ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಾವಿ ಸರ್ಕಾರಿ ಬಾವಿಯಾದ ಪವಾಡ !

ಜಿಲ್ಲಾ ಪಂಚಾಯ್ತಿ ಅನುದಾನ ದುರುಪಯೋಗ ಪ್ರಕರಣ ಬೆಳಕಿಗೆ
Last Updated 23 ಡಿಸೆಂಬರ್ 2013, 5:33 IST
ಅಕ್ಷರ ಗಾತ್ರ

ಸಾಗರ: ಖಾಸಗಿ ಬಾವಿಯನ್ನು ಸರ್ಕಾರಿ ಬಾವಿ ನುಂಗಿರುವ ಸ್ವಾರಸ್ಯಕರ ಘಟನೆಯೊಂದು ಸಾಗರ ತಾಲ್ಲೂಕಿನ ಭೀಮನೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಲ್ಲತ್ತಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕೆಲವು ವರ್ಷಗಳ ಹಿಂದೆ ಹುಲ್ಲತ್ತಿ ಗ್ರಾಮದ ಗಾಮಪ್ಪ ಎಂಬುವವರು ತಮ್ಮ ಸ್ವಂತ ಜಾಗವಾದ ಸರ್ವೇ ನಂ.77/10ರಲ್ಲಿ ತಮ್ಮ ಮನೆಯ ಬಳಕೆಗಾಗಿ ಬಾವಿಯೊಂದನ್ನು ತಗೆಸಿದ್ದರು. ಹೀಗೆ ಬಾವಿ ತಗೆಸುವ ಗುತ್ತಿಗೆಯನ್ನು ಗುತ್ತಿಗೆದಾರರೊಬ್ಬರಿಗೆ ನೀಡಿದ್ದರು. ಕೆಲವು ತಿಂಗಳಲ್ಲೇ ಈ ಕೆಲಸ ಮುಗಿದು ಬಾವಿಯನ್ನು ಗಾಮಪ್ಪ ಅವರ ಕುಟುಂಬದವರು ಉಪಯೋಗಿಸುತ್ತಾ ಬಂದಿದ್ದಾರೆ.

ಇತ್ತೀಚೆಗೆ ಗಾಮಪ್ಪ ಅವರ ಕುಟುಂಬಕ್ಕೆ ದಿಢೀರನೆ ಆಘಾತವೊಂದು ಎದುರಾದಂತೆ ಜಿಲ್ಲಾ ಪಂಚಾಯ್ತಿಯಿಂದ ಒಂದು ನೋಟಿಸ್‌ ಬಂದಿದೆ. ಆ ನೋಟಿಸ್‌ ಪ್ರಕಾರ ಸರ್ವೇ ನಂ.77/10ರಲ್ಲಿರುವ ಗಾಮಪ್ಪ ಅವರಿಗೆ ಸೇರಿದ ಜಾಗದಲ್ಲಿನ ಬಾವಿ ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ನಿರ್ಮಿಸಿದ ಬಾವಿಯಾಗಿದ್ದು, ಅದು ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗಿದೆ ಎಂದು ತಿಳಿಸಲಾಗಿತ್ತು.

ಅದೇ ರೀತಿ ಈ ಬಾವಿಯನ್ನು ಸಾರ್ವಜನಿಕರು ಉಪಯೋಗಿಸಲು ನೀವು ಅಡ್ಡಿಪಡಿಸಬಾರದು ಎಂದು ಗಾಮಪ್ಪ ಅವರಿಗೆ ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಈ ನೋಟಿಸ್ ಬಂದ ನಂತರ ಒಮ್ಮೆಲೆ ಆಶ್ಚರ್ಯ ಹಾಗೂ ಆಘಾತ ಎರಡನ್ನೂ ಅನುಭವಿಸಿದ ಗಾಮಪ್ಪ ಅವರು, ಜಿಲ್ಲಾ ಪಂಚಾಯ್ತಿ ಕಚೇರಿಗೆ ಹೋಗಿ ವಿಚಾರಿಸಿದಾಗ ನಂಬಲು ಕಷ್ಟವಾದ ಸಂಗತಿಯೊಂದು ಹೊರ ಬಂದಿತು.

ಹುಲ್ಲತ್ತಿ ಗ್ರಾಮಸ್ಥರೊಬ್ಬರು ಮಾಹಿತಿ ಹಕ್ಕಿನ ಕಾಯ್ದೆಯಡಿ ಪಡೆದ ಮಾಹಿತಿ ಪ್ರಕಾರ, ಗಾಮಪ್ಪ ಅವರ ಜಾಗದಲ್ಲಿದ್ದ ಬಾವಿ ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯ್ತಿ ಅನುದಾನದಿಂದ ತೆರೆಯಲಾದ ಬಾವಿಗಳ ಪೈಕಿ ಒಂದಾಗಿತ್ತು. ಈ ಮಾಹಿತಿ ಪಡೆದವರು ಹುಲ್ಲತ್ತಿ ಗ್ರಾಮದಲ್ಲಿನ ಬಾವಿಯನ್ನು ಗಾಮಪ್ಪ ಒಬ್ಬರೆ ಬಳಸುತ್ತಿದ್ದಾರೆ ಎಂದು ದೂರು ನೀಡಿದ್ದರು. ಈ ದೂರಿನ ಆಧಾರದ ಮೇರೆಗೆ ಜಿಲ್ಲಾ ಪಂಚಾಯ್ತಿಯಿಂದ ಗಾಮಪ್ಪ ಅವರಿಗೆ ನೋಟಿಸ್ ಬಂದಿತ್ತು.

ಗಾಮಪ್ಪ ಅವರು ಮತ್ತಷ್ಟು ಮಾಹಿತಿ ಕಲೆ ಹಾಕಿದಾಗ, ಗುತ್ತಿಗೆದಾರ ಅವರ ಮನೆಯ ಬಾವಿ ನಿರ್ಮಿಸಿದ್ದನೋ ಅದೇ ಗುತ್ತಿಗೆದಾರ ಗಾಮಪ್ಪ ಅವರ ಮನೆಯ ಬಾವಿ ತೋರಿಸಿ ಅದಕ್ಕೆ ಜಿಲ್ಲಾ ಪಂಚಾಯ್ತಿಯಿಂದ ಬಿಲ್‌ ಮಾಡಿಸಿಕೊಂಡು ₨70 ಸಾವಿರ ಪಡೆದಿದ್ದ ! ಈ ಕಾರಣ ಜಿಲ್ಲಾ ಪಂಚಾಯ್ತಿ ದಾಖಲೆಗಳಲ್ಲಿ ಗಾಮಪ್ಪ ಅವರ ಬಾವಿ ಸರ್ಕಾರಿ ಬಾವಿಯಾಗಿ ಮಾರ್ಪಾಟಾಗಿತ್ತು.

ನಿಯಮಗಳ ಪ್ರಕಾರ ಜಿಲ್ಲಾ ಪಂಚಾಯ್ತಿಯಿಂದ ಅನುದಾನ ಪಡೆದು ಬಾವಿ ನಿರ್ಮಿಸುವ ವಿಚಾರ ಸಂಬಂಧಪಟ್ಟ ಗ್ರಾಮ ಪಂಚಾಯ್ತಿಗೆ ತಿಳಿದಿರಬೇಕು. ಹೀಗೆ ಬಾವಿ ನಿರ್ಮಿಸುವಾಗ ಅದನ್ನು ಸರ್ಕಾರಿ ಜಾಗದಲ್ಲಿ ನಿರ್ಮಿಸಬೇಕು. ಒಂದು ವೇಳೆ ಖಾಸಗಿ ವ್ಯಕ್ತಿಗೆ ಸೇರಿದ್ದ ಜಾಗದಲ್ಲಿ ನಿರ್ಮಿಸುವುದಾದರೇ ಆ ಜಾಗವನ್ನು ಪಂಚಾಯ್ತಿ ಮೊದಲು ತನ್ನ ಸುಪರ್ದಿಗೆ ಪಡೆಯಬೇಕು. ಬಾವಿ ನಿರ್ಮಾಣವಾದ ನಂತರ ಅದರ ನಿರ್ವಹಣೆ ಪಂಚಾಯ್ತಿ ಪಾಲಿಗೆ ಬರುತ್ತದೆ.

ಹುಲ್ಲತ್ತಿ ಗ್ರಾಮದ ಗಾಮಪ್ಪ ಅವರ ಬಾವಿಗೆ ಸಂಬಂಧಪಟ್ಟಂತೆ ಭೀಮನೇರಿ ಪಂಚಾಯ್ತಿಯಲ್ಲಿ ಈ ಬಗ್ಗೆ ಯಾವುದೇ ದಾಖಲೆಯಿಲ್ಲ. ಆದರೂ, ಜಿಲ್ಲಾ ಪಂಚಾಯ್ತಿ ದಾಖಲೆಗಳ ಪ್ರಕಾರ ಇದು ಸರ್ಕಾರಿ ಬಾವಿ. ಈಗ ಈ ವಿಷಯ ಲೋಕಾಯುಕ್ತರವರೆಗೂ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT