ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಗೆಲುವಿನತ್ತ ರಾಯಲ್ಸ್ ಚಿತ್ತ

ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಇಂದು ಪೈಪೋಟಿ
Last Updated 13 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ಹಿಂದಿನ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಎದುರು ಸೋಲು ಕಂಡಿದ್ದ ರಾಜಸ್ತಾನ ರಾಯಲ್ಸ್ ಭಾನುವಾರ ನಡೆಯಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿ ಗೆಲುವಿನ ಹಾದಿಗೆ ಮರಳುವ ವಿಶ್ವಾಸ ಹೊಂದಿದೆ.

ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಈ ಪಂದ್ಯ  ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ಸ್ ಹಾಗೂ ಆ್ಯಡಮ್ ಗಿಲ್‌ಕ್ರಿಸ್ಟ್ ಸಾರಥ್ಯದ ಕಿಂಗ್ಸ್ ಇಲೆವೆನ್ ತಂಡಗಳೆರಡಕ್ಕೂ ಗೆಲುವು ಸಾಧಿಸುವ ಹಂಬಲ. ಏಕೆಂದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ಕೂಡಾ ತನ್ನ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲು ಅನುಭವಿಸಿತ್ತು. ಮೂರು ಪಂದ್ಯಗಳನ್ನಾಡಿರುವ ರಾಯಲ್ಸ್ ಎರಡು ಪಂದ್ಯಗಳಲ್ಲಿ ಗೆಲುವು ಪಡೆದು ನಾಲ್ಕು ಅಂಕಗಳನ್ನು ಹೊಂದಿದೆ.

ಈ ಋತುವಿನಲ್ಲಿ ಗೆಲುವಿನ ಆರಂಭ ಪಡೆದಿರುವ ರಾಯಲ್ಸ್ ಉತ್ತಮ ಪ್ರದರ್ಶನವನ್ನೇ ನೀಡುತ್ತಿದೆ ಆದರೆ, ವಾರಿಯರ್ಸ್ ಎದುರು ಏಳು ವಿಕೆಟ್‌ಗಳ ಸೋಲು ಕಂಡಿತ್ತು. ಹಿಂದಿನ ಮೂರೂ ಪಂದ್ಯಗಳಲ್ಲಿಯೂ ದ್ರಾವಿಡ್ ಜವಾಬ್ದಾರಿಯುತ ಪ್ರದರ್ಶನ ನೀಡಿದ್ದಾರೆ. ನಾಯಕ ದ್ರಾವಿಡ್ ಎರಡು ಅರ್ಧಶತಕ ಸೇರಿದಂತೆ ಒಟ್ಟು 136 ರನ್ ಗಳಿಸಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್ ಕುಶಾಲ್ ಪೆರೆರಾ ಹಿಂದಿನ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದರು. ಯುವ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ, ಬ್ರಾಡ್ ಹಾಡ್ಜ್ ಉತ್ತಮ ಫಾರ್ಮ್‌ನಲ್ಲಿರುವ ಕಾರಣ ರಾಯಲ್ಸ್ ತಂಡದ ವಿಶ್ವಾಸ ಹೆಚ್ಚಾಗಿದೆ. ರಹಾನೆ ಕೂಡ ಮೊದಲ ಮೂರು ಪಂದ್ಯಗಳಲ್ಲಿ ಕ್ರಮವಾಗಿ 30, 36 ಹಾಗೂ 38 ರನ್ ಗಳಿಸಿದ್ದರು. ವೇಗಿ ಹರ್ಮಿತ್ ಸಿಂಗ್, ಶ್ರೀಶಾಂತ್, ಜೇಮ್ಸ ಫುಲ್ಕನರ್ ರಾಯಲ್ಸ್ ತಂಡದ ಬಲಿಷ್ಠ ಶಕ್ತಿ ಎನಿಸಿದ್ದಾರೆ. 

ವೈಫಲ್ಯ: ಬಾಲಿವುಡ್ ನಟಿ ಪ್ರೀತಿ ಜಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವೆನ್ ಈ ಆವೃತ್ತಿಯಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಪಡೆದಿದೆ. ಸೂಪರ್ ಕಿಂಗ್ಸ್ ಎದುರು ಹಿಂದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮನ್‌ದೀಪ್ ಸಿಂಗ್ ಹಾಗೂ ನಾಯಕ ಗಿಲ್‌ಕ್ರಿಸ್ಟ್ ವೈಫಲ್ಯ ಅನುಭವಿಸಿದ್ದರು.

ಡೇವಿಡ್ ಹಸ್ಸಿ  ಹಾಗೂ ಗುರುಕೀರತ್ ಸಿಂಗ್ ಅವರನ್ನು ಹೊರತು ಪಡಿಸಿದರೆ ಉಳಿದ ಬ್ಯಾಟ್ಸ್‌ಮನ್‌ಗಳು ಪರಿಣಾಮಕಾರಿ ಎನಿಸಿರಲಿಲ್ಲ. ಕಿಂಗ್ಸ್ ಇಲೆವೆನ್ ತಂಡ ನೀಡಿದ್ದ 139 ರನ್‌ಗಳ ಗುರಿಯನ್ನು ಸೂಪರ್ ಕಿಂಗ್ಸ್ ಒಂದೂ ವಿಕೆಟ್ ಕಳೆದುಕೊಳ್ಳದೇ ಸುಲಭ ಗೆಲುವು ಸಾಧಿಸಿತ್ತು. ಆದ್ದರಿಂದ ಎದುರಾಳಿ        ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವ ಸವಾಲು ಕಿಂಗ್ಸ್ ಇಲೆವೆನ್ ತಂಡದ ಬೌಲರ್‌ಗಳ ಮುಂದಿದೆ.  ವೇಗಿಗಳಾದ ಪ್ರವೀಣ್ ಕುಮಾರ್, ರ‌್ಯಾನ್ ಹ್ಯಾರಿಸ್, ಅಜರ್ ಮಹಮ್ಮೂದ್ ಮತ್ತು ಪರ್ವಿಂದರ್ ಅವಾನಾ ಅವರು ಈ ಸವಾಲನ್ನು ಎದುರಿಸುವರೇ ಎಂಬುದನ್ನು ನೋಡಬೇಕು.

ಮುಜುಗರ ಉಂಟು ಮಾಡಿದ ಶ್ರೀಶಾಂತ್ ನಡೆ: 2008ರ ಐಪಿಎಲ್ ವೇಳೆ ನಡೆದ ಘಟನೆಯನ್ನು ಮತ್ತೆ ಕೆದಕಿ ಎಸ್. ಶ್ರೀಶಾಂತ್ ರಾಯಲ್ಸ್ ತಂಡಕ್ಕೆ ಮುಜುಗರ ಉಂಟು ಮಾಡಿದ್ದಾರೆ.

ಕೇರಳದ ಈ ವೇಗಿ ಶುಕ್ರವಾರ ಎರಡು ಗಂಟೆ ಅವಧಿಯಲ್ಲಿ 44 ಸಲ ಹರಭಜನ್ ಸಿಂಗ್ ವಿರುದ್ಧ ಟ್ವಿಟರ್‌ನಲ್ಲಿ ವಾಗ್ದಾಳಿ ನಡೆಸಿದ್ದರು. ಈ ಋತುವಿನಲ್ಲಿ ಮೂರು ಪಂದ್ಯಗಳನ್ನಾಡಿರುವ ಬಲಗೈ ವೇಗಿ ಶ್ರೀಶಾಂತ್ ಎರಡು ವಿಕೆಟ್ ಮಾತ್ರ ಪಡೆದಿದ್ದಾರೆ.

ಇಂದಿನ ಪಂದ್ಯ
ರಾಜಸ್ತಾನ ರಾಯಲ್ಸ್ x ಕಿಂಗ್ಸ್ ಇಲೆವೆನ್
ಸ್ಥಳ:  ಜೈಪುರ
ಆರಂಭ: ರಾತ್ರಿ 8 ಗಂಟೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT