ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಪದವೀಧರರು ಹಳ್ಳಿಗೆ ನಡೆಯಿರಿ-ಅಯ್ಯಪ್ಪನ್

Last Updated 16 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ರಾಯಚೂರು: ಕೃಷಿ ಪದವೀಧರರು ಹಳ್ಳಿಯತ್ತ ಸಾಗುವ ಮನಸ್ಸು ಮಾಡಬೇಕು. ಪದವಿ ಪಡೆದ ಬಳಿಕ ಕೃಷಿ ಕ್ಷೇತ್ರದಿಂದ ವಿಮುಖರಾಗದೇ ಕೃಷಿ ಕ್ಷೇತ್ರದ ಏಳ್ಗೆಗೆ ಜ್ಞಾನ ಧಾರೆ ಎರೆಯಬೇಕು ಎಂದು ಕೇಂದ್ರ ಕೃಷಿ ಸಂಶೋಧನಾ ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮಹಾನಿರ್ದೇಶಕ ಡಾ.ಎಸ್. ಅಯ್ಯಪ್ಪನ್ ಹೇಳಿದರು. ಶನಿವಾರ ಇಲ್ಲಿನ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

ಭೂಮಿ ಫಲವತತ್ತೆ, ನೀರು ನಿರ್ವಹಣೆ, ವಾತಾವರಣದಿಂದ ಬೆಳೆ ಮೇಲಾಗುವ ಸಮಸ್ಯೆಗಳ ಬಗ್ಗೆ ಕೃಷಿ ಸಮುದಾಯಕ್ಕೆ ವೈಜ್ಞಾನಿಕ ತಳಹದಿ ವಿಚಾರಗಳ ಮೂಲಕ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು. ‘ಕೃಷಿಕ ಪ್ರಥಮ’ ಎಂಬ ಪರಿಕಲ್ಪನೆಯ ಹೊಸ ಯೋಜನೆಯನ್ನು ಕೃಷಿ ಸಂಶೋಧನಾ ಮತ್ತು ಶಿಕ್ಷಣ ಇಲಾಖೆಯು ಅನುಷ್ಠಾನಕ್ಕೆ ಮುಂದಾಗಿದೆ. ನಮ್ಮ ಕೃಷಿ ಸಂಶೋಧಕರು, ತಜ್ಞರು ಮತ್ತು ವಿಜ್ಞಾನಿಗಳು ಒಂದು ದಿನದ ತಮ್ಮ ಶೇ 25ರಷ್ಟು ಸಮಯವನ್ನು ಕೃಷಿಕನ ಜಮೀನಿನಲ್ಲಿ ಕಳೆಯಬೇಕು ಎಂಬುದು ಈ ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು.

ಈ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ಪಡೆಯುತ್ತಿರುವ 93 ಪದವೀಧರರಲ್ಲಿ ಕನಿಷ್ಠ 25 ಜನರಾದರೂ ಕೃಷಿಕರ ಸಮಸ್ಯೆ ಪರಿಹಾರಕ್ಕೆ ಹಳ್ಳಿಯತ್ತ ಸಾಗುವ ಮನಸ್ಸು ಮಾಡಬೇಕು ಎಂದು ಕಳಕಳಿ ವ್ಯಕ್ತಪಡಿಸಿದರು. ಬೀಜ, ನೀರು, ಮಣ್ಣು ಮತ್ತು ಕೃಷಿ ಕಾರ್ಮಿಕರು ಇವು ನಮ್ಮ ರೈತರು ಎದುರಿಸುತ್ತ ಬಂದಿರುವ ಸಮಸ್ಯೆಗಳು. ಪ್ರಸ್ತುತ ಕೃಷಿ ಕಾರ್ಮಿಕರ ಸಮಸ್ಯೆ ಹೆಚ್ಚಾಗಿದೆ. ಇಂಥ ಕೃಷಿ ತಾಂತ್ರಿಕ ಕಾಲೇಜು ಹೊಂದಿರುವ ಈ ವಿವಿಯ ಕೃಷಿ ತಾಂತ್ರಿಕ ವಿಭಾಗದಲ್ಲಿ ಪದವಿ ಪಡೆದಿರುವ ಪದವೀಧರರೇ ಸಂಶೋಧನೆ ಕೈಗೊಂಡು ಮುಂಬರುವ ದಿನಗಳಲ್ಲಿ ಪರಿಹಾರ ಸೂಚಿಸಬೇಕಾದ ಜವಾಬ್ದಾರಿ ಇದೆ ಎಂದು ಭಾವಿಸಬೇಕು ಎಂದು ತಿಳಿಸಿದರು.

ದೇಶಕ್ಕೆ ಪ್ರತಿ ವರ್ಷ 5 ದಶಲಕ್ಷ ಟನ್ ಆಹಾರಧಾನ್ಯ ಉತ್ಪಾದನೆಯಾಗಬೇಕು. ಇಷ್ಟೊಂದು ಪ್ರಮಾಣದ ಆಹಾರ ಉತ್ಪಾದನೆ ಬೃಹತ್ ಸವಾಲಾಗಿದ್ದು, ದೇಶದ 120 ಕೋಟಿ ಜನಕ್ಕೆ ಪ್ರತಿ ನಿತ್ಯ ಮೂರು ಹೊತ್ತು ಊಟ ನೀಡಲು ಕೃಷಿಕರು ಮತ್ತು ಕೃಷಿ ತಂತ್ರಜ್ಞರ ಪ್ರಯತ್ನದಿಂದಲೇ ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಗಂಭೀರ ಸ್ವರೂಪದ ಸವಾಲುಗಳು ಎದುರಾದರೂ ಅವುಗಳನ್ನು ಎದುರಿಸಲು ದೂರದೃಷ್ಟಿ ಯೋಜನೆಗಳನ್ನು ರೂಪಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ನಿಖರ ಕೃಷಿ, ಹವಾಮಾನದ ಏರುಪೇರು ಗಮನಿಸಿ ಲಾಭದಾಯಕ ಬೆಳೆ ಬೆಳೆಯುವುದು, ಕೊಯ್ಲೋತ್ತರ ತಂತ್ರಜ್ಞಾನ, ಬೆಳೆಯ ಸಂರಕ್ಷಣೆ, ಸಂವರ್ಧನೆ, ಸಂಸ್ಕರಣೆಯಂಥ ವಿಚಾರಗಳನ್ನು ಕೃಷಿ ಸಮುದಾಯಕ್ಕೆ ಮನದಟ್ಟು ಮಾಡಿಕೊಡುವಂಥ ಕಾರ್ಯ ದೇಶದ ಎಲ್ಲ ಭಾಗದಲ್ಲೂ ನಡೆಯುತ್ತಿದೆ ಎಂದು ಹೇಳಿದರು. ಕೃಷಿ ಸಚಿವ ಹಾಗೂ ಸಹ ಕುಲಾಧಿಪತಿ ಉಮೇಶ ಕತ್ತಿ ಅವರು ಘಟಿಕೋತ್ಸವಕ್ಕೆ ಚಾಲನೆ ನೀಡಿ 93 ಸ್ನಾತಕ ಹಾಗೂ 35 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ವಿವಿ ಆಡಳಿತ ಮಂಡಳಿ ಸದಸ್ಯರು, ಕುಲಸಚಿವ ಡಾ.ಪಿ ಬಾಲಕೃಷ್ಣನ್, ವಿವಿಧ ವಿಭಾಗದ ಡೀನ್ ವೇದಿಕೆಯಲ್ಲಿದ್ದರು. ಕುಲಪತಿ ಡಾ.ಬಿ.ವಿ ಪಾಟೀಲ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT