ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರನ್ನು ಕೈಬೀಸಿ ಕರೆಯುತ್ತಿರುವ ಹಾವೇರಿ

Last Updated 19 ಜನವರಿ 2012, 7:55 IST
ಅಕ್ಷರ ಗಾತ್ರ

ಹಾವೇರಿ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 32ನೇ ರಾಜ್ಯ ಮಟ್ಟದ ಕೃಷಿ ಮೇಳ ಜ.19 ರಿಂದ ಮೂರು ದಿನಗಳ ಕಾಲ ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಕೃಷಿ ಮೇಳದ ಹಿನ್ನೆಲೆಯಲ್ಲಿ ಸಂಪೂರ್ಣ ಸಜ್ಜುಗೊಂಡ ಹಾವೇರಿ ನಗರ ರಾಜ್ಯದ ಕೃಷಿಕರನ್ನು ಕೈಬೀಸಿ ಕರೆಯುತ್ತಿದೆ.

ಮೂರು ದಿನಗಳ ಕೃಷಿಮೇಳದಲ್ಲಿ ಕೃಷಿಗೆ ಹಾಗೂ ರೈತರಿಗೆ ಉಪಯುಕ್ತವಾದ 12 ಗೋಷ್ಠಿಗಳು, ಜಾನುವಾರು ಪ್ರದರ್ಶನ, ಕೃಷಿ ಯಂತ್ರೋಪಕರಣ ಪ್ರದರ್ಶನ, ಮಾರಾಟ ಹಾಗೂ ಪ್ರಾತಿಕ್ಷಿಕೆ ಹಾಗೂ ಮಾರಾಟ, ವಸ್ತು ಪ್ರದರ್ಶನ, ಜಾನಪದ ಕಲಾ ಪ್ರದರ್ಶನ ನಡೆಯಲಿವೆ.

ಗೋಷ್ಠಿಗಳಲ್ಲಿ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಡಾ.ಹರೀಶ ಹಂದೆ, ಧರ್ಮಸ್ಥಳದ ಹೇಮಾವತಿ ವಿ.ಹೆಗ್ಗಡೆ, ಕೃಷಿ ವಿದ್ಯಾಲಯದ ಡಾ.ಎಲ್.ಕೃಷ್ಣಾ ನಾಯಕ, ಕೃಷಿ ಬರಹಗಾರ ಶಿವಾನಂದ ಕಳವೆ ಸೇರಿದಂತೆ ಅನೇಕ ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು ಗೋಷ್ಠಿಗಳ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ಇದರ ಜೊತೆಗೆ ರಾಜ್ಯದ ಮೂಲೆ ಮೂಲೆಗಳಿಂದ ರೈತಾಪಿ ವರ್ಗ ಭಾಗವಹಿಸುತ್ತಿದೆ.
 
ಕೃಷಿ ಮೇಳ ನಡೆಯುವ ಜಿ.ಎಚ್.ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಿದ್ದು, ಸಂಪೂರ್ಣ ಬಿದಿರಿನಿಂದ ತಯಾರಿಸಿದ ದ್ವಾರಗಳು, ಗುಡಿಸಲುಗಳು ಧಾನ್ಯಗಳ ಮಂಟಪ, ನವಧಾನ್ಯಗಳ ನಂದಿ, ಬಳ್ಳೊಳ್ಳಿ-ಈರುಳ್ಳಿಯ ಈಶ್ವರ ಲಿಂಗ, ಮೆಣಸಿನಕಾಯಿ ಶಿವನ ಮೂರ್ತಿ ಮೇಳಕ್ಕೆ ಬರುವ ಜನರನ್ನು ಆಕರ್ಷಿಸುತ್ತಿವೆ.

ಮೂರು ದಿನಗಳ ಕೃಷಿ ಮೇಳದಲ್ಲಿ ಐದನೂರು ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಕನಿಷ್ಠ ಮೂರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಕೃಷಿ ಮೇಳದಲ್ಲಿ ಭಾಗವಹಿಸುವ ಎಲ್ಲಾ ರೈತರಿಗೆ , ಕೃಷಿ ಅಧಿಕಾರಿಗಳಿಗೆ, ಸಂಪನ್ಮೂಲ ವ್ಯಕ್ತಿಗಳಿಗೆ, ವಿವಿಧ ಯಂತ್ರೋಪಕರಣ ಕಂಪೆನಿಗಳ ಸಿಬ್ಬಂದಿಗಳಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮೇಳದಲ್ಲಿ ಮಾಡಲಾಗಿದೆ.
 
ಮೇಳದಲ್ಲಿ ಭಾಗವಹಿಸುವ ಎಲ್ಲ ಜನರಿಗೆ ಭೋಜನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕೃಷಿ ಮೇಳದಲ್ಲಿ ಭಾಗವಹಿಸುವ ಎಲ್ಲರಿಗೂಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಸವಿತಾ ಡಿಸೋಜಾ ತಿಳಿಸುತ್ತಾರೆ.

ಜ.19 ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.
 
ಗದುಗಿನ ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಜ. 21 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ,ಕೃಷಿ ಸಚಿವ ಉಮೇಶ ಕತ್ತಿ ಮತ್ತಿತರರು ಭಾಗವಹಿಸಲಿದ್ದಾರೆ.
 
ಮೂರು ದಿನಗಳ ಕೃಷಿ ಮೇಳ ಉತ್ತರ ಕರ್ನಾಟಕದ ರೈತರ ಜೀವನಕ್ಕೆ ದಿಕ್ಸೂಚಿಯಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿ ಕೃಷಿ ಮೇಳದ ಪ್ರಯೋಜನ ಪಡೆಯಬೇಕೆಂದು ಎಂದು ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ತಿಳಿಸುತ್ತಾರೆ.

ಬಿಗಿ ಭದ್ರತೆ, ಮಾರ್ಗ ಬದಲಾವಣೆ
ಹಾವೇರಿ: ನಗರದಲ್ಲಿ ಜ. 19 ರಂದು ಆರಂಭವಾಗಲಿರುವ ಮೂರು ದಿನಗಳ ರಾಜ್ಯ ಮಟ್ಟದ ಕೃಷಿ ಮೇಳದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ಹಾಗೂ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ.

ನಗರದಾದ್ಯಂತ 50ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು, ಜಿಲ್ಲೆಯ 400 ಜನ ಪೊಲೀಸರು,ಹೊರ ಜಿಲ್ಲೆಗಳ 200 ಪೊಲೀಸರು, 300 ಜನ ಗೃಹರಕ್ಷಕ ದಳದ ಸಿಬ್ಬಂದಿ ಸೇರಿದಂತೆ 900ಕ್ಕೂ ಹೆಚ್ಚು ಸಿಬ್ಬಂದಿ ಭದ್ರತಾ ವ್ಯವಸ್ಥೆ ಯನ್ನು ನೋಡಿಕೊಳ್ಳಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಠೋಡ ತಿಳಿಸಿದ್ದಾರೆ.

ಮಾರ್ಗ ಬದಲಾವಣೆ: ಮೇಳ ನಡೆಯಲಿರುವ ಜಿ.ಎಚ್.ಕಾಲೇಜ್ ಎದುರಿಗೆ ವಾಹನ ಸಂಚಾರವನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸಲಾಗಿದ್ದು, ಬೈಪಾಸ್ ಮೂಲಕ ತೋಟದಯಲ್ಲಾಪುರ ಬಳಿ ತೆರಳಿ ಅಲ್ಲಿಂದ ಬಸ್ ನಿಲ್ದಾಣಕ್ಕೆ ಬರಬೇಕು ಮತ್ತು ಹೋಗುವಂತಹ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ್ ತಿಳಿಸಿದ್ದಾರೆ.

ಕೃಷಿ ಮೇಳದ ಸಿದ್ಧತೆ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಸಂಚಾರಿ ನಿಯಮ ಪಾಲನೆ ಮಾಡದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕಿ ಸವಿತಾ ಡಿಸೋಜಾ ಮಾತನಾಡಿ, ಮೇಳದಲ್ಲಿ ಬಹುತೇಕ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಪ್ರತಿ ದಿನ ಸುಮಾರು 75 ಸಾವಿರದಿಂದ ಒಂದು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಮೇಳಕ್ಕೆ ಬರುವ ಎಲ್ಲ ಜನರಿಗೆ ಭೋಜನಲ್ಲಿ ಧರ್ಮಸ್ಥಳದ ಪ್ರಸಾದದ ಜೊತೆಗೆ ಉತ್ತರ ಕರ್ನಾಟಕದ ಗೋದಿ ಹುಗ್ಗಿ, ವಿವಿಧ ತರಹದ ಚಟ್ನಿ ಹಾಗೂ ಅನ್ನ, ಸಾರು ಸವಿಯಬಹುದಾಗಿದೆ. ಭೋಜನ ತಯಾರಿಸಲು ಧರ್ಮಸ್ಥಳದಿಂದ 50ಕ್ಕೂ ಹೆಚ್ಚು ಬಾಣಸಿಗರು ಬಂದಿದ್ದಾರೆ.

ಅಡುಗೆ ತಯಾರಿಗಾಗಿಯೇ 23 ಕಟ್ಟಿಗೆ ಒಲೆಗಳನ್ನು, 20 ಸ್ಟೀಮ್ ಒಲೆಗಳನ್ನು ಹಾಗೂ 18 ಗ್ಯಾಸ್ ಒಲೆಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT