ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಗ್ಗಲಿದೆ ಬಜೆಟ್ ಗಾತ್ರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
Last Updated 17 ಜುಲೈ 2013, 20:03 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿನ ಪ್ರಮಾದಗಳಿಂದ ಪಾಠ ಕಲಿತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)  ಈ ಸಲ ವಾಸ್ತವಕ್ಕೆ ಹತ್ತಿರವಾದ ಬಜೆಟ್ ಮಂಡಿಸಲು ತಯಾರಿ ನಡೆಸಿದೆ.

ಮೇಯರ್ ಡಿ.ವೆಂಕಟೇಶಮೂರ್ತಿ ಅವರಿಗೆ ಬಜೆಟ್ ಮಂಡಿಸಲು ರಾಜ್ಯ ಸರ್ಕಾರ ಅನುಮತಿ ನೀಡಿರುವ ಬೆನ್ನಹಿಂದೆಯೇ ಬಿಬಿಎಂಪಿ ಆಡಳಿತ ಬಜೆಟ್ ತಯಾರಿಗಾಗಿ ಹಗಲಿರುಳು ಶ್ರಮಿಸುತ್ತಿದೆ. ಯಾವುದೇ ಕಾರಣಕ್ಕೂ ನೈಜ ಅಂಕಿ-ಸಂಖ್ಯೆಗಳನ್ನು ಬಿಟ್ಟು, ಊಹಾತ್ಮಕವಾಗಿ ಬಜೆಟ್ ಸಿದ್ಧಪಡಿಸಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಬಿಬಿಎಂಪಿಯಲ್ಲಿ ಕಳೆದ ಐದು ವರ್ಷಗಳಿಂದ ವಾಸ್ತವಕ್ಕೆ ಅತೀತವಾದ ಬಜೆಟ್ ಮಂಡಿಸಲಾಗುತ್ತಿದೆ. ಅಧಿಕ ಆದಾಯ ನಿರೀಕ್ಷೆ ಮಾಡುವುದಲ್ಲದೆ, ಅದಕ್ಕೆ ತಕ್ಕಂತೆ ಮಹತ್ವಾಕಾಂಕ್ಷಿ ಯೋಜನೆ ಪ್ರಕಟಿಸಲಾಗುತ್ತಿದೆ. ಅವುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳೇ ಹೆಚ್ಚಾಗಿವೆ. ಕಳೆದ ಐದು ವರ್ಷಗಳಲ್ಲಿ ರೂ. 7,000 ಕೋಟಿಯಿಂದ ರೂ.10,000 ಕೋಟಿವರೆಗಿನ ಬಜೆಟ್ ಮಂಡಿಸಲಾಗಿದೆ. ಆದರೆ, ವಾಸ್ತವವಾಗಿ ಬಜೆಟ್ ಮೊತ್ತದ ಶೇ 50ರಷ್ಟು ಮಾತ್ರ ಗುರಿ ಸಾಧನೆಯಾಗಿದೆ.

2011-12ರಲ್ಲಿ ಬಜೆಟ್ ಗಾತ್ರ ರೂ. 9,196 ಕೋಟಿ ಇತ್ತು. ಆದರೆ, ವಾಸ್ತವಿಕ ಬಜೆಟ್ ಗಾತ್ರ ರೂ.4,000 ಕೋಟಿ ಮಾತ್ರವಾಗಿತ್ತು. 2012-13ನೇ ಆರ್ಥಿ ವರ್ಷದಲ್ಲಿ ರೂ. 9,998 ಕೋಟಿ ಮೊತ್ತದ ಬಜೆಟ್ ಮಂಡಿಸಲಾಗಿತ್ತು. ಬಿಬಿಎಂಪಿ ಮೂಲಗಳ ಪ್ರಕಾರ, ಅದರ ಶೇ 35ರಷ್ಟು ಮಾತ್ರ ಗುರಿ ಮುಟ್ಟಲಾಗಿದೆ.

ವಾಸ್ತವಿಕ ಅಂಶಗಳ ಆಧಾರದ ಮೇಲೆ ಬಜೆಟ್ ಸಿದ್ಧಪಡಿಸಬೇಕು ಎಂದು ರಾಜ್ಯ ಸರ್ಕಾರ ಸ್ಪಷ್ಟವಾದ ನಿರ್ದೇಶನ ನೀಡಿದೆ. ಹೀಗಾಗಿ ಈ ಸಲದ ಬಜೆಟ್ ಗಾತ್ರ ರೂ.5000 ಕೋಟಿಯಿಂದ ರೂ.5,500 ಕೋಟಿಯಷ್ಟು ಇರಬಹುದು ಎಂದು ಹೇಳಲಾಗಿದೆ.
ಐದು ಸಿಗ್ನಲ್‌ಮುಕ್ತ ಕಾರಿಡಾರ್ ನಿರ್ಮಾಣ ಬಜೆಟ್‌ನ ಪ್ರಮುಖ ಯೋಜನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಬಜೆಟ್ ಮಂಡನೆಗೆ 20ರಂದು ಸಭೆ ಕರೆಯುವಂತೆ ಮೇಯರ್ ಸೂಚನೆ ನೀಡಿದ್ದಾರೆ. ಆದರೆ, ಬಜೆಟ್ ಪ್ರತಿ ಸಿದ್ಧಪಡಿಸಿ, ಮುದ್ರಿಸಲು ಕಾಲಾವಕಾಶ ಬೇಕಿರುವುದರಿಂದ 22ರಂದು ಬಜೆಟ್ ಮಂಡನೆ ಮಾಡುವಂತೆ ಅಧಿಕಾರಿಗಳು ಮೇಯರ್ ಮತ್ತು ಆಯುಕ್ತರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT