ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗಾಗಿ ಜನರ ಪರದಾಟ

Last Updated 2 ಮೇ 2012, 7:55 IST
ಅಕ್ಷರ ಗಾತ್ರ

ಚಿಕ್ಕೋಡಿ: ಮುಂಗಾರು ಪೂರ್ವ ಮಳೆ ಮಾಯ, ಬಾವಿ, ಬೋರವೆಲ್‌ಗಳ ಅಂತರ್ಜಲಮಟ್ಟ ಕುಸಿದು ಜನಜಾನು ವಾರುಗಳ ಕುಡಿಯುವ ನೀರಿಗಾಗಿ ಪರದಾಟ, ರಜೆಯ ಮಜೆ ಅನುಭವಿಸುವ ಬದಲು ನೀರು ಹೊತ್ತುವ ಸಜೆಗೆ ಒಳಗಾದ ಮಕ್ಕಳು, ಕಮರಿ ಹೋಗುತ್ತಿರುವ ತರಕಾರಿ ಮತ್ತಿತರ ತೊಟಗಾರಿಕೆ ಬೆಳೆಗಳು, ಮುಗಿಲಿನತ್ತ ಮುಖ ಮಾಡಿರುವ ಕೃಷಿಕ...!

ಚಿಕ್ಕೋಡಿ ತಾಲ್ಲೂಕಿನ ಹೊಳೆಸಾಲು ಹೊರತುಪಡಿಸಿ ಬಹುತೇಕ ಗ್ರಾಮಗಳಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಕಂಡುಬರುತ್ತಿರುವ ಸನ್ನಿವೇಶವಿದು.ಮಡ್ಡಿಗಾಡು ಪ್ರದೇಶವೆಂಬ ಹಣೆಪಟ್ಟಿಯನ್ನೇ ಹೊತ್ತುಕೊಂಡಿರುವ ತಾಲ್ಲೂಕಿನ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ಬಿದರಳ್ಳಿ, ಹತ್ತರವಾಟ, ಜೈನಾಪೂರ, ವಡ್ರಾಳ, ತೋರಣಹಳ್ಳಿ, ಉಮರಾಣಿ ಹಾಗೂ ನಿಪ್ಪಾಣಿ ಹೋಬಳಿ ವ್ಯಾಪ್ತಿಯ ಶೇಂಡೂರ, ಗೊಂದಿಕುಪ್ಪಿ ಸೇರಿದಂತೆ ಹಲವು ಗ್ರಾಮಗಳನ್ನು ಪ್ರವೇಶಿಸುತ್ತಿದ್ದಂತೆಯೇ ಖಾಲಿ ಕೊಡಗಳು ಸ್ವಾಗತ ಕೋರುತ್ತವೆ.

ನೀರು ಹೊತ್ತು ಸಾಗುವ ಮಕ್ಕಳು ಎದುರಾಗುತ್ತಾರೆ. ಬಾವಿ, ಬೋರವೆಲ್‌ಗಳ ಬಳಿ ಕುಡಿಯುವ ನೀರಿಗಾಗಿ ಕಾದು ಕುಳಿತ್ತಿರುವ ಸಾರ್ವಜನಿಕರು ಕಾಣಸಿಗುತ್ತಾರೆ. ನೀರು ತುಂಬುವುದೇ ಇವರಿಗೆ ಫುಲ್‌ಟೈಂ ಕೆಲಸವೇನೂ ಎಂಬಂತೆ ಭಾಸವಾಗುತ್ತದೆ. ಹೊಳೆಸಾಲು ಹೊರತುಪಡಿಸಿ ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ, ನಾಯಿಂಗ್ಲಜ, ಶಿರಗಾಂವ ಮುಂತಾದ ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೊಡ ನೀರಿಗಾಗಿ ಅಲೆದಾಡುವ ಅನಿವಾರ್ಯತೆ ಎದುರಾಗಿದೆ.

ಪ್ರಸಕ್ತ ವರ್ಷ ತಾಲ್ಲೂಕಿನಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುವುದು ದೂರವಿರಲಿ, ಹೊಲಗಳಲ್ಲಿ ನೀರು ಹರಿದಾಡುವಷ್ಟೂ ಜೋರಾಗಿ ಅಡ್ಡಮಳೆಗಳು ಸುರಿದಿಲ್ಲ. ಪರಿಣಾಮವಾಗಿ ಅಂತರ್ಜಲಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ.

`ಸರಹೊತ್ತಿನ್ಯಾಗ ಸರದಿಯೊಳಗ ಕೊಡಾ ಇಟ್ಟರ ಬೆಳಗಿನ ಜಾವ ನೀರ ಸಿಗತದ್, ನಾವೇನ್ ಒಂದು ಕೂಡಾ ನೀರ್ ಒಯ್ದ ದಿನ ಕಳಿಬೋದ್, ಆದ್ರ ಮೂಕಪ್ರಾಣಿಗಳ ಗತೀ ಏನ್ರಿ~ ಎಂದು ಹತ್ತರವಾಟ ಗ್ರಾಮದ ಮಹಿಳೆಯೊಬ್ಬರು ಸಮಸ್ಯೆಯನ್ನು ಬಿಡಿಸಿಟ್ಟರು.

ಇದೇ ಪರಿಸ್ಥಿತಿ ಹಲವು ಗ್ರಾಮಗಳಲ್ಲಿ ಕಂಡುಬರುತ್ತಿದ್ದು, ಸಾರ್ವಜನಿಕರು ಹಗಲಿರುಳೆನ್ನದೇ ಕುಡಿಯುವ ನೀರು ತರಲು ಅಲೆದಾಡಬೇಕಾದ ಸನ್ನಿವೇಶ ನಿರ್ಮಾಣವಾಗುತ್ತಿದೆ. ಬೇಸಿಗೆಯ ರಜೆಯ ಮಜಾ ಅನುಭವಿಸುವ ಮಕ್ಕಳು ದಿನವಿಡಿ ನೀರು ತರುವ ಕಾಯಕದಲ್ಲೇ ಕಾಲ ಕಳೆಯುವಂತಾಗಿದೆ. ಇದರಿಂದ ಅವರ ಬೇಸಿಗೆ ರಜೆಯ ಶೈಕ್ಷಣಿಕ ಚಟುವಟಿಕೆಗಳೂ ಕುಂಠಿತಗೊಳ್ಳುತ್ತಿವೆ.

ಚಿಕ್ಕೋಡಿ ಹಾಗೂ ಸದಲಗಾ ಹೋಬಳಿ ವ್ಯಾಪ್ತಿಯ ಹಿರೇಕೋಡಿ, ನೇಜ್, ನಾಗರಾಳ, ಶಿರಗಾಂವ, ಖಡಕಲಾಟ ಮುಂತಾದ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹಿಡಕಲ್ ಜಲಾಶಯದಿಂದ ಚಿಕ್ಕೋಡಿ ಉಪಕಾಲುವೆ (ಸಿಬಿಸಿ) ನೀರು ಹರಿಸಬೇಕು ಎಂದು ಕೃಷಿಕರು ಆಗ್ರಹಿಸುತ್ತಿದ್ದಾರೆ.

ಮುಂಗಾರು ಪೂರ್ವ ಮಳೆಯ ವಿಳಂಬದಿಂದಾಗಿ ತಾಲ್ಲೂಕಿನಲ್ಲಿನ ತರಕಾರಿ, ತೋಟಗಾರಿಕೆ ಬೆಳೆಗಳೂ ಕಮರುತ್ತಿವೆ. ಜೈನಾಪುರ ಪರಿಸರದಲ್ಲಿ 35 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಹುಲುಸಾಗಿ ಬೆಳೆದು ನಿಂತಿರುವ ಎಲೆದೋಟಗಳು ಕಮರಿವೆ. ಇದರಿಂದ ಕೃಷಿಕರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಕೈತುಂಬ ಹಣ ನೀಡುತ್ತಿದ್ದ ತರಕಾರಿ ಬೆಳೆಗಳೂ ಬಾಡಿ ಹೋಗುತ್ತಿದ್ದು, ಕೃಷಿಕ ಕೈಕೈ ಹಿಸುಕಿಕೊಳ್ಳುತ್ತಿದ್ದಾನೆ.

`ಕುಡಿಯುವ ನೀರಿನ ಸಮಸ್ಯೆಯಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗದಂತೆ ತಾಲ್ಲೂಕು ಆಡಳಿತ ಸೂಕ್ತ ಕ್ರಮಗಳನ್ನು ಜರುಗಿಸುತ್ತಿದೆ. ತಾಲ್ಲೂಕಿನ ನಾಯಿಂಗ್ಲಜ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಧುಳಗನವಾಡಿಯ ಕಮತೆ ತೋಟ, ಚಿಮಣೆ ತೋಟ, ಯಾದನವಾಡಿಯ ಬಸವನಗರ, ಹೊಸಖೋತವಾಡಿ, ನೇರ್ಲೆ ತೋಟ, ನಿಪ್ಪಾಣಿ ಹೋಬಳಿ ವ್ಯಾಪ್ತಿಯ  ಶೇಂಡೂರ, ಗೊಂದಿಕುಪ್ಪಿ, ಪಾಂಗೇರಿ(ಬಿ) ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
 
ರಾಜೀವ ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಬೇಡಕಿಹಾಳ ಬಳಿ ನದಿಗೆ ಅಳವಡಿಸಲಾಗಿರುವ ವಿದ್ಯುತ್ ಪಂಪ್ ತಾಂತ್ರಿಕ ದೋಷದಿಂದಾಗಿ ಕಾರ್ಯಸ್ಥಗಿತಗೊಂಡಿದ್ದು, ಅದರ ದುರಸ್ತಿ ಮುಗಿಯುವವರೆಗೆ ಶಿರಗಾಂವ ಗ್ರಾಮದಲ್ಲಿ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ~ ತಹಸೀಲ್ದಾರ ರಾಜಶೇಖರ ಡಂಬಳ ಹೇಳುತ್ತಾರೆ. ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬರಪರಿಹಾರ ಯೋಜನೆಯಡಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಒಟ್ಟು 6.57 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ ಎಂದು ಶಾಸಕ ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ.

ಮುಖ್ಯಾಂಶಗಳು
*  ತೆರೆದ ಬಾವಿ, ಬೋರವೆಲ್ ಬಳಿ ಕುಡಿಯುವ   ನೀರಿಗಾಗಿ ಸರತಿ ಸಾಲು.
*  ಜೈನಾಪುರದಲ್ಲಿ ಕಮರಿದ ಎಲೆದೋಟಗಳು.
*  ಕುಸಿಯುತ್ತಿರುವ ಅಂತರ್ಜಲಮಟ್ಟ.
*  ನಿಪ್ಪಾಣಿ ಹೋಬಳಿ ವ್ಯಾಪ್ತಿಯಲ್ಲಿ ಟ್ಯಾಂಕರ್   ಮೂಲಕ ನೀರು ಸರಬರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT