ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಬ್ಯಾಂಕ್ ಸಿಇಓ ಅಮಾನತಿಗೆ ಆಗ್ರಹ

Last Updated 14 ಜೂನ್ 2011, 8:20 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಕರ್ತವ್ಯ ಲೋಪ ಎಸಗಿರುವ ಕಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಶರ್ಮ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು, ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ಕೃಷಿ ಪತ್ತಿನ ಬ್ಯಾಂಕ್‌ಗೆ ಬಂದ ರಸಗೊಬ್ಬರವನ್ನು  ಖಾಸಗಿ ಗೊಬ್ಬರದ ಅಂಗಡಿಯಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡಲು ಸಹಕರಿಸಿರುವುದು ಇಲಾಖಾಧಿಕಾರಿಗಳು ನಡೆಸಿದ ತನಿಖೆಯಲ್ಲಿ ದೃಢಪಟ್ಟಿದೆ. ಸ್ವತಃ ಶರ್ಮ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಅಪರಾಧಿ ಸ್ಥಾನದಲ್ಲಿರುವ ಮುಖ್ಯಕಾರ್ಯನಿರ್ವಹಣಾಧಿಕಾರಿ, ಕೆಲ ನಿರ್ದೇಶಕರ ಪ್ರತಿರೋಧದ ನಡುವೆಯೂ ಮತ್ತೆ ಕಾನೂನು ಬಾಹಿರವಾಗಿ ಶನಿವಾರ ಬ್ಯಾಂಕಿಗೆ ನೂತನ ಅಧ್ಯಕ್ಷರ ಆಯ್ಕೆ ಮಾಡಿದ್ದಾರೆ. ಇಷ್ಟೆಲ್ಲ ಅವಾಂತರ ಮಾಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಏನು ಕ್ರಮ ಕೈ ಗೊಂಡಿಲ್ಲ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ರಸಗೊಬ್ಬರ ಅಧಿಕ ಬೆಲೆಗೆ ಮಾರಾಟ ಮಾಡಲಾಗಿದೆ. ಹೆಚ್ಚಿನ ಹಣ ವಸೂಲಿ ಮಾಡಿರುವ 160 ರೂಪಾಯಿ ರೈತರಿಗೆ ವಾಪಸ್ ನೀಡಬೇಕು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡಿದರೆ ಸಾಕ್ಷ್ಯ ನಾಶ ಮಾಡುವ, ಹಣ ದುರುಪಯೋಗುವ ಸಾಧ್ಯತೆ ಹೆಚ್ಚು ಎಂದರು.

ಸಿಇಓ ತಪ್ಪಿತಸ್ಥ ಎಂದು 15 ದಿನಗಳ ಹಿಂದೆಯೇ ಗೊತ್ತಾಗಿದೆ. ಇದುವರೆಗೆ ಸಹಕಾರ ಇಲಾಖಾಧಿಕಾರಿಗಳು ಶಿಸ್ತು ಕ್ರಮ ಕೈಗೊಂಡಿಲ್ಲ. ಇದನ್ನು ಗಮನಿಸಿದರೆ ರಾಜಕೀಯದ ಕೈ ವಾಡ ಇದೆ ಎಂಬ ಶಂಕೆ ವ್ಯಕ್ತವಾಗುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.

ತಹಶೀಲ್ದಾರ್ ಬಿ.ಎನ್. ವರಪ್ರಸಾದರೆಡ್ಡಿ ಸ್ಥಳಕ್ಕೆ ಆಗಮಿಸಿ `ಸೋಮವಾರ ಸಹಕಾರ ಇಲಾಖೆ ಉಪನಿಬಂಧಕರು ಸಮಸ್ಯೆ ಇತ್ಯರ್ಥ ಪಡಿಸಬೇಕಿತ್ತು. ಆದರೆ ಕೆಲಸದ ನಿಮಿತ್ತ ಅವರು ಬೆಂಗಳೂರಿಗೆ ತೆರಳಿದ್ದಾರೆ ಎಂದರು.ಇದನ್ನು ಒಪ್ಪದ ಧರಣಿ ನಿರತರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡುವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಪಟ್ಟುಹಿಡಿದರು.

ತಹಶೀಲ್ದಾರ್ ಅವರು, ಜಿಲ್ಲಾಧಿಕಾರಿ ಜತೆ ಮೊಬೈಲ್ ಮೂಲಕ ಸಂಪರ್ಕಿಸಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಒಪ್ಪಿರುವುದಾಗಿ ತಿಳಿಸಿದಾಗ ಪ್ರತಿಭಟನೆ ವಾಪಸ್ ಪಡೆದರು.

ಕಾಂಗ್ರೆಸ್ ಮುಖಂಡರಾದ ಎಚ್.ಎಸ್. ವಿಜಯಕುಮಾರ್, ಎಂ.ಎ. ರಂಗಸ್ವಾಮಿ, ಎಂ. ಶಂಕರ್, ಅನೇಕ ನಿರ್ದೇಶಕರು, ಬಿಜೆಪಿಯ ವಿಶ್ವನಾಥ್, ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT