ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಇರುವ ಸರ್ಕಾರಿ ಹುದ್ದೆ ಭರ್ತಿ: ಸಿ.ಎಂ. ಜತೆ ಚರ್ಚೆ

Last Updated 16 ಏಪ್ರಿಲ್ 2011, 6:25 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನಲ್ಲಿ ಖಾಲಿ ಇರುವ ವೈದ್ಯ ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಭರವಸೆ ನೀಡಿದರು.

ತಾಲ್ಲೂಕಿನ ಜವನ ಗೊಂಡನಹಳ್ಳಿಯಲ್ಲಿ ಶುಕ್ರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಶೀಘ್ರ ಜಾರಿಗೆ ಬರುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸರ್ಕಾರ ಎಲ್ಲಾ ವರ್ಗದ ಅಭಿವೃದ್ಧಿಗೆ ಒತ್ತು ನೀಡುತ್ತಿದೆ ಎಂದು ಅವರು ತಿಳಿಸಿದರು.

ಸರ್ಕಾರಿ ವೈದ್ಯರು ನಗರ ಪ್ರದೇಶದ ವ್ಯಾಮೋಹದಿಂದ ಹೊರಬರಬೇಕು. ಗ್ರಾಮೀಣ ಪ್ರದೇಶದಲ್ಲಿ ಕನಿಷ್ಟ ಮೂಲ ಸೌಲಭ್ಯಗಳಿಲ್ಲದೆ, ಆರೋಗ್ಯವೂ ಇಲ್ಲದೆ ನರಳುತ್ತಿರುವ ಜನರ ನೆರವಿಗೆ ಧಾವಿಸಬೇಕು. ಹಣ ಮಾಡುವುದೇ ಬದುಕಿನ ಗುರಿ ಆಗಬಾರದು. ಸರ್ಕಾರಿ ವೈದ್ಯಕೀಯ ಸೀಟು ಪಡೆಯುವವರಿಗೆ ಕನಿಷ್ಟ ಐದು ವರ್ಷ ಗ್ರಾಮೀಣ ಸೇವೆ ಕಡ್ಡಾಯ ಮಾಡಬೇಕು ಎಂದು ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ ಆಗ್ರಹಿಸಿದರು.

ಜೆಜಿ ಹಳ್ಳಿ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ನಾಲ್ಕು ಹಾದು ಹೋಗಿದ್ದು, ಪದೇ ಪದೇ ಅಪಘಾತಗಳು ಸಂಭವಿಸುತ್ತಿರುತ್ತವೆ. ಆದ್ದರಿಂದ ಇಲ್ಲಿಗೆ ಸಮುದಾಯ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು. ತಾವು ಸ್ವಂತ ಖರ್ಚಿನಿಂದ ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾದವರಿಗೆ ನೆರವಾಗಲೆಂದು ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭಿಸಿದ್ದು, ಸಾರ್ವಜನಿಕರು ಇದರ ಲಾಭ ಪಡೆಯಬೇಕು ಎಂದು ತಾ.ಪಂ. ಸದಸ್ಯ ಮಹಮದ್ ಫಕೃದ್ದೀನ್ ಮನವಿ ಮಾಡಿದರು.

ಆಸ್ಪತ್ರೆಗೆ ಅಗತ್ಯವಿರುವ ವಿದ್ಯುತ್ ಸೌಲಭ್ಯಕ್ಕಾಗಿ ಪರಿವರ್ತಕ ಅಳವಡಿಸಲು ಹಣ ಕಟ್ಟಿ ಎರಡು ತಿಂಗಳಾದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ನೂತನ ಆಸ್ಪತ್ರೆಯಲ್ಲಿ ಶವಾಗಾರವಿಲ್ಲ. ತುರ್ತು ಸೇವೆಗೆ ಅಗತ್ಯವಿರುವ ಔಷಧಿಯನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಬೇಕು ಎಂದು ಗ್ರಾ.ಪಂ. ಅಧ್ಯಕ್ಷ ಖಾಲಿದ್ ಹುಸೇನ್ ಒತ್ತಾಯ ಮಾಡಿದರು.

ಜಿ.ಪಂ. ಸದಸ್ಯೆ ಕರಿಯಮ್ಮ ಶಿವಣ್ಣ, ಗಂಗಮ್ಮ, ಡಾ. ವೆಂಕಟಶಿವಾರೆಡ್ಡಿ, ಡಾ.ಮೋಹನ್ ಕುಮಾರ್, ಮಹಮದ್ ಫಕೃದ್ದೀನ್, ಖಾಲಿದ್ ಹುಸೇನ್, ಅನುರಾಧಾ, ಪುಷ್ಪಾ, ಡಾ.ಸುಜಾತಾ,ರತ್ನಮ್ಮ, ಡಾ. ರಂಗನಾಥ್, ಡಾ.ಕೆ.ಎಸ್. ರಂಗನಾ, ಸಿದ್ದೇಗೌಡ, ಶಾರದಮ್ಮ, ಹಸೀನಾಬಿ, ಅಬ್ದುಲ್ ರಜಾಕ್, ರಾಧಮ್ಮ, ಭೂತೇಶ್, ಲೋಕೇಶ್, ಲಕ್ಷ್ಮೀ, ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT