ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾನದಿ ಪ್ರವಾಹ: ಆತಂಕದಲ್ಲಿ ಗ್ರಾಮಸ್ಥರು

Last Updated 27 ಜುಲೈ 2013, 6:55 IST
ಅಕ್ಷರ ಗಾತ್ರ

ಜಮಖಂಡಿ: ಕೃಷ್ಣಾನದಿ ಉಕ್ಕಿ ಹರಿಯುತ್ತಿರುವ ಪರಿಣಾಮವಾಗಿ ತಾಲ್ಲೂಕಿನ ಕೃಷ್ಣಾನದಿ ತೀರದ ಗ್ರಾಮಗಳ ನದಿ ಒಡಲಿಗೆ ಸಮೀಪದಲ್ಲಿರುವ ಬೆಳೆಗಳು ಒಂದೊಂದಾಗಿ ನೀರಿನಲ್ಲಿ ಮುಳುಗುತ್ತಿವೆ. ಗ್ರಾಮಗಳಲ್ಲಿ ಹುಳು ಹುಪ್ಪಡಿಗಳ ಉಪಟಳ ವಿಪರೀತವಾಗಿದೆ. ನದಿ ನೀರಿನ ಮಟ್ಟ ಇನ್ನೂ ಹೆಚ್ಚಳವಾಗುವ ಆತಂಕ ಗ್ರಾಮಸ್ಥರಲ್ಲಿ ಮಡುಗಟ್ಟಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಕೃಷ್ಣಾನದಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾನದಿಗೆ ಬಂದಿರುವ ನೆರೆ ಪ್ರವಾಹದಿಂದಾಗಿ ಬೆಳೆಗಳು,  ಮೇವು ಬೆಳೆದ ಜಮೀನುಗಳು ನದಿ ನೀರಿನಲ್ಲಿ ಮುಳುಗುತ್ತಿವೆ. ಗಡ್ಡೆಗಳ ಗುಡಿಸಲುಗಳಿಗೆ ನೀರು ನುಗ್ಗುತ್ತಿದೆ. ಅದರಿಂದ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಕೃಷ್ಣಾನದಿ ಒತ್ತುಗಳಲ್ಲಿ ಪ್ರವಾಹದ ನೀರು ನುಗ್ಗಿದ್ದರಿಂದ ಅಲ್ಲಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಜಲಾವೃತವಾಗಿವೆ. ಕೆಲವೆಡೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಲಾಗಿದೆ. ಇನ್ನೂ ಕೆಲವೆಡೆ ವಿದ್ಯುತ್ ಪೂರೈಕೆ ಮುಂದುವರಿದಿದೆ. ಹಾಗಾಗಿ ಗ್ರಾಮಸ್ಥರಲ್ಲಿ ಅಪಾಯದ ಭಯ ಮೂಡಿದೆ.

ಗಡ್ಡೆಗಳಲ್ಲಿನ ಒಳರಸ್ತೆಗಳು ಹಾಗೂ ಜಮೀನುಗಳಲ್ಲಿನ ಕೂಡು ರಸ್ತೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ಜನ ಮತ್ತು ಜಾನುವಾರುಗಳ ಓಡಾಟಕ್ಕೆ ತುಂಬಾ ತೊಂದರೆ ಆಗುತ್ತಿದೆ. ರಾತ್ರಿ ಆಗುತ್ತಿದ್ದಂತೆ ಒಂದು ರೀತಿಯ ಭಯದ ವಾತಾವರಣ ನಿರ್ಮಾಣ ಆಗುತ್ತಿದೆ.

ನದಿ ತೀರದ ಕೆಲವು ಗ್ರಾಮಗಳಲ್ಲಿ ಒಂದೆರಡು ತಿಂಗಳ ಹಿಂದೆ ನಾಟಿ ಮಾಡಿದ ಕಬ್ಬುಬೆಳೆ ಹಾಗೂ ಗೋವಿನ ಜೋಳ ಬೆಳೆಗಳು ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿವೆ. ಅದರಿಂದಾಗಿ ಆ ಬೆಳೆಗಳು ಸಂಪೂರ್ಣ ನಾಶವಾಗಿ ಹೋಗುವ ಆತಂಕವನ್ನು ಕುಂಬಾರಹಳ್ಳ ಗ್ರಾಮದ ಧರೆಪ್ಪ ಮರನೂರ, ಬಸಪ್ಪ ಮರನೂರ ವ್ಯಕ್ತಪಡಿಸಿದ್ದಾರೆ.

ಹಾಲು ಉತ್ಪಾದನೆಗೆ ಹೆಸರುವಾಸಿಯಾದ ತಾಲ್ಲೂಕಿನ ಸನಾಳ ಗ್ರಾಮದಲ್ಲಿ ಜಾನುವಾರುಗಳಿಗಾಗಿ ಬೆಳೆದ ಮೇವು ಸಂಪೂರ್ಣ ಪ್ರವಾಹದ ನೀರಿನಲ್ಲಿ ಮುಳುಗಿ ಹೋಗಿದೆ. ಅದರಿಂದ ಮೇವಿನ ಕೊರತೆ ಉಂಟಾಗಿ ಹೈನುಗಾರಿಕೆ ಮೇಲೆ ದುಷ್ಪರಿಣಾಮ ಬೀರುವ ಭಯ ಗ್ರಾಮದ ಮಲ್ಲಪ್ಪ ಪಾಟೀಲ ಹಾಗೂ ಲಾಲಸಾಬ್ ನದಾಫ ಅವರನ್ನು ಕಾಡುತ್ತಿದೆ.

ಸುಮಾರು 5-6 ವರ್ಷಗಳ ಹಿಂದೆ ಬಂದಿದ್ದ ಪ್ರವಾಹದಿಂದ ಅನುಭವಿಸಿದ್ದ ಅಪಾರ ಪ್ರಮಾಣದ ಹಾನಿಯ ಹಿನ್ನೆಲೆಯಲ್ಲಿ ನದಿ ದಡದ ಜಮೀನಿನಲ್ಲಿ ಕಬ್ಬುಬೆಳೆ ಬೆಳೆಯುವುದನ್ನು ರೈತರು ನಿಲ್ಲಿಸಿದ್ದಾರೆ. ಹೋದ ವರ್ಷ ನದಿಗೆ ಪ್ರವಾಹವೇ ಬಂದಿರಲಿಲ್ಲ. ಹಾಗಾಗಿ ರೈತರು ನದಿ ದಡದ ಜಮೀನಿನಲ್ಲಿ ಈ ವರ್ಷ ಮೇವು ಬೆಳೆದಿದ್ದಾರೆ. ಆದರೆ ಈ ವರ್ಷ ಮೇವು ಕೂಡ ನೀರಿನಲ್ಲಿ ಮುಳುಗಡೆ ಆಗಿದೆ ಎಂದು ಎಂ.ಡಿ. ನ್ಯಾಮಗೌಡ ತಮ್ಮ ಹತಾಶೆ ವ್ಯಕ್ತಪಡಿಸುತ್ತಾರೆ.

ತಾಲ್ಲೂಕಿನ ಮುತ್ತೂರ ಗ್ರಾಮದ ಸಮಾರು 105 ಎಕರೆ ಪ್ರದೇಶದ ನಡುಗಡ್ಡೆಯಲ್ಲಿ ಅಂದಾಜು 50 ಕುಟುಂಬಗಳು ವಾಸಿಸುತ್ತಿವೆ. ಅವುಗಳ ಪೈಕಿ 10 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ತಾಲ್ಲೂಕಿನ ತುಬಚಿ ಗ್ರಾಮದ ಮೂರು ಕುಟುಂಬಗಳನ್ನು ಗುರುವಾರವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಮುತ್ತೂರ ಗ್ರಾಮದ ನದಿ ದಡದ ವಿದ್ಯುತ್ ಪಂಪ್‌ಸೆಟ್‌ಗಳನ್ನು ಗ್ರಾಮಸ್ಥರು ಗಿಡಗಳ ಟೊಂಗೆಗಳಿಗೆ ಕಟ್ಟಿ ಪ್ರವಾಹದ ನೀರಿನಲ್ಲಿ ಮುಳುಗದಂತೆ ಹಾಗೂ ನೀರಿನ ಪ್ರವಾಹಕ್ಕೆ ಸೆಳೆದುಕೊಂಡು ಹೋಗದಂತೆ ರಕ್ಷಣೆ ಒದಗಿಸಿದ್ದಾರೆ. ದಿನ ಬಳಕೆ ವಸ್ತುಗಳನ್ನು ಮನೆಯ ಮಾಳಿಗೆಯ ಮೇಲೆ ಸಾಗಿಸಿದ್ದಾರೆ.

ಗುರುವಾರ ರಾತ್ರಿ ಮಹಾರಾಷ್ಟ್ರದಿಂದ ಹೆಚ್ಚುವರಿಯಾಗಿ ಕೃಷ್ಣಾನದಿಗೆ ಹರಿಸಲಾಗಿದೆ ಎನ್ನಲಾದ ಅಪಾರ ಪ್ರಮಾಣದ ನೀರು ಶನಿವಾರ ಬೆಳಗ್ಗೆವರೆಗೆ ತಾಲ್ಲೂಕಿನಲ್ಲಿ ಪ್ರವೇಶ ಮಾಡಲಿದೆ. ಅದರಿಂದ ಪ್ರವಾಹ ಭೀತಿ ತಲೆದೋರಲಿದೆ ಎಂಬ ಮಾತು ಗ್ರಾಮಸ್ಥರಲ್ಲಿ ಕೇಳಿ ಬರುತ್ತಿದೆ.

ಅಪಾಯದ ಭಯ: ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಮುತ್ತೂರ ಹತ್ತಿರ ಉಪಯೋಗಿಸಲಾಗುತ್ತಿರುವ ಯಾಂತ್ರೀಕೃತ ದೋಣಿ ಆಗಾಗ ಬಂದ್ ಬೀಳುತ್ತಿದೆ. ಅಪಾಯದ ಭಯದಿಂದ ಯಾಂತ್ರೀಕೃತ ದೋಣಿ ಮುಖಾಂತರ ಸ್ಥಳಾಂತರಗೊಳ್ಳಲು ಜನ ಭಯ ಪಡುವಂತಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT