ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ಆಧಾರಿತ ತರಬೇತಿಗೆ ನೆರವು: ಕಾರಜೋಳ

Last Updated 11 ಫೆಬ್ರುವರಿ 2011, 8:50 IST
ಅಕ್ಷರ ಗಾತ್ರ

ಜಮಖಂಡಿ: ಖಾದಿ ಉದ್ಯಮಕ್ಕೆ ರಾಜ್ಯ ಸರ್ಕಾರ ಅಗತ್ಯ ನೆರವು ಮತ್ತು ಪ್ರೋತ್ಸಾಹವನ್ನು ನೀಡುತ್ತಿದ್ದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಪ್ರಸಕ್ತ ವರ್ಷದಲ್ಲಿ ರೂ.20 ಕೋಟಿ ಅನುದಾನ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜವಳಿ ಖಾತೆ ಸಚಿವ ಗೋವಿಂದ ಕಾರಜೋಳ ಹೇಳಿದರು.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಶ್ರಯದಲ್ಲಿ ಇಲ್ಲಿನ ಬಸವ ಭವನದಲ್ಲಿ ಏರ್ಪಡಿಸಿರುವ ಖಾದಿ ಗ್ರಾಮೋದ್ಯೋಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ‘ಖಾದಿ ಉತ್ಸವ-2011’ವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಖಾದಿ ಮತ್ತು ಗ್ರಾಮೋದ್ಯೋಗ ಕುರಿತ ಕೌಶಲ ಆಧಾರಿತ ತರಬೇತಿ ಸಂಸ್ಥೆಗಳನ್ನು ತೆರೆಯಲು ಮುಂದೆ ಬರುವ ಸಂಘ-ಸಂಸ್ಥೆಗಳಿಗೆ ಅಗತ್ಯ ನೆರವು, ಪ್ರೋತ್ಸಾಹ ಮತ್ತು ಸೂಕ್ತ ಮಾರ್ಗದರ್ಶನ ನೀಡಲು ರಾಜ್ಯ ಸರಕಾರ ಬದ್ಧವಾಗಿದೆ ಎಂದರು.

ಶಾಸಕ ಶ್ರೀಕಾಂತ ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಖಾದಿ ಮತ್ತು ಗ್ರಾಮೋದ್ಯೋಗ ಕಾರ್ಮಿಕರ ಸಂಬಳ ಹೆಚ್ಚಿಸಲು ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು. ಖಾದಿ ಮಂಡಳಿಗೆ ಸರಕಾರ ವಿಶೇಷ ಸೌಲಭ್ಯಗಳನ್ನು ಘೋಷಿಸುವ ನಿರೀಕ್ಷೆ ಇದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎಂ.ಹಟ್ಟಿ ಮಾತನಾಡಿ, ಸರಕಾರದ ಯಾವುದಾದರೊಂದು ಇಲಾಖೆಯ ಸಿಬ್ಬಂದಿಗೆ ಖಾದಿ ಬಟ್ಟೆಯ ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಿದರೆ ಖಾದಿ ಉದ್ಯಮವನ್ನು ಉಳಿಸಿ ಬೆಳೆಸಲು ಸಹಾಯವಾಗುತ್ತದೆ ಎಂದು ಸರಕಾರಕ್ಕೆ ಸಲಹೆ ನೀಡಿದರು.

ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದ ವಿಜಾಪುರ ಘಟಕದ ಅಧ್ಯಕ್ಷ ಬಿ.ಬಿ.ಪಾಟೀಲ(ಶೇಗುಣಸಿ) ಮಾತನಾಡಿ, ಖಾದಿ ಭಂಡಾರಗಳ ನವೀಕರಣ, ಖಚ್ಚಾ ವಸ್ತುಗಳ ಖರೀದಿ ಹಾಗೂ ಕಾರ್ಮಿಕರ ಸಂಬಳ ಹೆಚ್ಚಿಸಲು ಸುಮಾರು 4-5 ಕೋಟಿ ರೂಪಾಯಿ ಅನುದಾನ ನೀಡಲು ಸರಕಾರವನ್ನು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕವಿತಾ ದಡ್ಡೇನವರ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗಳ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ನಾಗರಾಜು ಮಾತನಾಡಿದರು.

ನಗರಸಭೆ ಅಧ್ಯಕ್ಷ ಶ್ರೀಶೈಲ ರಾಂಬಳ್ಳಿ, ಉಪಾಧ್ಯಕ್ಷೆ ಶೀಲಾಬಾಯಿ ಪಿಸಾಳ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ.ಎಲ್.ಹಾಲಳ್ಳಿ, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಎಸ್.ಎಂ.ದೇಸಾಯಿ ಹಾಜರಿದ್ದರು.ನೇಹಾ ಮೈಗೂರ ಪ್ರಾರ್ಥಿಸಿದರು. ಉಪನ್ಯಾಸಕ ವಿನಾಯಕ ಕುಲಕರ್ಣಿ ಸ್ವಾಗತಿಸಿ ನಿರೂಪಿಸಿದರು. ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಸಿ.ಪಿ.ನಾರಾಯಣಕರ ವಂದಿಸಿದರು.

ಪ್ರದರ್ಶನ ಮತ್ತು ಮಾರಾಟ: ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಸ್ಥಳೀಯ ಬಸವ ಭವನದಲ್ಲಿ ಫೆ.18 ರ ವರೆಗೆ ಜರುಗಲಿದ್ದು, ರಿಯಾಯಿತಿ ದರಗಳಲ್ಲಿ ಖಾದಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು. ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆ ವರೆಗೆ ಪ್ರದರ್ಶನ ತೆರೆದಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT