ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜೆಪಿ ಸಮಾವೇಶಕ್ಕೆ ಬೃಹತ್ ಪೆಂಡಾಲ್

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಹಾವೇರಿ:  ಸುಮಾರು ಐದು ಲಕ್ಷ ಚದರ ಅಡಿಯ ಬೃಹತ್ ಪೆಂಡಾಲ್, 5,500 ಚ.ಅಡಿ ವೇದಿಕೆ, 1.50 ಲಕ್ಷ ಕುರ್ಚಿಗಳು, 180 ಧ್ವನಿವರ್ಧಕಗಳು, 28 ಬೃಹತ್ ಸೌಂಡ್ ಸಿಸ್ಟಮ್, 25 ಎಲ್‌ಇಡಿ ಬೃಹತ್ ಟಿ.ವಿ ಪರದೆಗಳು, 100ಕ್ಕೂ ಹೆಚ್ಚು ಮರ್ಕ್ಯೂರಿ ದೀಪಗಳು, ವೇದಿಕೆಯವರೆಗೂ ತೆರೆದ ಜೀಪ್ ಬರಲು ವ್ಯವಸ್ಥೆ, ಮೂರು ಕಡೆ ಊಟಕ್ಕಾಗಿಯೇ ಪ್ರತ್ಯೇಕ ಪೆಂಡಾಲ್..!

ಹಾವೇರಿ ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಮೈದಾನದಲ್ಲಿ ಇದೇ 9 ರಂದು (ಭಾನುವಾರ) ನಡೆಯಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸಮಾವೇಶಕ್ಕಾಗಿ ನಡೆದಿರುವ ಸಿದ್ಧತೆಗಳಿವು.

ಸಮಾವೇಶಕ್ಕೆ ಕೇವಲ ಎರಡು ದಿನಗಳು ಬಾಕಿ ಉಳಿದಿದ್ದು, ಈಗಾಗಲೇ ಶೇ 85 ರಷ್ಟು ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ. ಮುಖ್ಯವೇದಿಕೆ, ಗಣ್ಯರ ಹಾಗೂ ಮಾಧ್ಯಮ ಪ್ರತಿನಿಧಿಗಳ ಗ್ಯಾಲರಿ, ಮಾಧ್ಯಮ ಕೇಂದ್ರ, ಕುರ್ಚಿ ಜೋಡಣೆ ಸೇರಿದಂತೆ ಇನ್ನೂ ಕೆಲವು ಕಾರ್ಯಗಳಿಗೆ ಅಂತಿಮ ರೂಪ ನೀಡಬೇಕಿದೆ. ಸುಮಾರು 20 ಎಕರೆ ಮೈದಾನದಲ್ಲಿ 520*800 ಚದರ ಅಡಿಯಲ್ಲಿ ಅಂದರೆ, ಐದು ಲಕ್ಷ ಚ.ಅಡಿಯಲ್ಲಿ ಪೆಂಡಾಲ್ ಹಾಕಲಾಗಿದೆ. ಮುಖ್ಯ ವೇದಿಕೆಗೆ 140*300 ಚ.ಅಡಿ ತಗಡಿನ ಷೀಟಿನ ಪೆಂಡಾಲ್ ಹಾಕಿದ್ದರೆ, ಆ ವೇದಿಕೆಗೆ ಹೊಂದಿಕೊಂಡಂತೆ ಅಕ್ಕ ಪಕ್ಕದಲ್ಲಿ 15 ಅಡಿ ಎತ್ತರ, ಎದುರಿನಲ್ಲಿ 20 ಅಡಿ ಎತ್ತರ ಪೆಂಡಾಲ್ ಹಾಕಲಾಗಿದೆ.

ಬೃಹತ್ ಪೆಂಡಾಲ್‌ಗೆ ಹೊಂದಿಕೊಳ್ಳುವಂತೆ 140*40 ಅಂದರೆ, 5,600 ಚ.ಅಡಿಯ ಬೃಹತ್ ಮುಖ್ಯ ವೇದಿಕೆ ನಿರ್ಮಿಸಲಾಗಿದೆ. ಈ ವೇದಿಕೆಯಲ್ಲಿ ಸುಮಾರು 500 ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ ಯಡಿಯೂರಪ್ಪ ತೆರೆದ ಜೀಪ್‌ನಲ್ಲಿ ನೇರವಾಗಿ ಮುಖ್ಯ ವೇದಿಕೆಗೆ ಬರುವಂತೆಯೂ ವ್ಯವಸ್ಥೆ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ವಿವರಿಸುತ್ತಾರೆ.

ಚಿತ್ರ, ಧ್ವನಿ ವ್ಯವಸ್ಥೆ:  ಸಮಾವೇಶಕ್ಕೆ ಆಗಮಿಸಿದ ವ್ಯಕ್ತಿ ಯಾವುದೇ ಮೂಲೆಯಲ್ಲಿ ಕುಳಿತರೂ ಅವರಿಗೆ ವೇದಿಕೆ ಮೇಲಿನ ಚಿತ್ರ ಹಾಗೂ ಸ್ಪಷ್ಟ ಧ್ವನಿ ಕೇಳುವ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಪೆಂಡಾಲ್ ಒಳಗಡೆ ವೇದಿಕೆ ಮೇಲಿನ ಕಾರ್ಯಕ್ರಮ ಕಾಣುವಂತೆ 25ಕ್ಕೂ ಹೆಚ್ಚು ಎಲ್‌ಇಡಿ ಟಿ.ವಿಗಳನ್ನು ಅಳವಡಿಸಲಾಗುತ್ತಿದೆ. ಅದೇ ರೀತಿ ಧ್ವನಿಗಾಗಿ ಬೆಂಗಳೂರಿನ ಕಿರಣ್ ಸೌಂಡ್ ಸಿಸ್ಟಮ್‌ನವರು ಪ್ರತಿ 20 ಅಡಿಗೆ ಒಂದರಂತೆ ಪೆಂಡಾಲ್‌ನ ಎರಡೂ ಬದಿಗಳಲ್ಲಿ 180 ಧ್ವನಿವರ್ಧಕ, 28ಕ್ಕೂ ಹೆಚ್ಚು ಸೌಂಡ್ ಸಿಸ್ಟಮ್‌ಗಳನ್ನು ಅಳವಡಿಸಿದ್ದಾರೆ.

ವೇದಿಕೆ ಮುಂದಿನ ಬಲ ಭಾಗದಲ್ಲಿ ಗಣ್ಯರು ಹಾಗೂ ಮಹಿಳೆಯರು, ಎಡಭಾಗದಲ್ಲಿ 200 ಜನ ಮಾಧ್ಯಮ ಪ್ರತಿನಿಧಿಗಳು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಅದರ ಹಿಂದೆ ಹಾಗೂ ಅಕ್ಕ ಪಕ್ಕದಲ್ಲಿ ಸುಮಾರು 1.50 ಲಕ್ಷ ಕುರ್ಚಿಗಳನ್ನು ಹಾಕುವ ಕೆಲಸ ಪ್ರಗತಿಯಲ್ಲಿದೆ. ಸಮಾವೇಶದ ಹಿಂದಿನ ದಿನ ಸಂಜೆ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿಯೇ ಪೆಂಡಾಲ್‌ನಲ್ಲಿ 100ಕ್ಕೂ ಮರ್ಕ್ಯೂರಿ ಬಲ್ಬ್‌ಗಳನ್ನು, ವಿದ್ಯುತ್‌ಗಾಗಿ 6 ಜನರೇಟರ್‌ಗಳನ್ನು ಬಳಸಲಾಗುತ್ತಿದೆ.

ಕಾರ್ಯಕ್ರಮಕ್ಕೆ ಬರುವ ಜನರಿಗಾಗಿ ವೇದಿಕೆ ಪಕ್ಕದ ಲೇಔಟ್, ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜ್ ಹಾಗೂ ಆರ್‌ಟಿಓ ಕಚೇರಿ ಬಳಿ ಊಟ ಹಾಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಪೆಂಡಾಲ್ ನಿರ್ಮಾಣ ಕಾರ್ಯದಲ್ಲಿ 120ಕ್ಕೂ ಹೆಚ್ಚು ಕಾರ್ಮಿಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಶನಿವಾರ ಮಧ್ಯಾಹ್ನದ ಹೊತ್ತಿಗೆ ಪೆಂಡಾಲ್ ಸಂಪೂರ್ಣ ಸಿದ್ಧಗೊಳ್ಳಲಿದೆ.

`ರಾಜ್ಯದ ಇತಿಹಾಸದಲ್ಲಿ ಇದೊಂದು ಬೃಹತ್ ಪೆಂಡಾಲ್ ಆಗಿದ್ದು, ರಾಜಕೀಯ ಕಾರ್ಯಕ್ರಮಕ್ಕೆ ಇಷ್ಟು ದೊಡ್ಡ  ಪೆಂಡಾಲ್ ಹಾಕಿದ ಉದಾಹರಣೆ ನನ್ನ 20 ವರ್ಷಗಳ ಸೇವೆಯಲ್ಲಿ ಕಂಡಿಲ್ಲ' ಎಂದು ಹೇಳುತ್ತಾರೆ ಪೆಂಡಾಲ್ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವ ಹುಬ್ಬಳ್ಳಿ ಶಾಮಿಯಾನಾದ ವ್ಯವಸ್ಥಾಪಕ ಸುರೇಶ ಕುಲಕರ್ಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT