ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ಮಾ ಅಧ್ಯಕ್ಷರ ಕೊಳಕು ಮನಸ್ಸು: ಸಾಮರಸ್ಯಕ್ಕೆ ಧಕ್ಕೆ

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

ಸರ್ಕಾರದ ಚೆಲ್ಲಾಟಕ್ಕೆ `ಕುಸ್ಮಾ~ದ ಕೊಸರಾಟ
ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕರ್ನಾಟಕದಲ್ಲಿ ಕನ್ನಡ ಮಾಧ್ಯಮವೇ ಇರಬೇಕೆಂಬ ಬಗ್ಗೆ ಸರ್ಕಾರವು ನಿರ್ದಿಷ್ಟ ಧೋರಣೆ ತಳೆಯದೆ ಕೈಚೆಲ್ಲಿ ಕುಳಿತಿತು. ಸುಪ್ರೀಂಕೋರ್ಟ್ ತೀರ್ಮಾನಕ್ಕೆ ಕಾಯುವ ನೆಪದಲ್ಲಿ ಕುಸ್ಮಾ ಸದಸ್ಯ ಶಾಲೆಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಅವಕಾಶ ನೀಡಿತು.
 
ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸುತ್ತೇವೆಂದು ಬರೆದುಕೊಟ್ಟು ಅನುಮತಿ ಪಡೆದ ಶಾಲೆಗಳೂ ಬೇಕಾಬಿಟ್ಟಿ ವರ್ತಿಸುವಾಗ ಶಿಕ್ಷಣ ಇಲಾಖೆಯು ಕಣ್ಮುಚ್ಚಿ ಕುಳಿತಿತು. ಇದೀಗ ಮೊಂಡ ಹುಡುಗನಂತೆ ತನಗೆ ಸರ್ಕಾರದ ನೀತಿಯು ಲೆಕ್ಕಕ್ಕೇ ಇಲ್ಲದಂತೆ ವರ್ತಿಸುವಲ್ಲಿ ಕುಸ್ಮಾ ಸದಸ್ಯ ಶಾಲೆಗಳ ದುಡ್ಡಿನ ಅಹಂಕಾರವೂ  ಇಲಾಖೆಯ ಮೃದು ಧೋರಣೆಯೂ ಕಾರಣವಾಯಿತು.

ಕುಸ್ಮಾದ ಸೊಕ್ಕಿಗೆ ಹೆತ್ತವರ ಹುಚ್ಚು ಕಾರಣ. ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆದರೆ ತನ್ನ ಮಗು ವಿಶ್ವ ಮಟ್ಟದಲ್ಲಿ ಸಲ್ಲುತ್ತಾನೆಂಬ ಭ್ರಮೆ ಇದರ ಹಿಂದೆ ಇದೆ. ಆದರೆ ಗ್ಲೋಬಲ್ ನೆಲೆಗೆ ಸಿದ್ಧಗೊಳ್ಳುವ ಮಗು ಅಲ್ಲಿಗೂ ತಲುಪಲಾಗದೆ ಲೊಕಲ್ ನೆಲೆಯನ್ನೂ ಕಳೆದುಕೊಳ್ಳುತ್ತದೆಂಬ ಸತ್ಯವನ್ನು ಮನಗಾಣುವುದೇ ಇಲ್ಲ. ಇದಕ್ಕೆ ಕಾರಣ ತಾನು ಮಗುವನ್ನು ಕಳಿಸುತ್ತಿರುವ ಶಾಲೆಯು ಹೆಸರಿಗೆ ಮಾತ್ರ ಇಂಗ್ಲಿಷ್ ಮಾಧ್ಯಮವೋ ಅಥವಾ ನಿಜಕ್ಕೂ ಅಲ್ಲಿ ಸರಿಯಾದ ಇಂಗ್ಲಿಷ್ ಕಲಿಸುವವರಿದ್ದಾರೆಯೇ ಎಂದು ಪರಿಶೀಲಿಸುವ ಗೋಜಿಗೆ ಹೊಗಲಾರದ ಹೆತ್ತವರೇ ಅನೇಕ. ಈ ಪರಿಸ್ಥಿತಿಯು ಕುಸ್ಮಾ ಶಾಲೆಗಳಿಗೆ ಗುಣಮಟ್ಟದ ಶಿಕ್ಷಕರಿಲ್ಲದೆಯೂ ಶಾಲೆ ನಡೆಸಲು ಪೂರಕವಾಗಿದೆ.

ಹಾಗಾಗಿ ಯಾವ ಸಮಾಜದಲ್ಲಿ ತಾವು ಅಸ್ತಿತ್ವ ಕಂಡಿದ್ದಾರೋ ಅದೇ ಸಮಾಜದ ಬಡವರ ಬಗ್ಗೆ ತಮಗೆ ಬದ್ಧತೆ ಇಲ್ಲವೆಂಬ ಸೊಕ್ಕು ತುಂಬಿದೆ. ಇದೇ ಸಮಯವೆಂದು ಸರ್ಕಾರವು ಈಗ ಯೋಗ್ಯವಾದ ಅಸ್ತ್ರವನ್ನು ಪ್ರಯೋಗಿಸಬೇಕು. ಕನ್ನಡದಲ್ಲಿ ಕಲಿಸುತ್ತೇವೆಂದು ಹೇಳಿ ಕನ್ನಡ ಭಾಷೆಗೆ, ನೆಲಕ್ಕೆ ಮೋಸ ಮಾಡುತ್ತಿರುವ ಶಾಲೆಗಳನ್ನು ಸರಿದಾರಿಗೆ ತರಬೇಕು. ಇದಕ್ಕಾಗಿ ಅಗತ್ಯ ಬಿದ್ದರೆ ಅನುಮತಿಯನ್ನು ರದ್ದುಗೊಳಿಸಲೂ ಸರ್ಕಾರ ಸಿದ್ಧವಾಗಬೇಕು.  
-  ಡಾ. ಚಂದ್ರಶೇಖರ ದಾಮ್ಲೆ, ಸುಳ್ಯ


ಕೂಡಲೇ ಬಂಧಿಸಿ
ಬಡ ಮಕ್ಕಳನ್ನು ಮತ್ತು ದಲಿತರನ್ನು ಕೊಳಚೆ ನೀರೆಂದು ಕರೆದಿರುವುದು ಅಕ್ಷಮ್ಯ.  ಅಸ್ಪೃಶ್ಯತಾ ಕಾಯ್ದೆಯಡಿಯಲ್ಲಿ ಅವರನ್ನು ಬಂಧಿಸಬೇಕು.

ಶಾಲೆಗೆ ದಾಖಲಾಗಿರುವ ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಮನೆ ಕೆಲಸ ಮತ್ತು ತರಗತಿ ಕೆಲಸಗಳನ್ನು ಕೊಡದೆ ತರಗತಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಮಕ್ಕಳನ್ನು ತರಗತಿಯ ಕೊನೆಯ ಸಾಲಿನಲ್ಲಿ ಕೂರಿಸಲಾಗುತ್ತಿದೆ. ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಕಡ್ಡಾಯ ಶಿಕ್ಷಣ ಹಕ್ಕಿನಲ್ಲಿ ದಾಖಲಾದ ಮಕ್ಕಳನ್ನು ಪ್ರತ್ಯೇಕವಾಗಿ ನಿಲ್ಲಿಸಲಾಗುತ್ತಿದೆ. ಈ ರೀತಿ ಖಾಸಗಿ ಶಾಲೆಗಳಲ್ಲಿ ಮಕ್ಕಳ ಶೋಷಣೆ ನಡೆಯುತ್ತಿದೆ.

ಹಾಜರಾತಿ ಪುಸ್ತಕದಲ್ಲಿ ಈ ಮಕ್ಕಳ ಹೆಸರುಗಳು ದಾಖಲಾಗಿಲ್ಲ. ಶಾಲೆಗೆ ಬರುವ ಮಕ್ಕಳ ಊಟದ ಡಬ್ಬಿಗಳನ್ನು ಪರೀಕ್ಷಿಸಿ ಒಳಗೆ ಬಿಡುತ್ತಾರೆ. ಯಾರಾದರೂ ಮೊಟ್ಟೆಯಿಂದ ತಯಾರು ಮಾಡಿರುವ ಊಟ ತಂದಿದ್ದರೆ, ಅಂತಹ ಮಕ್ಕಳನ್ನು ಶಾಲೆಗೆ ಸೇರಿಸದೆ, ಮನೆಗೆ ಕಳುಹಿಸುತ್ತಿದ್ದಾರೆ. ಅವರ ಇಷ್ಟವಾದ ಊಟವನ್ನು ಮಾಡುವುದು ಅವರ ಹಕ್ಕು. ಅದನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ.  ಅಸ್ಪೃಶ್ಯತೆಯನ್ನು ಆಚರಿಸುವಂತಹ ಘೋರ ಅಪರಾಧದ ವಿರುದ್ಧ ಕ್ರಮ ಕೈಗೊಳ್ಳಬೇಕು. 
 - ಬಿ.ಟಿ.ಲಲಿತಾನಾಯಕ್‌, ಬೆಂಗಳೂರು


ಹೋರಾಟದ ಬಣ್ಣ ಬಯಲು

ಸಂವಿಧಾನ ಮತ್ತು ಕಾನೂನು ಬಾಹಿರವಾಗಿ ಶಾಲೆಗಳನ್ನು ಮುಚ್ಚಿ ಮಕ್ಕಳ ಮೂಲಭೂತ ಹಕ್ಕನ್ನು ಉಲ್ಲಂಘಿಸಿರುವ ಕುಸ್ಮಾ ಸಂಘಟನೆಯ ಅಧ್ಯಕ್ಷರು ಮತ್ತೊಂದು ಅಪಾಯಕಾರಿ ಮತ್ತು ಆತಂಕಕಾರಿ ಹೇಳಿಕೆಯನ್ನು ನೀಡಿದ್ದಾರೆ. ಸರ್ಕಾರಿ ಶಾಲೆ ಮತ್ತು ಮಕ್ಕಳನ್ನು ಕೊಳಚೆ ನೀರಿಗೆ ಹೋಲಿಸಿರುವ ಅವರ ಮನಸ್ಸು ಎಷ್ಟು ಕೊಳಕಾಗಿದೆ ಎಂಬುದನ್ನು ಈ ಹೇಳಿಕೆಯ ಮೂಲಕ ಅನಾವರಣಗೊಳಿಸಿದ್ದಾರೆ.  ಶರ್ಮಾರವರ ಹೇಳಿಕೆ ಖಂಡನೀಯ.

ಇದರಿಂದ ಕುಸ್ಮಾ ಹೋರಾಟದ ನಿಜವಾದ ಬಣ್ಣ ಬಯಲಾಗಿದೆ. ನಿಜವಾಗಿಯೂ ಅವರ ಮೂಲ ಉದ್ದೇಶ ಶಿಕ್ಷಣದ ಹಕ್ಕು ಕಾಯ್ದೆಯನ್ನು ಅನುಷ್ಠಾನ ಮಾಡುವಲ್ಲಿ ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಲ್ಲ. ಅವರ ಹೋರಾಟ ಒಂದು ವರ್ಗದ ಮಕ್ಕಳನ್ನು ಅವರು ನಡೆಸುತ್ತಿರುವ ಖಾಸಗಿ ಶಾಲೆಗಳಿಂದ ವ್ಯವಸ್ಥಿತವಾಗಿ ಹೊರಗಿಡುವುದು.

ಹಿಂದೊಮ್ಮೆ ಇದೇ ಮಹಾ ಪುರುಷ ಬಡಮಕ್ಕಳು  ಖಾಸಗಿ ಶಾಲೆಗೆ ಸೇರುವಾಗ ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕೆಂದಿದ್ದರು. ದಿನದಿಂದ ದಿನಕ್ಕೆ ಇವರ ಒಳ ಮಲಿನ ಮನಸ್ಸು ತೆರೆಯತ್ತಿದೆ.

 ಕುಸ್ಮಾದ ಅಧ್ಯಕ್ಷರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗಬೇಕು. ಜನರಲ್ಲಿನ ಸಾಮರಸ್ಯಕ್ಕೆ ಧಕ್ಕೆಯಾಗಿರುವ ಕುಸ್ಮಾ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು.
- ಡಾ. ವಿ.ಪಿ.ನಿರಂಜನಾರಾಧ್ಯ, ಬೆಂಗಳೂರು

ಸಂವಿಧಾನ ವಿರೋಧಿ ಹೇಳಿಕೆ
ಇಂದು ಶಿಕ್ಷಣ ಹಕ್ಕಿನ ಮಸೂದೆ ಮತ್ತು ಅದರ ಅನುಷ್ಠಾನದ ಬಗ್ಗೆ ಚರ್ಚೆ ನಡೆದಿದೆ. ಮಸೂದೆ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನಿನ ಗೊಂದಲಗಳನ್ನು ಅನವಶ್ಯಕವಾಗಿ ಉತ್ಪ್ರೇಕ್ಷೆ ಮಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ಜನರಿಗೆ ಮತ್ತು ಸರ್ಕಾರಕ್ಕೆ ದ್ರೋಹ ಬಗೆಯುತ್ತಿವೆ.
 
ಇದಕ್ಕೆಲ್ಲ ಕಿರೀಟವಿಟ್ಟಂತೆ `ಕುಸ್ಮಾ~ದ ಅಧ್ಯಕ್ಷರು ಸಂವಿಧಾನ-ವಿರೋಧಿ ಮಾತುಗಳನ್ನಾಡಿದ್ದಾರೆ (ಪ್ರಜಾವಾಣಿ, ಜುಲೈ 17, 2012).  ಅವರ ಮಾತಿನಲ್ಲಿನ `ಸಮುದ್ರದ ನೀರು~  ಮತ್ತು `ಕೊಳಚೆ ನೀರು~  ಯಾರು ಯಾರನ್ನು ಪ್ರತಿನಿಧಿಸುತ್ತವೆ ಎಂಬುದಕ್ಕೆ ತಿಳಿದುಕೊಳ್ಳಲಿಕ್ಕೆ ಸಂಶೋಧನೆಯ ಅಗತ್ಯವಿಲ್ಲ.

ಕೊಳಕು ಮನಸ್ಸಿನ-ಶೌಚ ಮನೋಭಾವದ ಜನರು ಹೇಗೆ ಯೋಚಿಸುತ್ತಾರೆ ಎಂಬುದಕ್ಕೆ  ಶರ್ಮಾ ಅವರ ಹೇಳಿಕೆಯು ಉದಾಹರಣೆಯಾಗಿದೆ. ಅವರ ಮಾತು ಸಂವಿಧಾನ ವಿರೋಧಿಯಾಗಿದೆ ಮತ್ತು ಸಮಾನತೆ ಮೌಲ್ಯಕ್ಕೆ ಧಕ್ಕೆ ತರುವಂತಹದ್ದಾಗಿದೆ. ಅವರ ಮಾತು ಉದ್ಧಟತನದ ಪರಮಾವಧಿ.

ನಿಜಕ್ಕೂ ಕುಸ್ಮಾದ ಸದಸ್ಯರಿಗೆ ಸಮಾನತೆ ಬಗ್ಗೆ ಮತ್ತು ನಮ್ಮ ಸಂವಿಧಾನದ ಬಗ್ಗೆ ರವಷ್ಟು ಗೌರವವಿದ್ದುದಾದರೆ ತಕ್ಷಣ  ಜಿ.ಎಸ್.ಶರ್ಮಾ ಅವರನ್ನು ಕುಸ್ಮಾದ ಅಧ್ಯಕ್ಷ ಸ್ಥಾನದಿಂದ ಹೊರ ಹಾಕಬೇಕು. ಸಾಧ್ಯವಾದರೆ ಅಸ್ಪೃಶ್ಯತೆ ಆಚರಣೆಯ ಸನಿಹದ ಅರ್ಥವಿರುವ ಅವರ ಹೇಳಿಕೆಯನ್ನು ಆಧರಿಸಿ ಅವರನ್ನು ಜೈಲಿಗೆ ಕಳುಹಿಸಬೇಕು. ಇಂತಹ ಸಾಮಾಜಿಕ ನ್ಯಾಯದ ವಿರುದ್ಧ ಹೇಳಿಕೆ ನೀಡುವ ದಾಷ್ಟ್ಯ ಅವರಿಗೆ ಹೇಗೆ ಬಂತು ಎಂಬುದರ ಬಗ್ಗೆ ನಾವು ಯೋಚಿಸಬೇಕಾಗಿದೆ.
- ಟಿ.ಆರ್.ಚಂದ್ರಶೇಖರ,  ಹೊಸಪೇಟೆ

ಬಡ ವಿದ್ಯಾರ್ಥಿಗಳು ಕೊಳಚೆ ನೀರಂತೆ ? 
ಬಡಮಕ್ಕಳನ್ನು ಕೊಳಚೆ ನೀರಿಗೂ ಶ್ರಿಮಂತರ ಮಕ್ಕಳನ್ನು ಶುದ್ಧ ನೀರಿಗೆ ಹೋಲಿಸಿರುವುದು ಕೀಳುದರ್ಜೆಯ ಮನೋಧರ್ಮಕ್ಕೆ ಸಾಕ್ಷಿಯಂತಿದೆ  ಇವರ ಪ್ರಕಾರ ಬಡವರ ಮಕ್ಕಳು ಉತ್ತಮ ಶಿಕ್ಷಣವೇತ್ತರಾಗುವುದು ಬೇಡವೆಂತಿದೆ. 

ಖಾಸಗಿ ಶಾಲೆಗಳಿಂದ ಇಂದು ಶಿಕ್ಷಣ ವ್ಯಾಪಾರೀಕರಣವಾಗಿದೆ. ಇವುಗಳಿಗೆ ದೇಶದ ಸಾಮಾಜಿಕ ಪಿಡುಗುಗಳು ನಾಶವಾದರೆ ರಾಷ್ಟ್ರದ  ಘನತೆ ಹೆಚ್ಚುತ್ತದೆಂಬ ಕನಿಷ್ಠ ಕಲ್ಪನೆಯೂ ಇಲ್ಲದಿರುವುದು ನಮ್ಮ ದೌರ್ಭಾಗ್ಯವೆ ಸರಿ. ಒಂದು ವೇಳೆ ಸರ್ಕಾರದ ಕಾನೂನುಗಳನ್ನು ಪಾಲಿಸಲು ಖಾಸಗಿ ಶಾಲೆಗಳಿಂದ ಸಾಧ್ಯವಿಲ್ಲದಿದ್ದರೆ ಈ ಶಾಲೆಗಳಿಂದ ಸಂವಿಧಾನದ ಆಶಯಗಳನ್ನು ಅರಿಯಲು ಆಗುವುದಿಲ್ಲ. ಬಡವರನ್ನು ಕೊಳಚೆ ಜನರೆಂದು ದೂರವಿಟ್ಟರೆ ಅದು ದೇಶಕ್ಕೆ ಶಾಶ್ವತ ಶಾಪವಾಗುತ್ತದೆ.

ಭಾರತೀಯರ ಮಕ್ಕಳನ್ನೇ ಬೆಳೆಸುತ್ತಿದ್ದೇವೆಂಬ ಅರಿವು ಖಾಸಗಿ ಶಾಲೆಗಳಿಗೆ ಬಂದರೆ, ಶಿಕ್ಷಣ ಹಕ್ಕು ಕಾಯಿದೆ ಮಹತ್ವ ಅವುಗಳಿಗೆ ತಿಳಿಯುತ್ತದೆ. ಇಲ್ಲದೆ ಹೋದರೆ ಈ ಕಾಯಿದೆಗಿಂತ ಬಲಿಷ್ಠ ಕಾನೂನು ಮಂದೆ ಬಂದು ಅವುಗಳನ್ನು ಸದೆಬಡಿಯಲಿದೆ.   
- ದಾಸನೂರು ಕೂಸಣ್ಣ, ಬೆಂಗಳೂರು


ಸರ್ಕಾರ ಗಟ್ಟಿಯಾಗಿ ನಿಲ್ಲಲಿ
ಕೆಲವು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ನಡೆಸಿದ ಶಾಲೆಗಳ ಬಂದ್ ಸರಕಾರಕ್ಕೆ ಮಾತ್ರವಲ್ಲ ಇಡೀ ಸಮಾಜಕ್ಕೆಸೆದ ಸವಾಲು. ಕುಸ್ಮಾದ ಅಧ್ಯಕ್ಷರ ಹೇಳಿಕೆಯಂತೂ ಕೀಳು ಅಭಿರುಚಿಯದ್ದು. ಸಮಾಜದ ಬಡವರ ಮಕ್ಕಳು ಶಾಲೆಗೆ ಸೇರಿದರೆ ಸಿರಿವಂತರ ಮಕ್ಕಳು ಶಾಲೆಯನ್ನು ತ್ಯಜಿಸುವುದಾಗಿಯೂ ಹೇಳಿದ್ದಾರೆ.

ಹಾಗಿದ್ದರೆ ಆ ಮಕ್ಕಳು ಎಲ್ಲಿಗೆ ಹೋಗುತ್ತಾರೆ. ನಮ್ಮ ರಾಜ್ಯ ಬಿಟ್ಟು ಹೊರ ರಾಜ್ಯಕ್ಕೋ ವಿದೇಶಕ್ಕೋ ಹೋಗುವುದಿದ್ದರೆ ಯಾರ ಅಭ್ಯಂತರವೂ ಇಲ್ಲ.

ಅಂದಿನ ಮೈಸೂರು ಮಹಾರಾಜರು ತಮ್ಮ ಮಕ್ಕಳನ್ನೇ ಮೈಸೂರಿನ ಮಹಾರಾಜಾ ಕಾಲೇಜು, ಮಹಾರಾಣಿ ಕಾಲೇಜು ಮತ್ತು ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮಾಡಿಸಿದ್ದರು. ಸಿರಿವಂತರ ಮಕ್ಕಳು ಕೂಡ ಸಮಾಜದ ಇತರ ವರ್ಗದವರೊಡನೆ ಬೆರೆಯದಿದ್ದರೆ ಸಾಮಾಜಿಕ ಸಂಘರ್ಷಕ್ಕೆ ದಾರಿಯಾಗುತ್ತದೆ.
 
ರಾಷ್ಟ್ರದ ಉಚ್ಚನ್ಯಾಯಾಲಯ ಈ ದಿಕ್ಕಿನಲ್ಲಿಯೇ ಆಲೋಚನೆ ಮಾಡಿ ಆದೇಶ ಮಾಡಿದೆ. ಸರಕಾರಿ ಶಾಲೆಗೆ ಸೇರುವ ಬಡವರ ಮಕ್ಕಳಿಗೆ ಇವರೇನು ಪುಕ್ಕಟೆಯಾಗಿ ವಿದ್ಯಾಭ್ಯಾಸವನ್ನು ಕೊಡುವುದಿಲ್ಲ, ಸರಕಾರ ಅವರ ಪಾಲಿನ ವಿದ್ಯಾಭ್ಯಾಸದ ಶುಲ್ಕವನ್ನೂ ಕೂಡ ಪಾವತಿಸುತ್ತದೆ. ನಗರದ ಕೆಲವೇ ಶಾಲೆಗಳು ಇಂತಹ ರಂಪಾಟ ಮಾಡಬಹುದೇ ವಿನಹ ರಾಜ್ಯದಲ್ಲೆಡೆ ಖಾಸಗೀ ಶಾಲೆಗಳು ನಿಜಕ್ಕೂ ಸಂತಸಪಟ್ಟಿವೆ.

ಇದೇ ವಿಷಯಕ್ಕೆ ಶಾಲೆಯನ್ನು ಬಂದ್ ಮಾಡಿದರೆ ಸರಕಾರ ಒಂದು ದಿನವೂ ತಡಮಾಡದೆ ಆ ಶಾಲೆಯನ್ನು ಸರಕಾರವೇ ವಹಿಸಿಕೊಂಡು ಅವರ ಮೇಲೆ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳಿಸಬೇಕು. ಸಮಾಜದ ತಾರತಮ್ಯ ನಿವಾರಣೆಯ ದಿಕ್ಕಿನಲ್ಲಿ ಈ ಕಾರ್ಯಕ್ರಮವೂ ಒಂದು.
- ಅತ್ತಿಹಳ್ಳಿ ದೇವರಾಜ್   ಹಾಸನ 


ಕ್ರೂರ ಕಲ್ಪನೆ

ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯ ಕೆಲ ಅಂಶಗಳನ್ನು ವಿರೋಧಿಸಿ ಕುಸ್ಮಾ ಸಂಸ್ಥೆಯವರು ಶಾಲಾ ಬಂದ್ ಮಾಡಿರುವುದು ವಿಷಾದಕರ. ಇದಕ್ಕಿಂತ ವಿಷಾದ ಮತ್ತು ವಿರೋಧಕ್ಕೆ ಕಾರಣವಾಗುವ ಮಾತುಗಳನ್ನು ಕುಸ್ಮಾ ಅಧ್ಯಕ್ಷ ಜಿ.ಎಸ್. ಶರ್ಮ ಆಡಿದ್ದಾರೆ. ಈ ಮಾತು ಅಮಾನವೀಯ ಮತ್ತು ಖಂಡನೀಯ. ಅವರು ಖಾಸಗಿ ಶಾಲೆಗಳನ್ನು ಸಮುದ್ರಕ್ಕೂ ಸರ್ಕಾರಿ ಶಾಲೆಗಳನ್ನು ಮತ್ತು ಬಡಮಕ್ಕಳನ್ನು `ಕೊಳಚೆ~ಗೂ ಹೋಲಿಸುವ ಮೂಲಕ ಸಮಾನತೆ ಮತ್ತು ಸಂವಿಧಾನದ ಆಶಯಗಳಿಗೆ ಅವಮಾನ ಮಾಡಿದ್ದಾರೆ.

ಬಡಮಕ್ಕಳು ಶಾಲೆಗೆ ಬಂದರೆ  ಆ ಶಾಲೆಗಳ ಶುಭ್ರತೆ ಹಾಳಾಗಿ ಕೊಳಚೆಯಾಗುತ್ತದೆಯೆಂಬ ಕಲ್ಪನೆಯೇ ಕ್ರೂರವಾದುದು. ಕುಸ್ಮಾ ಅಧ್ಯಕ್ಷರು ಬೇರೆಲ್ಲಾ ಕಾರಣಗಳಿಗಿಂತ ಹೆಚ್ಚಾಗಿ ಈ ಮನೋವೃತ್ತಿಯಿಂದಲೇ ಕಡ್ಡಾಯ ಶಿಕ್ಷಣಹಕ್ಕು ಕಾಯಿದೆಯನ್ನು ವಿರೋಧಿಸುತ್ತಿದ್ದಾರೆಂಬುದು ಅವರ ಅಮಾನವೀಯ ಮಾತುಗಳಿಂದ ಸ್ಪಷ್ಟವಾಗಿದೆ.  ಅವರ ಈ ಮಾತನ್ನು ವಾಪಸ್ ಪಡೆಯಬೇಕು.
- ಡಾ. ಬರಗೂರು ರಾಮಚಂದ್ರಪ್ಪ, ಬೆಂಗಳೂರು


ಮನಸ್ಸಿನ ಕೊಳಕು
ಈ ಹೇಳಿಕೆಯು ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇರುವ ಎಲ್ಲರಿಗೂ ನೋವನ್ನುಂಟು ಮಾಡಿದೆ.

ಕೇವಲ ತಮ್ಮ ಶಾಲೆಯ ಆರ್ಥಿಕ ಲಾಭಗಳ ಬಗ್ಗೆ ಮಾತ್ರ ಚಿಂತೆ ಮಾಡುತ್ತಿರುವ ಶರ್ಮಾರಂಥಹ ವ್ಯಕ್ತಿಗಳು ತಮ್ಮ ಶಾಲೆಗಳನ್ನು ಮುಚ್ಚಿ, ಆರ್ಥಿಕ ಲಾಭ ಬರುವಂತಹ ರಿಯಲ್ ಎಸ್ಟೇಟ್ ಮತ್ತಿತರ ಉದ್ಯಮಗಳಿಗೆ ಇಳಿದರೆ ಸಮಾಜಕ್ಕೆ ಒಳ್ಳೆಯದು.
- ಗಗನ್ ಕೆ., ಮೈಸೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT