ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್ ಫೈನಲ್‌ಗೆ ಸಿಂಧು

ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಕಶ್ಯಪ್‌ಗೆ ಸೋಲು
Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ತೈಪೆ (ಪಿಟಿಐ): ಅಮೋಘ ಪ್ರದರ್ಶನ ತೋರಿದ ಭಾರತ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಚ್ಚರಿ ಫಲಿತಾಂಶಕ್ಕೆ ಕಾರಣರಾಗಿದ್ದಾರೆ.

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸಿಂಧು 15-21, 21-14, 22-20ರಲ್ಲಿ ಮಾಜಿ ಅಗ್ರ ರ‌್ಯಾಂಕ್‌ನ ಆಟಗಾರ್ತಿ ಚೀನಾದ ವಾಂಗ್ ಶಿಕ್ಸಿಯಾನ್ ಅವರಿಗೆ ಆಘಾತ ನೀಡಿದರು. ಈ ಮೂಲಕ ಅವರು ಕ್ವಾರ್ಟರ್ ಫೈನಲ್‌ಗೆ ಹೆಜ್ಜೆ ಇರಿಸಿದ್ದಾರೆ.

ಭರವಸೆಯ ಆಟಗಾರ್ತಿ ಸಿಂಧು ಅವರ ಪಾಲಿಗೆ ಇದೊಂದು ಸ್ಮರಣೀಯ ಗೆಲುವು. 62 ನಿಮಿಷ ನಡೆದ ಈ ಪಂದ್ಯ ಭಾರಿ ಪೈಪೋಟಿಗೆ ಕಾರಣವಾಯಿತು. ವಿಶ್ವ ರ‌್ಯಾಂಕಿಂಗ್‌ನಲ್ಲಿ 16ನೇ ಸ್ಥಾನದಲ್ಲಿರುವ ಸಿಂಧು ಮೊದಲ ಗೇಮ್‌ನಲ್ಲಿ ಸೋಲು ಕಂಡರು. ಆದರೆ ನಂತರದ ಎರಡು ಗೇಮ್‌ಗಳಲ್ಲಿ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು.ಸಿಂಧು ಎಂಟರ ಘಟ್ಟದ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಆಟಗಾರ್ತಿ ಜಪಾನ್‌ನ ಎರಿಕೊ ಹಿರೋಸ್ ಅವರನ್ನು ಎದುರಿಸಲಿದ್ದಾರೆ.

ಕಶ್ಯಪ್‌ಗೆ ಸೋಲು: ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಪಿ. ಕಶ್ಯಪ್ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿ ಪಂದ್ಯದಲ್ಲಿ ಪರಾಭವಗೊಂಡರು.

ಈ ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿದ್ದ ಅವರು 19-21, 15-21ರಲ್ಲಿ ಚೀನಾದ ಹುವಾನ್ ಗಾವೊ ಎದುರು ಸೋಲು ಕಂಡರು.ಇದಕ್ಕೂ ಮುನ್ನ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಕಶ್ಯಪ್ 21-17, 21-19ರಲ್ಲಿ ಸ್ಥಳೀಯ ಆಟಗಾರ ಹನ್ ಚೋ ಚು ಅವರನ್ನು ಮಣಿಸಿದ್ದರು. ಈ ಪಂದ್ಯ ಕೇವಲ 31 ನಿಮಿಷಗಳಲ್ಲಿ ಮುಗಿದು ಹೋಯಿತು

ಭಾರತದ ಮತ್ತೊಬ್ಬಆಟಗಾರ ಸಾಯಿ ಪ್ರಣೀತ್ ಎರಡನೇ ಸುತ್ತು ದಾಟಿ ನಿಲುವಲ್ಲಿ ವಿಫಲರಾದರು. ಅವರು 15-21, 16-21ರಲ್ಲಿ ಜೆಂಗ್‌ಮಿಂಗ್ ವಾಂಗ್ ಎದುರು ಪರಾಭವಗೊಂಡರು. 

ಮಹಿಳೆಯರ ಡಬಲ್ಸ್ ವಿಭಾಗದಲ್ಲೂ ಭಾರತ ನಿರಾಸೆ ಅನುಭವಿಸಬೇಕಾಯಿತು. ಎರಡನೇ ಸುತ್ತಿನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಪ್ರದ್ನ್ಯಾ ಗಾದ್ರೆ 15-21, 11-21ರಲ್ಲಿ ಹಾಂಕಾಂಗ್‌ನ ಲೋಕ್ ಯಾನ್ ಪೂನ್ ಹಾಗೂ ಯಿಂಗ್ ಸುಯೆತ್ ಸೆ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT