ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಭಾರತಕ್ಕೆ ಮತ್ತೆ ಆಪತ್ತು

Last Updated 20 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಲಂಡನ್: ಕೊನೆಯ ಪಂದ್ಯದಲ್ಲಿಯಾದರೂ ಗೆಲುವು ಪಡೆದು ಮಾನ ಕಾಪಾಡಿಕೊಳ್ಳಬೇಕೆಂಬ ಭಾರತದ ಆಸೆಯು ಆಸೆಯಾಗಿಯೇ ಉಳಿಯುವುದು ಖಚಿತ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಕ್ರಿಕೆಟ್ ಟೆಸ್ಟ್‌ನಲ್ಲಿಯೂ ಮಹೇಂದ್ರ ಸಿಂಗ್ ದೋನಿ ಬಳಗ ಸೋಲು ತಪ್ಪಿಸಿಕೊಳ್ಳುವುದೇ ಈಗ ಸವಾಲಾಗಿದೆ.

ಲಂಡನ್‌ನ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ ಭಾರತ ತನ್ನ ಪ್ರಥಮ ಇನಿಂಗ್ಸ್‌ನ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಕಷ್ಟಪಟ್ಟು ದಿನದಾಟದ ಕೊನೆಗೆ 33 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿತು. ರಾಹುಲ್ ದ್ರಾವಿಡ್ (ಬ್ಯಾಟಿಂಗ್ 57; 108 ಎ., 9 ಬೌಂಡರಿ) ಮತ್ತೊಮ್ಮೆ ಆಸರೆಯಾದರು. ಆದರೆ ವೀರೇಂದ್ರ ಸೆಹ್ವಾಗ್, ಲಕ್ಷ್ಮಣ್ ಹಾಗೂ ಸಚಿನ್ ತೆಂಡೂಲ್ಕರ್ ಹೀಗೆ ಬಂದು ಹಾಗೆ ಹೋದರು.

ಆದ್ದರಿಂದ ಇಂಗ್ಲೆಂಡ್ ನೀಡಿದ ಪ್ರಥಮ ಇನಿಂಗ್ಸ್ ಸವಾಲು ಪರ್ವತದಂತೆ ಕಾಣಿಸುತ್ತಿದೆ. ಇಯಾನ್ ಬೆಲ್ (235) ದ್ವಿಶತಕದ ನೆರವಿನಿಂದ ಇಂಗ್ಲೆಂಡ್ 6 ವಿಕೆಟ್‌ಗೆ 591 ರನ್ ಗಳಿಸಿ ತನ್ನ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಅದು ಮತ್ತೆ ಬ್ಯಾಟಿಂಗ್ ಮಾಡುವ ಅಗತ್ಯ ಎದುರಾಗುವ ಸಾಧ್ಯತೆಯಂತೂ ಇಲ್ಲ.

ಆನಂತರ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಮೊದಲ ಓವರ್‌ನಲ್ಲೇ ಆಘಾತ ಕಾದಿತ್ತು. ಜೇಮ್ಸ ಆ್ಯಂಡರ್ಸನ್ ಎಸೆದ ಮೊದಲ ಓವರ್‌ನ ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಚೆಂಡನ್ನು ಬೌಂಡರಿಗಟ್ಟಿದ ವೀರೇಂದ್ರ ಸೆಹ್ವಾಗ್ ಅಂತಿಮ ಎಸೆತದಲ್ಲಿ ಔಟಾದರು. ಮೂರನೇ ಟೆಸ್ಟ್‌ನ ಎರಡೂ ಇನಿಂಗ್ಸ್ ಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ `ವೀರೂ~ ಎಂಟು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ಆ ಬಳಿಕ ಲಕ್ಷ್ಮಣ್ (2) ಕೂಡಾ ಪೆವಿಲಿಯನ್‌ಗೆ ಹಿಂದಿರುಗಲು ಆತುರ ಮಾಡಿದರು. ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಮ್ಯಾಟ್ ಪ್ರಯರ್‌ಗೆ ಕ್ಯಾಚಿತ್ತು ಅವರು ನಿರ್ಗಮಿಸಿದರು. ನೂರು ಅಂತರರಾಷ್ಟ್ರೀಯ ಶತಕ ಪೂರೈಸುವ ಸಚಿನ್ ಕನಸು ಕೂಡ ಮತ್ತೆ ಹಾಗೆಯೇ ಉಳಿಯಿತು. ಇದರಿಂದ `ಮಹಿ~ ಬಳಗ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ರೈನಾ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.

ಎರಡನೇ ದಿನದಾಟದ ವೇಳೆ ಕ್ಯಾಚ್ ಪಡೆಯುವ ಪ್ರಯತ್ನದಲ್ಲಿ ಬಿದ್ದು ಗಾಯಗೊಂಡಿದ್ದ ಗೌತಮ್ ಗಂಭೀರ್ ಅವರು ಶನಿವಾರ ಭಾರತದ ಇನಿಂಗ್ಸ್ ಆರಂಭಿಸಲಿಲ್ಲ. ದ್ರಾವಿಡ್ ಅವರು ಸೆಹ್ವಾಗ್ ಜೊತೆ ಕ್ರೀಸ್‌ಗಿಳಿದರು. ಗಂಭೀರ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬೆಲ್ ದ್ವಿಶತಕ: ಇದಕ್ಕೂ ಮೊದಲು 3 ವಿಕೆಟ್‌ಗೆ 457 ರನ್‌ಗಳಿಂದ ಶನಿವಾರ ಆಟ ಆರಂಭಿಸಿದ ಇಂಗ್ಲೆಂಡ್ ಉತ್ತಮ ಮೊತ್ತದೆಡೆಗೆ ಮುನ್ನಡೆಯಿತು. 181 ರನ್‌ಗಳೊಂದಿಗೆ ಔಟಾಗದೆ ಉಳಿದಿದ್ದ ಇಯಾನ್ ಬೆಲ್ ಚೊಚ್ಚಲ ದ್ವಿಶತಕ ಗಳಿಸಿದರು. 364 ಎಸೆತಗಳನ್ನು ಎದುರಿಸಿದ ಅವರು 23 ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದರು.

ಜೇಮ್ಸ ಆ್ಯಂಡರ್ಸನ್ (13) ಮತ್ತು ಎಯೊನ್ ಮಾರ್ಗನ್ (1) ಅವರನ್ನು ಇಂಗ್ಲೆಂಡ್ ಬೇಗನೇ ಕಳೆದುಕೊಂಡಿತು. ಆದರೆ ರವಿ ಬೋಪಾರ (ಔಟಾಗದೆ 44) ಮತ್ತು ಬೆಲ್ ಆರನೇ ವಿಕೆಟ್‌ಗೆ 51 ರನ್‌ಗಳ ಜೊತೆಯಾಟ ನೀಡಿದರು. ಸುರೇಶ್ ರೈನಾ ಕೊನೆಗೂ ಬೆಲ್ ವಿಕೆಟ್ ಪಡೆಯಲು ಯಶಸ್ವಿಯಾದರು.

ಮಳೆ ಅಡ್ಡಿಪಡಿಸಿದ ಕಾರಣ ಭೋಜನ ವಿರಾಮದ ಬಳಿಕ ಮೂರು ಗಂಟೆಗಳ ಆಟ ನಷ್ಟವಾಯಿತು. ಇದರಿಂದ ಇಂಗ್ಲೆಂಡ್ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಬೇಗನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.

ಸ್ಕೋರು ವಿವರ
ಇಂಗ್ಲೆಂಡ್ ಮೊದಲ ಇನಿಂಗ್ಸ್: 153 ಓವರ್‌ಗಳಲ್ಲಿ
6 ವಿಕೆಟ್ ನಷ್ಟಕ್ಕೆ 591 ಡಿಕ್ಲೇರ್ಡ್‌

ಇಯಾನ್ ಬೆಲ್ ಎಲ್‌ಬಿಡಬ್ಲ್ಯು ಬಿ ಸುರೇಶ್ ರೈನಾ  235
ಕೆವಿನ್ ಪೀಟರ್ಸನ್ ಸಿ ಮತ್ತು ಬಿ ಸುರೇಶ್ ರೈನಾ  175
ಜೇಮ್ಸ ಆ್ಯಂಡರ್ಸನ್ ಸಿ ಲಕ್ಷ್ಮಣ್ ಬಿ ಎಸ್. ಶ್ರೀಶಾಂತ್  13
ಎಯೊನ್ ಮಾರ್ಗನ್ ಸಿ ಲಕ್ಷ್ಮಣ್ ಬಿ ಎಸ್. ಶ್ರೀಶಾಂತ್  01
ರವಿ ಬೋಪಾರ ಔಟಾಗದೆ  44
ಮ್ಯಾಟ್ ಪ್ರಯರ್ ಔಟಾಗದೆ  18
ಇತರೆ: (ಬೈ-6, ಲೆಗ್‌ಬೈ-8, ವೈಡ್-7 ನೋಬಾಲ್-10)  31
ವಿಕೆಟ್ ಪತನ: 1-75 (ಕುಕ್; 26.5), 2-97 (ಸ್ಟ್ರಾಸ್; 37.6), 3-447 (ಕೆವಿನ್ ಪೀಟರ್ಸನ್; 116.6), 4-480 (ಅ್ಯಂಡರ್‌ಸನ್; 127.1), 5-487 (ಮಾರ್ಗನ್; 129.4), 6-548 (ಬೆಲ್; 142.4).
ಬೌಲಿಂಗ್: ಆರ್.ಪಿ.ಸಿಂಗ್ 34-7-118-0, ಇಶಾಂತ್ ಶರ್ಮ 31-7-97-1, ಎಸ್.ಶ್ರೀಶಾಂತ್ 29-2-123-3, ಸುರೇಶ್ ರೈನಾ 19-2-58-2, ಅಮಿಶ್ ಮಿಶ್ರಾ 38-3-170-0, ಸಚಿನ್ ತೆಂಡೂಲ್ಕರ್ 2-0-11-0

ಭಾರತ: 33 ಓವರುಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 103
ವೀರೇಂದ್ರ ಸೆಹ್ವಾಗ್ ಎಲ್‌ಬಿಡಬ್ಲ್ಯು ಬಿ ಜೇಮ್ಸ ಆ್ಯಂಡರ್ಸನ್  08
ರಾಹುಲ್ ದ್ರಾವಿಡ್ ಬ್ಯಾಟಿಂಗ್  57
ವಿ.ವಿ.ಎಸ್.ಲಕ್ಷ್ಮಣ್ ಸಿ ಮ್ಯಾಟ್ ಪ್ರಯರ್ ಬಿ ಸ್ಟುವರ್ಟ್ ಬ್ರಾಡ್  02
ಸಚಿನ್ ತೆಂಡೂಲ್ಕರ್ ಸಿ ಆ್ಯಂಡರ್ಸನ್ ಬಿ ಗ್ರೇಮ್ ಸ್ವಾನ್  23
ಸುರೇಶ್ ರೈನಾ ಸ್ಟಂಪ್ಡ್ ಮ್ಯಾಟ್ ಪ್ರಯರ್ ಬಿ ಗ್ರೇಮ್ ಸ್ವಾನ್   00
ಇಶಾಂತ್ ಶರ್ಮ ಸಿ ಅಲಿಸ್ಟರ್ ಕುಕ್ ಬಿ ಗ್ರೇಮ್ ಸ್ವಾನ್  01
ಮಹೇಂದ್ರ ಸಿಂಗ್ ದೋನಿ ಬ್ಯಾಟಿಂಗ್ 05
ಇತರೆ: (ಲೆಗ್‌ಬೈ-5, ವೈಡ್-2)  07
ವಿಕೆಟ್ ಪತನ: 1-8 (ವೀರೇಂದ್ರ ಸೆಹ್ವಾಗ್; 0.6), 2-13 (ವಿ.ವಿ.ಎಸ್. ಲಕ್ಷ್ಮಣ್; 3.6), 3-68 (ಸಚಿನ್ ತೆಂಡೂಲ್ಕರ್; 18.2), 4-93 (ಸುರೇಶ್ ರೈನಾ; 28.5), 5-95 (ಇಶಾಂತ್ ಶರ್ಮ; 30.6).
ಬೌಲಿಂಗ್: ಜೇಮ್ಸ ಆ್ಯಂಡರ್ಸನ್ 5-1-21-1, ಸ್ಟುವರ್ಟ್ ಬ್ರಾಡ್ 10-1-22-1, ಟಿಮ್ ಬ್ರೆಸ್ನನ್ 7-0-25-0 (ವೈಡ್-1), ಗ್ರೇಮ್ ಸ್ವಾನ್ 10-3-27-3, ಕೆವಿನ್ ಪೀಟರ್ಸನ್ 1-0-3-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT