ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸದಾನಂದ ಗೌಡ ಎಚ್ಚರಿಕೆ

Last Updated 28 ಜನವರಿ 2012, 9:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಂದಿನ ಸಾಲಿನ ಬಜೆಟ್‌ನಲ್ಲಿ ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗುವ ಅನುದಾನ ಸದ್ಬಳಕೆ ಮಾಡಬೇಕು. ಅನುದಾನ ದುರುಪಯೋಗವಾದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, ಪ್ರತಿ ಇಲಾಖೆಯಲ್ಲೂ ಶೇ. 95ರಷ್ಟು ಅನುದಾನ ಸದ್ಬಳಕೆಯಾಗಬೇಕು. ಹಣ ಬಳಕೆಯಲ್ಲಿ ವಿಳಂಬ ತೋರಿದಲ್ಲಿ ಅಥವಾ ನಿರ್ಲಕ್ಷ್ಯ ಮಾಡಿದ್ದಲ್ಲಿ ಅಂಥ ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳಲಾಗುವುದು ಎಂದರು.

ಚಿಕ್ಕಬಳ್ಳಾಪುರಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ನಾನು ನಿಮ್ಮಲ್ಲಿ ಮನವಿ ಮಾಡುವುದು ಇಷ್ಟೇ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜೊತೆಗೂಡಿ ಕೆಲಸ ಮಾಡಿದಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳಬಹುದು. ಜನರು ಬಯಸುವ ಆಡಳಿತ ನೀಡಬಹುದು ಮತ್ತು ಜನರ ಸಮಸ್ಯೆ ಪರಿಹರಿಸಬಹುದು. ನಮಗೆ ರಾಜಕೀಯ ಬದ್ಧತೆಯಿದ್ದರೆ, ನಿಮ್ಮಲ್ಲಿ ಆಡಳಿತದ ಬದ್ಧತೆ ಇರಬೇಕು. ಕೈಜೋಡಿಸಿ ಕೆಲಸ ಮಾಡಿದಲ್ಲಿ ಮಾತ್ರ ಅಭಿವೃದ್ಧಿ ಕೆಲಸ ಸುಗಮವಾಗಿ ಸಾಗುತ್ತದೆ ಎಂದರು.

ಅಧಿಕಾರಿಗಳಿಗೆ ಎರಡು ತಿಂಗಳ ಗಡುವು ನೀಡಿದ ಅವರು, ಮಾರ್ಚ್ ಒಳಗೆ ಬಾಕಿ ಕಾರ್ಯಗಳನ್ನು ಪೂರ್ಣಗೊಳಿಸಬೇಕು.ಶೇ 70ರಷ್ಟು ಕಾರ್ಯಗಳು ಪೂರ್ಣಗೊಂಡಲ್ಲಿ ಮಾತ್ರ ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ ಎಂದು ಭಾವಿಸುತ್ತೇನೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಶೇ 70ರಷ್ಟು ಅಥವಾ ಶೇ 100ರಷ್ಟು ಅಂಕ ನೀಡಬೇಕಿದ್ದರೆ ನೀವೆಲ್ಲರೂ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಬೇಕು ಎಂದರು.

ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ ಮತ್ತು ಇಲಾಖೆಗಳ ಕಾರ್ಯಪ್ರಗತಿಯನ್ನು ಪರಿಶೀಲಿಸುತ್ತಿದ್ದೇನೆ ಎಂದು ಹೇಳಿದ ಮುಖ್ಯಮಂತ್ರಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಐದು ಇಲಾಖೆ ಹೊರತುಪಡಿಸಿದರೆ ಉಳಿದೆಲ್ಲ ಚೆನ್ನಾಗಿ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಜಿಲ್ಲೆಯು ಎದುರಿಸುತ್ತಿರುವ ಮೂಲ ಸೌಕರ್ಯ ಸಮಸ್ಯೆ ನಿವಾರಿಸಲು ಮತ್ತು ಇತರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಶಾಸಕ ಕೆ.ಪಿ.ಬಚ್ಚೇಗೌಡ, ಪದವಿಪೂರ್ವ ಶಿಕ್ಷಣ ಪಡೆಯುತ್ತಿರುವ ಬಾಲಕಿಯರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಿದ್ದು, ಅವರಿಗಾಗಿ ಪ್ರತ್ಯೇಕ ಪದವಿಪೂರ್ವ ಕಾಲೇಜು ತೆರೆಯಬೇಕು. ಜಿಲ್ಲಾಧಿಕಾರಿ ಕಟ್ಟಡ ನಿರ್ಮಿಸಿದ ಗುತ್ತಿಗೆದಾರರಿಗೆ ನಿರ್ಮಾಣ ವೆಚ್ಚದ ಹಣ ಪಾವತಿಸಬೇಕು ಎಂದರು.

ಕುಡಿಯುವ ನೀರಿನ ತೀವ್ರ ಸಮಸ್ಯೆ ತೀವ್ರ ಸ್ವರೂಪದಲ್ಲಿದ್ದು, ಫ್ಲೋರೈಡ್ ಅಂಶ ನೀರಿನಲ್ಲಿ ಮಿಶ್ರಣವಾಗಿದೆ ಎಂದು ಹೇಳಿದ ಶಾಸಕ ಎನ್.ಸಂಪಂಗಿ, ಜಿಲ್ಲೆಗೆ 50 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಈ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಆದರೆ ಈವರೆಗೆ ಹಣ ಬಿಡುಗಡೆಯಾಗಿಲ್ಲ. ಆಗ ನೀಡಲಾಗಿದ್ದ ಭರವಸೆ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದರು.

ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಸ್ಥಿತಿಗತಿಯಲ್ಲಿ ಭಾರಿ ವ್ಯತ್ಯಾಸವಿದೆ ಎಂದು ಹೇಳಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ರಾಮನಗರವನ್ನು ವೇಗವಾಗಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಗಮನಹರಿಸಬೇಕು. ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ ಮಾತನಾಡಿ, ಬಾಗೇಪಲ್ಲಿ ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ತೀವ್ರ ಸ್ವರೂಪದಲ್ಲಿದ್ದು, ಮಕ್ಕಳಿಗೆ ಸಮರ್ಪಕವಾಗಿ ಶಿಕ್ಷಣ ಸಿಗುತ್ತಿಲ್ಲ. ಬರಗಾಲ ಪೀಡಿತ ಪ್ರದೇಶವಾಗಿರುವ ಕಾರಣ ಕೃಷಿ ಚಟುವಟಿಕೆಗಳಿಗೂ ಹಿನ್ನಡೆ ಉಂಟಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಸಿ.ಮುನಿಯಪ್ಪ, ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ದಿಢೀರ್ ಕೆಡಿಪಿ ಸಭೆ!

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ನಗರದಲ್ಲಿ ಆಯೋಜಿಸಲಾಗಿರುವ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿತ್ತು. ಆದೇ ರೀತಿ ವೇಳಾಪಟ್ಟಿ ಸಿದ್ಧಪಡಿಸಲಾಗಿತ್ತು.

ಆದರೆ ವೇಳಾಪಟ್ಟಿಯಲ್ಲಿ ದಿಢೀರ್ ಬದಲಾವಣೆ ಕಂಡು ಬಂತು. ಮುಖ್ಯಮಂತ್ರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ನಂತರವಷ್ಟೇ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂಬ ಸಂದೇಶ ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದರು.

ದಿಢೀರ್ ಕೆಡಿಪಿ ಸಭೆಗೆ ಕಾರಣವೇನು ಎಂದು ಕೇಳಿದಾಗ ಅಧಿಕಾರಿಯೊಬ್ಬರು, ಮುಖ್ಯಮಂತ್ರಿಯವರು ನೇರವಾಗಿ ಬಿಜೆಪಿ ಸಮಾವೇಶಕ್ಕೆ ತೆರಳಿದ್ದರೆ ಹೆಲಿಕಾಪ್ಟರ್ ಮತ್ತು ಪ್ರವಾಸದ ವೆಚ್ಚ ಬಿಜೆಪಿ ಭರಿಸಬೇಕಾಗುತಿತ್ತು. ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ದಿಢೀರನೇ ಕೆಡಿಪಿ ಸಭೆ ನಡೆಸಲು ನಿರ್ಧರಿಸಲಾಯಿತು. ಕೆಡಿಪಿ ಸಭೆ ನಡೆಸುವುದರಿಂದ ಪ್ರವಾಸದ ವೆಚ್ಚ ಸರ್ಕಾರದ್ದೇ ಆಗುತ್ತದೆ ಎಂದರು.

`ನೀವು ಜಗಳವಾಡಿದರೆ, ನಮಗೆ ಒಳ್ಳೆಯದು~

ಚಿಕ್ಕಬಳ್ಳಾಪುರ: ನೀವಿಬ್ಬರು ಜಗಳವಾಡಿದರೆ ನಮಗೆ ಒಳ್ಳೆಯದು. ಬಚ್ಚೇಗೌಡ ಮತ್ತು ಸಂಪಂಗಿಯವರೇ ನೀವಿಬ್ಬರು ಜಗಳವಾಡಿದರೆ, ನನಗೇನೂ ಬೇಜಾರಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಹೇಳಿದಾಗ ಇಡೀ ಸಭೆಯು ನಗೆಗಡಲಲ್ಲಿ ತೇಲಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಾಗೇಪಲ್ಲಿ ಶಾಸಕ ಎನ್.ಸಂಪಂಗಿ ಅವರ ಪಕ್ಕ ಕೂತಿದ್ದ ಚಿಕ್ಕಬಳ್ಳಾಪುರ ಶಾಸಕ ಕೆ.ಪಿ.ಬಚ್ಚೇಗೌಡ, ನೀವು ಅಡ್ಡ ಕೂತಿರುವುದರಿಂದ ಮುಖ್ಯಮಂತ್ರಿಯವರಿಗೆ ನಾನು ಕಾಣಿಸ್ತಾನೇ ಇಲ್ಲ. ನನ್ನ ಹೆಸರನ್ನು ಕರೆಯುತ್ತಿಲ್ಲ ಎಂದರು. ನನ್ನ ಪಕ್ಕ ಕೂತಿರುವ ಶಾಸಕರು ಹೀಗೆ ದೂರುತ್ತಿದ್ದಾರೆ ಮುಖ್ಯಮಂತ್ರಿಗಳೇ ಏನು ಮಾಡೋದು? ಎಂದು ಸಂಪಂಗಿ ಕೇಳಿದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸದಾನಂದಗೌಡ, ನೀವಿಬ್ಬರು ಜಗಳವಾಡಿದರೆ, ನಮಗೆ ಒಳ್ಳೆಯದು. ನೀವು ಮುಂದುವರಿಸಿ ಎಂದು ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT