ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಲ್ಲಿ ನೀರಿಲ್ಲ, ಜಾನುವಾರಿಗೆ ಮೇವಿಲ್ಲ

ಬರ ಬದುಕು ಭಾರ-2: ಬಿತ್ತಿದ ಬೀಜವ ಭೂಮಿಯೇ ನುಂಗಿತು
Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಎಂದಿನಂತೆ ಈ ವರ್ಷವೂ ಮಳೆ ಕೊರತೆಯಿಂದ ಬರ . ಮಧುಗಿರಿ, ಶಿರಾ ಮತ್ತು ಪಾವಗಡ ತಾಲ್ಲೂಕಿನಲ್ಲಿ ಬರದ ಹೊಡೆತಕ್ಕೆ ಜನ ತತ್ತರಿಸಿದ್ದಾರೆ. ಒಂದೇ ಒಂದು ಹದ ಮಳೆಯಾದರೂ ಇಡಿ ಬೆಳೆಯನ್ನೇ ಕೈಗಿಡುವ ಚಿನ್ನದಂಥ ಭೂಮಿ ಈ ವರ್ಷ ತನ್ನ ಒಡಲಿಗೆ ಬಿದ್ದ ಬಿತ್ತನೆ ಬೀಜವನ್ನೇಕರಗಿಸಿದೆ.

ಎಷ್ಟೋ ಹೊಲಗಳು ಉಳುಮೆಯಾಗಿದ್ದರೂ ಬಿತ್ತನೆಯ ಭಾಗ್ಯ ಕಂಡಿಲ್ಲ. ಮುಂದಾದರೂ ಮಳೆ ಬರಬಹುದು ಎಂದು ಬಿತ್ತನೆ ಮಾಡಿದ್ದ ಹೊಲಗಳಲ್ಲಿ ಪೈರು ಒಣಗಿದೆ. ಕೆರೆಗಳು ಬಾಯ್ದೆರೆದಿವೆ. ಪಾವಗಡಕ್ಕೆ ಇದು ಸತತ 10ನೇ ಬರಗಾಲವಾದರೆ, ಮಧುಗಿರಿ- ಶಿರಾ ಪಾಲಿಗೆ ನಾಲ್ಕನೇ ಬರ.

ಬೆಂಗಳೂರಿಗೆ ದುಡಿಯಲು ಹೋಗಿರುವ ಮಕ್ಕಳು ಕಳಿಸುವ ಮನಿಯಾರ್ಡರ್ ನೆಚ್ಚಿ ದಿನದೂಡುವ ಸ್ಥಿತಿಗೆ ರೈತರು ತಲುಪಿದ್ದಾರೆ. ಯಾರಾದರೂ ಕೆಲಸಕ್ಕೆ ಕರೆದರೆ ಸಾಕು ಎನ್ನುವ ಸ್ಥಿತಿಗೆ ತಲುಪಿದ್ದಾರೆ. ಕೂಲಿ ದರವೂ ಅರ್ಧಕ್ಕರ್ಧ ಕಡಿಮೆಯಾಗಿದೆ. ಹೆಣ್ಣಾಳಿಗೆ ಒಂದು ದಿನಕ್ಕೆ 50 ರೂಪಾಯಿ ಸಿಕ್ಕರೂ ಹೆಚ್ಚು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿರಾ ತಾಲ್ಲೂಕು ಜೆ.ಹೊಸಳ್ಳಿಯ 225 ಎಕರೆ ಹೊಲದಲ್ಲಿ ಈ ವರ್ಷ ಶೇಂಗಾ ಬಿತ್ತಲಾಗಿತ್ತು. 150 ಎಕರೆಯಲ್ಲಿ ಈಗಾಗಲೇ ಶೇಂಗಾ ನೆಲಕಚ್ಚಿದೆ. 80 ಎಕರೆಯಲ್ಲಿ ರಾಗಿ ಬಿತ್ತಲಾಗಿತ್ತು, 50 ಎಕರೆಯಲ್ಲಿ ರಾಗಿ ಒಣಗಿದೆ. ಇದು ಒಂದು ಹಳ್ಳಿಯ ಕಥೆಯಲ್ಲ. ಈ ಮೂರು ತ್ಲ್ಲಾಲೂಕುಗಳ ಸ್ಥಿತಿ ಇದಕ್ಕಿಂತ ಭಿನ್ನವಲ್ಲ.

ಅಡಿಕೆ- ತೆಂಗಿನಂಥ ತೋಟಗಾರಿಕೆ ಬೆಳೆ ಆಧರಿಸಿರುವ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿಯಲ್ಲಿ ಮಳೆ ಕೊರತೆಯಿಂದ ಅಂತರ್ಜಲ ಬತ್ತಿ ಹೋಗಿದೆ. ದಿನಕ್ಕೊಂದು ಬೋರ್‌ವೆಲ್‌ನ ಬಾಯಿ ಆರುವುದು ಸಾಮಾನ್ಯವಾಗಿದೆ. ಬೇಸತ್ತ ರೈತರು ತೆಂಗಿನ ತೋಟಗಳನ್ನೇ ಕಡಿಯಲು ಮುಂದಾಗಿದ್ದಾರೆ.

`ಹೊಟ್ಟೆಗೆ ಮೇವಿಲ್ಲದೆ ಅವು ಪರದಾಡುವ ಸ್ಥಿತಿ ನೋಡಲಾಗದೆ ರೈತರು ಕಟುಕರಿಗೆ ಕೊಡುತ್ತಿದ್ದಾರೆ. ಮಳೆ ಬಂದು ಮೇವಿನ ಸ್ಥಿತಿ ಸುಧಾರಿಸದಿದ್ದರೆ ಮುಂದಿನ ವರ್ಷದ ಉಳುಮೆಗೆ ಎತ್ತುಗಳೇ ಇರುವುದಿಲ್ಲ' ಎಂದು ಗ್ರಾಮದ ಮಂಜಪ್ಪ ಆತಂಕದಿಂದ ಹೇಳುತ್ತಾರೆ. ಅಧಿಕಾರಿಗಳ ಪ್ರಕಾರ ಎಲ್ಲ 52 ಹೋಬಳಿಗಳಲ್ಲೂ ಮಳೆ ಕೊರತೆಯಾಗಿದೆ.

ಬೇವೇ ಮೇವು
ಹಳ್ಳಿಗಾಡಿನಲ್ಲಿ ಮೇವಿನ ಕೊರತೆ ತೀವ್ರವಾಗಿದೆ. ಹಲವರು ಈಗಲೇ ಹೊಂಗೆ- ಬೇವಿನ ಸೊಪ್ಪು ತರಿದು ಜಾನುವಾರುಗಳಿಗೆ ಹಾಕುತ್ತಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಕುರಿಗಳಿರುವ ಶಿರಾ ತಾಲ್ಲೂಕಿನಲ್ಲಿ, `4 ಬೇವಿನಮರದ ಸೊಪ್ಪು ಕಡಿಯಲು ಕೊಟ್ಟರೆ 1 ಮರಿಯನ್ನೇ ಕೊಡ್ತೀವಿ' ಎಂದು ಮಂದೆ ಮಾಲೀಕರು ಘೋಷಿಸಿದ್ದಾರೆ. ಮೇವು ಹುಟ್ಟದಿದ್ದರೆ ಮರಗಳೇ ಕಣ್ಮರೆಯಾಗುವ ಅಪಾಯ ಎದುರಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರು ಸಿಗುವುದು ಕಷ್ಟವಾಗಿದೆ.

ಬರಪೀಡಿತ
ಎಲ್ಲ ಹೋಬಳಿಗಳಲ್ಲಿ ಮಳೆ ಕುಂಠಿತಗೊಂಡಿದೆ. ಅನೇಕ ಕಡೆ ಬಿತ್ತನೆಯೇ ಆಗಿಲ್ಲ. ಬಿತ್ತನೆಯಾದ ಪ್ರದೇಶದಲ್ಲಿಯೂ ಬೆಳೆ ಒಣಗುತ್ತಿದೆ. ಇಡಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
-ಕೆ.ಎಸ್.ಸತ್ಯಮೂರ್ತಿ, ಜಿಲ್ಲಾಧಿಕಾರಿ

ಸಕಾಲಕ್ಕೆ ಮಳೆಯಾಗಲಿಲ್ಲ
ಮಳೆ ಕೊರತೆ ಮತ್ತು ಸಕಾಲಕ್ಕೆ ಮಳೆಯಾಗದ ಕಾರಣ ವಿವಿಧೆಡೆ ಬೆಳೆ ನಷ್ಟ ಸಂಭವಿಸಿದೆ. ಶೇ 50ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆನಷ್ಟವಾಗಿರುವ ಕುರಿತು ಈಗಾಗಲೇ ವಿವರ ಸಂಗ್ರಹಿಸಲಾಗಿದೆ. ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ.
-ಕೆ.ಜಿ.ಅನೂಪ್, ಜಂಟಿ ಕೃಷಿ ನಿರ್ದೇಶಕರು

ಮೇವಿಲ್ಲ...
ರೈತರ ಬಳಿ ಒಣಮೇವು ಸಂಗ್ರಹ ಮುಗಿದಿದೆ. ಪ್ರಸ್ತುತ ಲಭ್ಯವಿರುವ ಮೇವು 2 ವಾರಕ್ಕೆ ಸಾಕಾಗುತ್ತದೆ. ಅಮೃತೂರು ಹೋಬಳಿ, ಮಧುಗಿರಿ ತಾಲ್ಲೂಕು ಪುರವರ, ಕೊಡಿಗೆಹಳ್ಳಿ, ಐ.ಡಿ.ಹಳ್ಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆಯಲ್ಲಿ ಪರಿಸ್ಥಿತಿ ವಿಷಮಿಸಿದೆ.
-ಪಶು ಸಂಗೋಪನಾ ಇಲಾಖೆಯ ಮಾಸಿಕ ವರದಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT