ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಸಚಿವ ಸೋಮಶೇಖರ್ ವಜಾಕ್ಕೆ ಆಗ್ರಹ

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೌಲ್ಯಮಾಪನದ ಸಂದರ್ಭ ನಡೆಯುತ್ತಿರುವ ಅಕ್ರಮ ಗಳಿಗೆ ಕಾರಣರಾಗಿರುವ ಕುಲಸಚಿವ (ಮೌಲ್ಯಮಾಪನ) ಡಾ.ಆರ್.ಕೆ. ಸೋಮಶೇಖರ್ ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು' ಎಂದು ಮೂವರು ಸಿಂಡಿಕೇಟ್ ಹಾಗೂ ಇಬ್ಬರು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಆಗ್ರಹಿಸಿದರು.
ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಅವ್ಯವಹಾರದಲ್ಲಿ ವಿವಿಯಲ್ಲಿ ಸೋಮಶೇಖರ್ ನೇತೃತ್ವದಲ್ಲಿ ಹೊಸ ದಂಧೆಯನ್ನೇ ಆರಂಭಿಸಲಾಗಿದೆ. ಕಳೆದ ವರ್ಷ ಪದವಿ ಪರೀಕ್ಷೆ ಮುಗಿದ ತಿಂಗಳಲ್ಲೇ ಫಲಿತಾಂಶ ನೀಡಲಾಗಿತ್ತು. ಈ ಬಾರಿ ಇಂಗ್ಲಿಷ್ ವಿಭಾಗದ ಮೌಲ್ಯಮಾಪನ ಮಾತ್ರ ಪೂರ್ಣಗೊಂಡಿದ್ದು, ಉಳಿದ ವಿಷಯಗಳ ಮೌಲ್ಯಮಾಪನ ತಡವಾಗಿರುವುದು ಸಂಶಯಕ್ಕೆ ಕಾರಣವಾಗಿದೆ' ಎಂದು ದೂರಿದರು.

ಸಿಂಡಿಕೇಟ್ ಸದಸ್ಯ ಸಿ.ಕೆ. ಜಗದೀಶ ಪ್ರಸಾದ್ ಅವರು ಮಾತನಾಡಿ, `ಲೋಕಾಯುಕ್ತ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಸೋಮಶೇಖರ್ ವಿರುದ್ಧ ಹಲವು ಆರೋಪಗಳು ದಾಖಲಾಗಿವೆ. ಕಪ್ಪುಪಟ್ಟಿಗೆ ಸೇರಿರುವ ಕಾಲೇಜುಗಳನ್ನು ಈ ಬಾರಿ ಮೌಲ್ಯಮಾಪನ ಕೇಂದ್ರಗಳನ್ನಾಗಿ ಮಾಡಲಾಗಿದೆ. ಸೋಮಶೇಖರ್ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ನಿರ್ಧಾರ ಕೈಗೊಂಡಿದ್ದಾರೆ' ಎಂದು ಸದಸ್ಯರು ಆರೋಪಿಸಿದರು.

`ಅವ್ಯವಹಾರದಲ್ಲಿ ತೊಡಗಿ ಕಪ್ಪುಪಟ್ಟಿಗೆ ಸೇರಿರುವ ಪದವಿ ಉಪನ್ಯಾಸಕರು ಹಾಗೂ ಪ್ರಾಂಶುಪಾಲರನ್ನು ಪರೀಕ್ಷಾ ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ. ಅವ್ಯವಹಾರದಲ್ಲಿ ತೊಡಗಿರುವ ಮೇಲ್ವಿಚಾರಕರನ್ನು ವಜಾ ಮಾಡಬೇಕೆಂದು ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರವಾಗಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಳಪೆ ಕಾಲೇಜುಗಳ ಮುಚ್ಚಿ
ಸಿಂಡಿಕೇಟ್ ಸದಸ್ಯೆ ಡಾ. ಮಾನಸ ನಾಗಭೂಷಣ್ ಮಾತನಾಡಿ, `ಬಿ.ಇಡಿ ಕಾರ್ಯಪಡೆ ನೀಡಿರುವ ಮಧ್ಯಂತರ ವರದಿಯ ಆಧಾರದಲ್ಲಿ ಕಳಪೆ ಕಾಲೇಜುಗಳನ್ನು ಮುಚ್ಚಲು ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.`ಕಾಲೇಜುಗಳಿಗೆ ಅನುಮತಿ ನೀಡುವ ಅಥವಾ ರದ್ದುಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದ್ದು, ಕಾರ್ಯಪಡೆಯ ವರದಿಯ ಆಧಾರದಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅನೇಕ ಕಾಲೇಜುಗಳ ಗುಣಮಟ್ಟ ಕಳಪೆಯಾಗಿದೆ. ಅದರಲ್ಲೂ ಕೆಲವು ಕಾಲೇಜುಗಳಲ್ಲಿ ಬೇರೆ ರಾಜ್ಯಗಳ ವಿದ್ಯಾರ್ಥಿಗಳಿಂದ ಅಧಿಕ ಹಣವನ್ನು ಪಡೆದು ಅವರಿಗೆ ರ‌್ಯಾಂಕ್ ನೀಡಲಾಗುತ್ತಿದೆ. ಈ ಮೂಲಕ ಕಳಪೆ ಕಾಲೇಜುಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿವೆ' ಎಂದು ದೂರಿದರು.

ಸರ್ಕಾರದ ಕ್ರಮಕ್ಕೆ ಖಂಡನೆ
ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಅಭಿಪ್ರಾಯ ಪಡೆಯದೆ ಉನ್ನತ ಶಿಕ್ಷಣ ಇಲಾಖೆಯು ನಗರದ ಜೈನ್ ಕಾಲೇಜಿಗೆ ಸೀಟುಗಳ ಹೆಚ್ಚಳ ಮಾಡಿದೆ' ಎಂದು ವಿದ್ಯಾವಿಷಯಕ ಪರಿಷತ್ ಸದಸ್ಯ ಎಚ್.ಕರಣ್ ಕುಮಾರ್ ಆರೋಪಿಸಿದರು.

`ವಿವಿಯ ಸ್ಥಳೀಯ ವಿಚಾರಣಾ ಸಮಿತಿ (ಎಲ್‌ಐಸಿ) ವರದಿ ಆಧರಿಸಿ ಕಾಲೇಜುಗಳ ಸೀಟು ಹೆಚ್ಚಳ ಮಾಡಲು ಸಿಂಡಿಕೇಟ್ ಹಾಗೂ ವಿದ್ಯಾವಿಷಯಕ ಪರಿಷತ್ತಿನ ಅನುಮೋದನೆ ನೀಡಲಾಗುತ್ತದೆ. ಬಳಿಕ ರಾಜ್ಯ ಸರ್ಕಾರಕ್ಕೆ ವರದಿ ತಲುಪುತ್ತದೆ. ಕಾಲೇಜಿಗೆ ಹೆಚ್ಚು ಸೀಟುಗಳು ಬೇಕಾದಲ್ಲಿ ವಿವಿಗೆ ಮತ್ತೆ ಮನವಿ ಸಲ್ಲಿಸಬೇಕು. ಬಳಿಕ ವಿವಿಯ ಕ್ರಮ ನೋಡಿಕೊಂಡು ಸರ್ಕಾರಕ್ಕೆ ಕಾಲೇಜು ಪುನಃ ಮನವಿ ಸಲ್ಲಿಸಬಹುದು. ಆದರೆ, ಜೈನ್ ಕಾಲೇಜು ಉನ್ನತ ಶಿಕ್ಷಣ ಇಲಾಖೆಗೆ ಏಕಾಏಕಿ ಮನವಿ ಸಲ್ಲಿಸಿ ಸೀಟು ಹೆಚ್ಚಳಕ್ಕೆ ಅನುಮತಿ ಪಡೆದಿರುವುದು ಸೂಕ್ತ ಕ್ರಮವಲ್ಲ. ಇದರಿಂದ ವಿವಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದಂತೆ ಆಗುತ್ತದೆ' ಎಂದು ಅವರು ಅಭಿಪ್ರಾಯಪಟ್ಟರು.

`ಜೈನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಿಕಾಂ ವಿದ್ಯಾರ್ಥಿಗಳು ವಾರ್ಷಿಕ 1.20 ಲಕ್ಷ ರೂಪಾಯಿ ಶುಲ್ಕ ಪಾವತಿಸುತ್ತಿದ್ದಾರೆ. ದುಬಾರಿ ಶುಲ್ಕ ಪಾವತಿ ಮಧ್ಯಮ ಹಾಗೂ ಬಡ ವರ್ಗದವರಿಗೆ ಕಷ್ಟ. ಇಂತಹ ಕಾಲೇಜಿಗೆ ಸೀಟು ಹೆಚ್ಚಿಸುವ ಅಗತ್ಯ ಏನಿದೆ' ಎಂದು ಪ್ರಶ್ನಿಸಿದರು. ಸಿಂಡಿಕೇಟ್ ಸದಸ್ಯ ಶ್ರೀನಿವಾಸಯ್ಯ, ವಿದ್ಯಾವಿಷಯಕ ಪರಿಷತ್ ಡಾ.ಕೆ.ಶೇಷಮೂರ್ತಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT