ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟ ಬುದ್ಧಿ ಬಿಡಿ-ಬಿಎಸ್‌ವೈಗೆ ಮಾಣಿಕೇಶ್ವರಿ ಅಪ್ಪಣೆ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಯಾದಗಿರಿ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು  ಸಮೀಪದ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ದೇವಿಯವರ ಎದುರು ಭಾನುವಾರ ತಮ್ಮ ಮನದಾಳದ ಬಯಕೆಯನ್ನು ಬಿಚ್ಚಿಟ್ಟರು.

ಯಾನಾಗುಂದಿಯ ಸೂರ್ಯನಂದಿ ಕ್ಷೇತ್ರದಲ್ಲಿ ಸುಮಾರು 4 ಗಂಟೆ ಮಾತಾಜಿಯವರ ದರ್ಶನಕ್ಕೆ ಕಾದು ಕುಳಿತಿದ್ದ ಯಡಿಯೂರಪ್ಪನವರಿಗೆ ಕೊನೆಗೂ ಮಾತಾಜಿಯವರ ದರ್ಶನ ಪಡೆದರು.  “ನಾನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂದಿದ್ದೇನೆ ಮಾತಾಜಿ. ಮತ್ತೆ ನಾನು ರಾಜ್ಯದ ಮುಖ್ಯಮಂತ್ರಿ ಆಗಬೇಕು. ಆಶೀರ್ವಾದ ಮಾಡಿ” ಎಂದು ಎರಡೆರಡು ಬಾರಿ ಕೇಳಿದರು.

ಇದಕ್ಕೆ ಸ್ಪಂದಿಸಿದ ಮಾತಾ ಮಾಣಿಕೇಶ್ವರಿ ದೇವಿಯವರು, “ಸದ್ಯಕ್ಕೆ ರಾಜಕೀಯ ಧರ್ಮ ಕೆಟ್ಟಿದೆ. ಕೆಟ್ಟ ಬುದ್ಧಿಯನ್ನು ಬಿಡಬೇಕು. ಅಂದಾಗ ದೇವರು ಎಲ್ಲವನ್ನೂ ಕೊಡುತ್ತಾನೆ. ನೀನು ಸಿಎಂ ಆಗ್ತೀಯಾ. ಇನ್ನೂ ಎತ್ತರಕ್ಕೆ ಹೋಗ್ತೀಯ. ದೇವರನ್ನು ಬೇಡಿಕೋ. ದೇವರೇ ಜನರನ್ನು ಬದಲಿಸುವ ಶಕ್ತಿ ಹೊಂದಿದ್ದಾನೆ. ಆದರೆ ಎತ್ತರಕ್ಕೆ ಏರಿದ ಮೇಲೆ ಪ್ರಾಣಿ ಹಿಂಸೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಸೂಚಿಸಿದರು.
ಕೂಡಲೇ ಮಾತನಾಡಿದ ಯಡಿಯೂರಪ್ಪ “ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು ನಾನೇ ಅಮ್ಮ” ಎಂದು ಹೇಳಿದರು.

ಹಾಗಾದರೆ ಒಳ್ಳೆಯದು. ಮುಂದೆಯೂ ಅಹಿಂಸೆಯನ್ನು ಪಾಲಿಸಿ ಕೊಂಡು ಹೋಗಬೇಕು. ಪ್ರಾಣಿಗಳ ಹಿಂಸೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರಿಗೂ ಸೂಚಿಸಬೇಕು ಎಂದು ಹೇಳಿದರು.

ಸುಮಾರು ಐದು ನಿಮಿಷ ಮಾತಾಜಿಯವರ ಜೊತೆಗೆ ಸಂಭಾಷಣೆ ನಡೆಸಿ, ಆಶೀರ್ವಾದ ಪಡೆದ ನಂತರ ಬಿ.ಎಸ್. ಯಡಿಯೂರಪ್ಪನವರ ಮುಖದಲ್ಲಿ ಸಂತಸ ಎದ್ದು ಕಾಣುತ್ತಿತ್ತು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಅತಿ ವಿರಳವಾದ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಅಮ್ಮನವರ ದರ್ಶನ ಸಿಕ್ಕಿದೆ. ಆಶೀರ್ವಾದವೂ ಆಗಿದೆ. ಇದರಿಂದ ಸಾಕಷ್ಟು ಸಂತೋಷ ಉಂಟಾಗಿದೆ. ನನ್ನಲ್ಲಿ ಹೊಸ ಶಕ್ತಿ ಬಂದಿದೆ. ಮಾತಾಜಿಯವರ ಆಶೀರ್ವಾದದಿಂದಾಗಿ ಇನ್ನೂ ಹೆಚ್ಚಿನ ಒಳ್ಳೆಯ ಕಾರ್ಯಗಳನ್ನು ಮಾಡಲು ಬಲ ಬಂದಂತಾಗಿದೆ” ಎಂದು ಹೇಳಿದರು.

“ದೇವರೇ ಆಶೀರ್ವಾದ ಮಾಡುತ್ತಾನೆ ಎಂದು ಮಾತಾಜಿ ಹೇಳಿದ್ದಾರೆ. ಮುಖ್ಯಮಂತ್ರಿ ಹುದ್ದೆ ಹಾಗೂ ಸ್ಥಾನಮಾನಗಳು ದೇವರಿಗೆ ಬಿಟ್ಟಿದ್ದು. ಅವನೇ ಎಲ್ಲವನ್ನೂ ಕೊಡುತ್ತಾನೆ. ಈ ಬಗ್ಗೆ ಏನನ್ನೂ ಹೇಳಲಾರೆ” ಎಂದಷ್ಟೇ ಪ್ರತಿಕ್ರಿಯೆ ನೀಡಿದರು.

ಬಿದರಿ ಕಿವಿ ಹಿಂಡಿದ ಮಾತಾಜಿ

ಆಶೀರ್ವಾದ ಪಡೆಯುವವರಲ್ಲಿ ನಂತರ ಸರದಿ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರದ್ದು. ಮಾತಾಜಿಯವರ ಬಳಿಗೆ ತೆರಳಿ ಕೈಮುಗಿದ ಶಂಕರ ಬಿದರಿ, “ ನಾನು ಡಿಜಿಪಿ ಶಂಕರ ಬಿದರಿ ಬಂದಿದ್ದೇನೆ ಅಮ್ಮಾ” ಎಂದರು.

ಕೂಡಲೇ ಮಾತನಾಡಿದ ಮಾತಾಜಿ, “ಕೆಲ ದಿನಗಳ ಹಿಂದೆ ನಿಮ್ಮ ಪೊಲೀಸರು ನಮ್ಮ ಆಶ್ರಮದ ಸೇವಕನೊಬ್ಬನಿಗೆ ಕಿರುಕುಳ ನೀಡಿದ್ದಾರೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಿ. ಎಲ್ಲರಿಗೂ ಕಾನೂನು ಒಂದೇ. ಅನಗತ್ಯ ಕಿರುಕುಳ ನೀಡುವುದನ್ನು ತಡೆಗಟ್ಟಲು ಪೊಲೀಸರಿಗೆ ಸೂಚನೆ ನೀಡು” ಎಂದು ಆದೇಶಿಸಿದರು. ಇದರಿಂದ ಗಲಿಬಿಲಿಗೊಂಡಂತೆ ಕಂಡು ಬಂದ ಶಂಕರ ಬಿದರಿ “ಆಯಿತಮ್ಮ” ಎಂದು ಕೈ ಮುಗಿದು ಸುಮ್ಮನಾದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT