ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋತಿಗಳು ಬಂಧಿ: ಜನರಿಗೆ ನೆಮ್ಮದಿ

Last Updated 9 ಏಪ್ರಿಲ್ 2011, 6:40 IST
ಅಕ್ಷರ ಗಾತ್ರ

ಗಂಗಾವತಿ:  ನಗರಸಭೆ ವ್ಯಾಪ್ತಿಯ ಹಿರೇಜಂತಕಲ್ ಪೂರ್ಣ ಭಾಗ ಅಥವಾ 28,29,30 ಮತ್ತು 31ನೇ ವಾರ್ಡ್ ಪ್ರದೇಶದಲ್ಲಿನ ಜನ ವಾರಕ್ಕೆ ಒಂದಿಬ್ಬರಾದರೂ ರಕ್ತಸಿಕ್ತ ಗಾಯಗಳಿಂದ ಆಸ್ಪತ್ರೆಗೆ ಓಡುತ್ತಿದ್ದರು.

‘ಹನುಮ’ ಸಕ್ಸಸ್: ದಾಳಿ ಮಾಡುತ್ತಿದ್ದವಕ್ಕೆ ಸ್ವಲ್ಪನೂ ಕರುಣೆ ಎಂಬುವುದೇ ಇರಲಿಲ್ಲ. ಮಹಿಳೆ-ಮಕ್ಕಳು, ವೃದ್ಧರು ಎಂಬ ಭೇದಭಾವವಿಲ್ಲದೆ ಮೇಲೆರಗಿ ಚೂಪಾದ ಹಲ್ಲುಗಳಿಂದ ಕಚ್ಚಿ ಗಾಯಗೊಳಿಸುತ್ತಿದ್ದವು. ಆದರೆ ಶುಕ್ರವಾರ ಅರಣ್ಯ ಇಲಾಖೆ ನಡೆಸಿದ ಆಪರೇಷನ್ ಹನುಮ ಸಕ್ಸಸ್.

ಪರಿಣಾಮ ಕಳೆದ ಮೂರು ತಿಂಗಳಿಂದ ವಾರ್ಡ್‌ನ ಜನ ಪುಂಡ ಮಂಗಗಳ ದಾಳಿಯಿಂದ ಬೇಸತ್ತು ಹೋಗಿದ್ದರು. ಶುಕ್ರವಾರ ಅರಣ್ಯ ಇಲಾಖೆ ಬಲೆ ಬೀಸಿ ಮಂಗಣ್ಣಗಳನ್ನು ಹಿಡಿಯುತ್ತಿದ್ದಂತೆಯೆ ದಾಳಿಗೊಳಗಾದವರು ಮಕ್ಕಳು ಕುಣಿದು ಕುಪ್ಪಳಿ, ಖುಷಿಯಿಂದ ಕೇಕೆ ಹಾಕಿದರು.ಮಂಗಗಳ ಹಾವಳಿ: ‘ಮಾಳಿಗೆಯಿಂದ ಮನೆಗೆ ಬರುತ್ತಿದ್ದ ಮಂಗಗಳು ನೇರವಾಗಿ ಅಡುಗೆ ಮನೆಗೆ ನುಗ್ಗುತ್ತಿದ್ದವು. ಸಿಕ್ಕದ್ದನ್ನು ಕದ್ದೊಯ್ಯುತ್ತಿದ್ದವು. ಏನು ಸಿಗದಿದ್ದರೆ ಮನೆಯಲ್ಲಿನ ಟಿ.ವಿ. ಫ್ರಿಜ್‌ಗಳಿಗೆ ಹೊಡೆಯುವುದು, ಸೋಫಾ, ಕುರ್ಚಿಗಳನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದವು.

ಮನೆ ಹೊರಗೆ ಒಣ ಹಾಕಿದ್ದ ಬಟ್ಟೆಗಳನ್ನು ಕಿತ್ತುಕೊಂಡು ಓಡುವುದು, ಮರಗಿಡಗಳನ್ನು ನಾಶ ಮಾಡುವುದು, ತೆಂಗಿನ ಮರದ ಮೇಲೆ ಹತ್ತಿ ನಿತ್ಯ ಕಾಯಿಗಳನ್ನು ಹಾಳು ಮಾಡುತ್ತಿದ್ದವು’ ಎಂದು ಹನುಮಮ್ಮ, ಚೌಡಮ್ಮ ಮಂಗಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ತಲೆ ತಗ್ಗಿಸಿದ್ದವು: ಆಹಾರದ ಆಸೆಗಾಗಿ ಅರಣ್ಯ ಇಲಾಖೆ ಬೀಸಿದ ಬಲೆಗೆ ಬಿದ್ದ ಮಂಗಗಳು, ವಂಚನೆಗೊಳಗಾದ ಭಾವದಲ್ಲಿ  ಬೋನಿನಲ್ಲಿ ತಲೆಕೆಳಗೆ ಹಾಕಿ ಕುಳಿತುಕೊಂಡಿದ್ದವು. ಹೊರಗಿನಿಂದ ಮಕ್ಕಳು ಕೂಗಾಡುತ್ತಿದ್ದರೂ ತಮಗೆ ಸಂಬಂಧವಿಲ್ಲದಂತಿದ್ದವು.

ಮಹಿಳೆಯೊಬ್ಬಳು ಸ್ಥಳಕ್ಕೆ ಬಂದು ‘ಅಗೋ.. ಅಲ್ಲಿದೆ ನೋಡಿ. ಅದೇ.. ಅದೇ.. ಕೋತಿ ನನಗೆ ಕಚ್ಚಿ ಗಾಯ ಮಾಡಿದ್ದು’. ಎಂದು ಹೇಳಿದರು. ಆಕೆ ಮಾತು ಆಲಿಸಿದ ಹೆಣ್ಣು ಕೋತಿಯೊಂದು ಜನರಿಗೆ ಮುಖ ಕಾಣಿಸದಂತೆ ತಿರುಗಿ ಕುಳಿತುಕೊಂಡಿತು.ಮನುಷ್ಯನ ಮಾತು ಅರ್ಥವಾಗುವ ರೀತಿಯಲ್ಲಿ ಬೋನಿಗೆ ಬಿದ್ದ ಪ್ರತಿಯೊಂದು ಕೋತಿಯೂ ಸ್ಪಂದಿಸಿ ಪ್ರತಿಕ್ರಿಯೆ ನೀಡುತ್ತಿದ್ದವು. ಒಂದು ಗಡುವಾ ಕೋತಿಯಾದರೆ ಕೋಪದಿಂದ ಬೋನಿನಿಂದಲೇ ಕೈ ಹೊರಹಾಕಿ ಬಾಲಕನೊಬ್ಬನ ತಲೆ ಕೂದಲು ಹಿಡಿದು ಕಚ್ಚಲು ಯತ್ನಿಸುತಿತ್ತು.

ಎಡೆಹಳ್ಳಿ ಕಾಡಿಗೆ: ಈ ಬಗ್ಗೆ ಅರಣ್ಯ ಅಧಿಕಾರಿ ಸಂಗಪ್ಪ ಮಾತನಾಡಿ ಕೋತಿಗಳನ್ನು ಎಡೆಹಳ್ಳಿಯ ಕಾಡಿಗೆ  ಬಿಟ್ಟು ಬರುವುದಾಗಿ ಹೇಳಿದರು. ಕೋತಿಗಳಹಾವಳಿ ಬಗ್ಗೆ ನಗರಸಭಾ ಸದಸ್ಯ ರಾಘವೇಂದ್ರ ಮಾನಳ್ಳಿ ಹತ್ತಾರು ಬಾರಿ ಅರಣ್ಯ ಇಲಾಖೆಯ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT