ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿಗೆ ಕೇಂದ್ರ ತಂಡ

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡು ನಡುವೆ ಉಲ್ಬಣಗೊಂಡಿರುವ ಕಾವೇರಿ ನದಿ ನೀರಿನ ವಿವಾದದ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಅಧ್ಯಯನ ನಡೆಸಲು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಡಿ.ವಿ. ಸಿಂಗ್ ನೇತೃತ್ವದ ಐವರು ಪರಿಣತರ ತಂಡ ಗುರುವಾರ ಮತ್ತು ಶುಕ್ರವಾರ ಉಭಯ ರಾಜ್ಯಗಳಿಗೂ ಭೇಟಿ ನೀಡಲಿದೆ.

ಕೇಂದ್ರ ಜಲ ಸಂಪನ್ಮೂಲ ಸಚಿವ ಪವನ್ ಕುಮಾರ್ ಬನ್ಸಲ್ ಬುಧವಾರ ಈ ವಿಷಯ ತಿಳಿಸಿದರು. ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್ ಜೇಕಬ್, ಉಪ ನಿರ್ದೇಶಕ ಷಾ, ಕೃಷಿ ಸಚಿವಾಲಯದ ಉಪ ಆಯುಕ್ತ ಪಾಂಡೆ ಮೊದಲಾದವರು ಪರಿಣತರ ತಂಡದ ಸದಸ್ಯರಾಗಿದ್ದಾರೆ. ಗುರುವಾರ ತಮಿಳುನಾಡಿಗೆ ಮತ್ತು ಶುಕ್ರವಾರ ಕರ್ನಾಟಕಕ್ಕೆ ಭೇಟಿ ನೀಡಲಿರುವ ತಂಡ ಜಲಾಶಯಗಳಲ್ಲಿರುವ ನೀರಿನ ಸಂಗ್ರಹ, ಒಳ ಹರಿವು ಹಾಗೂ ಬೆಳೆ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಲಿದೆ. ಸಿಂಗ್ ಶುಕ್ರವಾರ ರಾಜಧಾನಿಗೆ ಹಿಂತಿರುಗಲಿದ್ದಾರೆ. ಉಳಿದ ಸದಸ್ಯರು ಅನಂತರ ಹಿಂತಿರುಗಲಿದ್ದಾರೆ.

ಈ ತಿಂಗಳ 8ರಂದು ನಡೆಸಲು ನಿಗದಿಯಾಗಿರುವ `ಕಾವೇರಿ ಉಸ್ತುವಾರಿ ಸಮಿತಿ~ (ಸಿಎಂಸಿ) ಸಭೆ ಅಕ್ಟೋಬರ್ 15ರ ಬಳಿಕ ಕರ್ನಾಟಕ ತಮಿಳುನಾಡಿಗೆ ಬಿಡಬೇಕಾದ ನೀರಿನ ಪ್ರಮಾಣ ಕುರಿತು ತೀರ್ಮಾನಿಸಲಿದೆ. ಸೆ. 19ರಂದು ಸೇರಿದ್ದ ಕಾವೇರಿ ನದಿ ಪ್ರಾಧಿಕಾರದ ಸಭೆ ಸೆ.20ರಿಂದ ಅ.15ರವರೆಗೆ ದಿನಕ್ಕೆ 9000 ಕ್ಯೂಸೆಕ್ ನೀರು ಬಿಡಬೇಕೆಂದು ನಿರ್ದೇಶನ ನೀಡಿದೆ.

ಇಂದು ಪುನರ್ ಪರಿಶೀಲನಾ ಅರ್ಜಿ: ಸಿಆರ್‌ಎ ನಿರ್ದೇಶನ ಪಾಲಿಸಬೇಕೆಂಬ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಬುಧವಾರವೇ ಈ ಅರ್ಜಿ ಸಲ್ಲಿಸಬಹುದೆಂದು ನಿರೀಕ್ಷಿಸಲಾಗಿತ್ತು. ಗುರುವಾರ ಸಲ್ಲಿಕೆ ಆಗಲಿದೆ.

ಕರ್ನಾಟಕ ಹಾಗೂ ತಮಿಳುನಾಡಿನ ನೀರಿನ ಸ್ಥಿತಿಗತಿ, ಬೆಳೆ ಪರಿಸ್ಥಿತಿ, ಕರ್ನಾಟಕ ನೀರು ಬಿಟ್ಟಿರುವುದರಿಂದ ಆಗುವ ಪರಿಣಾಮ ಕುರಿತು ಅರ್ಜಿಯಲ್ಲಿ ವಿವರಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಪಿ.ಕೆ. ಬನ್ಸಲ್ ಅಧ್ಯಕ್ಷತೆಯಲ್ಲಿ ನಡೆದ ಜಲ ಸಂಪನ್ಮೂಲ ಸಚಿವರ ಸಭೆಯಲ್ಲಿ ಭಾಗವಹಿಸಲು ರಾಜಧಾನಿಗೆ ಆಗಮಿಸಿರುವ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಈ ಸಭೆ ಬದಿಯಲ್ಲಿ ಕೇಂದ್ರ ಸಚಿವರ ಜತೆ ಮಾತುಕತೆ ನಡೆಸಿದರು.

ಕಾವೇರಿ ನದಿಯಿಂದ ಅ.15ರವರೆಗೆ 9000 ಕ್ಯೂಸೆಕ್ ನೀರು ಬಿಡಬೇಕೆಂಬ ನಿರ್ದೇಶನವನ್ನು ಕೂಡಲೇ ತಡೆಹಿಡಿಯಬೇಕು ಎಂದು ಮನವಿ ಮಾಡಿದರು.

ಅಕ್ಟೋಬರ್ 15ರೊಳಗೆ ಪುನರ್ ಪರಿಶೀಲನಾ ಅರ್ಜಿ ಸಂಬಂಧ ತೀರ್ಮಾನ ಮಾಡಬೇಕು. ಉಭಯ ರಾಜ್ಯಗಳ ನೀರಿನ ಸ್ಥಿತಿಗತಿ, ಬೆಳೆ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಗಮನದಲ್ಲಿ ಇಟ್ಟುಕೊಂಡು ವಿವಾದ ಬಗೆಹರಿಸುವಂತೆ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ನೀರಾವರಿ ಸಚಿವರ ಸಭೆಯಲ್ಲಿ ಭಾಗವಹಿಸಿದ್ದ ತಮಿಳುನಾಡು ನೀರಾವರಿ ಸಚಿವ ಕೆ.ವಿ. ರಾಮಚಂದ್ರನ್ ಕೇಂದ್ರ ಜಲ ಸಂಪನ್ಮೂಲ ಸಚಿವರ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದರು ಎಂದು ಮೂಲಗಳು ಸ್ಪಷ್ಟಪಡಿಸಿವೆ.

`ಸಿಆರ್‌ಎ~ ನಿರ್ದೇಶನದಂತೆ ಅಕ್ಟೋಬರ್ 15ರವರೆಗೆ 9ಸಾವಿರ ಕ್ಯೂಸೆಕ್ ನೀರನ್ನು ಕರ್ನಾಟಕ ಬಿಡಲೇಬೇಕಿದೆ. ಈ ಪ್ರಮಾಣದಲ್ಲಿ ಬದಲಾವಣೆ ಇರುವುದಿಲ್ಲ. ಅನಂತರ ಹರಿಸಬೇಕಾದ ನೀರಿನ ಪ್ರಮಾಣ ಕುರಿತು ತೀರ್ಮಾನ ಮಾಡುವ ಅಧಿಕಾರವನ್ನು ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಗೆ `ಸಿಆರ್‌ಎ~ ನೀಡಿದೆ.

ತಮಿಳುನಾಡಿಗೆ 9000ಕ್ಯೂಸೆಕ್ ನೀರು ಬಿಡಬೇಕು ಎಂಬ ನಿರ್ದೇಶನ ಪುನರ್ ಪರಿಶೀಲಿಸುವಂತೆ ಕರ್ನಾಟಕ ಸಿಆರ್‌ಎಗೆ ಮೇಲ್ಮನವಿ ಸಲ್ಲಿಸಿದೆ. ಈ ಸಂಬಂಧ ತಮಿಳುನಾಡು, ಕೇರಳ ಮತ್ತು ಪುದುಚೇರಿಗೆ ಈಗಾಗಲೇ ನೋಟಿಸ್ ಜಾರಿ ಆಗಿದೆ.

ಮುಖ್ಯಮಂತ್ರಿ ಜಯಲಲಿತಾ `ಸಿಆರ್‌ಎ~ ಸಭೆಯಲ್ಲಿ ದಿನಕ್ಕೆ 2ಟಿಎಂಸಿ ಅಡಿಯಂತೆ 24ದಿನ ತಮಿಳುನಾಡಿಗೆ ನೀರು ಬಿಡಿಸಬೇಕೆಂದು ಮನವಿ ಮಾಡಿದ್ದರು. ಬಳಿಕ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ತಮಿಳುನಾಡು ಅರ್ಜಿ ಪರಿಶೀಲಿಸಿದ ಸುಪ್ರೀಂಕೋರ್ಟ್ `ಸಿಆರ್‌ಎ~ ನಿರ್ದೇಶನ ಪಾಲಿಸುವಂತೆ ರಾಜ್ಯಕ್ಕೆ ತಾಕೀತು ಮಾಡಿತು. ಈ ಆದೇಶದಿಂದ ಶನಿವಾರ ತಡ ರಾತ್ರಿ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT