ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಅನುದಾನ ಬಳಸದ ಬಿಜೆಪಿ ಸರ್ಕಾರ: ಟೀಕೆ

Last Updated 6 ಜನವರಿ 2012, 8:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ದೊರೆಯುವ ಯೋಜನೆಗಳ ಅನುಕೂಲ ಪಡೆದುಕೊಳ್ಳುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ಗುರುವಾರ ನಗರದಲ್ಲಿ ಆಯೋಜಿಸಿದ್ದ `ಯುಪಿಎ ನೇತೃತ್ವದ ಭಾರತ ನಿರ್ಮಾಣ ಮತ್ತು ಕೇಂದ್ರ ಸರ್ಕಾರದ ಹಣಕಾಸು ನೆರವು ಹಾಗೂ ಯೋಜನೆಗಳ ಅನುಷ್ಠಾನ~ ಕುರಿತ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರದ ಯುಪಿಎ ಸರ್ಕಾರ ರಾಜ್ಯ ಸರ್ಕಾರಕ್ಕೆ ವಿವಿಧ ಯೋಜನೆಗಳ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿ ನೀಡಿದೆ. ಆದರೆ, ರಾಜ್ಯ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಬಾಯಿ ಚಪಲಕ್ಕೆ ಮಾತನಾಡುತ್ತಿದೆ ಎಂದು ಟೀಕಿಸಿದರು.

ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಕಳೆದ 4 ವರ್ಷಗಳಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ್ಙ 5 ಸಾವಿರ ಕೋಟಿ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಸರ್ಕಾರ ಅದನ್ನು ಸದುಪಯೋಗ ಮಾಡಿಕೊಂಡಿಲ್ಲ ಎಂದು ದೂರಿದರು.

ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸಿದೆ ಹಾಗೂ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸದೆ ಕೇಂದ್ರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆಯಾಗುತ್ತಿದೆ ಎಂದು ಬಿಜೆಪಿ ಸರ್ಕಾರ ಬೊಬ್ಬೆ ಹೊಡೆಯುತ್ತಿದೆ ಎಂದು ಕಿಡಿಕಾರಿದರು.

2010-11ರಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾಗಿರುವ ಅನುದಾನ ್ಙ 23 ಸಾವಿರ ಕೋಟಿ. ಈ ಹಣವನ್ನು ರಾಜ್ಯ ಸರ್ಕಾರ ಸಮರ್ಪಕ ಉಪಯೋಗಿಸಿಲ್ಲ. ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿರುವ ರಾಜ್ಯ ಸರ್ಕಾರ ಕೇವಲ ರಾಜಕೀಯ ತೆವಲು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಚಿತ್ರದುರ್ಗ ಜಿಲ್ಲೆ  ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು ಬರ ಪರಿಸ್ಥಿತಿ ಎದುರಿಸುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ತುರ್ತುಕ್ರಮ ಕೈಗೊಳ್ಳದೆ ಕೇಂದ್ರದ ಮೇಲೆ ಆರೋಪ ಮಾಡುತ್ತಾ ಕಾಲ ಕಳೆಯುತ್ತಿದೆ ಎಂದರು.
ಮಾಜಿ ಶಾಸಕ ಮಹಿಮ ಪಟೇಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೇತುರಾಮ್ ಮುಖಂಡರಾದ ಜಯಸಿಂಹ, ಸಂಪತ್‌ಕುಮಾರ್, ಬಾಲಕೃಷ್ಣ, ಟಿ. ರಘುಮೂರ್ತಿ  ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT