ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಗ ಕುಟುಂಬಗಳಿಗೆ 2.09 ಲಕ್ಷ ವೆಚ್ಚದಲ್ಲಿ ಮನೆ

Last Updated 21 ಅಕ್ಟೋಬರ್ 2011, 9:45 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ಮೂಲನಿವಾಸಿಗಳಾದ ಕೊರಗರಿಗೆ ಅತ್ಯಂತ ಉತ್ತಮ ಮತ್ತು ಸುಸಜ್ಜಿತ ಮನೆಗಳನ್ನೇ ಕಟ್ಟಿಸಿಕೊಡಬೇಕು ಎಂಬ ಚಿಂತನೆ ಸರ್ಕಾರದ್ದು. ತಲಾ 2.09 ಲಕ್ಷ ರೂಪಾಯಿ ವೆಚ್ಚದಲ್ಲಿ ಎಲ್ಲಾ 1126 ಕೊರಗ ಕುಟುಂಬಗಳಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲು ಈಗಾಗಲೇ ಪ್ರಯತ್ನ ಆರಂಭವಾಗಿದೆ ಎಂದು ಜಿಲ್ಲಾ ಪಂಚಾಯಿತಿಗೆ ತಿಳಿಸಲಾಗಿದೆ.

ಗುರುವಾರ ಸಾಮಾನ್ಯ ಸಭೆಯಲ್ಲಿ ಪಾಲನಾ ವರದಿ ಮೇಲೆ ಚರ್ಚೆ ನಡೆಯುತ್ತಿದ್ದಾಗ ಕೆ.ಕೊರಗಪ್ಪ ನಾಯ್ಕ ಮತ್ತು ಇತರರು ಈ ವಿಚಾರ ಪ್ರಸ್ತಾಪಿಸಿದಾಗ ಸಿಇಒ ಕೆ.ಎನ್.ವಿಜಯಪ್ರಕಾಶ್, ಸರ್ಕಾರ ಕೈಗೊಳ್ಳಲಿರುವ ಹಲವು ಕ್ರಮಗಳನ್ನು ವಿವರಿಸಿದರು.

`ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೂಚಿಸಿದಂತೆ ಕುದುರೆಮುಖ ಕಬ್ಬಿಣ ಅದಿರು ಕಂಪೆನಿ, ಎಂಎಸ್‌ಇಜೆಡ್ ಮತ್ತು ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಧನಸಹಾಯ ನೀಡಲು ಕೋರಿ ಪತ್ರ ಬರೆಯಲಾಗಿದೆ.

ಜತೆಗೆ ತಲಾ ರೂ. 1.50 ಲಕ್ಷದಂತೆ ಸಹಾಯಧನ ಮಂಜೂರು ಮಾಡಲು ಕೋರಿ ಪ್ರಸ್ತಾವನೆಯನ್ನು ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಸಲ್ಲಿಸಲಾಗಿದೆ~ ಎಂದು ಸಿಇಒ ತಿಳಿಸಿದರು.

ಈ ಯೋಜನೆ ಕಾರ್ಯರೂಪಕ್ಕೆ ಬಂದಾಗ ದೇಶದಲ್ಲೇ ಪರಿಶಿಷ್ಟರಿಗೆ ಒದಗಿಸಿದ ಅತ್ಯಂತ ಸುಸಜ್ಜಿತ ವಸತಿ ವ್ಯವಸ್ಥೆ ಇದಾಗಲಿದೆ ಎಂದರು.

ಇಲಾಖೆ ಅಧಿಕಾರಿ ಅಲಗಪ್ಪ ಅವರು ಈ ಬಗ್ಗೆ ಮಾಹಿತಿ ನೀಡಿ, ಕೊರಗರ ಕಲ್ಯಾಣಕ್ಕಾಗಿ ಕೇಂದ್ರದಿಂದ 3.80 ಕೋಟಿ ರೂಪಾಯಿ ಮತ್ತು ರಾಜ್ಯದಿಂದ 1.14 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದರು.

ಗ್ರಾಮೀಣ ಯೋಜನಾ ಘಟಕ:  ಗ್ರಾಮೀಣ ಪ್ರದೇಶಗಳಲ್ಲಿ ಅಡ್ಡಾದಿಡ್ಡಿ ಕಟ್ಟಡ ನಿರ್ಮಿಸುವ ಪರಿಪಾಠ ಈಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಗ್ರಾಮೀಣ ಯೋಜನಾ ಘಟಕ ಆರಂಭಿಸಲು ಚಿಂತನೆ ನಡೆಸಲಾಗುವುದು. ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗುವುದು. ಇದು ಕಾರ್ಯರೂಪಕ್ಕೆ ಬಂದರೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಇಂತಹ ಘಟಕ ಆರಂಭಿಸಿದ ಜಿಲ್ಲೆ ಎಂಬ ಹೆಗ್ಗಳಿಕೆಗೆ ದ.ಕ. ಪಾತ್ರವಾಗಲಿದೆ ಎಂದು ಸಿಇಒ ತಿಳಿಸಿದರು.

ಕೋಟೆಕಾರು, ಮುಡಿಪು ಕ್ಷೇತ್ರದ ವ್ಯಾಪ್ತಿಯಲ್ಲಿ ಬೃಹತ್ ಉದ್ಯಮಗಳಿಂದಾಗಿ ಒಳಚರಂಡಿ ಸಮಸ್ಯೆಗಳು ತಲೆದೋರುತ್ತಿರುವ ವಿಚಾರವನ್ನು ಸತೀಶ್ ಕುಂಪಲ ಅವರು ಪ್ರಸ್ತಾಪಿಸಿದಾಗ ಸಿಇಒ ಅವರು ಈ ವಿಚಾರ ತಿಳಿಸಿದರು.

ಅರಣ್ಯ ವಾಸಿಗಳಿಗೆ ನೆಮ್ಮದಿ:  ಪುಷ್ಪಗಿರಿ ವನ್ಯಧಾಮಕ್ಕೆ ಜಿಲ್ಲೆಯ ಕೆಲವು ಭಾಗಗಳನ್ನು ಸೇರಿಸುವ ಪ್ರಸ್ತಾವ ಇಲ್ಲ ಎಂದು ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರು ಸ್ಪಷ್ಟಪಡಿಸಿರುವುದು ಸಹ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

ಬಾಲಕೃಷ್ಣ ಬಾಣಜಾಲು, ದೇವರಾಜ್, ಕೇಶವ ಗೌಡ ಇತರರು ಈ ವಿಷಯದ ಬಗ್ಗೆ ಮಾತನಾಡಿ, ಭಾಗಶಃ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿರುವವರಿಗೆ ವಾಸಸ್ಥಳ ಸಕ್ರಮಗೊಳಿಸಬೇಕು, ಇಲ್ಲವೇ ಅವರಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

`ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರನ್ನು ಒಕ್ಕಲೆಬ್ಬಿಸುವ ಸ್ಪಷ್ಟ ಸೂಚನೆ ಇದೆ~ ಎಂಬ ಅರಣ್ಯ ಅಧಿಕಾರಿ ಹೇಳಿಕೆ ಆಲಿಸಿದ ಸಿಇಒ, ತಾಲ್ಲೂಕು ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ತಕ್ಷಣ ಇಂತಹ ಕುಟುಂಬಗಳ ಬಗ್ಗೆ ಪರಿಶೀಲನೆ ನಡೆಸಿ ಅವರಿಗೆ ಪರ್ಯಾಯ ವಸತಿ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಕೊನೆಯಲ್ಲಿ ಪುಷ್ಪಗಿರಿ ಯೋಜನೆ ವಿರುದ್ಧ ಜಿ.ಪಂ. ನಿರ್ಣಯ ಕೈಗೊಂಡಿತು. ಬೆಳಿಗ್ಗೆ 11.15ಕ್ಕೆ ಆರಂಭವಾದ ಸಭೆ ಸಂಜೆ 7.15ರವರೆಗೂ ಮುಂದುವರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT