ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಲಾಶ್‌ ಸಂಗೀತ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ತೇರಿ ದೀವಾನಿ... ತೇರಿ ದೀವಾನಿ... ತೇರೆ ನಾಮ್ ಸೆ ಜೀ ಲೂಂ... ತೇರೆ ನಾಮ್ ಸೇ ಮರ್ ಜಾವೂಂ... ತುನೆ ಕ್ಯಾ ಕರ್ ಡಾಲಾ ಮರ್ ಗಯಿ ಮೇ, ಮಿಟ್ ಗಯಿ ಮೇ... ಮನಸ್ಸು, ಹೃದಯವನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತಿದ್ದ ಸೂಫಿ ಸಂಗೀತ ಆ ಇಡೀ ಆವರಣದಲ್ಲಿ ಮಾರ್ದನಿಸುತ್ತಿತ್ತು.

ಬಹು ಭಾಷಾ ಹಿನ್ನೆಲೆ ಗಾಯಕ, ಸೂಫಿ  ಸಂಗೀತಗಾರ ಕೈಲಾಶ್ ಖೇರ್‌ಗಾಗಿ ಕಾಯುತ್ತಿದ್ದ ಮಾಧ್ಯಮದ ಮಂದಿಯೂ ಎಳ್ಳಷ್ಟೂ ಬೇಸರಿಸದೇ ಆ ಸಂಗೀತ ಆಸ್ವಾದಿಸುತ್ತ ಕುಳಿತಿದ್ದರು. ಕೊಂಚ ತಡವಾಗಿಯೇ ಬಂದ ಖೇರ್, `ನಮಸ್ಕಾರ್ ಎಲ್ರೂ ಚೆನ್ನಾಗಿದ್ದೀರಾ~ ಎನ್ನುತ್ತ ಮಾತು ಆರಂಭಿಸಿದರು.

ಫೀವರ್ ಅನ್‌ಪ್ಲಗ್ಡ್ ಸರಣಿಯಲ್ಲಿ ಕಾರ್ಯಕ್ರಮ ನೀಡಲು ತಮ್ಮ ಕೈಲಾಶ್  ಬ್ಯಾಂಡ್‌ನ ಸದಸ್ಯರೊಂದಿಗೆ ಉದ್ಯಾನನಗರಿಗೆ ಅವರು ಬಂದಿದ್ದರು. ಬೆಂಗಳೂರು ಹೇಗನಿಸುತ್ತಿದೆ ಎಂಬ ಸ್ಟ್ಯಾಂಡರ್ಡ್ ಪ್ರಶ್ನೆ ಪತ್ರಕರ್ತರಿಂದ ತೂರಿಬಂತು.

`ಇಲ್ಲಿನ ಹವೆಯಲ್ಲಿ ಏನೋ ಮ್ಯಾಜಿಕ್ ಇದೆ. ಮನೆಯಿಂದ ಬರುವಾಗ, ಫ್ಲೈಟ್‌ನಲ್ಲಿ ಜಗಳವಾಡಿಕೊಂಡು ಬಂದರೆ ಇಲ್ಲಿನ ತಂಪು ಗಾಳಿ ಸೋಕಿದ ಕೂಡಲೇ ಅದೆಲ್ಲ ಮರೆತುಹೋಗುತ್ತದೆ. ಏಕೆ ಜಗಳವಾಡಿದೆ ಎಂದು ತಲೆಕೆರೆದುಕೊಳ್ಳುವಂತಾಗುತ್ತದೆ. ಬರೀ ಬೆಂಗಳೂರೇ ಏಕೆ. ಕರ್ನಾಟಕದ ವಾತಾವರಣವೇ ಹಾಗಿದೆ. ಮೈಸೂರು ದಸರಾದಲ್ಲಿ ಒಂದೆರಡು ವರ್ಷಗಳಿಂದ ಹಾಡ್ತಾ ಇದ್ದೇನೆ. ಇಲ್ಲಿನ ಸ್ಮಾರಕಗಳು, ಗಂಧ, ಕರಕುಶಲ ಉತ್ಪನ್ನಗಳು ಎಲ್ಲವೂ ವಿಶಿಷ್ಟ~ ಎಂದರು.

ಸೂಫಿ ಸಂಗೀತ ನಿಮ್ಮನ್ನು ಎಳೆದುಕೊಂಡಿದ್ದು ಹೇಗೆ?
`ಮಧ್ಯಪ್ರಾಚ್ಯದ ಸೂಫಿ ಸಂಗೀತ ಮುಸ್ಲಿಮರಿಂದಾಗಿ ಭಾರತಕ್ಕೆ ಬಂತು. ಅದಕ್ಕಿಂತ ಮುಂಚೆಯೇ ನಮ್ಮಲ್ಲಿ ಈ ಸಂಗೀತವಿತ್ತು. ಅದು ನಿರ್ಗುಣ ಸಂಗೀತ. ನಿರ್ಗುಣ, ನಿರಾಕಾರ ಈಶ್ವರನನ್ನು ಆರಾಧಿಸುವ ಸಂಗೀತ. ನನ್ನದೆಲ್ಲವೂ ನಿನಗೆ ಅರ್ಪಿಸಿಕೊಂಡು ನಿನ್ನಲ್ಲಿ ಒಂದಾಗುತ್ತೇನೆ ಎಂಬ ಭಾವ ಹುಟ್ಟಿಸುವ ಸಂಗೀತ. ಭಕ್ತಿಯಂತೆ ಪ್ರೀತಿಯಲ್ಲಿಯೂ ಈ ಭಾವ ಕಾಣಬಹುದು. ನಿರ್ಗುಣ ಸಂಗೀತ, ಸೂಫಿ ಸಂಗೀತ ಎಲ್ಲವೂ ಒಂದೇ. ಹೆಸರು ಮಾತ್ರ ಬೇರೇಬೇರೇ. ಹಾಗಾಗಿ ಅಂತಹ ಗೀತೆಗಳನ್ನು ಬರೆಯಲಾರಂಭಿಸಿದೆ.~

ದಕ್ಷಿಣ ಭಾರತದ ಚಿತ್ರಗಳಿಗೆ ಹಾಡುವುದು ಏನೆನ್ನಿಸುತ್ತಿದೆ?
`ಮತ್ಯಾವಾಗಲೋ ಕೇಳಿದಾಗ ಇದನ್ನು ನಾನು ಹಾಡಿದ್ದೇ ಎಂದು ಆಶ್ಚರ್ಯವಾಗುತ್ತದೆ. ಹಾಡಿನ ಮಧ್ಯೆ ನನ್ನ ಬಳಿ ಒಂದೆರಡು ಶಬ್ದ ಹೇಳಿಸುತ್ತಾರೆ. ನಿಮ್ಮ ಹಾಡು ಚೆನ್ನಾಗಿ ಓಡುತ್ತಿದೆ ಎಂದು ಆಗಾಗ್ಗ ಹೇಳ್ತಾ ಇರ‌್ತಾರೆ. ಸಂಗೀತಗಾರ ಅಂದರೆ ಭಾಷೆ, ದೇಶದ ಗಡಿ ಮೀರಿದವನಲ್ಲವೇ?~.

ಭ್ರಷ್ಟಾಚಾರದ ವಿರುದ್ಧ ದೇಶದಲ್ಲಿ ಎದ್ದಿರುವ ಅಲೆ ಕುರಿತು ನಿಮ್ಮ ಅಭಿಪ್ರಾಯ?
`ಭಾರತದ ಮೇಲೆ ಸಾವಿರಾರು ವರ್ಷಗಳಿಂದ ದಾಳಿಯಾಗುತ್ತ ಇತ್ತು. ಆದರೆ, ಭಾರತ ಎಂದೂ ಆಕ್ರಮಣ ಮಾಡಿದ್ದಿಲ್ಲ. ಈ ನೆಲದ ಗುಣವೇ ಅಂಥದ್ದು. ಅಲ್ಲದೇ ಮೂರು ಶತಮಾನಗಳ ಕಾಲ ಇಲ್ಲಿನ ಜನ ದಾಸ್ಯದಲ್ಲಿ ಇದ್ದರು. ಭ್ರಷ್ಟಾಚಾರ, ವಂಚನೆ ಎಲ್ಲವನ್ನೂ ಒಪ್ಪಿಕೊಳ್ಳುವ ಮನಃಸ್ಥಿತಿ ನಮ್ಮ ಜನರದ್ದಾಗಿತ್ತು. ಈಗ ನಿಧಾನವಾಗಿ ಎಲ್ಲವೂ ಬದಲಾಗುತ್ತಿದೆ. ಜನಕ್ಕೆ ಕೋಪ ಬರುತ್ತಿದೆ. ಇದೊಂದು ತರಹ ಒಳ್ಳೆಯ ಬೆಳವಣಿಗೆ~.

ಮರುದಿನದ ಕಾರ್ಯಕ್ರಮಕ್ಕೆ ಸಜ್ಜಾಗಲು `ನಮಸ್ತೆ~ ಅನ್ನುತ್ತ ಮಾತು ಮುಗಿಸಿದರು.  ಸಂಸ್ಕೃತ ಭೂಯಿಷ್ಟ ಶುದ್ಧ ಹಿಂದಿಯ ಅವರ ಮಾತುಗಳು ಅವರ ಸಂಗೀತದಂತೇ ಕಿವಿಯಲ್ಲಿ ಮಾರ್ದನಿಸುತ್ತಿದ್ದವು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT