ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಇಂಗ್ಲೆಂಡ್‌ಗೆ ನಿರೀಕ್ಷಿತ ಜಯ

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ಲಂಡನ್ (ರಾಯಿಟರ್ಸ್): ಆರಂಭಿಕ ಆಘಾತವನ್ನು ಮೆಟ್ಟಿನಿಂತ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೆಲುವು ಪಡೆಯಿತು.

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 191 ರನ್‌ಗಳ ಗುರಿ ಪಡೆದಿದ್ದ ಇಂಗ್ಲೆಂಡ್ ಐದನೇ ದಿನದಾಟದ ಭೋಜನ ವಿರಾಮದ ಬಳಿಕ 46.1 ಓವರ್‌ಗಳಲ್ಲಿ 5 ವಿಕೆಟ್‌ಗೆ 193 ರನ್ ಗಳಿಸಿ ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ರಲ್ಲಿ ಮೇಲುಗೈ ಪಡೆಯಿತು.

ಅಲಸ್ಟರ್ ಕುಕ್ (79) ಮತ್ತು ಇಯಾನ್ ಬೆಲ್ (ಅಜೇಯ 63) ಆಕರ್ಷಕ ಅರ್ಧಶತಕ ಗಳಿಸಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆ್ಯಂಡ್ರ್ಯೂ ಸ್ಟ್ರಾಸ್ ಬಳಗ ಎರಡು ವಿಕೆಟ್ ನಷ್ಟಕ್ಕೆ 10 ರನ್‌ಗಳಿಂದ ಸೋಮವಾರ ಆಟ ಆರಂಭಿಸಿತ್ತು. 57 ರನ್ ಗಳಿಸುವಷ್ಟರಲ್ಲಿ ತಂಡದ ನಾಲ್ಕು ವಿಕೆಟ್‌ಗಳ ಬಿದ್ದವು.

ವಿಶ್ವದ ಅಗ್ರ ರ‌್ಯಾಂಕಿಂಗ್‌ನ ತಂಡದ ವಿರುದ್ಧ ವಿಂಡೀಸ್ ಅನಿರೀಕ್ಷಿತ ಗೆಲುವು ಪಡೆಯುವ ಸೂಚನೆ ನೀಡಿತ್ತು. ಆದರೆ ಕುಕ್ ಮತ್ತು ಬೆಲ್ ಐದನೇ ವಿಕೆಟ್‌ಗೆ 132 ರನ್ ಗಳಿಸಿ ಪ್ರವಾಸಿ ತಂಡದ ಗೆಲುವಿನ ಕನಸನ್ನು ನುಚ್ಚುನೂರು ಮಾಡಿದರು.

ಕುಕ್ ಹಾಗೂ ಬೆಲ್ ಅತಿಯಾದ ಒತ್ತಡದಲ್ಲೂ ತಾಳ್ಮೆಯ ಆಟವಾಡಿದರು. ಸ್ಟ್ರೈಕ್ ರೊಟೇಟ್ ಮಾಡುತ್ತಾ ಎದುರಾಳಿ ಬೌಲರ್‌ಗಳ ಮೇಲೆ ಪ್ರಭುತ್ವ ಸಾಧಿಸಿದರು. ಕುಕ್ ಇನಿಂಗ್ಸ್ ನಲ್ಲಿ 10 ಬೌಂಡರಿಗಳು ಒಳಗೊಂಡಿದ್ದವು.

ಪಂದ್ಯದಲ್ಲಿ ಒಟ್ಟು 11 ವಿಕೆಟ್ ಪಡೆದ ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್ ಬ್ರಾಡ್ `ಪಂದ್ಯಶ್ರೇಷ್ಠ~ ಎನಿಸಿಕೊಂಡರು. ಸರಣಿಯ ಎರಡನೇ ಪಂದ್ಯ ಟ್ರೆಂಟ್‌ಬ್ರಿಜ್‌ನಲ್ಲಿ ಶುಕ್ರವಾರ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್:
ವೆಸ್ಟ್ ಇಂಡೀಸ್: ಮೊದಲ   ಇನಿಂಗ್ಸ್ 89.5 ಓವರ್‌ಗಳಲ್ಲಿ 243 ಮತ್ತು ಎರಡನೇ ಇನಿಂಗ್ಸ್ 130.5 ಓವರ್‌ಗಳಲ್ಲಿ 345 ಇಂಗ್ಲೆಂಡ್: ಮೊದಲ ಇನಿಂಗ್ಸ್ 113.3 ಓವರ್‌ಗಳಲ್ಲಿ 398 ಹಾಗೂ ಎರಡನೇ ಇನಿಂಗ್ಸ್ 46.1 ಓವರ್‌ಗಳಲ್ಲಿ 5 ವಿಕೆಟ್‌ಗೆ 193 (ಅಲಸ್ಟರ್ ಕುಕ್ 79, ಕೆವಿನ್ ಪೀಟರ್ಸನ್ 13, ಇಯಾನ್ ಬೆಲ್ ಔಟಾಗದೆ 63, ಕೆಮರ್ ರೋಚ್ 60ಕ್ಕೆ 3).
ಫಲಿತಾಂಶ: ಇಂಗ್ಲೆಂಡ್‌ಗೆ 5 ವಿಕೆಟ್ ಗೆಲುವು;
ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ
ಪಂದ್ಯಶ್ರೇಷ್ಠ: ಸ್ಟುವರ್ಟ್ ಬ್ರಾಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT