ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಗ್‌ಫಿಷರ್ ಬ್ಯಾಂಕ್ ಖಾತೆ ಮುಟ್ಟುಗೋಲು

Last Updated 19 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಿಂಗ್‌ಫಿಷರ್ ವಿಮಾನಯಾನ ಕಂಪೆನಿಯ ಕೆಲವು ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆಯು ಮುಟ್ಟುಗೋಲು ಹಾಕಿಕೊಂಡಿದ್ದು, ಆ ಸಂಸ್ಥೆಯ ಸಾಕಷ್ಟು ವಿಮಾನಗಳ ಹಾರಾಟ ಎರಡನೇ ದಿನವಾದ ಭಾನುವಾರ ಕೂಡ ರದ್ದಾಗಿ ಪ್ರಯಾಣಿಕರು ಪರದಾಡಿದರು.

ಪ್ರತಿನಿತ್ಯ ಸಂಚರಿಸುತ್ತಿದ್ದ ಕಂಪೆನಿಯ 240 ವಿಮಾನಗಳ ಬದಲಿಗೆ ಭಾನುವಾರ 160ರಿಂದ 180 ವಿಮಾನಗಳು ಮಾತ್ರ ಸಂಚರಿಸಿವೆ ಎನ್ನಲಾಗಿದೆ. ಮುಂಬೈನಿಂದ ಹೊರಡಬೇಕಿದ್ದ 16 ಹಾಗೂ ದೆಹಲಿಯಿಂದ ತೆರಳಬೇಕಿದ್ದ 4 ವಿಮಾನಗಳ ಹಾರಾಟ ಕೂಡ ಇದರಲ್ಲಿ ಸೇರಿವೆ. ಕೋಲ್ಕತ್ತದಿಂದ ಪ್ರತಿದಿನ ಹಾರುತ್ತಿದ್ದ 7 ವಿಮಾನಗಳು ಶುಕ್ರವಾರ ರಾತ್ರಿಯಿಂದಲೇ ನೆಲದ ಮೇಲೆ ನಿಂತಿವೆ.

ಪ್ರಯಾಣಿಕರ ಸೇವೆಗೆ ತೀವ್ರ ವ್ಯತ್ಯಯವಾಗಿರುವುದನ್ನು ಗಮನಕ್ಕೆ ತೆಗೆದುಕೊಂಡಿರುವ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ), ವಿಮಾನಗಳ ಸಂಚಾರದ ಬಗ್ಗೆ ಮಾಹಿತಿ ತರಿಸಿಕೊಂಡಿದೆ. ಮುಂಚಿತವಾಗಿ ಮಾಹಿತಿಯನ್ನೇ ನೀಡದೆ ಹಾರಾಟಗಳನ್ನು ರದ್ದುಗೊಳಿಸಿದ ಕಂಪೆನಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಕುರಿತು ಪರಿಶೀಲಿಸುತ್ತಿದೆ.

`ನಿಗದಿತ ಸಂಚಾರ ರದ್ದುಗೊಳಿಸುವ ಮುನ್ನ ನಮಗೆ ತಿಳಿಸಬೇಕೆಂಬುದು ನಿಯಮ. ಆದರೆ ಕಂಪೆನಿ ಹಾಗೆ ನಡೆದುಕೊಂಡಿಲ್ಲ~ ಎಂದು ಡಿಜಿಸಿಎ ಮುಖ್ಯಸ್ಥ ಇ.ಕೆ.ಭರತ್ ಭೂಷಣ್ ದೂರಿದ್ದಾರೆ.

ವಿಮಾನಯಾನ ನಿಯಮಾವಳಿ 140 (ಎ)- 1937ರ ಅನ್ವಯ ಸಂಸ್ಥೆಗಳು ಸಂಚಾರ ರದ್ದುಗೊಳಿಸುವ ಮುನ್ನ ಡಿಜಿಸಿಎ ಅನುಮತಿ ಪಡೆಯುವುದು ಕಡ್ಡಾಯ ಎಂದಿದ್ದಾರೆ.

ಸೇವಾ ವ್ಯತ್ಯಯದಿಂದ ತೊಂದರೆಗೆ ಒಳಗಾಗಿರುವವರ ಸಂಚಾರಕ್ಕೆ ಪ್ರಯಾಣ ದರವನ್ನು ಹೆಚ್ಚಿಸದೇ ಅನುಕೂಲ ಮಾಡಿಕೊಡಬೇಕೆಂದು ಡಿಜಿಸಿಎ ಇತರ ವಿಮಾನಯಾನ ಸಂಸ್ಥೆಗಳಿಗೆ ಸೂಚಿಸಿದೆ ಎಂದೂ ಹೇಳಿದ್ದಾರೆ.

ಈ ಮಧ್ಯೆ, ವಿಮಾನಗಳ ಹಾರಾಟ ಕಡಿತಗೊಳಿಸಿರುವುದನ್ನು ಒಪ್ಪಿಕೊಂಡಿರುವ ಕಿಂಗ್‌ಫಿಷರ್ ವಕ್ತಾರರು, ಇದೇ ಸ್ಥಿತಿ ಇನ್ನೂ ನಾಲ್ಕು ದಿನಗಳ ಕಾಲ ಮುಂದುವರಿಯುತ್ತದೆ ಎಂದಿದ್ದಾರೆ.

ಎರಡನೇ ಶ್ರೇಣಿಯ ಹಾಗೂ ಮೂರನೇ ಶ್ರೇಣಿಯ  ನಗರಗಳಿಗೆ ಸೇವಾ ವ್ಯತ್ಯಯ ಮಾರ್ಚಿ ಕೊನೆಯವರೆಗೂ ಮುಂದುವರಿಯಬಹುದು. ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿರುವುದರಿಂದ ಆದಾಯ ತೆರಿಗೆ ಇಲಾಖೆ ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

`ನಮ್ಮ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಸ್ಥಗಿತಗೊಳಿಸಿರುವುದು ನಿಜ. ಆದರೆ ಹಿಂದೆ ಯಾರಿಗೂ ಆಗದ ಸಂಕಷ್ಟ ನಮಗೆ ಬಂದಿಲ್ಲ. ಈ ಹಿಂದೆ ಏರ್ ಇಂಡಿಯಾಗೂ ಹೀಗೆ ಆಗಿತ್ತು. ಈ ಹಿಂದೆ ಇಂತಹ ಬಿಕ್ಕಟ್ಟುಗಳಿಗೆ ನಾವು ಪರಿಹಾರ ಕಂಡುಕೊಂಡ ನಿದರ್ಶನಗಳಿದ್ದು, ಈಗಲೂ ಅದರಲ್ಲಿ ಯಶಸ್ವಿಯಾಗುತ್ತೇವೆ~ ಎಂದಿದ್ದಾರೆ.

ಪ್ರಸಕ್ತ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಕಂಪೆನಿ 444 ಕೋಟಿ ರೂಪಾಯಿ ನಷ್ಟ ಕಂಡಿದೆ. ಇದಕ್ಕೆ ಮುನ್ನ 2010-11ರಲ್ಲಿ 1027 ಕೋಟಿ ರೂಪಾಯಿ ನಷ್ಟ ಕಂಡಿದೆ. ಅಲ್ಲದೇ ಕಂಪೆನಿ 7057 ಕೋಟಿ ರೂಪಾಯಿ ಋಣಭಾರವನ್ನೂ ಹೊಂದಿದೆ.

ವಿಮಾನ ಸೇವೆ ರದ್ದು: ಪ್ರಯಾಣಿಕರ ಪರದಾಟ

ಬೆಂಗಳೂರು ವರದಿ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ (ಬಿಐಎಎಲ್) ಭಾನುವಾರ ಕಿಂಗ್‌ಫಿಷರ್ ಸಂಸ್ಥೆಯ ವಿಮಾನಗಳ ಸೇವೆ ರದ್ದಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡಿದರು.

ಬಿಐಎಎಲ್‌ನಿಂದ ಹೊರಡಬೇಕಿದ್ದ ಕಿಂಗ್‌ಫಿಷರ್ ಸಂಸ್ಥೆಯ ಸುಮಾರು 13 ವಿಮಾನಗಳು ಹಾರಾಟ ನಡೆಸಲಿಲ್ಲ. ಅಂತೆಯೇ ಬಿಐಎಎಲ್‌ಗೆ ದೇಶದ ವಿವಿಧ ಭಾಗಗಳಿಂದ ಬರಬೇಕಿದ್ದ 24ಕ್ಕೂ ಹೆಚ್ಚು ವಿಮಾನಗಳು ರದ್ದಾದವು.
ಬಿಐಎಎಲ್‌ನಿಂದ ಚೆನ್ನೈ, ಮುಂಬೈ, ಮಂಗಳೂರು, ಹುಬ್ಬಳ್ಳಿ, ಗೋವಾ ಹಾಗೂ ವಿಜಯವಾಡಕ್ಕೆ ಹೋಗಬೇಕಿದ್ದ ವಿಮಾನಗಳು ಕೂಡ ಹಾರಾಟ ನಡೆಸಲಿಲ್ಲ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT