ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ವಿವಾದ ಸೃಷ್ಟಿಸಿದ ಪ್ರವೀಣ್ ಅನಾರೋಗ್ಯ

Last Updated 30 ನವೆಂಬರ್ 2011, 19:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ವೆಸ್ಟ್‌ಇಂಡೀಸ್ ವಿರುದ್ಧದ ಏಕದಿನ ಸರಣಿ ಹಾಗೂ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿದ ಕೆ.ಶ್ರೀಕಾಂತ್ ಸಾರಥ್ಯದ ಆಯ್ಕೆ ಸಮಿತಿಗೆ ವೇಗಿ ಪ್ರವೀಣ್ ಕುಮಾರ್ ಅವರ ಫಿಟ್‌ನೆಸ್ ಬಗ್ಗೆ ಬಿಸಿಸಿಐ ಮಾಹಿತಿ ನೀಡದೇ ಇದ್ದದ್ದು ವಿವಾದಕ್ಕೆ ಕಾರಣವಾಗಿದೆ.

ಮೊದಲು ಮೊಣಕೈ ನೋವಿನ ಸಮಸ್ಯೆ, ನಂತರ ಎದೆಯ ಎಡಭಾಗದಲ್ಲಿ ನೋವು, ಈಗ ಪಕ್ಕೆಲುಬಿನಲ್ಲಿ ಬಿರುಕು ಸಮಸ್ಯೆ...! ಹೀಗೆ ಪ್ರವೀಣ್ ಫಿಟ್‌ನೆಸ್ ಬಗ್ಗೆ ಬಿಸಿಸಿಐ ದಿನಕ್ಕೊಂದು ಹೇಳಿಕೆ ನೀಡುತ್ತಿದೆ.

ಇಷ್ಟೆಲ್ಲಾ ಸಮಸ್ಯೆ ಇದ್ದರೂ ಅದು ಆಯ್ಕೆದಾರರ ಗಮನಕ್ಕೆ ಬಂದಿರಲಿಲ್ಲ. ಹಾಗಾಗಿ ಪ್ರವೀಣ್ ಅವರನ್ನು ಈ ಮೊದಲು ತಂಡಕ್ಕೆ ಆಯ್ಕೆ ಮಾಡಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ವೀರೇಂದ್ರ ಸೆಹ್ವಾಗ್ ಹಾಗೂ ಜಹೀರ್ ಖಾನ್ ಗಾಯಕ್ಕೆ ಸಂಬಂಧಿಸಿದ ಹಿಂದಿನ ವಿವಾದ ತಣ್ಣಗಾಗುವ ಮೊದಲೇ ಮತ್ತೊಂದು ವಿವಾದ ಸೃಷ್ಟಿಯಾಗಿದೆ.

ಪ್ರಮುಖವಾಗಿ ಪ್ರವೀಣ್ ಫಿಟ್‌ನೆಸ್ ಸಮಸ್ಯೆ ಭಾರತ ತಂಡದ ಆಡಳಿತ ಹಾಗೂ ನಾಯಕ ಸೆಹ್ವಾಗ್ ಅವರಿಗೇ ಗೊತ್ತಿರಲಿಲ್ಲ ಎನ್ನುವುದು ಅಚ್ಚರಿ. ವಿಂಡೀಸ್ ವಿರುದ್ಧದ ಸರಣಿಯಲ್ಲಿ ಆಡಲು ಆಯ್ಕೆಯಾಗಿದ್ದರೂ ತಂಡದ ಜೊತೆ ಪ್ರವೀಣ್ ಏಕೆ ಬಂದಿಲ್ಲ ಎಂದು ಸಹ ಆಟಗಾರರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು.

ಕಟಕ್‌ನಲ್ಲಿ ನಡೆದ ಮೊದಲ ಪಂದ್ಯಕ್ಕೂ ಮುನ್ನ ಈ ಬಗ್ಗೆ ಪ್ರತಿಕ್ರಿಯಿಸಿದ್ದ ವೀರೂ `ಯಾವುದೋ ನೋವಿನಿಂದ ಅವರು ಬಳಲುತ್ತಿದ್ದಾರೆ (ಏನು ನೋವು ಎಂಬುದು ಗೊತ್ತಿಲ್ಲ). ಹಾಗಾಗಿ ಮೊದಲ ಪಂದ್ಯಕ್ಕೆ ಲಭ್ಯರಾಗುತ್ತಿಲ್ಲ.

ಎರಡು ದಿನಗಳಲ್ಲಿ ತಂಡ ಸೇರಿಕೊಳ್ಳುತ್ತಾರೆ. ವಿಶಾಖಪಟ್ಟಣದಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಆಡುತ್ತಾರೆ~ ಎಂದಿದ್ದರು. ಸೆಹ್ವಾಗ್‌ಗೂ ಬಿಸಿಸಿಐ ಸರಿಯಾದ ಮಾಹಿತಿ ನೀಡಿಲ್ಲ ಎನ್ನುವುದಕ್ಕೆ ಈ ಹೇಳಿಕೆ ಸಾಕ್ಷಿ.

ಆದರೆ ಅದೇ ದಿನ ಸಂಜೆ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಬೇರೆಯೇ ಹೇಳಿಕೆ ನೀಡಿದ್ದರು. `ಪ್ರವೀಣ್ ಎದೆ ನೋವಿನ ಸಮಸ್ಯೆಗೆ ಒಳಗಾಗ್ದ್ದಿದಾರೆ. ಮೊದಲು ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಅಭಿಮನ್ಯು ಮಿಥುನ್ ಅವರನ್ನು ಆಯ್ಕೆ ಮಾಡಲಾಗಿದೆ~ ಎಂದಿದ್ದರು.

ಇದಕ್ಕೂ ಮುನ್ನ ಆಯ್ಕೆ ಸಮಿತಿ ಮುಖ್ಯಸ್ಥ ಶ್ರೀಕಾಂತ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಜಗದಾಳೆ, ಪ್ರವೀಣ್ ಬದಲಿಗೆ ಮೊದಲ ಮೂರು ಪಂದ್ಯಗಳಿಗೆ ಮತ್ತೊಬ್ಬ ಆಟಗಾರರನ್ನು ಆಯ್ಕೆ ಮಾಡುವಂತೆ ಸೂಚಿಸಿದ್ದರು. ಆದರೆ ಪ್ರವೀಣ್‌ಗೆ ಏನು ಸಮಸ್ಯೆ ಇದೆ ಎಂಬುದು ಆಯ್ಕೆದಾರರಿಗೂ ಗೊತ್ತಿರಲಿಲ್ಲ!

ಮಾರನೇ ದಿನ ಬಿಸಿಸಿಐ ಮತ್ತೊಂದು ಹೇಳಿಕೆ ನೀಡಿದೆ. `ಪ್ರವೀಣ್ ಅವರನ್ನು  ಸ್ಕ್ಯಾನಿಂಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಪಕ್ಕೆಲುಬಿನಲ್ಲಿ ಬಿರುಕು ಬಿಟ್ಟಿರುವುದು ಪತ್ತೆಯಾಗಿದೆ~ ಎಂಬುದೇ ಆ ಹೇಳಿಕೆ.
`ಅವರು ಪೂರ್ಣವಾಗಿ ಚೇತರಿಸಿಕೊಳ್ಳಲು 5-6 ವಾರ ಬೇಕಾಗುತ್ತದೆ. ಹಾಗಾಗಿ ವಿಂಡೀಸ್ ವಿರುದ್ಧದ ಸರಣಿ ಹಾಗೂ ಆಸ್ಟ್ರೇಲಿಯಾ ಪ್ರವಾಸಕ್ಕೆ ಲಭ್ಯರಾಗುವುದಿಲ್ಲ~ ಎಂದು ಜಗದಾಳೆ ಹೇಳಿದ್ದಾರೆ.

ಇದರೊಂದಿಗೆ ಫಿಜಿಯೋ, ಬಿಸಿಸಿಐ, ಆಯ್ಕೆ ಸಮಿತಿ, ಆಟಗಾರರು ಹಾಗೂ ತಂಡದ ನಾಯಕನ ನಡುವೆ ಸಂಪರ್ಕದ ಕೊರತೆ ಇರುವುದು ಮತ್ತೊಮ್ಮೆ ಬಹಿರಂಗವಾಗಿದೆ. ಈ ಹಿಂದೆ ಹಲವು ಬಾರಿ ರೀತಿ ವಿವಾದ ಉದ್ಭವಿಸಿದ್ದ ಉದಾಹರಣೆ ಇದೆ. ಆದರೂ ಕ್ರಿಕೆಟ್ ಮಂಡಳಿ ಈಗ ಮತ್ತೊಂದು ಎಡವಟ್ಟಿಗೆ ಕಾರಣವಾಗಿದೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಫಿಜಿಯೋ ಕೂಡ ಪ್ರವೀಣ್ ಫಿಟ್‌ನೆಸ್ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎನ್ನಲಾಗುತ್ತಿದೆ. ತಂಡದ ಆಯ್ಕೆಗೆ ಮುನ್ನ ಫಿಟ್‌ನೆಸ್ ಪರೀಕ್ಷೆಗೆ ಪ್ರವೀಣ್ ಹಾಜರಾಗಿರಲಿಲ್ಲ ಎಂಬುದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT