ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ವೃದ್ಧಿಮಾನ್ ಸುರಕ್ಷಿತ ವಿಕೆಟ್ ಕೀಪರ್

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಾಯಕ ಮಹೇಂದ್ರ ಸಿಂಗ್ ದೋನಿ ಅನುಪಸ್ಥಿತಿಯಲ್ಲಿ ವೃದ್ಧಿಮಾನ್ ಸಹಾ ಅವರು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎನ್ನುವ ಅಭಿಪ್ರಾಯವನ್ನು ಕೆಲವು ಮಾಜಿ ವಿಕೆಟ್ ಕೀಪರ್‌ಗಳು ವ್ಯಕ್ತಪಡಿಸಿದ್ದಾರೆ.

ಪರ್ತ್ ಟೆಸ್ಟ್‌ನಲ್ಲಿ ಓವರ್ ಮಂದಗತಿಯ ಕಾರಣ ನಾಯಕ `ಮಹಿ~ ಒಂದು ಪಂದ್ಯದ ಮಟ್ಟಿಗೆ ನಿಷೇಧಕ್ಕೊಳಗಾಗಿದ್ದಾರೆ. ಆದ್ದರಿಂದ ಅವರು ಜನವರಿ 24ರಂದು ಆರಂಭವಾಗಲಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ಗೆ ಲಭ್ಯವಾಗುವುದಿಲ್ಲ.

`ದೋನಿ ಇಲ್ಲದ ಸಂದರ್ಭದಲ್ಲಿ ಸಾಮರ್ಥ್ಯ ಸಾಬೀತುಪಡಿಸಲು ವೃದ್ಧಿಮಾನ್‌ಗೆ ಒಂದು ಒಳ್ಳೆಯ ಅವಕಾಶ. ಅಡಿಲೇಡ್ ಟೆಸ್ಟ್‌ನಲ್ಲಿ ವಿಕೆಟ್ ಹಿಂದೆ ಸುರಕ್ಷಿತವಾದ ಕೋಟೆ ಎನಿಸಿಕೊಂಡರೆ ಭವಿಷ್ಯದ ಹಾದಿಯೂ ಉತ್ತಮವಾಗುತ್ತದೆ~ ಎಂದು ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಹೇಳಿದ್ದಾರೆ.

`ದೀರ್ಘ ಕಾಲದಿಂದ ಮಹಿ ಆಡಿದ್ದಾರೆ. ಅಂಥ ಅನುಭವಿಯ ಸ್ಥಾನವನ್ನು ತುಂಬುವುದು ಸುಲಭವಂತೂ ಅಲ್ಲ. ಆದರೆ ತಾವೊಬ್ಬ ಒಳ್ಳೆ ವಿಕೆಟ್ ಕೀಪರ್ ಎಂದು ಸಾಬೀತುಪಡಿಸುವ ಸಾಮರ್ಥ್ಯವನ್ನು ಸಹಾ ಹೊಂದಿದ್ದಾರೆ~ ಎಂದ ಅವರು `ಕೀಪಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಪ್ರಭಾವಿ ಎನಿಸಬೇಕು. ಎರಡು ಇಲ್ಲವೆ ಎರಡೂವರೆ ತಾಸು ಕ್ರೀಸ್‌ನಲ್ಲಿ ನಿಂತು ಐವತ್ತಕ್ಕೂ ಹೆಚ್ಚು ರನ್ ಗಳಿಸಿದರೆ ಸಾಕು. ಮುಂದೆ ತಂಡದಲ್ಲಿ ಸ್ಥಾನ ಖಚಿತ ಮಾಡಿಕೊಳ್ಳಬಹುದು~ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

2013ರಲ್ಲಿ ನಿವೃತ್ತಿಯ ಯೋಚನೆ ಮಾಡುವುದಾಗಿ ದೋನಿ ಹೇಳಿದ್ದಾರೆ. ಆದ್ದರಿಂದ ಈಗಿನಿಂದಲೇ ಒಬ್ಬ ಉತ್ತಮ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಜ್ಜಾಗಬೇಕು. ಆ ನಿಟ್ಟಿನಲ್ಲಿ ಸಹಾ ಮೇಲೆ ನಿರೀಕ್ಷೆಯ ಹೊರೆ ಹೆಚ್ಚಿದೆ ಎಂದು ಕೂಟ ಅವರು ಅಭಿಪ್ರಾಯಪಟ್ಟಿದ್ದಾರೆ.

`19 ವರ್ಷ ವಯಸ್ಸಿನೊಳಗಿನವರ ತಂಡದಲ್ಲಿ ಆಡುತ್ತಿದ್ದಾಗಿನಿಂದ ವೃದ್ಧಿಮಾನ್ ಅವರನ್ನು ನೋಡಿದ್ದೇನೆ. ನೀರಸ ಎನಿಸುವಂತೆ ಆಡಿದ್ದು ಕಡಿಮೆ. ವಿಕೆಟ್ ಕೀಪರ್ ಹೊಣೆಯ ಜೊತೆಗೆ ತಂಡದ ಖಾತೆಗೆ 40ರಿಂದ 50ರ ಸರಾಸರಿಯಲ್ಲಿ ರನ್‌ಗಳ ಕೊಡುಗೆ ನೀಡಬಲ್ಲರು. ಅಷ್ಟು ಮಾಡಿದರೂ ಸಾಕು. ಒತ್ತಡದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲ ಕ್ರಿಕೆಟಿಗ. ಆದ್ದರಿಂದ ಇವರನ್ನು ಏಳನೇ ಕ್ರಮಾಂಕದಲ್ಲಿ ಆಡಿಸಿದರೆ ಹೆಚ್ಚು ಪ್ರಯೋಜನ~ ಎಂದಿದ್ದಾರೆ ದೀಪ್ ದಾಸ್ ಗುಪ್ತಾ. ವಿಜಯ್ ದಹಿಯಾ ಅವರೂ ಸಹಾ ಮೇಲೆ ಅಪಾರ ಭರವಸೆ ಇಟ್ಟಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT