ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕೊಂಡಿ'ಗೆ ಕೀಲೆಣ್ಣೆ ಹಾಕಿ

ರಸ್ತೆ ದುರವಸ್ಥೆ
Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಂಗಳೂರು, ರಾಜ್ಯದ ಎರಡನೇ ದೊಡ್ಡ ವಾಣಿಜ್ಯ ನಗರ. ಬೆಂಗಳೂರಿನಿಂದ 350 ಕಿ.ಮೀ. ದೂರದಲ್ಲಿರುವ ಈ ಕರಾವಳಿ ನಗರಕ್ಕೆ ನೇರ ಸಂಪರ್ಕ ಒದಗಿಸಿರುವ ಹೆದ್ದಾರಿಯ ಅತ್ಯಂತ ರಮಣೀಯ ಪ್ರದೇಶ ಶಿರಾಡಿ ಘಾಟಿ ರಸ್ತೆ. ಪಶ್ಚಿಮ ಘಟ್ಟದ ದಟ್ಟ ಕಾಡಿನ ನಡುವೆ ಹಾದು ಹೋಗಿರುವ 47 ಕಿ.ಮೀ. ಉದ್ದದ ಈ ಘಟ್ಟ ರಸ್ತೆಯಲ್ಲಿ ಸಂಚರಿಸಲು ಇಷ್ಟಪಡದವರೇ ಇಲ್ಲ. ಆದರೆ ಪ್ರತೀ ವರ್ಷದಂತೆ ಈ ವರ್ಷವೂ ಮಳೆಗಾಲದಲ್ಲಿ ಈ ಹೆದ್ದಾರಿ ಹದಗೆಟ್ಟು ಹೋಗಿದೆ.

ಶಿರಾಡಿ ಘಟ್ಟ ಆರ್ಥಿಕ ಕ್ಷೇತ್ರಕ್ಕೆ ಅದೆಷ್ಟು ಮಹತ್ವದ್ದು ಎಂಬುದನ್ನು ಮಂಗಳೂರಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ) ಹಲವು ವರ್ಷಗಳ ಮೊದಲೇ ಗಮನಿಸಿದೆ. ಅದಕ್ಕಾಗಿಯೇ ಕೆಸಿಸಿಐ ಕಾರ್ಯದರ್ಶಿ ಜೀವನ್ ಸಲ್ಡಾನ ಅವರು ಶಿರಾಡಿ ಘಟ್ಟದ ಪ್ರತಿಯೊಂದು ತಿರುವಿನಲ್ಲೂ ನಡೆದಾಡಿದ್ದಾರೆ. ವಿವರವಾದ ವರದಿ ತಯಾರಿಸಿ, ಅದನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

`ಕರಾವಳಿ ಭಾಗದ ಆರ್ಥಿಕ ಚಟುವಟಿಕೆ ಸ್ಥಗಿತಗೊಳಿಸುವ ದುರುದ್ದೇಶ ಇದೆ ಎಂದಾದರೆ ಬೇರೇನೂ ಮಾಡಬೇಕಿಲ್ಲ, ಈ ಘಟ್ಟ ರಸ್ತೆಯಲ್ಲಿ ಒಂದಿಷ್ಟು ಅಡಚಣೆ ಮಾಡಿಬಿಟ್ಟರೆ ಸಾಕು! ಈ ಘಟ್ಟ ರಸ್ತೆಯಲ್ಲಿ ಒಂದು ಟ್ರಕ್ ಉರುಳಿಬಿದ್ದರೆ, ಒಂದು ಟ್ಯಾಂಕರ್ ಕೆಟ್ಟು ನಿಂತರೆ ಗಂಟೆಗಟ್ಟಲೇ ಸಂಚಾರ ವ್ಯತ್ಯಯ ಆಗುತ್ತದೆ. ಅದರಿಂದ ಉಂಟಾಗುವ ನಷ್ಟವನ್ನು ಅಂದಾಜಿಸುವುದೇ ಸಾಧ್ಯವಿಲ್ಲ. ಘಟ್ಟ ಪ್ರದೇಶಗಳಿಂದ ಕರಾವಳಿಗೆ ಸಂಪರ್ಕ ಕಲ್ಪಿಸಲು ಸಂಪಾಜೆ ಘಾಟಿ, ಚಾರ್ಮಾಡಿ ಘಾಟಿ, ಕುದುರೆಮುಖ ಘಾಟಿ ಮತ್ತಿತರ ರಸ್ತೆಗಳು ಇದ್ದರೂ, ರಾಜಧಾನಿಗೆ ಸಂಪರ್ಕ ಕಲ್ಪಿಸಲು ಶಿರಾಡಿ ಘಟ್ಟ ರಸ್ತೆಯಷ್ಟು ಅನುಕೂಲಕರ ಬೇರೆ ಯಾವುದೂ ಇಲ್ಲ. ಸರ್ಕಾರ ಬೇರೆ ಏನನ್ನೂ ಮಾಡದಿದ್ದರೂ, ಶಿರಾಡಿ ಘಾಟಿ ರಸ್ತೆಯನ್ನಾದರೂ ಬೇಗ ದುರಸ್ತಿಗೊಳಿಸುವ ಕೆಲಸ ಮಾಡಲಿ' ಎಂಬುದು ಅವರ ಕಳಕಳಿ.

`ಮಂಗಳೂರು ಬಂದರಿನಲ್ಲಿ ಇದೀಗ ಕಂಟೇನರ್ ಸೇವೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಯಾವುದೇ ಬಗೆಯ ಸರಕನ್ನು ಸಹ ಅಲ್ಲಿ ನಿಭಾಯಿಸಲಾಗುತ್ತಿದೆ. ಬೆಂಗಳೂರು ಮತ್ತು ರಾಜ್ಯದ ಇತರ ಪ್ರಮುಖ ನಗರಗಳಿಂದ ಇಲ್ಲಿಗೆ ಸರಕು ತರಿಸಿಕೊಂಡು ವಿದೇಶಗಳಿಗೆ ರವಾನಿಸುವುದಕ್ಕೆ ಹೇರಳ ಅವಕಾಶ ಇದೆ. ಆದರೆ ಶಿರಾಡಿ ಘಾಟಿ ರಸ್ತೆ ಚೆನ್ನಾಗಿಲ್ಲದ ಕಾರಣ ಸರಕು ಚೆನ್ನೈ, ತೂತುಕುಡಿ ಬಂದರುಗಳತ್ತ ಸಾಗುತ್ತಿದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕು ನಿರ್ವಹಣೆ ವ್ಯವಸ್ಥೆ ಆರಂಭವಾಗಿ ಹಲವು ತಿಂಗಳು ಕಳೆದಿದ್ದರೂ, ಅದರ ಸಮರ್ಪಕ ಉಪಯೋಗ ಆಗುತ್ತಿಲ್ಲ. ಅದಕ್ಕೂ ಈ ಘಟ್ಟ ರಸ್ತೆ ಸಮರ್ಪಕವಾಗಿಲ್ಲದೇ ಇರುವುದು ಒಂದು ಕಾರಣ. ಮಂಗಳೂರಿನಲ್ಲಿನ ಇಂತಹ ಸುವ್ಯವಸ್ಥಿತ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಕ್ಕೆ ಇರುವ ಪ್ರಮುಖ ಅಡ್ಡಿ ಶಿರಾಡಿ ಘಾಟಿಯ ದುಃಸ್ಥಿತಿ' ಎಂಬುದು ಅವರು ಕಂಡುಕೊಂಡ ಅನುಭವ.

`ಶಿರಾಡಿ ಘಟ್ಟ ಪ್ರದೇಶವನ್ನು ಸರ್ಕಾರ ಕಡೆಗಣಿಸುತ್ತಲೇ ಬಂದಿದೆ. ಹೆದ್ದಾರಿ ಅಗಲಗೊಳಿಸಲು ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯಬೇಕು ಎಂದು ಹೇಳುತ್ತಲೇ ಅಭಿವೃದ್ಧಿಯನ್ನು ಕಡೆಗಣಿಸುವುದು ಎಷ್ಟು ಸರಿ? ಕರಾವಳಿ ಭಾಗದವರೇ ಕೇಂದ್ರದಲ್ಲಿ ಭೂಸಾರಿಗೆ ಸಚಿವರಿದ್ದಾರೆ. ಎರಡೂ ಕಡೆ ಒಂದೇ ಪಕ್ಷದ ಸರ್ಕಾರ ಇದೆ, ಈಗಲಾದರೂ ಅಭಿವೃದ್ಧಿ ಕಾರ್ಯ ಚುರುಕುಗೊಳ್ಳಲಾರದೇ?' ಎಂಬ ಜೀವನ್ ಅವರ ಪ್ರಶ್ನೆ ಕರಾವಳಿಯ ಅನೇಕರ ಪ್ರಶ್ನೆಯೂ ಆಗಿದೆ.

ಉಡುಪಿ, ಧರ್ಮಸ್ಥಳ, ಸುಬ್ರಹ್ಮಣ್ಯದಂತಹ ಯಾತ್ರಾ ಸ್ಥಳಗಳಿಗೆ ಹೆಚ್ಚಿನ ಜನ ಪ್ರಯಾಣಿಸುವುದು ಇದೇ ರಸ್ತೆಯಲ್ಲಿ. ಅದಕ್ಕಿಂತಲೂ ಮುಖ್ಯವಾಗಿ ಮಂಗಳೂರಿನ ಬಹುಪಾಲು ವಾಣಿಜ್ಯ ಸರಕು ರಾಜಧಾನಿಯತ್ತ ಹಾಗೂ ಘಟ್ಟದ ಮೇಲಿನ ಹೆಚ್ಚಿನ ಸರಕು ಮಂಗಳೂರು ಬಂದರಿನತ್ತ ಬರುವುದು ಇದೇ ಘಟ್ಟ ರಸ್ತೆಯಲ್ಲಿ. ರೈಲು ಸಂಪರ್ಕ ಇದ್ದರೂ, ಸರಕು ಸಾಗಾಣಿಕೆಯ ಒತ್ತಡವನ್ನು ಪೂರ್ಣ ಪ್ರಮಾಣದಲ್ಲಿ ಪೂರೈಸಲು ರೈಲಿಗೆ ಸಾಧ್ಯವಿಲ್ಲ, ಪ್ರತಿದಿನ ಈ ಘಾಟಿ ರಸ್ತೆಯಲ್ಲಿ 20 ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಹೀಗಾಗಿಯೇ ಘಾಟಿ ರಸ್ತೆಯ ಯಾವುದಾದರೂ ಒಂದು ಕಡೆ ವಾಹನವೊಂದು ಕೆಟ್ಟು ನಿಂತರೆ ವಾಹನಗಳ ಮೈಲುದ್ದ ಸಾಲು ಕಾಣಿಸಿಕೊಳ್ಳುತ್ತದೆ.

`47 ಕಿ.ಮೀ. ಘಟ್ಟ ರಸ್ತೆ ದುರಸ್ತಿಗೆ 28 ಕೋಟಿ ರೂಪಾಯಿ ಒದಗಿಸಲಾಗಿದೆ' ಎಂದು ಲೋಕೋಪಯೋಗಿ ಸಚಿವರು ಇತ್ತೀಚೆಗೆ ಪ್ರಕಟಿಸಿದ್ದಾರೆ. ಇದೀಗ ಮಳೆ ಪ್ರಮಾಣ ತುಸು ಕಡಿಮೆಯಾಗಿದೆ. ರಸ್ತೆಗೆ ತೇಪೆ ಹಚ್ಚುವುದನ್ನೇ ಜನ ಎದುರು ನೋಡುತ್ತಿದ್ದಾರೆ. ಸದ್ಯ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಸುಪರ್ದಿಯಲ್ಲಿರುವ ಈ ರಸ್ತೆ ಇನ್ನೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಪೂರ್ಣ ಪ್ರಮಾಣದಲ್ಲಿ ಹಸ್ತಾಂತರಗೊಂಡಿಲ್ಲ. ಬೇಗ ಹಸ್ತಾಂತರಿಸಿ ಎಂಬ ಒತ್ತಾಯಕ್ಕೂ ಮನ್ನಣೆ ಸಿಕ್ಕಿಲ್ಲ. ಹೆದ್ದಾರಿಯನ್ನು ಅಗಲಗೊಳಿಸುವುದು ಮತ್ತು ಉದ್ದೇಶಿತ ಸುರಂಗ ಮಾರ್ಗ ಅಭಿವೃದ್ಧಿಯ ಸಾಧ್ಯತಾ ವರದಿಗಳನ್ನು ಸಿದ್ಧಪಡಿಸುವ ಕಾರ್ಯಕ್ಕಾಗಿ ಮಾತ್ರ ಹೆದ್ದಾರಿಯನ್ನು ಸದ್ಯ ಎನ್‌ಎಚ್‌ಎಐಗೆ ಹಸ್ತಾಂತರಿಸಲಾಗಿದೆ.

`ಪ್ರತೀ ವರ್ಷ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಕರಾವಳಿ ಭಾಗದಲ್ಲಿ ತಲೆ ಎತ್ತುತ್ತಿರುವ ಬೃಹತ್ ಉದ್ಯಮಗಳು, ನವಮಂಗಳೂರು ಬಂದರಿನಲ್ಲಿ ಹೆಚ್ಚಿರುವ ಸರಕು ಸಾಗಣೆ ಸೌಲಭ್ಯ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆಗೆ ಅವಕಾಶ ಸೇರಿದಂತೆ ಅನೇಕ ಕಾರಣಗಳಿಂದಾಗಿ ಶಿರಾಡಿ ಘಟ್ಟ ರಸ್ತೆಯ ಮಹತ್ವ ಮತ್ತು ಅಗತ್ಯ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಈಗಿನ ಹೆದ್ದಾರಿಗೆ ಇಷ್ಟು ಬೃಹತ್ ಸಂಖ್ಯೆಯ ವಾಹನಗಳನ್ನು ನಿಭಾಯಿಸುವ ಧಾರಣ ಶಕ್ತಿ ಇಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಅದಕ್ಕಾಗಿ ಸರಕು ಸಾಗಣೆಗೆಂದೇ ಪರ್ಯಾಯವಾಗಿ ಸುರಂಗ ಮಾರ್ಗವೊಂದನ್ನು ನಿರ್ಮಿಸುವ ಪ್ರಸ್ತಾವ ಬಂದಿದೆ. ಇದರ ಬಗ್ಗೆ ಸಾಧ್ಯತಾ ವರದಿ ಸಿದ್ಧಪಡಿಸುವುದಕ್ಕೆ ಕೇಂದ್ರ ಇತ್ತೀಚೆಗಷ್ಟೇ ಸಮ್ಮತಿ ಸೂಚಿಸಿದೆ. ಜಪಾನ್ ಇಂಟರ್‌ನ್ಯಾಷನಲ್ ಕಾರ್ಪೊರೇಷನ್ ಏಜೆನ್ಸಿಯಿಂದ (ಜೆಐಸಿಎ) ಸಾಧ್ಯತಾ ವರದಿ ಸಿದ್ಧಪಡಿಸುವುದಕ್ಕೆ ಕ್ರಮ ಜರುಗಿಸಲಾಗಿದೆ. ಇದರ ಜತೆ ಜತೆಗೇ ಈಗಿನ ಹೆದ್ದಾರಿಯನ್ನು ಅಗಲಗೊಳಿಸುವ, ಚತುಷ್ಪಥ ಹೆದ್ದಾರಿಯನ್ನಾಗಿ ಮಾಡುವ ಯೋಜನೆಯೂ ರೂಪುಗೊಳ್ಳುತ್ತಿದೆ. ಇದಕ್ಕೆ ಹಲವಾರು ಮರಗಳನ್ನು ಕಡಿಯಬೇಕಾಗಿದ್ದು, ಅರಣ್ಯ, ಪರಿಸರ ಇಲಾಖೆಯ ಅನುಮತಿ ಪಡೆಯುವುದು ಅಗತ್ಯವಾಗಿದೆ. ಎನ್‌ಎಚ್‌ಎಐ ಸದ್ಯ ಇಂತಹ ಕೆಲಸಗಳಲ್ಲಿ ನಿರತವಾಗಿದೆ' ಎಂದು ಇಲಾಖೆಯ ಹಿರಿಯ ತಾಂತ್ರಿಕ ಅಧಿಕಾರಿಯೊಬ್ಬರು ಹೇಳುತ್ತಾರೆ.

ರಾಜಕೀಯ ಸ್ಥಿತಿಗತಿ ಏನೇ ಇರಲಿ, ಶಿರಾಡಿ ಘಟ್ಟ ರಸ್ತೆಯನ್ನು ಶೀಘ್ರವಾಗಿ ದುರಸ್ತಿಗೊಳಿಸಬೇಕು, ಈ ಹೆದ್ದಾರಿಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು, ಚತುಷ್ಪಥ ಹೆದ್ದಾರಿ ಮಾಡುವುದಕ್ಕೆ ಇರುವ ಅಡೆತಡೆಗಳನ್ನು ಶೀಘ್ರ ಬಗಹರಿಸಬೇಕು.

ಪರಿಹಾರ ಪ್ರಸ್ತಾವ ಮೂಲೆಗುಂಪು
ಶಿರಾಡಿ ಘಾಟಿಯ ಬಹುತೇಕ ಎಲ್ಲ ಕಡೆ ರಸ್ತೆಯಲ್ಲಿ ಹೊಂಡ ಬಿದ್ದಿದೆ. ಈ ಪೈಕಿ ಮಾರನಹಳ್ಳಿಯಿಂದ ಗುಂಡ್ಯದವರೆಗೆ (237ನೇ ಕಿ.ಮೀ.ನಿಂದ 263ನೇ ಕಿ.ಮೀ.ವರೆಗೆ) ರಸ್ತೆ ತೀರಾ ಹದಗೆಟ್ಟಿದೆ. ಈ ಬಾರಿಯ ಅತಿಯಾದ ಮಳೆಯೇ ರಸ್ತೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾಳಾಗಲು ಕಾರಣ ಎನ್ನುತ್ತಿದ್ದರೂ, ಮಳೆ ಕಡಿಮೆ ಬಿದ್ದ ವರ್ಷವೂ ಇಂತಹ ಗೋಳು ಇಲ್ಲಿ ತಪ್ಪಿಲ್ಲ. ಕಾಂಕ್ರೀಟ್ ರಸ್ತೆ ನಿರ್ಮಾಣವಷ್ಟೇ ಸದ್ಯಕ್ಕೆ ಕಾಣಿಸುತ್ತಿರುವ ಪರಿಹಾರ. ಆದರೆ ಹೆದ್ದಾರಿಯನ್ನು ಎನ್‌ಎಚ್‌ಎಐಗೆ ಹಸ್ತಾಂತರಿಸಲಿರುವುದರಿಂದ ಮತ್ತು ಹೆದ್ದಾರಿಯನ್ನು ಅಗಲಗೊಳಿಸುವ ಕಾರ್ಯ ನಡೆಯಲಿರುವುದರಿಂದ ಕಾಂಕ್ರೀಟೀಕರಣ ಪ್ರಸ್ತಾವ ಮೂಲೆಗುಂಪಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT