ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣನ ಕೋಪ

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಅಮ್ಮನು ಬೈದಳು ಎನ್ನುತ ಕೋಪಿಸಿ
ತಿಂಡಿಯ ತಿನ್ನದೆ ಮುಖವನು ಊದಿಸಿ
ಮಾವಿನ ಮರವನು ಏರಿದ ಕೃಷ್ಣ
ರೆಂಬೆಗೆ ಕಾಲೂರಿ

ಕೃಷ್ಣಾ, ಕೃಷ್ಣಾ... ಕರೆಯುತಲಿದ್ದಳು
ಅತ್ತಿಂದಿತ್ತ ಹುಡುಕುತಲಿದ್ದಳು
ಅಮ್ಮನಿಗುತ್ತರ ಕೊಡದೆ ಸುಮ್ಮನೆ
ಕುಳಿತಿದ್ದನು ಕೃಷ್ಣ

ಕಾಲಿಗೆ ಕಚ್ಚಿತು ಕೆಂಪನೆ ಇರುವೆ
`ಉರಿ! ಉರಿ!'- ಕಾಲನು ಉಜ್ಜಿದ ತುಸುವೇ
ಕುತ್ತಿಗೆ ಕಚ್ಚಿದೆ ಇನ್ನೊಂದಿರುವೆ
ಕೃಷ್ಣನ ಪಾಡೇನು?!

ಬೆನ್ನಿಗೆ, ಹೊಟ್ಟೆಗೆ, ಕಾಲಿಗೆ, ಕೈಗೆ
ಇರುವೆಗಳದ್ದು ಸಮೂಹ ಲಗ್ಗೆ
ಎರಡೇ ಕೈಗಳು ತಾನೇ ಕೃಷ್ಣಗೆ
ಸಾಧ್ಯವೆ ಹೋರಾಟ?

ಮರದಲಿ ತುಂಬಾ ಗೂಡಿನ ರಾಶಿ
ಸರಭರ ಇಳಿಯುತಲಿರುವವು ಮೂಸಿ,
ತಮ್ಮೀ ರಾಜ್ಯಕ್ಕೆ ಬಂದವ ಶತ್ರು
ಯಾರಿವ ಎನುವಂತೆ!

ಮೈಯಿಡಿ ಉರಿಉರಿ ಇರುವೆ ಪ್ರತಾಪ
ಮರೆತನು ಅಮ್ಮನ ಮೇಲಿನ ಕೋಪ
ಅಂಗಿಯ ಒಳಗೂ ನುಗ್ಗಿವೆ ಪಾಪ!
ಕೃಷ್ಣನು `ಮಾ' ಎಂದ!

ಕೃಷ್ಣನಿಗಾಯಿತು ತಣ್ಣಗೆ ಸ್ನಾನ
ಸಿಟ್ಟಿನ ಪುಟ್ಟಗೆ ಅದು ಬಹುಮಾನ?
ಸುಮ್ಮನೆ ಉಂಡನು ತಿನಿಸಿದ ಅನ್ನ
ಅಮ್ಮನ ಶ್ರೀಕೃಷ್ಣ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT