ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಯ್ಯಗೆ ಇಂದು ಆರೋಗ್ಯ ತಪಾಸಣೆ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಧುಮೇಹ ಹಾಗೂ ಕಣ್ಣಿನ ತೊಂದರೆ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ನಗರದ ರಾಜ್ಯ ಮಧುಮೇಹ ವಿಜ್ಞಾನ ಸಂಸ್ಥೆಯಲ್ಲಿ ಗುರುವಾರ ಆರೋಗ್ಯ ತಪಾಸಣೆಗೆ ಒಳಗಾಗಲಿದ್ದಾರೆ. 

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬುಧವಾರ ಸಂಸ್ಥೆಗೆ ಅವರನ್ನು ಕರೆತರಲಾಗಿತ್ತು. ಆದರೆ ಅವರು ಆಹಾರ ಸೇವಿಸಿ ಬಂದದ್ದರಿಂದ ಚಿಕಿತ್ಸೆಗೆ ಒಳಪಡಿಸಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಖಾಲಿ ಹೊಟ್ಟೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಲು ವೈದ್ಯರು ಸೂಚಿಸಿದ್ದಾರೆ.

`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಸಂಸ್ಥೆಯ ನಿರ್ದೇಶಕ ಡಾ. ನರಸಿಂಹಯ್ಯ ಶೆಟ್ಟಿ, `ಕಣ್ಣಿಗೆ ಸಂಬಂಧಿಸಿದ ತೊಂದರೆಯಿಂದ ಬುಧವಾರ ಶೆಟ್ಟಿ ಅವರನ್ನು ಸಂಸ್ಥೆಗೆ ಕರೆತರಲಾಗಿತ್ತು. ಅವರಿಗೆ ಮಧುಮೇಹ ಇರುವುದರಿಂದ ವಿವಿಧ ಬಗೆಯ ತಪಾಸಣೆ ಅವಶ್ಯಕತೆ ಇದೆ. ಆಹಾರ ಸೇವಿಸಿ ಬಂದದ್ದರಿಂದ ಪರೀಕ್ಷಿಸಲು ಸಾಧ್ಯವಾಗಲಿಲ್ಲ~ ಎಂದರು. 

ಜಯದೇವ ಆಸ್ಪತ್ರೆಗೆ ಭೇಟಿ: ನಂತರ ಹೃದಯ ಸಂಬಂಧಿ ತಪಾಸಣೆಗಾಗಿ ಜಯದೇವ ಆಸ್ಪತ್ರೆಗೆ ಕಾರಾಗೃಹ ಅಧಿಕಾರಿಗಳು ಶೆಟ್ಟಿ ಅವರನ್ನು ಕರೆದೊಯ್ದರು.`ಮಧುಮೇಹ ತಪಾಸಣೆಗೆ ಒಳಗಾಗುವ ರೋಗಿ ಕನಿಷ್ಠ 8ರಿಂದ 10 ಗಂಟೆ ಉಪವಾಸ ಇರಬೇಕು.

ಆದರೆ ಕೃಷ್ಣಯ್ಯ ಊಟ ಸೇವಿಸಿ ಬಂದಿದ್ದರು. ಗುರುವಾರ ಅವರಿಗೆ ರಕ್ತಪರೀಕ್ಷೆ, ಕಾಲು ಹಾಗೂ ಕಣ್ಣಿನ ಪರೀಕ್ಷೆ ಸೇರಿದಂತೆ 16 ಬಗೆಯ ತಪಾಸಣೆ ನಡೆಸಲಾಗುವುದು. ಆ ಬಳಿಕವಷ್ಟೇ ಅವರಿಗೆ ಚಿಕಿತ್ಸೆ ನೀಡುವ ಸಂಬಂಧ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ. ಬೆಳಿಗ್ಗೆ 9 ಗಂಟೆ ವೇಳೆಗೆ ವೈದ್ಯರನ್ನು ಕಾಣಲು ಸೂಚಿಸಲಾಗಿದೆ~ ಎಂದು ಅವರು ಹೇಳಿದರು.

`ಸಂಸ್ಥೆಯ ಹೊರ ರೋಗಿಗಳ ವಿಭಾಗದಲ್ಲಿ ಶೆಟ್ಟಿ ಅವರನ್ನು ಪರೀಕ್ಷಿಸಲಾಗಿದೆ. ಫಲಿತಾಂಶ  ಲಭ್ಯವಾಗಿಲ್ಲ~ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ತಿಳಿಸಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT