ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಕೆರಳಿಸಿದ ಪರಿಸರ ಶಿಬಿರ

Last Updated 28 ಮೇ 2012, 19:30 IST
ಅಕ್ಷರ ಗಾತ್ರ

ಹಾವೇರಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ 50 ಮಕ್ಕಳು, 12 ಅಧ್ಯಾಪಕರು ಕರಡಿ ಗುಡ್ಡದಲ್ಲಿ ಎರಡು ದಿನ ಇದ್ದರು. ವಿಶೇಷ ಎಂದರೆ ಇದು ಬರೀ ವಿಹಾರ ಯಾತ್ರೆಯಾಗಿರಲಿಲ್ಲ. ಮಕ್ಕಳಲ್ಲಿ ಜೀವಜಗತ್ತು ಮತ್ತು ಪರಿಸರದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶವನ್ನೂ ಹೊಂದಿತ್ತು. ಈ ಕಾರ್ಯ ಯಶಸ್ವಿಯೂ ಆಯಿತು.

ಕಾಡನ್ನು ಜಾಲಾಡಿಸಿದ ಪುಟಾಣಿಗಳು ಅಲ್ಲಿನ ಸುಮಾರು 400 ಜೀವ ಜಂತುಗಳನ್ನು  ಅಧ್ಯಯನ ಮಾಡಿ ದಾಖಲೀಕರಣ ಮಾಡಿದ್ದು ಶಿಬಿರಕ್ಕೊಂದು ತುರಾಯಿ. ಇವರೆಲ್ಲ ಕಾಡಿಗೆ ಕಾಲಿಡುವಾಗ ಸುಡುಸುಡು ಬಿಸಿಲು, ವಿಪರೀತ ಝಳ. ಆದರೂ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬೇಸರಗೊಂಡಿದ್ದ ಮಕ್ಕಳು, ಅಧ್ಯಾಪಕರಿಗೆ ಎರಡು ದಿನಗಳ ಪರಿಸರ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ  ಸಿಕ್ಕಿದ್ದೆ ತಡ.

ಹೆಗಲಿಗೆ ಬ್ಯಾಗ್ ಏರಿಸಿಕೊಂಡು ಹೊರಟೇ ಬಿಟ್ಟರು.ಹಾವೇರಿಯಿಂದ 10 ಕಿ ಮೀ ದೂರದ ಹಾವೇರಿ ಕರ್ಜಗಿ ಮಧ್ಯದ ಕರಡಿ ಗುಡ್ಡದ ಎದುರಿನ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಗೆ ಬಂದಿಳಿದರು. ಅಲ್ಲಿ ಹಿರಿಯ ಪರಿಸರ ವಿಜ್ಞಾನಿ ಡಾ. ಹರೀಶ ಭಟ್, ಸರಿಸೃಪ ವಿಜ್ಞಾನಿ ಡಾ. ಕಾರ್ತಿಕ ಕುಮಾರ, ಕೀಟ ತಜ್ಞ ಡಾ. ಎಂ.ಎಚ್. ತಟಗಾರ 2-3 ತಾಸು ಜೀವ ವೈವಿಧ್ಯ ಕುರಿತು ಆಸಕ್ತಿ ಕೆರಳಿಸುವ ಉಪನ್ಯಾಸ ನೀಡಿದರು. ಇದು ಪೋರರ ಪರಿಸರ ಪಯಣಕ್ಕೆ ದೊಡ್ಡ ಸ್ಫೂರ್ತಿಯಾಯಿತು.

ಖಡಕ್ ರೊಟ್ಟಿ, ಕಡಲೇಕಾಳು ಉಸುಳಿ, ಬದನೆಕಾಯಿ ಎಣಗಾಯಿ, ಮೂಲಂಗಿ ಮೆಂತೆ ಪಚಡಿ, ಗೋಧಿ ಹುಗ್ಗಿ, ಅನ್ನ, ನುಗ್ಗೆಕಾಯಿ  ಸಾರಿನ ಸುಖ ಭೋಜನ ಮುಗಿಸುವಷ್ಟರಲ್ಲಿ ಅರಣ್ಯ ಅಧಿಕಾರಿ ರಾಘವೇಂದ್ರ ಹಾಗೂ ರೂಪಾ ಅವರಿಂದ ಅರಣ್ಯ ಪ್ರವೇಶಕ್ಕೆ ಹಸಿರು ನಿಶಾನೆ ಬಂತು. ಶಿಸ್ತಿನ ಸಿಪಾಯಿಗಳಂತೆ ಎದುರಿನ ಕರಡಿ ಗುಡ್ಡದ ಅರಣ್ಯದಲ್ಲಿ ಮೂರ‌್ನಾಲ್ಕು ತಂಡಗಳಲ್ಲಿ ಪರಿಸರ ಪಯಣ ಪ್ರಾರಂಭವಾಯಿತು.

ವಿಜ್ಞಾನಿಗಳ ಬೆಳಗಿನ ಬೋಧನೆಯಿಂದ ಪೋರ ಪೋರಿಯರ ತಲೆತುಂಬ ನೂರೆಂಟು ವಿಚಾರ, ಹತ್ತಾರು ಪ್ರಶ್ನೆಗಳು. ಏನು ಕೇಳಬೇಕು, ಏನು ನೋಡಬೇಕು ಎನ್ನುವ ತವಕ. ಅಡವಿಯಲ್ಲಿ ಕಾಣಸಿಗುವ ಒಂದೊಂದು ಹೆಜ್ಜೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಸಾಗಿದರು. ನಯವಾದ ಮಣ್ಣಿನಲ್ಲಿ ಮೂಡಿದ ನರಿ, ನಾಯಿ, ಮೊಲ, ತೋಳ, ಕುದುರೆ, ಕತ್ತೆ ಇತ್ಯಾದಿಗಳ ಹೆಜ್ಜೆಗಳನ್ನು ಗುರುತಿಸಿ ಚಿತ್ರ ಸಮೇತ  ಪುಸ್ತಕಗಳಲ್ಲಿ ಮೂಡಿಸಿಕೊಳ್ಳಲು ಮರೆಯಲಿಲ್ಲ.

ಎಂಟನೇ ತರಗತಿ ಹುಡುಗನೊಬ್ಬ ಸ್ನೇಹಿತರನ್ನು ಕೂಡ್ರಿಸಿಕೊಂಡು ಯಾವುದೋ ಪ್ರಾಣಿಯ ಹಿಕ್ಕೆಯನ್ನು ಕಡ್ಡಿಯಿಂದ ತಿವಿದು ಒಡೆದು ಒಳ್ಳೆ ಸಂಶೋಧಕನಂತೆ ಅಧ್ಯಯನದಲ್ಲಿ ಮಗ್ನನಾಗಿದ್ದ. `ಸರ್ ಇದು ನರಿ ಹಿಕ್ಕಿ. ಚಿಕ್ಕವಯಸ್ಸಿನ ಮರಿ ಹಾಕಿದ್ದು~ ಎಂದ. `ಅಷ್ಟು ಖಾತ್ರಿಯಾಗಿ ಹ್ಯಾಂಗ್ ಹೇಳ್ತಿಯೊ~ ಎಂದು ಮಾಸ್ತರ್ ಕೇಳಿದ್ದಕ್ಕೆ, `ಹಿಕ್ಕಿ ವಳಗ ಯಲುಬಿನ ಚೂರು ಅದಾವು. ಪ್ರಾಣಿಗಳ ಕೂದಲಾ ಸಹಿತ ಕಾಣಸ್ತಾವು. ಜೀರ್ಣ ಆಗಿಲ್ಲ. ದೊಡ್ಡ ನರಿ ಆಗಿದ್ರ ಪೂರ್ತಿ ಜೀರ್ಣ ಆಕ್ಕಿತ್ತು~ ಎಂದು ಅವರಿಗೇ ಪಾಠ ಮಾಡಿದ.

ಅಷ್ಟೊತ್ತಿಗೆ ಅರಣ್ಯ ನರ್ಸರಿಯಲ್ಲಿ ಬೆಳೆಸಿದ ಔಷಧಿ ಸಸ್ಯಗಳ ಸಂಗ್ರಹ ಪೋರರನ್ನು ಪುಲಕಿತಗೊಳಿಸಿತು. ಆಲ, ಅರಳೆ, ಬಸಳೆ, ಬೇವು, ಬಿಲ್ವ, ಬನ್ನಿ, ದಾಸವಾಳ, ತುಳಸಿ, ಶತಾವರಿ ಹೀಗೆ ಬಗೆಬಗೆಯ ಸಸ್ಯಗಳ ಪ್ರಭೇದ ಗುರುತಿಸುವಾಗ ಮಕ್ಕಳ ಮೈಮನಗಳು ಹೆಮ್ಮೆಯಿಂದ ಬೀಗುತ್ತಿದ್ದವು.

ಹಾವಿನ ಬಗ್ಗೆಯಂತೂ ಅವರಲ್ಲಿನ ಎಲ್ಲಿಲ್ಲದ ಕುತೂಹಲ ತಣಿಸಿದ್ದು ಉರಗ ತಜ್ಞರ ಉಪನ್ಯಾಸ. `ನೂರಾರು ಜಾತಿಯ ಹಾವುಗಳು ಇರುವುದೇನೋ ಹೌದು. ಕಾಳಿಂಗ, ನಾಗರ, ಕಟ್ಟ ಹಾವು (ಕ್ರೇಟ್), ಕೊಳಕು ಮಂಡಲ (ರಸಲ್ಸ್ ವೈಪರ್), ಉರುಳು ಮಂಡಲ (ಸಾಸ್ಕೆಲ್ಡ್ ವೈಪರ್) ಎಂಬ ಐದು ಜಾತಿಯ ಹಾವುಗಳು ಮಾತ್ರ ವಿಷಪೂರಿತ. ಇನ್ನುಳಿದ ಜಾತಿಯ ಹಾವುಗಳು ಕಚ್ಚಿದರೂ ಅಪಾಯವಿಲ್ಲ.
 
ಸುಮ್ಮ ಸುಮ್ಮನೇ ಯಾವ ಜಂತು ಕಚ್ಚುವದಿಲ್ಲ. ಭೀತಿಯಿಂದ, ಅಜ್ಞಾನದಿಂದ ಕಂಡ ಕಂಡಲ್ಲಿ ಕಲ್ಲು ಹೊಡೆದು ಉರಗ ಸಂತತಿ ನಾಶ ಮಾಡುವದು ತಪ್ಪು~ ಎಂಬ ಮಾತು ಅವರ ತಲೆಯಲ್ಲಿ ಚೆನ್ನಾಗಿ ನಾಟಿತು. ಇದಕ್ಕೆಲ್ಲ ಕಾರಣವಾದದ್ದು ಕಾಡಿನಲ್ಲಿ ಸಿಕ್ಕ ಹಾವಿನ ಪೊರೆ ಮತ್ತು ಅದನ್ನು ಆಧರಿಸಿ ನಡೆದ ಚರ್ಚೆ.

ಆನೆಯ ವಯಸ್ಸು ಹೇಳುವ ಲದ್ದಿ
ಕಾಡಲ್ಲಿ ಕಾಣುವ ಪ್ರಾಣಿಗಳ ಲದ್ದಿಗಳೇ ಪರಿಸರ ಪ್ರಿಯರಿಗೆ ಅನೇಕ ಸಂದರ್ಭದಲ್ಲಿ ಚರ್ಚಾ ವಿಷಯ. ಪ್ರಾಣಿ ಪಕ್ಷಿಗಳು ವಿಸರ್ಜಿಸುವ ಮಲ  ಮೂತ್ರಗಳು, ಸ್ರವಿಸುವ ಶ್ಲೇಷ್ಮಗಳು, ದ್ರವಗಳು ಎಷ್ಟೋ ಸಂದರ್ಭಗಳಲ್ಲಿ  ಅವುಗಳ ಎಲ್ಲೆ ಗುರುತಿಸುವಲ್ಲಿ  ಪ್ರಮುಖ ಪಾತ್ರ ವಹಿಸುತ್ತವೆ. ಜೀವಿಗಳ  ಹಿಕ್ಕೆಯಿಂದ ಅವು ಸೇವಿಸುವ ಆಹಾರ, ಪ್ರಭೇದವನ್ನು ಗುರುತಿಸಬಹುದು ಎಂಬ ಚರ್ಚೆ ಪೋರರ ಮಧ್ಯೆ ನಡೆದಿತ್ತು.

ಆನೆ ಹಾಕುವ ಲದ್ದಿಯಿಂದ ನಿಖರವಾಗಿ ಅದರ ವಯಸ್ಸನ್ನು ತಿಳಿಯಬಹುದು. ಅದಕ್ಕಾಗಿ 4-6 ಲದ್ದಿಗಳ ಸುತ್ತಳತೆಯನ್ನು  ಸೆಂ.ಮೀ ಗಳಲ್ಲಿ ಅಳೆಯಬೇಕು. ಅವುಗಳ ಸರಾಸರಿ ತೆಗೆದಾಗ ಬರುವ ಸಂಖ್ಯೆಯೇ ಆ ಆನೆಯ ನಿಖರ ವಯಸ್ಸನ್ನು  ಸೂಚಿಸುತ್ತದೆ ಎಂದು ವಿಜ್ಞಾನಿ ಹರೀಶ  ಭಟ್ ಮಧ್ಯ ಪ್ರವೇಶಿಸಿ ವಿವರ  ನೀಡಿದಾಗ ಶಿಬಿರಾರ್ಥಿಗಳೆಲ್ಲರಿಗೂ ಆಶ್ಚರ್ಯದ ಜತೆಗೆ ಹೊಸದೊಂದು ವಿಚಾರ ತಿಳಿದುಕೊಂಡ ತೃಪ್ತಿ ಮೂಡಿತ್ತು. ಅಂತೂ ಎರಡು ದಿನಗಳ ಶಿಬರ ಜ್ಞಾನದ ಬಾಗಿಲನ್ನೇ ತೆರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT