ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀರೋದ್ಯಮ ‘ಮೌಲ್ಯವರ್ಧನೆ’

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರಮುಖ ಗ್ರಾಹಕ ಹಾಗೂ ಉತ್ಪಾದಕ ದೇಶವಾಗಿಯೂ ಗುರುತಿಸಿಕೊಳ್ಳುತ್ತಿರುವ ಭಾರತ, ಡೈರಿ ಉದ್ಯಮಕ್ಕೆ ಹೊಸ ಭಾಷ್ಯ ಬರೆಯುತ್ತಿದೆ. ಮುಂದಿನ 4---–-5 ವರ್ಷಗಳಲ್ಲಿ ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳ ವಲಯ ವಾರ್ಷಿಕ ಶೇ 30ರಷ್ಟು ಅಭಿವೃದ್ಧಿ  ನಿರೀಕ್ಷೆ ಮೂಡಿಸಿದೆ. ಹೀಗೆ ನಮ್ಮನೆಯ ಕೊಟ್ಟಿಗೆಯಿಂದ ದೇಶ-–ವಿದೇಶದ ಪ್ರಯೋಗಾಲಯದವರೆಗೂ ಪಸರಿಸಿರುವ ಹಾಲು ಮತ್ತು ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳ ಒಳನೋಟ ಇಲ್ಲಿದೆ...

ಕಳೆದ ಒಂದೆರಡು ದಶಕಗಳ ಹಿಂದಷ್ಟೆ ಕೇವಲ ಕೊಟ್ಟಿಗೆಗೆ ಸೀಮಿತವಾಗಿದ್ದ ಹಾಲು ಇಂದು ದೇಶದ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ. ಬದಲಾದ ಜೀವನ ಶೈಲಿ, ಪೌಷ್ಟಿಕಾಂಶ ಇರುವ ಡೈರಿ ಉತ್ಪನ್ನಗಳ ಬಗ್ಗೆ ಹೆಚ್ಚುತ್ತಿರುವ ಮೋಹ, ಹೆಚ್ಚಿದ ಆರೋಗ್ಯ ಕಾಳಜಿ, ಖರೀದಿಸುವ ಸಾಮರ್ಥ್ಯದಲ್ಲಿ ಸುಧಾರಣೆ, ವಿವಿಧ ಬಣ್ಣ, ಸುವಾಸನೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಉತ್ಪನ್ನಗಳು, ಅವುಗಳ ಸುಲಭ ಲಭ್ಯತೆ, ಡೈರಿ ಉದ್ಯಮದಲ್ಲಿ ಉಂಟಾಗುತ್ತಿರುವ ಹೊಸ ಆವಿಷ್ಕಾರಗಳು, ಹೊಸ ಸಂಶೋಧನೆಗಳು, ನೂತನ ಯಂತ್ರೋಪಕರಣಗಳು... ಇದೆಲ್ಲದರ ಪರಿಣಾ­ಮ­ವಾಗಿ ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳ ಮಾರುಕಟ್ಟೆ ಗಮನಾರ್ಹ ಬೆಳವಣಿಗೆ ಕಾಣುತ್ತಿದೆ. ಪ್ರಸ್ತುತ ಮಾರುಕಟ್ಟೆ ವಾರ್ಷಿಕ ಶೇ 13-ರಿಂದ ಶೇ 15ರಷ್ಟು ಅಭಿವೃದ್ಧಿ ಸಾಧಿಸುತ್ತಿದ್ದು, 2020ರ ವೇಳೆಗೆ ಈ ಉದ್ಯಮ ತನ್ನ ಮಾರುಕಟ್ಟೆಯ ಪಾಲನ್ನು ಶೇ 31ಕ್ಕೆ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ ಎನ್ನುತ್ತದೆ Rabobank ಸಮೀಕ್ಷಾ ವರದಿ.

ಹಾಲಿನ ಉತ್ಪಾದನೆ ಮತ್ತು ಸಂಗ್ರಹಣೆಯಲ್ಲಿ ಭಾರತ ವರ್ಷಗಳಿಂದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜತೆಗೆ ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆ ಮತ್ತು ಸೇವನೆಯಲ್ಲಿ ಭಾರತ ಇತ್ತೀಚೆಗೆ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ.

ಒಂದು ದಶಕದ ಹಿಂದೆ  ಶೇ 90ರಷ್ಟು ಹಾಲು ದ್ರವ ರೂಪದಲ್ಲಿಯೇ ಬಳಕೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಈ ಪ್ರಮಾಣದಲ್ಲಿ ಗಣನೀಯ ಬದಲಾವಣೆ ಕಂಡುಬಂದಿದೆ. ಶೇ 50ರಷ್ಟು ಹಾಲು ಮೂಲ ರೂಪದಲ್ಲಿಯೇ ಬಳಕೆಯಾದರೆ, ಉಳಿದ ಶೇ 50ರಷ್ಟು ಹಾಲು ವಿವಿಧ ಪ್ರಕಾರದ ನವೀನ ಮೌಲ್ಯವರ್ಧಿತ ಉತ್ಪನ್ನಗಳ ರೂಪದಲ್ಲಿ (ತುಪ್ಪ ಶೇ 30, ಮೊಸರು ಶೇ 7, ಖೋವಾ ಶೇ 7, ಐಸ್ ಕ್ರೀಂ ಶೇ 0.7, ಇತರೆ ಉತ್ಪನ್ನಗಳು ಶೇ 2.3) ಬಳಕೆಯಾಗುತ್ತಿದೆ.

ಪ್ರಸ್ತುತ ಭಾರತದಲ್ಲಿ, ಡೈರಿ ಉದ್ಯಮ ವಲಯ ದೇಶದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಹಾಗೂ ಬದಲಾವಣೆಗೂ ನೆರವಾಗುತ್ತಿದೆ. ಅದರಲ್ಲೂ, ಗ್ರಾಮೀಣ ಆರ್ಥಿಕತೆಯ ಒಂದು ಪ್ರಮುಖ ಭಾಗವಾಗಿ ರೂಪುಗೊಳ್ಳುತ್ತಿದೆ. ಹಳ್ಳಿಗಳಲ್ಲಿ ಲಕ್ಷ- ಲಕ್ಷ ಜನರಿಗೆ ಜೀವನಾಧಾರವೂ ಆಗಿದೆ.  ಅಗತ್ಯಕ್ಕೆ ಅನುಗುಣವಾಗಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಪೂರೈಸುವ ಮೂಲಕ ನಗರ- ಪಟ್ಟಣದ ಜನರ ಬದುಕಿನಲ್ಲೂ ತನ್ನದೇ ಆದ ಪಾತ್ರ ವಹಿಸುತ್ತಿದೆ ಈ ವಲಯ.

ದೇಶದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದಕ್ಕೆ ಅನುಗುಣವಾಗಿ ಬೆಳೆಯುತ್ತಿರುವ ಕ್ಷೀರೋದ್ಯಮ, 2015ರ ವೇಳೆಗೆ ಇನ್ನೂ ಮೂರು ಪಟ್ಟು ವೃದ್ಧಿ ಕಾಣಲಿದೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. 2017ರ ವೇಳೆಗೆ ಭಾರತದಲ್ಲಿ ಹಾಲಿನ ಉತ್ಪನ್ನಗಳ ಮಾರುಕಟ್ಟೆ 16300 ಕೋಟಿ ಡಾಲರ್ (ಅಂದಾಜು ₨10.35 ಲಕ್ಷ ಕೋಟಿ) ಮೀರುವ ನಿರೀಕ್ಷೆ ಇದೆ ಎಂದು ಐಎಂಆರ್‌ಸಿ ಸಂಶೋಧನಾ ತಂಡ ವರದಿ ಮಾಡಿದೆ.

ಗ್ರಾಮೀಣ ಭಾಗದಲ್ಲಿ ಹಾಲು-ಮೊಸರು ಮತ್ತು ತುಪ್ಪದ ಬಳಕೆ ಹೆಚ್ಚಾಗಿ ಕಂಡುಬಂದರೆ, ಮೆಟ್ರೊ ನಗರಗಳಲ್ಲಿ ಇದರೊಂದಿಗೆ ಪನ್ನೀರ್, ಯೋಗರ್ಟ್, ಚೀಸ್, ಐಸ್ ಕ್ರೀಂ, ಚಾಕೊಲೇಟ್, ಬೇಕರಿ ಪದಾರ್ಥಗಳು ಹಾಗೂ ಸಿಹಿ ತಿನಿಸುಗಳ ಬೇಡಿಕೆ ಅಧಿಕವಾಗಿದೆ. ಹಾಲಿನ ಉತ್ಪನ್ನಗಳಲ್ಲಿ ಅಡಕವಾಗಿರುವ ಪೌಷ್ಟಿಕಾಂಶ ಗುಣಗಳಿಂದಾಗಿ ದೇಶದಲ್ಲಿ ಹಾಗೂ ದೇಶದಾಚೆ ಈ ಮೌಲ್ಯವರ್ಧಿತ ಕ್ಷೀರೋತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಅದಕ್ಕೆ ಅನುಗುಣವಾಗಿ ಉತ್ಪಾದನಾ ಪ್ರಮಾಣವೂ ಅಧಿಕಗೊಂಡಿದೆ.

ಹಾಗೆಯೇ ಹಾಲು ಉತ್ಪಾದನೆಯಲ್ಲಿ ನಿರ್ಣಾಯಕ ಸ್ಥಾನದಲ್ಲಿರುವ ರಾಜ್ಯಗಳತ್ತ ನೋಡುವುದಾದರೆ, ಸುಧಾರಿತ ಪಶು ಸಂಗೋಪನಾ ಪದ್ಧತಿಗಳ ವಿಸ್ತರಣೆ; ಮೇವು ಪ್ರದೇಶದ ವಿಸ್ತರಣೆ;  ಬಹಳಷ್ಟು ಸರಳವಾಗಿ ಬದಲಾಗಿರುವ ಜಾನುವಾರು ಆರೈಕೆ ಶೈಲಿ; ಸಾಂಕ್ರಾಮಿಕ ರೋಗಗಳಿಗೆ ಸಕಾಲದ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿರುವುದು ಡೈರಿ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮಾರುಕಟ್ಟೆಗೆ ಪೂರೈಸಲಾದ ಉತ್ಪನ್ನದಲ್ಲಿ ಶೇ 9ರಿಂದ 11ರಷ್ಟು ಹಾಲನ್ನು 275 ಡೈರಿ ಘಟಕಗಳಲ್ಲಿ ಸಂಸ್ಕರಿಸಲಾಗುತ್ತದೆ.

ಮೌಲ್ಯವರ್ಧಿತ ಉತ್ಪನ್ನಗಳು
ತಂತ್ರಜ್ಞಾನ ಹಾಗೂ ಸೂಕ್ತ ಯಂತ್ರೋಪಕರಣಗಳ ಕೊರತೆಯ ಪರಿಣಾಮ 1970ರ ದಶಕದವರೆಗೂ ನಗರ ಪ್ರದೇಶಗಳಿಗೆ ಅಗತ್ಯವಿರುವ ಬಹುಪಾಲು ಮೌಲ್ಯವರ್ಧಿತ ಉತ್ಪನ್ನಗಳನ್ನು ಹೊರಗಿನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಹಾಲು, ಮಜ್ಜಿಗೆ, ಬೆಣ್ಣೆ, ತುಪ್ಪ ಮುಂತಾದ ಕೆಲವು ಸಾಂಪ್ರದಾಯಿಕ ಮಾದರಿಯ ಉತ್ಪನ್ನಗಳನ್ನು ಬಿಟ್ಟರೆ ಭಾರತದಲ್ಲಿ ಇತರೆ ಆಧುನಿಕ ಹಾಗೂ ನವೀನ ಮಾದರಿಯ ಉತ್ಪನ್ನಗಳನ್ನು ತಯಾರಿಸುವ ತಂತ್ರಜ್ಞಾನ ಅಷ್ಟೊಂದು ಮುಂದುವರಿದಿರಲಿಲ್ಲ.

ಹೀಗಾಗಿ 197೦ರವರೆಗೆ ಭಾರತೀಯ ಗ್ರಾಹಕರ ಇಂತಹ ಬೇಡಿಕೆಗಳನ್ನು ಹೊರಗಿನಿಂದಲೇ ಪೂರೈಕೆ  ಮಾಡಲಾಗುತ್ತಿತ್ತು. ಆದರೆ 1971ರ ನಂತರ ಭಾರತದಲ್ಲಿ ಇಂತಹ ಮೌಲ್ಯವರ್ಧಿತ ಡೈರಿ ಉತ್ಪನ್ನಗಳ ತಯಾರಿಕೆಯಲ್ಲಿ ಗಣನೀಯ ಸುಧಾರಣೆ ಕಂಡುಬಂದಿತು. ಒಂದು ಕಡೆ ತಂತ್ರಜ್ಞಾನದ ಅಭಿವೃದ್ಧಿ, ಇನ್ನೊಂದೆಡೆ ಪೂರಕ ಕಾಯ್ದೆಗಳ ಅನುಷ್ಠಾನ ಇದಕ್ಕೆ ಕಾರಣವಾಯಿತು ಎಂದೇ ಹೇಳಬಹುದಾಗಿದೆ. 1990ರ ಅವಧಿಗೆ ಅಗತ್ಯ ಉತ್ಪನ್ನಗಳ ಆಮದು ಪ್ರಮಾಣ ಸಾಕಷ್ಟು ಕಡಿಮೆ ಆಯಿತು. 2001ರಿಂದೀಚೆಗೆ ಭಾರತ ತನ್ನ ಗ್ರಾಹಕರ ಅಗತ್ಯಗಳನ್ನು ಪೂರೈಸುವುದೇ ಅಲ್ಲದೇ ಇತರೆ ದೇಶಗಳಿಗೆ ರಫ್ತು ಮಾಡುವಷ್ಟು ಸಶಕ್ತವಾಗಿ ಬೆಳೆದಿದೆ.

ಹೀಗೆ ಹಾಲಿನ ಉತ್ಪನ್ನಗಳ ಬಹು ದೊಡ್ಡ ರಫ್ತುದಾರ ದೇಶವಾಗಿ ಹೊರಹೊಮ್ಮುತ್ತಿರುವ ಭಾರತ, 2012–-13ರ (ಮಾರ್ಚ್) ಅವಧಿಯಲ್ಲಿ 87.82 ಸಾವಿರ ಮೆಟ್ರಿಕ್ ಟನ್ ಡೈರಿ ಉತ್ಪನ್ನಗಳನ್ನು ರಫ್ತು ಮಾಡಿದೆ. ಅಂದರೆ ಸುಮಾರು 1412.1 ಕೋಟಿ ರೂಪಾಯಿ­ಗಳಷ್ಟು ದೊಡ್ಡ ಮೊತ್ತದ ವಹಿವಾಟು ನಡೆಸಿದೆ.

ರಾಜ್ಯಗಳಲ್ಲಿನ ಕ್ಷೀರೋತ್ಪನ್ನ
ಭಾರತದ ಹಾಲು ಉತ್ಪಾದನೆಯ ಸುಮಾರು ಶೇ 47 ಪಾಲು ಉತ್ತರ ಭಾರತದಿಂದ ಬರುತ್ತದೆ. ಇದರಲ್ಲಿ ಸುಮಾರು ವಾರ್ಷಿಕ 220ರಿಂದ 230 ಲಕ್ಷ ಟನ್ ಹಾಲಿನ ಉತ್ಪಾದನೆ ಮೂಲಕ ಉತ್ತರ ಪ್ರದೇಶ ರಾಜ್ಯ ಮುಂಚೂಣಿಯಲ್ಲಿ ನಿಲ್ಲುತ್ತದೆ. ನಂತರದ ಸ್ಥಾನದಲ್ಲಿ ರಾಜಸ್ತಾನ (135.12 ಲಕ್ಷ ಟನ್), ಆಂಧ್ರಪ್ರದೇಶ (120.88 ಲಕ್ಷ ಟನ್), ಗುಜರಾತ್ (98.17 ಲಕ್ಷ ಟನ್) ರಾಜ್ಯಗಳು ಬರುತ್ತವೆ. ಪ್ರಸ್ತುತ ಉತ್ಪಾದನೆ­ಯಲ್ಲಿ 11ನೇ ಸ್ಥಾನದಲ್ಲಿ ನಿಂತಿರುವ ಕರ್ನಾಟಕ, ಸುಮಾರು 54.47 ಲಕ್ಷ ಟನ್ ಹಾಲನ್ನು ಉತ್ಪಾದಿಸುತ್ತಿದೆ.

ಕ್ಷೀರೋತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿರುವ ಗುಜರಾತ್, ಸಹಕಾರಿ ರಂಗದ ಮೂಲಕ ಹಾಲು ಸಂಗ್ರಹಣೆಯಲ್ಲಿ ಮೊದಲ ಸ್ಥಾನ­ದಲ್ಲಿದೆ. ಕರ್ನಾಟಕವೂ ಸಹಕಾರಿ ರಂಗದ ಕ್ಷೀರೋದ್ಯಮದಲ್ಲಿ ಹಾಗೂ ಅದರ ಮೂಲಕ ಹಾಲು ಸಂಗ್ರಹಣೆಯಲ್ಲಿ 2ನೇ ಸ್ಥಾನದಲ್ಲಿದೆ.

ಒಟ್ಟಾರೆ ಹಾಲಿನ ಉದ್ಯಮ ವಿಚಾರದಲ್ಲಿ ಕರ್ನಾಟಕದ ಸಾಧನೆ  ಅಷ್ಟೇನೂ ಆಶಾದಾಯಕ ಸ್ಥಿತಿಯಲ್ಲಿ ಇಲ್ಲ. ಹಾಲಿನ ಉತ್ಪಾದನೆಯಲ್ಲಿ ರಾಜ್ಯ ಬಹುತೇಕ ಕೊನೆಯ ಸ್ಥಾನದಲ್ಲಿದೆ. ಹಾಗಾಗಿ, ಮೊದಲು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳದ ಹೊರತು, ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಮೂಡಿಸಲಾರದು. ಕೆಟ್ಟ ಸ್ಥಿತಿಯಲ್ಲಿರುವ ರಸ್ತೆಗಳು, ವಿದ್ಯುತ್ ಸರಬರಾಜು ಸಮಸ್ಯೆ, ಸಾರಿಗೆ ದುರವಸ್ತೆ, ಪರಿಣಿತ ಮಾನವ ಸಂಪನ್ಮೂಲದ ಕೊರತೆ, ಹಾಲು ಉತ್ಪಾದನೆಯಲ್ಲಾಗುತ್ತಿರುವ ಹೆಚ್ಚುವರಿ ವೆಚ್ಚ, ಮೇವಿನ ಕೊರತೆ, ಹಸುಗಳ ಅನಾರೋಗ್ಯ ಮುಂತಾದ ಅನೇಕ ಕಾರಣಗಳು ರಾಜ್ಯದಲ್ಲಿ ಹಾಲಿನ ಉತ್ಪಾದನೆ ಕುಂಠಿತಗೊಳ್ಳಲು ಕಾರಣವಾಗಿವೆ ಎಂದೇ ಹಿನ್ನಡೆಗೆ ಕಾರಣಗಳನ್ನು ಗುರುತಿಸಲಾಗಿದೆ.

‘ರಾಜ್ಯದಲ್ಲಿ ಪ್ರತಿದಿನ ಸುಮಾರು 150 ಲಕ್ಷ ಕೆ.ಜಿ ಹಾಲು ಉತ್ಪಾದನೆಯಾಗುತ್ತದೆ. ಇದರಲ್ಲಿ ಸುಮಾರು 55 ಲಕ್ಷ ಕೆ.ಜಿ ಹಾಲು ಗೃಹ ಬಳಕೆಗೆ ಮೀಸಲಾದರೆ, 90 ಲಕ್ಷ ಕೆ.ಜಿಯಷ್ಟು ಹಾಲು ವಿವಿಧೆಡೆ ಮಾರಾಟಕ್ಕೆ ಲಭ್ಯವಾಗುತ್ತದೆ. ಇದರಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಅಂದಾಜು ಶೇ 40ರಷ್ಟು ಹಾಲು ಬಳಕೆಯಾಗುತ್ತದೆ’ ಎನ್ನುತ್ತಾರೆ ಕರ್ನಾಟಕ ಹಾಲು ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್.

‘ಸಹಕಾರಿ ರಂಗದ ನೆರವಿನಿಂದಾಗಿ ಹಾಲು ಸಂಗ್ರಹಣೆಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿರುವ ರಾಜ್ಯವನ್ನು ಉತ್ಪಾದನೆ ವಿಚಾರದಲ್ಲಿಯೂ ಮುಂಚೂಣಿಗೆ ತರಲು ಪ್ರಯತ್ನಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

ಗ್ರಾಮೀಣ ಮಟ್ಟದ ಸವಲತ್ತು
ದೇಶದಲ್ಲಿ ಮತ್ತು ರಾಜ್ಯದಲ್ಲಿ ಹಾಲಿನ ಮೌಲ್ಯವರ್ಧಿತ ಉತ್ಪಾದನೆ ಹೆಚ್ಚಿದಂತೆ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಅನೇಕ ರಂಗಗಳಲ್ಲಿ ಸಂಚಲನ ಉಂಟಾಗಿದೆ ಎಂದೇ ಹೇಳಬಹುದು. ಈ ವಲಯದಿಂದಾಗಿ ರಾಜ್ಯದಲ್ಲಿ ಸಾಕಷ್ಟು ಕ್ಷೇತ್ರಗಳು ಲಾಭ ಪಡೆದುಕೊಳ್ಳುತ್ತಿವೆ. ಹಳ್ಳಿಗಳಲ್ಲಿ ಅವ್ಯಾಹತವಾಗಿ ಹರಿದಾಡುತ್ತಿರುವ ಹಣಕಾಸು( ಪ್ರತಿದಿನ ಸುಮಾರು ₨10 ಕೋಟಿ) ಗ್ರಾಮೀಣ ಆರ್ಥಿಕತೆ ಮೇಲೆ ಪ್ರಭಾವ ಬೀರಿದೆ. ಸ್ಥಿರವಾದ ಆದಾಯದಿಂದ ರೈತರ ಅರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತಿದೆ. ರೈತರ ವಲಸೆ ತಕ್ಕಮಟ್ಟಿಗೆ ಕಡಿಮೆ ಆಗುತ್ತಿದೆ. ಸುಮಾರು 23 ಲಕ್ಷ ರೈತರನ್ನು ಹೊರತುಪಡಿಸಿ ಕ್ಷೀರೋದ್ಯಮದಿಂದಾಗಿ ರಾಜ್ಯದಾದ್ಯಂತ ಗ್ರಾಮೀಣ ಮಟ್ಟದಲ್ಲಿ ಪರೋಕ್ಷವಾಗಿ ಅಂದಾಜು 30,000 ಉದ್ಯೋಗಾಕಾಶಗಳು ಸೃಷ್ಟಿಯಾಗಿವೆ.

ಸಂಸ್ಕೃತಿ–ಆಚರಣೆಗೆ ಸಿಹಿ
ಭಾರತೀಯ ಸಂಸ್ಕೃತಿಗೂ, ಸಿಹಿ ತಿನಿಸಿಗಳಿಗೂ  ಅವಿನಾಭಾವ ಸಂಬಂಧ. ಪ್ರತಿ ಹಬ್ಬಕ್ಕೂ ಭಿನ್ನವಾದ ಸಿಹಿ ತಿನಿಸುಗಳು. ಹಾಗಾಗಿಯೇ ಸಿಹಿ ತಿನಿಸುಗಳ ಮೂಲಕವೇ ಹಬ್ಬಗಳನ್ನೂ ನೇರವಾಗಿ ಗುರುತಿಸಬಹುದಾಗಿದೆ.

ಸಂಕ್ರಾಂತಿಗೆ ಗೆಣಸು–ಬೆಲ್ಲ ಹಾಗೂ ಅಕ್ಕಿ ಅಥವಾ ಗೋಧಿ ಸೇರಿಸಿ ಮಾಡಿ ಸಿಹಿ  ಪೊಂಗಲ್‌ ಅಥವಾ ಹುಗ್ಗಿ, ಯುಗಾದಿಗೆ  ಕಾಯಿ ಅಥವಾ ಬೇಳೆ–ಬೆಲ್ಲದ ಹೋಳಿಗೆ, ಗಣೇಶನ ಹಬ್ಬಕ್ಕೆ ಸಿಹಿ ಕಡುಬು, ಕ್ರಿಸ್‌ಮಸ್‌ಗೆ ಫ್ಲಮ್‌ ಕೇಕ್‌, ರಂಜಾನ್‌ಗೆ ಕೀರು.... ಹೀಗೆ ವಿವಿಧ ಧರ್ಮಗಳ ಹಬ್ಬಗಳಲ್ಲಿ ಸಿಹಿ ತಿನಿಸುಗಳ ವೈವಿಧ್ಯ...

ಡೈರಿ ಉತ್ಪನ್ನಗಳು
ಡೈರಿ ಉದ್ಯಮದ ಒಟ್ಟಾರೆ ಉತ್ಪನ್ನಗಳನ್ನು ವಿವಿಧ ಭಾಗಗಳಲ್ಲಿ: ಬೆಣ್ಣೆ, ಪನೀರ್, ಯೋಗರ್ಟ್, ಐಸ್‌ಕ್ರೀಂ, ಚಾಕೊಲೇಟ್ಸ್, ಡೈರಿ ವೈಟ್ನರ್, ಮಕ್ಕಳ ಆಹಾರ ಮತ್ತು ಬಿಸ್ಕತ್‌ಗಳು ಹಾಗೂ ಬೇಕರಿ ಉತ್ಪನ್ನಗಳಾಗಿ ವಿಂಗಡಿಸಲಾಗಿದೆ.

ಐಸ್‌ಕ್ರೀಂ ಉದ್ಯಮ
ಸಿಹಿ-ಸಿಹಿ, ರುಚಿ-ರುಚಿ, ತಂಪು-ತಂಪು ಐಸ್‌ಕ್ರೀಂ ಎಂದರೆ ಎಲ್ಲರಿಗೂ ಪ್ರೀತಿ. ಬಹುಶಃ ವಯೋಮಿತಿಯಿಲ್ಲದೆ ಎಲ್ಲರೂ ಇಷ್ಟಪಡುವ ತಿನಿಸಿನ ಪಟ್ಟಿಯಲ್ಲಿ ಐಸ್ ಕ್ರೀಂಗೆ ಮೊದಲ ಸ್ಥಾನ. ಅಂತೆಯೇ ಇತ್ತೀಚಿನ ವರ್ಷಗಳಲ್ಲಿ ಐಸ್‌ಕ್ರೀಂ ಉದ್ಯಮ ಮಹತ್ವದ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಅಲ್ಪಾವಧಿಯಲ್ಲಿಯೇ ರಚನಾತ್ಮಕ ಬೆಳವಣಿಗೆ ಸಾಧಿಸುತ್ತಿರುವ ಐಸ್‌ಕ್ರೀಂ ಉದ್ಯಮ, ವರ್ಷದಿಂದ ವರ್ಷಕ್ಕೆ ₨1 ಕೋಟಿಯಷ್ಟು ಅಭಿವೃದ್ಧಿ ಕಾಣುತ್ತಿದೆ. ಆದರೆ ಈ ಬೆಳವಣಿಗೆ ಸಂಘಟಿತ ಮಾರುಕಟ್ಟೆಗೆ ಹೆಚ್ಚು ಅನ್ವಯಿಸುತ್ತಿದ್ದು, ಇದು ವಾರ್ಷಿಕ ಶೇ 15ರಷ್ಟು ಬೆಳವಣಿಗೆ ಹೊಂದುತ್ತಿದೆ.

ಪನೀರ್
ಇತ್ತೀಚಿನ ದಿನಗಳಲ್ಲಿ ಪನೀರ್ ಬೇಡಿಕೆ ದ್ವಿಗುಣಗೊಂಡಿದೆ. ಹೋಟೆಲ್ ಉದ್ಯಮದಿಂದ ಪನೀರ್ಗೆ ಅತಿ ಹೆಚ್ಚು ಬೇಡಿಕೆ ಬರುತ್ತಿದೆ. ಪಾಲಕ್‌ ಪನೀರ್‌, ಪನ್ನೀರ್‌ ಕುರ್ಮಾ ಮೊದಲಾದ ತಿನಿಸುಗಳ ಆಸೆಯಿಂದಾಗಿ ಮನೆಗಳಲ್ಲಿಯೂ ಇದರ ಬಳಕೆ ಇತ್ತೀಚೆಗೆ ಹೆಚ್ಚುತ್ತಿದೆ. ಮಕ್ಕಳ ಆಹಾರದಲ್ಲಿಯೂ ಪನೀರ್ ಪ್ರಮುಖವಾಗಿ ಬಳಸಲಾಗುತ್ತದೆ. ಪನೀರ್ ಬಳಸಿ ತಯಾರಿಸಿದ ಫಾಸ್ಟ್‌ಪುಡ್ ಪ್ರಿಯರ ಸಂಖ್ಯೆ ಹೆಚ್ಚಿದಂತೆ ಚಿಕ್ಕ-ಪುಟ್ಟ ತಿನಿಸು ಮಾರಾಟ ಮಳಿಗೆಗಳಿಂದ ಹಿಡಿದು ಸ್ಟಾರ್ ಹೋಟೆಲ್‌ಗಳವರೆಗೂ ಪನೀರ್ ಬಳಕೆ ಹೆಚ್ಚುತ್ತಲೇ ಇದೆ. ಡಾಮಿನೋಸ್, ಫಿಜ್ಜಾ ಹಟ್, ಮ್ಯಾಕ್ ಡೋನಾಲ್ಡ್ಸ್, ಕೆಎಫ್‌ಸಿ ಸೇರಿದಂತೆ ಬಹುತೇಕ ಎಲ್ಲಾ ಬಹುರಾಷ್ಟ್ರೀಯ ಫಾಸ್ಟ್‌ಫುಡ್ ಮಳಿಗೆಗಳ ಮೆನುಗಳಲ್ಲಿಯೂ ಪನೀರ್ ಬಳಸಿದ ತಿಂಡಿಗಳೇ ರಾರಾಜಿಸುತ್ತಿವೆ.

ಯೋಗರ್ಟ್
ನವ ಯುಗದ ಆಕರ್ಷಕ ಉತ್ಪನ್ನಗಲ್ಲಿ ಒಂದಾಗಿರುವ ಯೋಗರ್ಟ್, ಡೈರಿ ಉದ್ಯಮದ ನಿರ್ಣಾಯಕ ಉತ್ಪನ್ನವಾಗಿದೆ. ಭಾರತದಲ್ಲಿ ಯೋಗರ್ಟ್ ಉದ್ಯಮ, ವಾರ್ಷಿಕ ಶೇ 45ರ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಸಂಘಟಿತ ವಲಯದಲ್ಲಿ ಯೋಗರ್ಟ್ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದೆ. ಯೋಗರ್ಟ್‌ ವಹಿವಾಟು ಪ್ರಸ್ತುತ  ₨750 ಕೋಟಿಯಷ್ಟಿದ್ದು, 2015ರ ವೇಳೆಗೆ ₨1,200 ಕೋಟಿ ತಲುಪುವ ಸಾಧ್ಯತೆ ಇದೆ ಎಂಬುದು ಮಾರುಕಟ್ಟೆ ತಜ್ಞರ ಈಗಿನ ಅಂದಾಜು.

ಕೊಬ್ಬುರಹಿತ ಪದಾರ್ಥವಾಗಿರುವ ಯೋಗರ್ಟ್ ಐಸ್ ಕ್ರೀಂ, ಫ್ಲೇವರ್ಡ್ ಮಿಲ್ಕ್, ಫ್ರೂಟ್‌ಜ್ಯೂಸ್‌ನಂತಹ ಉತ್ಪನ್ನಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿದ್ದು, ಅಂತಹ ಅನೇಕ ಸಾಂಪ್ರದಾಯಿಕ ಉತ್ಪನ್ನಗಳಿಗೆ ಪರ್ಯಾಯವಾಗಿ ರೂಪುಗೊಳ್ಳುತ್ತಿದೆ. ಶುಚಿ ಮತ್ತು -ಆರೋಗ್ಯ ರಕ್ಷಣೆ ದೃಷ್ಟಿಯಿಂದಲೂ ಯೋಗರ್ಟ್ ಬಳಕೆಗೆ ಇಂದಿನ ಜನಾಂಗ ಹೆಚ್ಚು ಆದ್ಯತೆ ನೀಡುತ್ತಿದೆ. ವಿವಿಧ ಬಗೆಯ ವಾಸನೆ, ಸ್ವಾದ, ಬಣ್ಣ ಹಾಗೂ ರೂಪಗಳಲ್ಲಿ ಬರುತ್ತಿರುವ ಯೋಗರ್ಟ್ ಮುಂದಿನ ಎರಡು ಮೂರು ವರ್ಷಗಳಲ್ಲಿ ಶೇ 70ರಿಂದ ಶೇ 80ರಷ್ಟು ಅಭಿವೃದ್ಧಿ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ ಭಾರತೀಯ ವಾಣಿಜ್ಯೋ­ದ್ಯಮ ಮಹಾಸಂಘ (ಅಸೋಚಾಂ)

ಉದ್ಯಮಕ್ಕೂ ‘ಸಿಹಿ’ ಸುದ್ದಿ
ಸಿಹಿ ತಯಾರಿಕೆ ಉದ್ಯಮವೂ ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳೊಂದಿಗೆ ತಳಕು ಹಾಕಿಕೊಂಡಿದೆ.
ಪ್ರತಿದಿನಕ್ಕಿಂತಲೂ ಹಬ್ಬಗಳಲ್ಲಿ  ಸಿಹಿ ತಿನಿಸುಗಳಿಗೆ ಬೇಡಿಕೆ ಮೂರು ಪಟ್ಟು ಹೆಚ್ಚುತ್ತದೆ. ಒಂದೊಂದು ಹಬ್ಬದೊಂದಿಗೆ ಒಂದೊಂದು ಪ್ರಕಾರದ ಸಿಹಿ ಗುರುತಿಸಿಕೊಂಡಿದೆ. ಅಲ್ಲದೇ, ಮನೆಯ ಮಹತ್ವದ ಸಭೆ-ಸಮಾರಂಭಗಳಿಗೂ ಸಿಹಿಯ ಆತಿಥ್ಯ ಇದ್ದೇ ಇರುತ್ತದೆ. ಅಂತೆಯೇ ಖೋವಾ, ಮೈಸೂರ್ ಪಾಕ್, ಬರ್ಫಿ, ಪೇಡಾ, ಬೇಸನ್ ಲಾಡು, ರಸಗುಲ್ಲಾ, ಖೀರು, ಹಲ್ವಾ, ಶ್ರೀಕಂಡ ಮುಂತಾದ ಸಿಹಿ ತಿನಿಸುಗಳು ದಾಖಲೆಯ ಬೇಡಿಕೆಯನ್ನು ಪ್ರಕಟಿಸುತ್ತಿವೆ.

ಬದಲಾಗುತ್ತಿರುವ ಇಂದಿನ ಜೀವನ ಶೈಲಿಯಲ್ಲಿ  ಯುಎಚ್‌ಟಿ ಗುಂಪಿನ ಉತ್ಪನ್ನಗಳಾದ ಗುಡ್‌ಲೈಫ್ ಸ್ಲಿಮ್, ಸ್ಮಾರ್ಟ್, ಸುಹಾಸಿತ ಹಾಲು (ಫ್ಲೇವರ್ಡ್ ಮಿಲ್ಕ್), ಮಸಾಲಾ ಮಜ್ಜಿಗೆ ಹಾಗೂ  ಹಾಲಿನ ಪುಡಿ ಮೊದಲಾದ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಪೂರಕ ಅಂಶಗಳು
ದೇಶದಲ್ಲಿ ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ, ಬಳಕೆ ಮತ್ತು ಮಾರಾಟಕ್ಕೆ ಅನೇಕ ಅಂಶಗಳು ಪೂರಕವಾಗಿರುವುದನ್ನು ಕಾಣಬಹುದು. ಅವುಗಳಲ್ಲಿ ಮುಖ್ಯವಾದುವುಗಳೆಂದರೆ:

ಗ್ರಾಹಕನ ಖರೀದಿ ಸಾಮರ್ಥ್ಯದಲ್ಲಿ ಸುಧಾರಣೆ

ವೈವಿಧ್ಯಮಯ ತಿನಿಸುಗಳಿಗೆ ಗಣನೀಯವಾಗಿ ಹೆಚ್ಚುತ್ತಿರುವ ಬೇಡಿಕೆ

ಉತ್ಪನ್ನವನ್ನು ಸಾಗಿಸಲು ಅನುಕೂಲಕರವಾದ ಸುಧಾರಿತ ಸಾರಿಗೆ ಸೌಲಭ್ಯಗಳು

ಉತ್ಪಾದನೆಗೆ ಅವಶ್ಯಕವಾದ ಸಾಧನಗಳ ಸುಲಭ ಲಭ್ಯತೆ

ಸಾರ್ವಜನಿಕ, ಸಹಕಾರಿ ಮತ್ತು ಖಾಸಗಿ ವಲಯದಲ್ಲಿ ಹೆಚ್ಚುತ್ತಿರುವ ಡೈರಿ ಘಟಕಗಳ, ಸಂಸ್ಕರಣಾ ಘಟಗಳ ಸಂಖ್ಯೆ

ಉದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿರುವ ಪರಿಣತ ಸಿಬ್ಬಂದಿ

ದೇಶದ ಬೃಹತ್ ಪ್ರಮಾಣದ ನೈಸರ್ಗಿಕ ಸಂಪನ್ಮೂಲ

ಇಷ್ಟೆಲ್ಲದರ ಮಧ್ಯೆಯೂ ಒಟ್ಟಾರೆ ಹಾಲಿನ ಉದ್ಯಮಕ್ಕೆ ಅನುಗುಣವಾಗಿ ಮೌಲ್ಯವರ್ಧಿತ ಉತ್ಪನ್ನಗಳ ಉದ್ಯಮ ಬೆಳೆಯುತ್ತಿಲ್ಲ ಎನ್ನುವ ವಾದವೂ ಇದೆ.  ಇದಕ್ಕೆ ಮುಖ್ಯ ಕಾರಣ, ಡೈರಿ ಉತ್ಪನ್ನಗಳಲ್ಲಿ ರಸಾಯನಿಕ ವಸ್ತುಗಳ ಬಳಕೆ ಮತ್ತು ಕಲಬೆರಕೆ ಹೆಚ್ಚುತ್ತಿರುವುದು.

ಅಧಿಕ ಲಾಭದ ಆಸೆಯಿಂದ ಡೈರಿ ಉತ್ಪನ್ನಗಳಲ್ಲಿ ಮಾಡಲಾಗುವ ಕಲಬೆರಕೆ ಮೌಲ್ಯವರ್ಧಿತ ಉತ್ಪನ್ನಗಳ ಒಟ್ಟಾರೆ ಗುಣಮಟ್ಟದ ಮೇಲೆ ಮತ್ತು ಮಾರಾಟದ ಪೆಟ್ಟು ನೀಡುತ್ತಿದೆ. ಡೈರಿ ಉದ್ಯಮದ ಉದಾರೀಕರಣ ನೀತಿಯನ್ನು ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹಾಗೂ ದಿಢೀರ್‌ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದೂ ಉದ್ಯಮದ ಬೆಳವಣಿಗೆ ಅಡ್ಡಗಾಲಾಗಿದೆ ಎಂಬ ಆರೋಪವನ್ನು ಅಲ್ಲಗಳೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT