ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯ; ಹಣಾಹಣಿಗೆ ಇಂದೋರ್ ಸಿದ್ಧ!

Last Updated 24 ಡಿಸೆಂಬರ್ 2010, 9:00 IST
ಅಕ್ಷರ ಗಾತ್ರ

ಇಂದೋರ್: ‘ಮಾಳ್ವ’ರ ನಾಡಿನ ಇಂದೋರಿನ ಮಾರುಕಟ್ಟೆಗಳಲ್ಲಿ ಈಗ ಕ್ರಿಸ್‌ಮಸ್ ಸಡಗರ ಕಳೆಗಟ್ಟಿದ್ದರೆ, ಇತ್ತ ಹೋಳ್ಕರ್ ಮೈದಾನಕ್ಕೆ ವಿನಯಕುಮಾರ ಬಳಗದ ಉತ್ಸಾಹ ರಂಗು ತುಂಬಿತ್ತು!

ಇಲ್ಲಿ ಶುಕ್ರವಾರದಿಂದ ಆರಂಭವಾಗುವ ರಣಜಿ ಟ್ರೋಫಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಆಡಲು ಬಂದಿರುವ ಕರ್ನಾಟಕದ ವಿನಯ್ ಬಳಗಕ್ಕೆ ಫೈನಲ್‌ನತ್ತ ಸಾಗುವ ಛಲ. ಅಭ್ಯಾಸದಲ್ಲಿ ನಿರತರಾಗಿದ್ದ ಎಲ್ಲ ಆಟಗಾರರ ದೇಹಭಾಷೆಯೂ ಇದಕ್ಕೆ ಪೂರಕವಾಗಿಯೇ ಇತ್ತು. ಎಲ್ಲರೂ ಶಿಸ್ತು, ಗಂಭೀರತೆಯಿಂದ ಬ್ಯಾಟಿಂಗ್, ಬೌಲಿಂಗ್, ಕ್ಯಾಚಿಂಗ್ ಅಭ್ಯಾಸದಲ್ಲಿ ಬೆವರು ಹರಿಸಿದರು.

ಇತ್ತ ಐದು ವರ್ಷಗಳ ನಂತರ ಎಂಟರ ಘಟ್ಟಕ್ಕೆ ಪ್ಲೇಟ್ ಗುಂಪಿನಿಂದ ಬಂದಿರುವ ಮಧ್ಯಪ್ರದೇಶ ಕೂಡ ಉತ್ಸಾಹದಿಂದ ಅಭ್ಯಾಸ ನಡೆಸುತಿತ್ತು. ಅನುಭವಿ ಬ್ಯಾಟ್ಸ್‌ಮನ್ ಅಬ್ಬಾಸ್ ಅಲಿ ತಂಡಕ್ಕೆ ಮರಳಿರುವುದು ದೇವೇಂದ್ರ ಬಂಡೇಲಾ ನಾಯಕತ್ವದ ಬಳಗಕ್ಕೆ ಬಲ ಬಂದಂತಾಗಿದೆ. ಸಿಕ್ಕ ‘ಅವಕಾಶ’ವನ್ನು ಬಳಸಿಕೊಂಡು ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುವ ಉಮೇದು  ಬಂಡೇಲಾ ಬಳಗದ ಆಟಗಾರರ ಮುಖದ ಮೇಲೆ ಎದ್ದು ಕಾಣುತ್ತಿತ್ತು.

1998-99ರ ಫೈನಲ್‌ನಲ್ಲಿ ಮತ್ತು 2004-05ರ ಲೀಗ್‌ನಲ್ಲಿ ಸೋಲಿನ ರುಚಿ ತೋರಿಸಿದ್ದ ಕರ್ನಾಟಕಕ್ಕೆ ಪೆಟ್ಟು ನೀಡಲು ಆತಿಥೇಯರೂ ಸಿದ್ಧವಾಗಿದ್ದಾರೆ.
ಬೌಲಿಂಗ್ ಓಕೆ; ಬ್ಯಾಟಿಂಗ್..: ಕಾನ್ಪುರದ ಪಂದ್ಯದಲ್ಲಿ ಬೆನ್ನುನೋವಿನಿಂದ ಹೊರಗುಳಿದಿದ್ದ ‘ಪೀಣ್ಯ ಎಕ್ಸ್‌ಪ್ರೆಸ್’ ಅಭಿಮನ್ಯು ಮಿಥುನ್ ಕೂಡ ಲವಲವಿಕೆಯಿಂದ ಅಭ್ಯಾಸದಲ್ಲಿ ತೊಡಗಿದ್ದು, ತಂಡಕ್ಕೆ ನೂರಾನೆ ಬಲ ಬಂದಂತಾಗಿದೆ. ಧರ್ಮಶಾಲೆಯ ಕೊರೆಯುವ ಚಳಿಯಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶನವಾಗದಿದ್ದ ಸಂದರ್ಭದಲ್ಲಿ ಐದು ವಿಕೆಟ್ ಕಿತ್ತು ವಿಜೃಂಭಿಸಿದ್ದ ಮಿಥುನ್ ಕಳೆದ ವರ್ಷ ಇದೇ ಮೈದಾನದಲ್ಲಿ ದಕ್ಷಿಣ ವಲಯದ ಪರವಾಗಿ ಐದು ವಿಕೆಟ್ ಸಾಧನೆ ಮಾಡಿದ್ದರು. ಇದೇ ಋತುವಿನಲ್ಲಿ ಮಿಥುನ್ ಬ್ಯಾಟ್‌ನಿಂದ ಅರ್ಧಶತಕವೂ ಹರಿದು ಬಂದಿರುವುದು ವಿಶೇಷ. ಆರ್. ವಿನಯಕುಮಾರ ತಮ್ಮ ಬಿಗಿಯಾದ ಬೌಲಿಂಗ್ ಜೊತೆಗೆ, ಸತತ ಎರಡು ಅರ್ಧಶತಕಗಳನ್ನು ಸಿಡಿಸಿ, ಕೊನೆಯ ಕ್ರಮಾಂಕದ ಬ್ಯಾಟಿಂಗ್ ಬಲ ತೋರಿಸಿದ್ದಾರೆ. ಎಡಗೈ ವೇಗಿ ಎಸ್. ಅರವಿಂದ್ ಅವರ ಹರಿತವಾದ ಸ್ವಿಂಗರ್‌ಗಳು ಎದುರಾಳಿ ಬ್ಯಾಟಿಂಗ್ ಬಲ ಮುರಿಯಲು ಸಹಕಾರಿ. ಸ್ಟುವರ್ಟ್ ಬಿನ್ನಿ ಕೂಡ ‘ಆಲ್‌ರೌಂಡ್’ ಫಾರ್ಮ್‌ನಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್.

ಲೀಗ್‌ನ ಕೊನೆಯ ಎರಡು ಪಂದ್ಯಗಳ ‘ಶ್ರೇಷ್ಠ’ ಪ್ರದರ್ಶನದಿಂದ ಗಮನ ಸೆಳೆದಿರುವ ಸಿ.ಎಂ. ಗೌತಮ್ ಮಧ್ಯಮಕ್ರಮಾಂಕದ ಬ್ಯಾಟಿಂಗ್ ಶಕ್ತಿ. ಆದರೆ, ಆರಂಭಿಕ ಬ್ಯಾಟ್ಸ್‌ಮನ್‌ಗಳ ಪ್ರದರ್ಶನದ ಬಗ್ಗೆ ಮಾತ್ರ ವಿನಯ್‌ಗೆ ಚಿಂತೆ.

ತಂಡ ಮೊದಲು ಬ್ಯಾಟಿಂಗ್ ಮಾಡುವಾಗ ಆರಂಭಿಕ ಜೋಡಿ ರಾಬಿನ್ ಉತ್ತಪ್ಪ ಮತ್ತು ಕೆ.ಬಿ. ಪವನ್ ಉತ್ತಮ ಅಡಿಪಾಯ ಹಾಕಿದರೆ ಬೌಲರ್‌ಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಸನತ್‌ಕುಮಾರ ಲೀಗ್‌ನ ಕೊನೆಯ ಎರಡು ಪಂದ್ಯಗಳಲ್ಲಿ ಗೆಲ್ಲುವ ಅವಕಾಶವಿದ್ದರೂ ಹುಡುಗರನ್ನು ಬ್ಯಾಟಿಂಗ್ ಅಭ್ಯಾಸಕ್ಕೆ ಹಚ್ಚಿ, ಡ್ರಾ ಮಾಡಿಕೊಂಡಿದ್ದರು. ಅವರ ಪ್ರಯತ್ನಕ್ಕೆ ಇಂದೋರಿನಲ್ಲಿ ’ಫಲ’ ಸಿಕ್ಕರೆ ಮುಂದಿನ ಹಾದಿ ಸುಗಮ.  ಕಾನ್ಪುರದಲ್ಲಿ ಕಾಲುನೋವಿನಲ್ಲೂ ‘ಶತಕ’ ಗಳಿಸಿ ತಮ್ಮ ಫಾರ್ಮ್ ಮರಳಿ ಪಡೆದುಕೊಂಡ ಗಣೇಶ್ ಸತೀಶ್. ಸ್ಫೋಟಕ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ, ಎಡಗೈ ಬ್ಯಾಟ್ಸ್‌ಮನ್ ಅಮಿತ್ ವರ್ಮಾ ಎದುರಾಳಿ ಬೌಲರ್‌ಗಳಿಗೆ ದುಃಸ್ವಪ್ನವಾಗಬಲ್ಲರು.

ಆದರೆ, ಬಂಡೇಲಾ ಬಳಗವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಕಳೆದುಹೋದದ್ದನ್ನು ಮರಳಿ ಪಡೆಯುವ ಛಲದಲ್ಲಿರುವ ಬಂಡೇಲಾ ತಂಡವೂ ‘ತಿರುಗೇಟು’ ನೀಡಲು ಸಿದ್ಧವಾಗಿದೆ. ಅನುಭವಿ ಆಟಗಾರರು ಹೆಚ್ಚಾಗಿರುವ ತಂಡದ ಹರಪ್ರೀತ್‌ಸಿಂಗ್. ಅಬ್ಬಾಸ್ ಅಲಿ, ನಮನ್ ಓಜಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. 

ಕಳೆದ ಋತುವಿನಲ್ಲಿ ಪ್ರಶಸ್ತಿಯನ್ನು ಸ್ವಲ್ಪವೇ ಅಂತರದಲ್ಲಿ ಕಳೆದುಕೊಂಡಿರುವ ಕರ್ನಾಟಕ ಈ ಬಾರಿ ಫೈನಲ್ ಪ್ರವೇಶಕ್ಕೆ ಶತಾಯಗತಾಯ ಪ್ರಯತ್ನ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT