ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಐತೀರ್ಪು ಅಧಿಸೂಚನೆ ಬೇಡ

ಆಂಧ್ರದ ಸರ್ವಪಕ್ಷ ನಿಯೋಗ ಕೇಂದ್ರಕ್ಕೆ ಆಗ್ರಹ
Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ: ಕೃಷ್ಣಾ ನ್ಯಾಯಮಂಡಳಿ– 2ರ ಐತೀರ್ಪು ಅಧಿಸೂಚನೆ ಹೊರಡಿಸಬಾರದು ಎಂದು ಆಂಧ್ರ ಮುಖ್ಯಮಂತ್ರಿ ಎನ್‌. ಕಿರಣ್‌ ಕುಮಾರ್‌ ರೆಡ್ಡಿ ನೇತೃತ್ವದ ಸರ್ವಪಕ್ಷ ನಿಯೋಗ ಶುಕ್ರವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಪ್ರಧಾನಿ ಮನಮೋಹನ್‌ಸಿಂಗ್‌ ಅವರನ್ನು ಭೇಟಿ ಮಾಡಿದ್ದ ಆಂಧ್ರ ಸರ್ವಪಕ್ಷ ನಿಯೋಗ,  ಕೃಷ್ಣಾ ನ್ಯಾಯಮಂಡಳಿ ಐತೀರ್ಪು ಅಧಿಸೂಚನೆ ಹೊರಡಿಸಬಾರದು ಎಂದು ಒತ್ತಾಯಿಸಿತು.

ನ್ಯಾಯಮಂಡಳಿ ಐತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ವಿಶೇಷ ಮೇಲ್ಮನವಿಗೆ ಮಧ್ಯಂತರ ಅರ್ಜಿ ಸಲ್ಲಿಸಿ ಕೇಂದ್ರವೂ ವಿವಾದದಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡಲಾಗಿದೆ ಎಂದು ನಿಯೋಗದಲ್ಲಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ. ಜನಾರೆಡ್ಡಿ ತಿಳಿಸಿದರು.

ಆಂಧ್ರದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿ, ಆಗಿರುವ ಅನ್ಯಾಯವನ್ನು ಸರಿಪಡಿಸಲು ಮನವಿ ಮಾಡಲಾಗಿದೆ. ನ್ಯಾಯಮಂಡಳಿ ಐತೀರ್ಪನ್ನು ಸಮಗ್ರವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳುವುದಾಗಿ ಮನಮೋಹನ್‌ಸಿಂಗ್‌ ಭರವಸೆ ನೀಡಿದ್ದಾರೆಂದು ಅವರು ಸ್ಪಷ್ಟಪಡಿಸಿದರು.

ಆದರೆ, ಈ ಸಂದರ್ಭದಲ್ಲಿ ಹಾಜರಿದ್ದ ನೀರಾವರಿ ಸಚಿವ ಹರೀಶ್‌ ರಾವತ್‌ ನ್ಯಾಯಮಂಡಳಿ ತೀರ್ಪಿನಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ, ಸಂಬಂಧಪಟ್ಟ ರಾಜ್ಯಗಳೇ ನ್ಯಾಯಮಂಡಳಿ ಮುಂದೆ ಅಥವಾ ಸುಪ್ರೀಂ ಕೋರ್ಟ್‌ ಮುಂದೆ ಅರ್ಜಿ ಸಲ್ಲಿಸಬಹುದೆಂದು ಸರ್ವಪಕ್ಷ ನಿಯೋಗಕ್ಕೆ ಹೇಳಿದರೆಂದು ಉನ್ನತ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌, ಟಿಡಿಪಿ, ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಪ್ರತಿನಿಧಿಗಳು ಸರ್ವಪಕ್ಷ ನಿಯೋಗದಲ್ಲಿದ್ದರು. ನ್ಯಾಯಮಂಡಳಿ ಐತೀರ್ಪಿನಿಂದ ಆಗಿರುವ ಅನ್ಯಾಯವನ್ನು ಸರ್ವಪಕ್ಷ ನಿಯೋಗ ಮನವರಿಕೆ ಮಾಡಿಕೊಟ್ಟಿತು. ಕೇಂದ್ರ ಸರ್ಕಾರ ಈ ಹಂತದಲ್ಲಿ ಮಧ್ಯಪ್ರವೇಶಿಸಿ ಇಡೀ ವಿವಾದವನ್ನು ಸಮಗ್ರವಾಗಿ ಅಧ್ಯಯನ ನಡೆಸಬೇಕೆಂದು ಟಿಡಿಪಿ ಶಾಸಕ ಚಂದ್ರಶೇಖರ ರೆಡ್ಡಿ ಆಗ್ರಹಿಸಿದರು.

ನ್ಯಾ. ಬ್ರಿಜೇಶ್‌ ಕುಮಾರ್‌ ನೇತೃತ್ವದ ನ್ಯಾಯಮಂಡಳಿ ನವೆಂಬರ್‌ 29 ರಂದು ಅಂತಿಮ ತೀರ್ಪು ನೀಡಿದ್ದು, ಆಂಧ್ರಕ್ಕೆ 1005 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519.6 ಮೀಟರ್‌ನಿಂದ 524.25 ಮೀಟರ್‌ಗೆ ಎತ್ತರಿಸಲು ಕರ್ನಾಟಕಕ್ಕೆ ಅನುಮತಿ ನೀಡಿದೆ.

ಕೃಷ್ಣಾ ನ್ಯಾಯಮಂಡಳಿ 2010ರ ಡಿಸೆಂಬರ್‌ 30ರಂದು ನೀಡಿರುವ ತೀರ್ಪಿಗೆ 14 ತಿದ್ದುಪಡಿ ಸೂಚಿಸಬೇಕೆಂದು ಮನವಿ ಮಾಡಿ ಆಂಧ್ರ ಅರ್ಜಿ ಸಲ್ಲಿಸಿತ್ತು. ಆದರೆ, ಶೇ. 65ರಷ್ಟು ಮಳೆ ಅವಲಂಬನೆ ಆಧಾರದಲ್ಲಿ 4ಟಿಎಂಸಿ ಅಡಿ ನೀರನ್ನು ಮಾತ್ರ ಆಂಧ್ರಕ್ಕೆ ಹೆಚ್ಚು ಹಂಚಿಕೆ ಮಾಡಿ ಕೈತೊಳೆದುಕೊಂಡಿದೆ. ಹಿಂದಿನ ನ್ಯಾಯಮಂಡಳಿ ಶೇ. 75ರ ಅವಲಂಬನೆ ಆಧಾರದಲ್ಲಿ ನೀರು ಹಂಚಿತ್ತು ಎಂದು ಆಂಧ್ರ ತಿಳಿಸಿದೆ.

ದೆಹಲಿಗೆ ಈಚೆಗೆ ಭೇಟಿ ನೀಡಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷ್ಣಾ ನ್ಯಾಯಮಂಡಳಿ ತೀರ್ಪನ್ನು ಕಾನೂನು ತಜ್ಞರು ಪರಿಶೀಲಿಸುತ್ತಿದ್ದು, ಮುಂದೇನು ಮಾಡಬೇಕೆಂದು ಶೀಘ್ರ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT