ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ಮರು ಎಣಿಕೆಯ ಕೈಚಳಕ!

Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಜೊತೆ ‘ಹೊಂದಾ­ಣಿಕೆ ಮಾಡಿಕೊಂಡ’ ಅಭ್ಯರ್ಥಿಗಳಿಗೆ ನೌಕರಿ ಕೊಡಿಸಲು ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಿರುವುದನ್ನು ಸಿಐಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮುಖ್ಯ ಪರೀಕ್ಷೆ, ಸಂದರ್ಶನ, ಮರು ಎಣಿಕೆ ಹೀಗೆ ಯಾವುದೇ ಹಂತದಲ್ಲಾ­ದರೂ ಸಕಲ ಸಿದ್ಧತೆಯೊಂದಿಗೆ ತಮ್ಮ ಬಳಿ ಬಂದವರಿಗೆ ಕೆಪಿಎಸ್‌ಸಿಯ ಅಧಿ­ಕಾ­ರ­ಸ್ಥರು ನಿರಾಸೆ ಮಾಡಿಲ್ಲ.

ಶತ­ಪ್ರಯತ್ನ ಪಟ್ಟು ನೇಮಕಾತಿ ಪಟ್ಟಿಯಲ್ಲಿ ಅವರ ಹೆಸರು ಸೇರುವಂತೆ ಮಾಡಿದ್ದಾರೆ.  2011ನೇ ಸಾಲಿನ 362 ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ಸಂದರ್ಭದಲ್ಲಿ, ಮುಖ್ಯ ಪರೀಕ್ಷೆಯ ನಂತರ 929 ಅಭ್ಯರ್ಥಿಗಳು ಮರು ಎಣಿಕೆಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 922 ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಮರು ಎಣಿಕೆ ಮಾಡಲಾಯಿತು.

553 ಅಭ್ಯರ್ಥಿಗಳ ಅಂಕಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. 324 ಅಭ್ಯರ್ಥಿ­ಗಳ ಅಂಕ ಹೆಚ್ಚಾಯಿತು. 45 ಅಭ್ಯರ್ಥಿ­ಗಳ ಅಂಕ ಕಡಿಮೆ ಆಯಿತು. ಮರು ಎಣಿಕೆಯಲ್ಲಿ ಅಂಕ ಹೆಚ್ಚಾದ 324 ಅಭ್ಯರ್ಥಿಗಳ ಪೈಕಿ 44 ಮಂದಿ­ಯನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾ­ಯಿತು. 4 ಮಂದಿ ಸಂಭಾವ್ಯ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಉಳಿದ 276 ಮಂದಿಗೆ ಸಂದರ್ಶನದ ಭಾಗ್ಯವೂ ಸಿಗಲಿಲ್ಲ. 

ಸತತ ಸಂಪರ್ಕ: ಮರು ಎಣಿಕೆ, ಸಂದರ್ಶನ ಮುಗಿದ ನಂತರವೂ 4 ಮಂದಿಯನ್ನು ಕೆಪಿಎಸ್‌ಸಿ ಸಂದರ್ಶನಕ್ಕೆ ಆಹ್ವಾನಿಸಿತು. ಯಾಕೆಂದರೆ ಅವರು ಕೆಪಿಎಸ್‌ಸಿ ಪ್ರಕಟಿಸಿದ ಕಟಾಫ್‌ ಅಂಕ­ಕ್ಕಿಂತ ಹೆಚ್ಚು ಪಡೆದುಕೊಂಡಿದ್ದರು. ಮರು ಎಣಿಕೆಯ ನಂತರ ಹೆಚ್ಚು ಅಂಕ ಪಡೆದು ಸಂದರ್ಶನಕ್ಕೆ ಆಯ್ಕೆಯಾಗಿ ಸಂಭಾವ್ಯ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದ 8 ಅಭ್ಯರ್ಥಿಗಳ ಬಗ್ಗೆ ಸಿಐಡಿ ಹೆಚ್ಚಿನ ವಿಚಾರಣೆ ನಡೆಸಿತು.

ಅದರಲ್ಲಿ ವಾಸುದೇವ ಎಂಬ ಅಭ್ಯರ್ಥಿಗೆ ಮುಖ್ಯ ಪರೀಕ್ಷೆಯಲ್ಲಿ 977.50 ಅಂಕ ಬಂದಿತ್ತು. ಮರು ಎಣಿಕೆಯ ನಂತರ ಅದು 986ಕ್ಕೆ ಏರಿಕೆಯಾಗಿತ್ತು.  ಸಂದರ್ಶನದಲ್ಲಿ 145 ಅಂಕ ನೀಡ­ಲಾಗಿತ್ತು. ವಾಸುದೇವ ಅವರು ಈ ಸಂದರ್ಭದಲ್ಲಿ ಕೆಪಿಎಸ್‌ಸಿ ಸದಸ್ಯ ಎಚ್‌.ಡಿ.ಪಾಟೀಲ ಅವರಿಗೆ ಒಮ್ಮೆ ದೂರವಾಣಿ ಕರೆ ಮಾಡಿದ್ದರು. ಅಲ್ಲದೆ ಗೋನಾಳ ಭೀಮಪ್ಪ ಅವರ ಆಪ್ತ ಸಹಾಯಕ ಗೋಪಿಕೃಷ್ಣ ಅವರಿಗೆ ಎರಡು ಬಾರಿ ಕರೆ ಮಾಡಿದ್ದರು.

ಗೋಪಾಲ್‌ ಎಂಬ ಅಭ್ಯರ್ಥಿಗೆ ಮುಖ್ಯ ಪರೀಕ್ಷೆಯಲ್ಲಿ 892 ಅಂಕ ಬಂದಿತ್ತು. ಮರು ಎಣಿಕೆಯ ನಂತರ  895ಕ್ಕೆ ಏರಿಕೆಯಾಗಿತ್ತು. ಸಂದರ್ಶನ­ದಲ್ಲಿ ಅವರಿಗೆ 150 ಅಂಕ ಬಂದಿತ್ತು. ಗೋಪಾಲ್‌ ಅವರು ಕೆಪಿಎಸ್‌ಸಿ ಸದಸ್ಯ ಬಿ.ಪಿ.ಕನಿರಾಂ ಅವರಿಗೆ 8 ಬಾರಿ ದೂರವಾಣಿ ಕರೆ ಮಾಡಿದ್ದರು. ಕನಿರಾಂ ಕೂಡ ಗೋಪಾಲ್‌ ಅವರಿಗೆ 6 ಬಾರಿ ಕರೆ ಮಾಡಿದ್ದರು. ಅಲ್ಲದೆ ಗೋಪಾಲ್‌ ಅವರಿಂದ 9 ಎಸ್‌ಎಂಎಸ್‌ಗಳು ಕನಿರಾಂ ಅವರಿಗೆ ಹೋಗಿದ್ದವು.

ಶಂಕರಾನಂದ ಬನಶಂಕರಿ ಅವರಿಗೆ ಮುಖ್ಯ ಪರೀಕ್ಷೆಯಲ್ಲಿ 961.50 ಅಂಕ ಬಂದಿತ್ತು. ಮರು ಎಣಿಕೆಯ ನಂತರ ಅದು 968ಕ್ಕೆ ಏರಿಕೆಯಾಯಿತು. ಸಂದರ್ಶನದಲ್ಲಿ ಅವರಿಗೆ ಕೇವಲ 70 ಅಂಕ ದೊರಕಿತು. ಶಂಕರಾನಂದ ಅವರು ಒಂದು ಎಸ್‌ಎಂಎಸ್‌ ಕಳುಹಿಸಿದ್ದರು. ಮರು ಎಣಿಕೆಯ ನಂತರ ಅಂಕ ಹೆಚ್ಚಾಗಿ ಸಂಭಾವ್ಯ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದ ಆರ್‌.ಮೋಹನ್‌, ಕೆ.ಪಿ.­ಸುಬ್ಬಯ್ಯ, ಟಿ.ಹರೀಶ್‌, ಶ್ರೀಶೈಲ ಸೋಮನ­ಕಟ್ಟಿ, ಜಿ.ಆನಂದಕುಮಾರ್‌ ಬಗ್ಗೆ ಕೂಡ ಸಿಐಡಿ ವಿವರಗಳನ್ನು ಸಂಗ್ರಹಿಸುತ್ತಿದೆ.

ಇದೆಲ್ಲವನ್ನು ಗಮನಿಸಿದಾಗ ಮರು ಎಣಿಕೆಯಲ್ಲಿ ಹೆಚ್ಚಿನ ಅಂಕ ಪಡೆದ ಕೆಲವರು ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಕೆಲವು ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದರು ಹಾಗೂ ತಮ್ಮ ಜೊತೆ ಹೊಂದಾಣಿಕೆ ಮಾಡಿಕೊಂಡ ಅಭ್ಯರ್ಥಿ­ಗಳಿಗೆ ಕೆಪಿಎಸ್‌ಸಿಯವರು ಮರು ಎಣಿಕೆ­ಯಲ್ಲಿ ಹಾಗೂ ಸಂದರ್ಶನದಲ್ಲಿ ಹೆಚ್ಚು ಅಂಕ ನೀಡುವ ಮೂಲಕ ಸಹಾಯ ಮಾಡಿದ್ದಾರೆ ಎಂದು ಸಿಐಡಿ ತನ್ನ ವರದಿ­ಯಲ್ಲಿ ನಮೂದಿಸಿದೆ.

ಮರು ಎಣಿಕೆ ಸಂದರ್ಭದಲ್ಲಿ ಕೆಲವು ಅಭ್ಯರ್ಥಿಗಳ ಉತ್ತರ ಪತ್ರಿಕೆಗಳ ಅಂಕ­ಗಳನ್ನು ತಿದ್ದಲಾಗಿದೆ, ಬದಲಾಯಿಸ­ಲಾಗಿದೆ ಹಾಗೂ ಅಂಕದ ಮೇಲೆಯೇ ಬೇರೆ ಶಾಯಿ ಬಳಸಿ ಪೆನ್ನಿನಿಂದ ತಿದ್ದ­ಲಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋ­ಗಾ­ಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹೀಗೆ ಅಂಕಗಳನ್ನು ತಿದ್ದಿದ ಮತ್ತು ಬದಲಾಯಿಸಿದ ಉತ್ತರ ಪತ್ರಿಕೆಗಳ ಪ್ರತಿಯನ್ನು ಸಿಐಡಿ ವರದಿಯೊಂದಿಗೆ ಲಗತ್ತಿಸಲಾಗಿದೆ.

ಮರು ಎಣಿಕೆಯ ನಂತರ 24 ಅಭ್ಯರ್ಥಿಗಳಿಗೆ 10ಕ್ಕಿಂತ ಹೆಚ್ಚು ಅಂಕ ದೊರಕಿದೆ. 9 ಅಭ್ಯರ್ಥಿಗಳಿಗೆ 20ಕ್ಕಿಂತ ಹೆಚ್ಚು ಅಂಕ ದೊರಕಿದೆ. 11 ಅಭ್ಯರ್ಥಿ­ಗಳಿಗೆ 30ಕ್ಕಿಂತ ಹೆಚ್ಚು ಅಂಕ ದೊರಕಿದೆ. 3 ಅಭ್ಯರ್ಥಿಗಳಿಗೆ 40ಕ್ಕಿಂತ ಹೆಚ್ಚು ಅಂಕ ದೊರಕಿದೆ. 3 ಅಭ್ಯರ್ಥಿಗಳಿಗೆ 50ಕ್ಕಿಂತ ಹೆಚ್ಚು ಅಂಕ ದೊರಕಿದೆ. ಒಬ್ಬ ಅಭ್ಯರ್ಥಿಗೆ ಮರು ಎಣಿಕೆಯ ನಂತರ  ಬರೋಬ್ಬರಿ 84 ಹೆಚ್ಚುವರಿ ಅಂಕ ದೊರ­ಕಿದೆ. 45 ಅಭ್ಯರ್ಥಿಗಳ ಅಂಕ ಮರು ಎಣಿಕೆಯ ನಂತರ ಕಡಿಮೆಯಾಗಿದೆ.

ಮುಖ್ಯ ಪರೀಕ್ಷೆಯ ನಂತರ ಮರು ಎಣಿಕೆಯ ಪ್ರಕ್ರಿಯೆ ಮುಗಿಯುವುದ­ರೊಳಗೆ ಎಲ್ಲ ವಿಭಾಗಗಳಲ್ಲಿಯೂ ಕಟಾಫ್‌ ಅಂಕಗಳನ್ನು ಸಿದ್ಧ ಮಾಡಿ ಸಂದರ್ಶನಕ್ಕೆ ಕರೆ ಕಳುಹಿಸಲಾಗಿತ್ತು ಎನ್ನುವುದನ್ನೂ ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ. ಮರು ಎಣಿಕೆ ಮಾಡುವಾ­ಗಲೂ ಸ್ಥಳೀಯವಾಗಿ ಸಿಗುವ ಮೌಲ್ಯ­ಮಾಪಕರನ್ನು ಬಳಸಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಈ ಬಾರಿ ಕೆಪಿಎಸ್‌ಸಿಯ 30 ಸಿಬ್ಬಂದಿಯೇ ಮರು ಎಣಿಕೆಯನ್ನು ಮಾಡಿ ಮುಗಿಸಿದ್ದರು.

ಮುಖ್ಯ ಪರೀಕ್ಷೆಯ ಅಂಕಗಳು ಪ್ರಕಟಗೊಂಡ ನಂತರ ಮರು ಎಣಿಕೆಗೆ 60 ದಿನಗಳ ಅವಕಾಶ ನೀಡಬೇಕು ಎಂದು ಕೆಪಿಎಸ್‌ಸಿಯ 1986ರ ನಿಯಮಾ­ವಳಿ ಹೇಳುತ್ತದೆ. ಆದರೆ ಈ ಬಾರಿ ಕೇವಲ 12 ದಿನ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೆ 7 ಅಭ್ಯರ್ಥಿಗಳ ಮರು ಎಣಿಕೆ ಬೇಡಿಕೆಯನ್ನು ಇನ್ನೂ ಪೂರೈಸಿಲ್ಲ. ಮರು ಎಣಿಕೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಹಕ್ಕನ್ನು ಉಲ್ಲಂಘಿಸಿದ್ದು ಮಾತ್ರವಲ್ಲದೆ, ಸಂದ­ರ್ಶನ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಆರಂಭಿಸಲಾಯಿತು.

ಅಂಕಗಳ ಮರು ಎಣಿಕೆಗೆ ಸಾಕಷ್ಟು ಸಮಯ ನೀಡದೇ ಇರುವ ಸಂಪ್ರದಾಯ­ವನ್ನು ಕೆಪಿಎಸ್‌ಸಿ 2006ರಿಂದಲೂ ರೂಢಿಸಿಕೊಂಡು ಬಂದಿದೆ. 2006ರಲ್ಲಿ 17 ದಿನ ನೀಡಲಾಗಿತ್ತು. 2008ರಲ್ಲಿ 18 ದಿನ ನೀಡಲಾಗಿದ್ದರೆ 2010ರಲ್ಲಿ 14 ದಿನ ಮಾತ್ರ ನೀಡಲಾಗಿತ್ತು. 2011ರಲ್ಲಿ ಅದು 12 ದಿನಕ್ಕೆ ಇಳಿಯಿತು.
(ನಾಮಕಾವಾಸ್ತೆ ಸಂದರ್ಶನ: ನಾಳಿನ ಸಂಚಿಕೆಯಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT