಂದು ಕೃಷಿ ಇಲಾಖೆ ಭವಿಷ್ಯ ನುಡಿದಿದೆ. ಮೈಸೂರು ಜಿಲ್ಲೆಯಲ್ಲಿ 2012-13 ಸಾಲಿನಲ್ಲಿ ಒಟ್ಟಾರೆ 9.11 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆಯ (7.56 ಲಕ್ಷ ಟನ್ ಮುಂಗಾರು ಹಂಗಾಮಿನಲ್ಲಿ ಹಾಗೂ 1.55 ಲಕ್ಷ ಟನ್ ಹಿಂಗಾರಿಯಲ್ಲಿ) ಗುರಿ ಹೊಂದಲಾಗಿತ್ತು. ಈ ಪೈಕಿ ಜೋಳ, ರಾಗಿ, ಬತ್ತ 7.03 ಲಕ್ಷ ಟನ್ ಹಾಗೂ 0.53 ಲಕ್ಷ ಟನ್ ಬೇಳೆಕಾಳು ಬೆಳೆಯುವ ನಿರೀಕ್ಷೆ  ಇತ್ತು. 0.15 ಲಕ್ಷ ಟನ್ ಎಣ್ಣೆಕಾಳು, 10.74 ಲಕ್ಷ ಟನ್ ಕಬ್ಬು, 97 ದಶ ಲಕ್ಷ ಕೆಜಿ ತಂಬಾಕು, 1.72 ಲಕ್ಷ ಟನ್ ಹತ್ತಿ ಬರಬಹುದು ಎಂಬ ಅಂದಾಜಿತ್ತು.

ಆದರೆ ಈ ಪ್ರಮಾಣದ ಬೆಳೆ ಬರುವ ನಿರೀಕ್ಷೆ ಈಗ ಇಲ್ಲ. ಎಚ್.ಡಿ.ಕೋಟೆಯಲ್ಲಿ ಹತ್ತಿ, ಕೆ.ಆರ್.ನಗರ, ಪಿರಿಯಾಪಟ್ಟಣ, ಹುಣಸೂರುಗಳಲ್ಲಿ ತಂಬಾಕು ಬೆಳೆ ಮಳೆ ಇಲ್ಲದೆ ಸೊರಗಿದೆ. ನಂಜನಗೂಡಿನಲ್ಲಿ ಎಣ್ಣೆಕಾಳು ಉತ್ಪಾದನೆ ಕೂಡ ಕುಸಿತವಾಗಿದೆ.ಮೈಸೂರು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 4,31,575 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ ಬಿತ್ತನೆಯಾಗಿದ್ದು 3,81,992 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ. ಇಲ್ಲಿ ಬಿತ್ತನೆ ಮಾಡಿದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದರತ್ತಲೇ ಈಗ ರೈತನ ಚಿತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT