ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ನದಿಯಲ್ಲಿ ಮೈನವಿರೇಳಿಸುವ ಜಲಕ್ರೀಡೆ

Last Updated 8 ಅಕ್ಟೋಬರ್ 2011, 4:30 IST
ಅಕ್ಷರ ಗಾತ್ರ

ಕೊಲ್ಹಾರ: ಕ್ರಿಕೆಟ್, ಫುಟ್‌ಬಾಲ್ ಮುಂತಾದ ವಿದೇಶಿ ಆಟಗಳ ಭರಾಟೆಯಲ್ಲಿ ದೇಸಿ ಕ್ರೀಡೆಗಳು ನಶಿಸುತ್ತಿರುವ ಈ ಸಂದರ್ಭದಲ್ಲಿ  ಶಾಸಕ ಎಸ್. ಕೆ. ಬೆಳ್ಳುಬ್ಬಿಯವರ ಒತ್ತಾಸೆಯಂತೆ ಮಹಾನವಮಿ ಹಬ್ಬದ ನಿಮಿತ್ತ ಕೊಲ್ಹಾರದಲ್ಲಿ ಸಾಹಸಿ ಯುವಕರಿಗಾಗಿ ಅಪ್ಪಟ ಗ್ರಾಮೀಣ ಭಾಗದ ಕ್ರೀಡೆಯಾದ ದೋಣಿ ನಡೆಸುವ ಸ್ಪರ್ಧೆಯನ್ನು ಶುಕ್ರವಾರ ಏರ್ಪಡಿಸಲಾಗಿತ್ತು.

ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಮುನ್ನ ಕೊಲ್ಹಾರ ದೊಡ್ಡ ಸೇತುವೆಯ ಆಚೆ ಬದಿಯಲ್ಲಿ ದೋಣಿ ಸ್ಪರ್ಧೆಗೆ ಶಾಸಕ ಎಸ್.ಕೆ.ಬೆಳ್ಳುಬ್ಬಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಸುಮಾರು 32 ದೋಣಿಗಳಲ್ಲಿ ಸಜ್ಜಾಗಿ ನಿಂತಿದ್ದ ಸಾಹಸಿ ಯುವಕರು ನಾ ಮುಂದೆ....ತಾ ಮುಂದೆ ಎಂದು ಜಯಘೋಷಗಳನ್ನು ಕೂಗುತ್ತಾ ದೋಣಿಗಳನ್ನು ಮುನ್ನಡೆಸಿದರು. ಇತ್ತ ದೊಡ್ಡ ಸೇತುವೆಯ ಮೇಲೆ ನಿಂತ ಸಾವಿರಾರು ರೈತರು, ಯುವಕರು, ಮಹಿಳೆಯರು ಸಾಹಸಿ ಹುಡುಗರನ್ನು ಚಪ್ಪಾಳೆ ತಟ್ಟುತ್ತಾ, ಶಿಳ್ಳೆ ಹೊಡೆಯುತ್ತಾ ಹುರುಪು ತುಂಬುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.

ಸುಮಾರು 3 ಕಿ.ಮೀ.ಅಗಲವಿರುವ ಕೃಷ್ಣಾ ನದಿ ತುಂಬಿ ಭೋರ್ಗರೆಯುತ್ತಿದೆ. ನೋಡಿದರೆ ಸಾಗರವನ್ನೇ ನೆನಪಿಗೆ ತರುವ ಮಹಾನದಿ ಕೃಷ್ಣೆಯ ಅಲೆಗಳು ಜೋರಾದ ಗಾಳಿಗೆ ಮೇಲೇರಿ ಬಂದರೂ ಯುವಕರು ಅದಾವುದನ್ನು ಲೆಕ್ಕಿಸದೇ, ದೋಣಿಯ ಎರಡು ಬದಿಯಲ್ಲಿ ಕುಳಿತು ಒಂದೇ ಸಮನೆ ಹುಟ್ಟು ಹಾಕುತ್ತಿದ್ದರು. ಒಮ್ಮೆ ಗಣಿ ಗ್ರಾಮದ ಯುವಕರು ಮುಂದೆ ಬಂದರೆ, ಮರು ಕ್ಷಣದಲ್ಲಿಯೇ ಅವರನ್ನು ಹಿಂದೆ ಹಾಕಿ ಕೊಲ್ಹಾರ ಯುವಕರು ಮುಂದೆ ಬರುತ್ತಿದ್ದರು. ಹೀಗೆ ಅರ್ಧ ಗಂಟೆಯ ಕಾಲ ನಡೆದ ಈ ದೋಣಿ ಸ್ಪರ್ಧೆಯು ಸೇರಿದ ಹತ್ತಾರು ಗ್ರಾಮಗಳ ನೋಡುಗರಲ್ಲಿ ರೋಮಾಂಚನವನ್ನುಂಟು ಮಾಡಿತು.

ಕೃಷ್ಣಾ ನದಿಯಲ್ಲಿ ದೋಣಿ ನಡೆಸುವುದು ಅಂದುಕೊಂಡಷ್ಟು ಸುಲಭವಲ್ಲ. ಆದರೆ ಗ್ರಾಮೀಣ ಭಾಗದ ಈ ಸಾಹಸಿ ಹುಡುಗರಿಗೆ ಈ ಜಲಯಾನ ತಮ್ಮ ಎಂಟೆದೆ ಧೈರ್ಯವನ್ನು ಪ್ರದರ್ಶಿಸಲು ಒದಗಿಸಿದ ಉತ್ತಮ ಅವಕಾಶವಾಗಿತ್ತು. ಕೊನೆಯಲ್ಲಿ ಗಣಿ ಗ್ರಾಮದ ಯುವಕರಾದ ಚಂದ್ರಶೇಖರ ಮಾದರ, ಶಿವಪುತ್ರರು ಮೊದಲಿಗರಾಗಿ, ಬೀರಕಬ್ಬಿ ಗ್ರಾಮದ ದುರಗಪ್ಪ ಕಟಬರ, ಚಂದಪ್ಪ ದ್ವಿತೀಯರಾಗಿ, ಕೊಲ್ಹಾರದ ದಾವುಲ ಜಾಲಗಾರ, ತೃತೀಯರಾಗಿ ದಡ ಸೇರಿದರು. ನೋಡುಗರ ಮೆಚ್ಚುಗೆ, ಪ್ರಶಂಸೆಗೆ ಪಾತ್ರರಾದರು.

ನಂತರ ನಡೆದ ಸಮಾರಂಭದಲ್ಲಿ ಶಾಸಕರು ವಿಜೇತರಿಗೆ 5001, 4001, 3001ರೂಪಾಯಿಗಳ ನಗದು ಬಹುಮಾನವನ್ನು ನೀಡಿ ಸನ್ಮಾನಿಸಿದರು. ಎಲ್ಲರಲ್ಲಿ ಪ್ರೇಮ, ಬಾಂಧವ್ಯ ಬೆಸೆಯುವ ದಸರಾ ಹಬ್ಬದಲ್ಲಿ ಶಾಸಕ ಎಸ್. ಕೆ. ಬೆಳ್ಳುಬ್ಬಿಯವರು ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸುವ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದು ಶ್ಲಾಘನೀಯ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT