ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆ ಕ್ಷಣದ ಶಾಪಿಂಗ್ ಸತ್ಯಗಳು...

Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಓಹ್! ಅರ್ಧ ಡಿಸೆಂಬರ್ ಕಳೆಯಿತು,  ಕ್ರಿಸ್ಮಸ್ ಖರೀದಿಯೇ ಆಗಿಲ್ಲ, ಹೊಸ ವರ್ಷದ ಸ್ವಾಗತಕ್ಕೂ ಅಣಿಯಾಗಬೇಕು. ಪಾರ್ಲರ್‌ಗೆ ಹೋಗಲೇಬೇಕು, ಕೇಕ್, ಕ್ಯಾಂಡಲ್, ಸ್ವೀಟ್... ಯಾವುದಕ್ಕೂ ಇನ್ನೂ ಆರ್ಡರ್ ಮಾಡಿಲ್ಲ. ಇನ್ನು ಹೊಸ ಬಟ್ಟೆ, ಆಭರಣ, ಮನೆಯ ಅಲಂಕಾರಿಕ ವಸ್ತು... ಎಷ್ಟೆಲ್ಲ ಇದೆ ಖರೀದಿ ಕೆಲಸ,
 
ಶಾಪಿಂಗ್‌ಗೆ ಎಲ್ಲಿದೆ ಸಮಯ? 
ಹೌದು, ಇದು ಅವಸರದ ಯುಗ. ಯಾವುದಕ್ಕೂ ಒಂದೇ ಉತ್ತರ `ಸಮಯವಿಲ್ಲ'. ಬೆಳಗಿನ ತಿಂಡಿ ಮಾಡಲೂ ಸಮಯದ ಅಭಾವ, ಮಧ್ಯಾಹ್ನದ ಊಟಕ್ಕೆ ವಾರದಲ್ಲಿ ಮೂರು ದಿನ ಕತ್ತರಿ ಇದ್ದಿದ್ದೇ. ಇನ್ನು ಶಾಪಿಂಗ್‌ಗೆ ಸಮಯ ಹೊಂದಿಸುವುದು ಕಷ್ಟದ ಮಾತೆ... ಆದರೆ ಅವಸರದ ಶಾಪಿಂಗ್‌ಗೆ ಬೆಂಗಳೂರು ಜನ ಏನೆಲ್ಲ ಮಾರ್ಗ ಕಂಡುಕೊಂಡಿದ್ದಾರೆ? ಹೇಗೆಲ್ಲ ತಯಾರಿ ನಡೆಸಿದ್ದಾರೆ? ಕಡಿಮೆ ಅವಧಿಯಲ್ಲಿ ಶಾಪಿಂಗ್ ಮಾಡುವ ಅವರ ಗುಟ್ಟು ಇಲ್ಲಿದೆ...

ಆನ್‌ಲೈನ್ ಕ್ಯಾಟಲಾಗ್
ಆನ್‌ಲೈನ್ ಶಾಪಿಂಗ್ ಭಾರತೀಯ ಮನಸ್ಥಿತಿಗಳಿಗೆ ಸರಿ ಹೊಂದುವುದಿಲ್ಲ. ಎಲ್ಲವನ್ನೂ ಮುಟ್ಟಿ ನೋಡುವವರೆಗೆ ನಮಗೆ ಸಮಾಧಾನವೇ ಆಗದು. ಹಾಗಾಗಿ ಆನ್‌ಲೈನ್ ಶಾಪಿಂಗ್ ಅಪರೂಪ. 
 
 ಆದರೆ ಈಗ ಕೊನೆಗಳಿಗೆಯಲ್ಲಿ  ಶಾಪಿಂಗ್ ಮಾಡಲು ಆನ್‌ಲೈನ್ ಕ್ಯಾಟಲಾಗ್ ಸಹಾಯ ಪಡೆಯುತ್ತೇನೆ. ಹೆಚ್ಚಿನ ಬ್ರಾಂಡೆಡ್ ವಸ್ತುಗಳು ಈಗ ಆನ್‌ಲೈನ್ ಕ್ಯಾಟಲಾಗ್‌ನಲ್ಲಿ ಲಭ್ಯ.  ಸಮಯವನ್ನು ಉಳಿಸಲು ಈ ಆನ್‌ಲೈನ್ ಕ್ಯಾಟಲಾಗ್ ಅನುಕೂಲ. ನೆಚ್ಚಿನ ಬಣ್ಣ, ವಿನ್ಯಾಸ ಮತ್ತು ಅಳತೆ ಮೊದಲೇ ಆಯ್ಕೆ ಮಾಡಿ ಆ ಸಂಖ್ಯೆ ಬರೆದುಕೊಂಡು ಖರೀದಿಗೆ ಹೋಗಬಹುದು. ಅಲ್ಲಿ ಹುಡುಕುವ ಸಮಯವೂ ಉಳಿತಾಯವಾಗುತ್ತದೆ. `ಟಚ್‌ಫೀಲ್' ಅನುಭವ ಕೂಡ ಸಿಗುತ್ತದೆ.
-ವಿನಯ್ ಹೆಗಡೆ, ಉದ್ಯಮಿ
 
ಮಾಲ್‌ನಲ್ಲಿ ಕಮಾಲ್ ಶಾಪಿಂಗ್
ನಾನಂತೂ ಮಾಲ್‌ಗಳಿಗೇ ಮೊದಲ ಆದ್ಯತೆ ನೀಡುತ್ತೇನೆ.  ಒಂದೇ ಸೂರಿನಡಿ ಎಲ್ಲವೂ ದೊರಕುವುದರಿಂದ ಹೆಚ್ಚಿನ ಸಮಯ ಉಳಿತಾಯವಾಗುತ್ತದೆ. ದಣಿವು ಕಾಣಿಸಿಕೊಳ್ಳುವುದಿಲ್ಲ. 
 
ಇನ್ನೊಂದು ಲಾಭ ಎಂದರೆ ಬಹುತೇಕ ಎಲ್ಲಾ ಮಾಲ್‌ಗಳಲ್ಲೂ `ಮಾರಾಟ ಪ್ರತಿನಿಧಿಗಳು' ಇದ್ದೇ ಇರುತ್ತಾರೆ. ಇವರ ಸಹಾಯ ಪಡೆಯುವುದು ದುಬಾರಿ ಎಂದು ಅಂದುಕೊಳ್ಳುತ್ತೇವೆ. ಆದರೆ ಆಯಾ ಮಳಿಗೆಯೇ ಅವರಿಗೆ ಸಂಬಳ ನೀಡುತ್ತದೆ. ಆದ್ದರಿಂದ ನಾವು ಅವರಿಗೆ ಹೆಚ್ಚುವರಿ ಹಣ ನೀಡಬೇಕಾಗಿಲ್ಲ. 
ಮನೆಯ ಅಗತ್ಯ ವಸ್ತುಗಳಿರಲಿ, ಮಕ್ಕಳ ಬಟ್ಟೆ, ಆಟಿಕೆಯೇ ಆಗಿರಲಿ, ಮಹಿಳೆಯರ ಬೇಕುಗಳು ಇರಲಿ ಯಾವುದಕ್ಕೂ ಇವರ ಸಹಾಯ ಪಡೆಯಬಹುದು. |

ನಮ್ಮ ಬಣ್ಣ ಮತ್ತು ವಿನ್ಯಾಸದ ಆಸಕ್ತಿ-ಅಭಿರುಚಿ ಹಾಗೂ ನಮ್ಮ ಬಜೆಟ್ ಎಷ್ಟು ಎನ್ನುವುದನ್ನು  ತಿಳಿಸಿ ಬಿಟ್ಟರೆ ಅವರು ನಮ್ಮಂದಿಗೆ ಒಂದು ಸುತ್ತು ಹಾಕಿ ಉತ್ಪನ್ನಗಳ ವಿವರಣೆ ನೀಡುತ್ತಾರೆ. ಅವರು ಹೇಳಿದ್ದನ್ನೇ ನಾವು ಖರೀದಿಸಬೇಕು ಎಂದೇನೂ ಇಲ್ಲ. ಆದರೆ ಅವರ ಸಲಹೆ ನಮಗೆ ಪೂರಕ ಮಾಹಿತಿಯಾಗಿ ಕೆಲಸ ಮಾಡುತ್ತದೆ. 
-ಹರ್ಷ ಕೊಕ್ಕರ್ಣಿ, ವಿಡಿಯೊ ಎಡಿಟರ್
 
ಆನ್-ಸೈಟ್ ಟೈಲರ್
ನನಗಂತೂ ಸಿದ್ಧ ಉಡುಪು ಎಂದರೆ ಆಗದು. ಅದು ಯಾವತ್ತೂ ನಮಗೆ ಪರಿಪೂರ್ಣ ಲುಕ್ ನೀಡಲು ಸಾಧ್ಯವಿಲ್ಲ. ಬಣ್ಣ ಇಷ್ಟವಾದರೆ ವಿನ್ಯಾಸ ಹಿಡಿಸೊಲ್ಲ.  ನಾನು ಬಟ್ಟೆ ಖರೀದಿಸಿ ನನ್ನ ಇಷ್ಟದಂತೆ ಸ್ಟಿಚ್ ಮಾಡಿಸುತ್ತೇನೆ. ಈಗ ಹೆಚ್ಚಿನ ಅಂಗಡಿ ಅಥವಾ ಮಾಲ್‌ಗಳಲ್ಲಿ ಆನ್ ಸೈಟ್ ಟೈಲರ್‌ಗಳೂ ಲಭ್ಯ. ನಮ್ಮ ನೆಚ್ಚಿನ ಬಟ್ಟೆ ಖರೀದಿಸಿದಲ್ಲಿ ಅದನ್ನು ಕೆಲವೇ ಗಂಟೆಗಳಲ್ಲಿ ನಮ್ಮ ಅಭಿರುಚಿಗೆ ತಕ್ಕಂತೆ ಹೊಲೆದು ಕೊಡುತ್ತಾರೆ. 
 
ನೀವು ರೆಡಿಮೇಡ್ ಬಟ್ಟೆಯನ್ನೇ ಖರೀದಿಸಿದರೂ ಅದಕ್ಕೆ ಫೈನಲ್ ಟಚ್ ಅಪ್ ಕೊಡಲು ಇವರ ಸಹಾಯ ಬೇಕೇ ಬೇಕು. ಆದರೆ ಇವರ ಸೇವೆ ಸಾಮಾನ್ಯವಾಗಿ ತುಸು ದುಬಾರಿ ಎಂಬುದು ತಿಳಿದುಕೊಂಡಿರಬೇಕು. 
-ಗೀತಾ ದೇಸಾಯಿ
 
ಕೊನೆಯ ಕ್ಷಣದ ಶಾಪಿಂಗ್
ನಾನು ಉದ್ದೇಶ ಪೂರ್ವಕವಾಗಿಯೇ ಕೊನೆಯ ಕ್ಷಣದ ಶಾಪಿಂಗ್‌ಗೆ ಆದ್ಯತೆ ನೀಡುತ್ತೇನೆ. ಏಕೆಂದರೆ ಹೆಚ್ಚಿನ ಮಾಲ್-ಮಳಿಗೆಗಳು ಕೊನೆಯ ಕ್ಷಣದಲ್ಲಿ ಆಫರ್ ನೀಡುತ್ತವೆ. ಪ್ರದರ್ಶನ ಮತ್ತು ಮಾರಾಟ ಮೇಳಗಳನ್ನೂ ಏರ್ಪಡಿಸುತ್ತವೆ. ಇಂತಹ ಮೇಳಗಳಲ್ಲಿ ಎಲ್ಲರೂ ಖರೀದಿಸಿ ಬಿಟ್ಟ ವಸ್ತುಗಳೇ ಇರುತ್ತವೆ ಎನ್ನುವುದು ತಪ್ಪು. ಇಂದಿನ ಸ್ಪರ್ಧಾತ್ಮ ಯುಗದಲ್ಲಿ ಮೇಳಗಳನ್ನು ಆಯೋಜಿಸುವುದು ಕಂಪೆನಿಗಳಿಗೆ ಅನಿವಾರ್ಯ. ಇಲ್ಲಿ ನಿಮಗೆ ಸಾಮಾನ್ಯ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿ ಆಗುತ್ತದೆ ಎನ್ನುವುದು ಮುಖ್ಯ.
-ಇ. ಸುಮಾ, ಟೈಲರ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT