ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಮಹಾ ಬೀಗಕ್ಕೆ ಕೊಕ್!

Last Updated 5 ಫೆಬ್ರುವರಿ 2011, 6:25 IST
ಅಕ್ಷರ ಗಾತ್ರ

ತುರುವೇಕೆರೆ: ಕಳೆದ 7 ವರ್ಷಗಳಿಂದ ಮಿನಿ ವಿಧಾನಸೌಧದ ಮಹಾದ್ವಾರದ ಗೇಟಿಗೆ ಹಾಕಿದ್ದ ಬೀಗವನ್ನು ಶುಕ್ರವಾರ ತೆಗೆದಿದ್ದು,ನಾಗರಿಕರು ನಿರಾಳತೆ ಅನುಭವಿಸಿದರು.2004ರ ಜುಲೈನಲ್ಲಿ ಅಂದಿನ ತಹಶೀಲ್ದಾರ್ ನಾಗಭೂಷಣ ಶಾಸ್ತ್ರಿ ಮಿನಿ ವಿಧಾನಸೌಧದ ಗೇಟಿಗೆ ಬೀಗ ಹಾಕುವ ಮೂಲಕ ಅಧಿಕಾರ ದರ್ಪ ಮೆರೆದಿದ್ದರು.

ಮಿನಿ ವಿಧಾನಸೌಧದ ಆವರಣದಲ್ಲಿ ರೈತರ ಎತ್ತಿನ ಗಾಡಿಗಳು, ಟ್ರಾಕ್ಟರ್‌ಗಳು, ಖಾಸಗಿ  ವಾಹನಗಳನ್ನು ನಿಲ್ಲಿಸಲಾಗುತ್ತಿದೆ ಎಂಬ ಕಾರಣಕ್ಕಾಗಿ ಗೇಟ್‌ಗೆ ಬೀಗ ಹಾಕುವ ಸಂಪ್ರದಾಯವನ್ನು ಆರಂಭಿಸಲಾಗಿತ್ತು.ನಾಗರಿಕರ ಪ್ರಬಲ ವಿರೋಧದ ನಡುವೆಯೂ ಈ ಬೀಗಮುದ್ರೆ ಮುಂದುವರೆದಿತ್ತು.ಆ ನಂತರ ಬಂದ ಹಲವಾರು ತಹಶೀಲ್ದಾರರೂ ಇದನ್ನೆ ಮುಂದುವರೆಸಿಕೊಂಡು ಹೋಗಿದ್ದರು. ಉನ್ನತ ಅಧಿಕಾರಿಗಳು, ಸಚಿವರು ಬಂದಾಗ ಮಾತ್ರ ಗೇಟ್ ತೆಗೆಯಲಾಗುತ್ತಿತ್ತು.ಆನಂತರ ಕೂಡಲೇ ಗೇಟ್‌ಗೆ ಬೀಗ ಹಾಕಲಾಗುತ್ತಿತ್ತು.

ಪ್ರವೇಶದ್ವಾರದ ಗೇಟ್‌ಗೆ ಬೀಗ ಹಾಕಿದ್ದ ಕಾರಣ ನೋಂದಣಿ ಮಾಡಿಸಲು, ಪಹಣಿ ಮತ್ತಿತರ ದಾಖಲೆ ಪಡೆಯಲು ಕಚೇರಿಗೆ ಬರುವ ಅಂಗವಿಕಲರು, ರೋಗಿಗಳು, ವೃದ್ದರಿಗೆ ತೀವ್ರ ಅನಾನುಕೂಲವುಂಟಾಗಿತ್ತು.ವಾಹನದಲ್ಲಿ ಬಂದ ಅವರು ಗೇಟು ತೆಗೆಯುವಂತೆ ಅಂಗಲಾಚುತ್ತಿದ್ದ ದೃಶ್ಯ ಮನಮಿಡಿಯುವಂತಿತ್ತು.

ಎಷ್ಟೋ ಸಾರಿ ಗೇಟಲ್ಲಿ ಯಾರೂ ಇಲ್ಲದ ವೇಳೆ ರೋಗಿಗಳನ್ನು ನೋಂದಣಿ ಮಾಡಿಸಲು ಕಚೇರಿಗೆ ಹೊತ್ತೊಯ್ದ ಪ್ರಸಂಗಗಳೂ ಇದ್ದವು. ಆ ನಂತರ ಜನ  ತಮ್ಮ ಅಗತ್ಯಗಳಿಗೆ ಮಿನಿ ವಿಧಾನಸೌಧದ ಕಾಪೌಂಡ್ ಹಾರಿ ಒಳಬರಲಾರಂಭಿಸಿದ್ದರು.ಕಳೆದ ವರ್ಷ ನಾಗರಿಕರ ವಿರೋಧದ ನಡುವೆ ಕಾಂಪೌಂಡ್ ಗೋಡೆ ಎತ್ತರಿಸಿ ಮಿನಿ ವಿಧಾನಸೌಧ ಅಕ್ಷರಶಃ ಬಂಧೀಖಾನೆಯಂತೆ ಮಾಡಲಾಗಿತ್ತು.

ಶುಕ್ರವಾರ ಇಡೀ ದಿನ ಯಾವುದೇ ಮೇಲಾಧಿಕಾರಿಗಳು ಬಾರದೆಯೂ ಮುಖ್ಯದ್ವಾರದ ಗೇಟ್ ತೆರೆದೇ ಇದ್ದುದ್ದನ್ನು ಕಂಡು ಜನ ಆಶ್ಚರ್ಯಪಟ್ಟರು. ಖುಷಿಯಾಗಿ  ಒಳಕ್ಕೂ ಹೊರಕ್ಕೂ ಓಡಾಡಿದ ನಾಗರಿಕರು ನೂತನ ತಹಸೀಲ್ದಾರ್ ಟಿ.ಆರ್.ಶೋಭಾ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಟಿ.ಆರ್.ಶೋಭಾ ಹಿಂದೆ ಯಾವುದೋ ಸಮಸ್ಯೆ ಉಂಟಾಗಿತ್ತು ಎಂದು ಗೇಟ್ ಮುಚ್ಚಲಾಗಿತ್ತಂತೆ. ಈಗಿನಂತೆಯೇ ಗೇಟ್ ತೆಗೆದಿಡುವ ಬಗ್ಗೆ ಪರಿಶೀಲಿಸುತ್ತೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT