ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಯಲ್ಲಿ ಗಮನ ಸೆಳೆಯುತ್ತಿರುವ ಹಳ್ಳಿಯ ಅಥ್ಲೀಟ್ ಪವಿತ್ರಾ...

Last Updated 3 ಅಕ್ಟೋಬರ್ 2012, 8:25 IST
ಅಕ್ಷರ ಗಾತ್ರ

ಗ್ರಾಮೀಣ ಪ್ರದೇಶದ ಅಪ್ಪಟ ಪ್ರತಿಭೆ ಈಕೆ. ಆಟೋಟದಲ್ಲಿ ಯಾರಿಂದಲೂ ವಿಶೇಷ ತರಬೇತಿ ಪಡೆಯದೇ ತನ್ನ ಅಕ್ಕನಿಂದಲೇ ಸ್ಪೂರ್ತಿ, ತರಬೇತಿ ಪಡೆದು ಇಂದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಪವಿತ್ರಾಳ ಸಾಧನೆ. 

ಚೇರ್ಕಾಡಿಯ ಶಾರದಾ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ಸದ್ಯ ಶಾಲೆಯ ದೈಹಿಕ ಶಿಕ್ಷಕ ಪ್ರಸನ್ನ ಕುಮಾರ್ ಶೆಟ್ಟಿ ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಪೋಲ್‌ವಾಲ್ಟ್ ಮತ್ತು ಓಟಗಳಲ್ಲಿ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅನೇಕ ಬಹುಮಾನ ಗಳಿಸಿದ್ದಾಳೆ. ಪೇಪರ್ ಕ್ರಾಫ್ಟ್, ರಂಗೋಲಿ ಹೀಗೆ ಎಲ್ಲಾ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡು ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮುತ್ತಿದ್ದಾಳೆ.

2010-11ರಲ್ಲಿ ಮುಂಡ್ಕಿನಜೆಡ್ಡು ಶಾರದಾ ಪ್ರೌಢಶಾಲೆ ಮತ್ತು 2011-12ರಲ್ಲಿ ಬಾರ್ಕೂರು ನ್ಯಾಷನಲ್ ಪ.ಪೂ. ಕಾಲೇಜಿನಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪೋಲ್‌ವಾಲ್ಟ್‌ನಲ್ಲಿ ಪ್ರಥಮ ಸ್ಥಾನ, ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನ, 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ, ಕೋಟೇಶ್ವರ ಸರ್ಕಾರಿ ಪ.ಪೂ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪೋಲ್‌ವಾಲ್ಟ್‌ನಲ್ಲಿ ದ್ವಿತೀಯ ಸ್ಥಾನ, ಬ್ರಹ್ಮಾವರದ ಎಸ್.ಎಂ.ಎಸ್ ಪ.ಪೂ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪೋಲ್‌ವಾಲ್ಟ್‌ನಲ್ಲಿ ತೃತೀಯ ಸ್ಥಾನ ಗಳಿಸಿದ್ದಾಳೆ.

2012-13ನೇ ಸಾಲಿನಲ್ಲಿ ಪರ್ಕಳದ ಯುವಶಕ್ತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ರಸ್ತೆ ಓಟ ಸ್ಪರ್ಧೆಯ 4 ಕಿ.ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಇತ್ತೀಚೆಗಷ್ಟೇ ಉಡುಪಿಯಲ್ಲಿ ಯುವಜನ  ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಡೆದ ಪೈಕಾ ಗ್ರಾಮೀಣ ಕ್ರೀಡಾಕೂಟದಲ್ಲಿ ತಾಲ್ಲೂಕು ಮತ್ತು  ಜಿಲ್ಲಾ ಮಟ್ಟದಲ್ಲಿ 400 ಮೀಟರ್ ಮತ್ತು 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಕಡುಬಡ ಕುಟುಂಬದವರಾದ ಅಕ್ಕ ಪಲ್ಲವಿ ಆಚಾರ್ ಮತ್ತು ಈಕೆಗೆ ಕ್ರೀಡೆಯಲ್ಲಿ ಸರಿಯಾದ ಪ್ರೋತ್ಸಾಹ ದೊರಕಿದಲ್ಲಿ ಬಹಳಷ್ಟು ಎತ್ತರಕ್ಕೆ ಏರಲು ಸಾಧ್ಯ. ಇಬ್ಬರೂ ಪೋಲ್‌ವಾಲ್ಟ್‌ನಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ  ಸಾಧನೆ ಮಾಡಿದ್ದರೂ, ಇಬ್ಬರಿಗೆ ಅಗತ್ಯವಿರುವ ಫೈಬರ್ ಪೋಲ್ ಒದಗಿಸಲು ಯಾರೂ ಮುಂದೆ ಬಂದಿಲ್ಲದಿರುವುದು ಬೇಸರದ ಸಂಗತಿ. ಬೆತ್ತದ ಪೋಲ್‌ನಲ್ಲಿಯೇ ಇಂತಹ ಸಾಧನೆ ಮಾಡಿ ವಿದ್ಯಾಭ್ಯಾಸಮುಂದುವರಿಸುತ್ತಿದ್ದಾರೆ. ಇವರ ವಿದ್ಯಾಭ್ಯಾಸ ಮತ್ತು ಕ್ರೀಡಾ ಆಸಕ್ತಿಗೆ ಇನ್ನಷ್ಟು ನೆರವು ಬೇಕಾಗಿದೆ.

ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಈ ಗ್ರಾಮೀಣ ಪರಸರದ ಈ ಕ್ರೀಡಾ ಮೊಗ್ಗುಗಳು ಇನ್ನಷ್ಟು ಅರಳಬೇಕಾದರೆ ಕ್ರೀಡಾಭಿಮಾನಿಗಳ ಪ್ರೋತ್ಸಾಹ ಅತ್ಯಗತ್ಯ.


 ಚಿತ್ರಗಳು: ಸುಜಿತ್ ಮುಂಡ್ಕಿನಜೆಡ್ಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT