ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕ್ಷೇತ್ರಕ್ಕೆ ಆದ್ಯತೆ: ಕಳಕಪ್ಪ ಬಂಡಿ

Last Updated 22 ಆಗಸ್ಟ್ 2012, 6:00 IST
ಅಕ್ಷರ ಗಾತ್ರ

ಗಜೇಂದ್ರಗಡ: ರೋಣ ತಾಲ್ಲೂಕಿನ ಕೃಷಿ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಕ್ಷೇತ್ರವನ್ನಾಗಿ  ಪರಿವರ್ತಿಸಲಾಗುವುದು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ನಿರ್ಮಾಣಗೊಳ್ಳುತ್ತಿರುವ ಬೃಹತ್ ಕೆರೆ ನಿರ್ಮಾಣ ಕಾಮಗಾರಿಗಳು ಭಾಗಶ: ಮುಕ್ತಾಯಗೊಂಡಿವೆ. ಬರುವ ದಿನಗಳಲ್ಲಿ ತಾಲ್ಲೂಕಿನ ಕೃಷಿ ಕ್ಷೇತ್ರ ಶ್ರೀಮಂತಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು.

ಸಮೀಪದ ಸೂಡಿ ಗ್ರಾಮದ ಜುಕ್ತಿ ಹೀರೆಮಠದಲ್ಲಿ ಮಠದ ಸದ್ಭಕ್ತ ಮಂಡಳಿ ವತಿಯಿಂದ  ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಲೆಮಾರುಗಳಿಂದಲ್ಲೂ ಮಳೆ ಆಶ್ರಿತ ಕೃಷಿಯ ಮೂಲಕ ಸಂಕಷ್ಟದ ಬದುಕು ಸಾಗಿಸುತ್ತಿರುವ ಈ ಭಾಗದ ಅನ್ನದಾತನ ಬಾಳು ಹಸನಾಗಿಸುವ ನಿಟ್ಟಿನಲ್ಲಿ ಮಹತ್ವದ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.

2005-06 ರಲ್ಲಿ 200 ಕೋಟಿ ವೆಚ್ಚದಲ್ಲಿ ಮಲಪ್ರಭಾ ಬಲದಂಡೆ ಯೋಜನೆಯನ್ನು ತಾಲ್ಲೂಕಿ ಗೆ ವಿಸ್ತರಿಸಲಾಗಿದೆ. ಯೋಜನೆಯಡಿ ಪ್ರಮುಖ ಹಾಗೂ ಉಪ ಕಾಲುವೆ, ಹೊಲಗಾವಲು ಕಾಲುವೆಗಳ ನಿರ್ಮಾಣ ಕಾಮಗಾರಿಗಳು ಭಾಗಶ: ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು ಕೆಲವೇ ದಿನಗಳಲ್ಲಿ  ಪೂರ್ಣಗೊಳ್ಳುತ್ತವೆ. ತಾಲ್ಲೂಕು ಒಟ್ಟು 1,10,756 ಹೆಕ್ಟರ್ ಸಾಗುವಳಿ ಕ್ಷೇತ್ರವನ್ನು ಹೊಂದಿದೆ. ಇದರಲ್ಲಿ 35,765 ಹೆಕ್ಟರ್ ಪ್ರದೇಶ ಮಲಪ್ರಭಾ ಬಲದಂಡೆ ಯೋಜನೆಗೆ ಒಳಪಟ್ಟಿದೆ ಎಂದರು.

ಇನ್ನುಳಿದ ಕೃಷಿ ಕ್ಷೇತ್ರದ ಅನುಕೂಲಕ್ಕಾಗಿ ಬೃಹತ್ ಕೆರೆಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ನಿಡಗುಂದಿ ಗ್ರಾಮದ ಹೊರವಲಯದಲ್ಲಿ 50 ಲಕ್ಷ ವೆಚ್ಚದಲ್ಲಿ 22 ಎಕರೆ ವಿಸ್ತೀರ್ಣದಲ್ಲಿ ಕೆರೆ ನಿರ್ಮಿಸಲಾಗಿದೆ. 1970 ರ ದಶಕದಲ್ಲಿ ನಿರ್ಮಾಣಗೊಂಡ 170 ರಿಂದ 250 ಎಕರೆ ವಿಸ್ತೀರ್ಣದ ಬೃಹತ್ ಕೆರೆಗಳನ್ನು 150 ಲಕ್ಷ ವೆಚ್ಚದಲ್ಲಿ ಪುನರುಜ್ಜೀವನಗೊಳಿಸಲಾಗುತ್ತಿದೆ ಎಂದರು.
 
ಹತ್ತಾರು ದಶಕಗಳಿಂದಲ್ಲೂ ಪ್ಲೋರೈಡ್ ಯುಕ್ತ ನೀರು ಸೇವಿಸಿ, ತಮ್ಮದಲ್ಲದ ತಪ್ಪಿಗೆ ಅಸಂಖ್ಯಾತ  ಜನತೆ ಪಾರ್ಶ್ವವಾಯು, ನರದೌರ್ಬಲ್ಯ, ಸ್ನಾಯು ಸೆಳೆತ, ಮಂಡಿನೋವು ಇತ್ಯಾದಿ ಸಮಸ್ಯೆಗಳಿಂದ ಬಳಲಿ ನರಕ ಸದೃಶ್ಯ ಬದುಕು ಸಾಗಿಸುತ್ತಿದ್ದರು. ಫ್ಲೋರೈಡ್ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಬೃಹತ್ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಲಾಗಿದೆ.
 
ಜಿಗಳೂರ ಗ್ರಾಮದ  ಬಳಿ 68 ಕೋಟಿ ವೆಚ್ಚದಲ್ಲಿ 350 ಎಕರೆ ವಿಸ್ತೀರ್ಣದಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ. ತಾಲ್ಲೂಕಿನ ಸರ್ಜಾಪೂರ ಹಾಗೂ ಇತರೆ 16 ಗ್ರಾಮಗಳಿಗೆ ಶುದ್ದ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ 19 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಗದಗ ಶಾಸಕ ಶ್ರೀಶೈಲಪ್ಪ ಬಿದರೂರ ಮಾತನಾಡಿ, ರೋಣ ತಾಲ್ಲೂಕಿನ ಶೇ.92 ರಷ್ಟು ಕುಟುಂಬಗಳು ಕೃಷಿಯನ್ನೇ ಆಧಾರವಾಗಿಸಿಕೊಂಡು ಬದುಕು ಸವೆಸುತ್ತಿದ್ದಾರೆ ಎಂದರು.
 
ಕೃಷಿಯಿಂದ ಬರೀ ನಷ್ಟ. ಕನಿಷ್ಟ ಪಕ್ಷ ಬೆಳೆಗೆ ಮಾಡಿದ ಖರ್ಚು ಸಹ ಕೈಗೆಟುಕುವುದಿಲ್ಲ ಎಂಬ ಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಯುವಕರು ಹಾಗೂ ಹಿರಿಯ ರೈತರುಗಳು ಕೃಷಿ ಕ್ಷೇತ್ರದಿಂದ  ವಿಮುಖರಾಗುತ್ತಿದ್ದಾರೆ. ಹೀಗಾಗಿ ರಾಜ್ಯದ ಕೃಷಿ ಕ್ಷೇತ್ರ ದಿನದಿಂದ ದಿನಕ್ಕೆ ಬಡವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
 
ಸಚಿವ ಕಳಕಪ್ಪ ಬಂಡಿ ಅವರು ಕೈಗೊಡಿರುವ ಅಭಿವೃದ್ಧಿ ಕಾರ್ಯಗಳು ಜನಪ್ರತಿನಿಧಿಗಳಿಗೆ ಮಾದರಿಯಾಗಿವೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ಪ್ರದೇಶವೆಂಬ ಹಣೆ ಪಟ್ಟಿಯನ್ನು ಕಟ್ಟಿಕೊಂಡಿರುವ ರೋಣ ತಾಲ್ಲೂಕು ಮುಂಬರುವ ಕೆಲವೇ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ಮಾದರಿ ತಾಲ್ಲೂಕನ್ನಾಗಿ ಸಚಿವ ಬಂಡಿ ರೂಪಿಸುವುದರಲ್ಲಿ ಸಂದೇಹವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಡಾ.ಕೊಟ್ಟೂರಬಸವೇಶ್ವರ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ, ಎಸ್.ವ್ಹಿ.ಸಂಕಣ್ಣವರ, ಸದಾಶಿವ ಮದರಿಮಠ,  ರಾಜಾ ಕುರಡಗಿ, ಎಸ್.ಆರ್.ಪಾಟೀಲ, ಅಂದಾನಗೌಡ ಪಾಟೀಲ, ನಾಗೇಶ ಲಕ್ಕಲಕಟ್ಟಿ, ಬಾಬು ದೇಸಾಯಿ ಉಪಸ್ಥಿತರಿದ್ದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT