ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೋಬ್ರಾಗಡೆ ಶೋಧದ ವಿಡಿಯೋ ಸುಳ್ಳು, ಕುಚೇಷ್ಟೆಯದ್ದು: ಅಮೆರಿಕ

Last Updated 4 ಜನವರಿ 2014, 12:39 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಭಾರತದ ಹಿರಿಯ ರಾಜತಂತ್ರಜ್ಞೆ ದೇವಯಾನಿ ಖೋಬ್ರಾಗಡೆ ಅವರ ವಿವಸ್ತ್ರ ಶೋಧನೆಯ ಸಿಸಿಟಿವಿ ದೃಶ್ಯ ಎನ್ನಲಾದ ವಿಡಿಯೋ ದೃಶ್ಯಾವಳಿಯನ್ನು  'ಕುಚೇಷ್ಟೆ' ಎಂದು ಹೇಳುವ ಮೂಲಕ ಅಮೆರಿಕ ತಳ್ಳಿಹಾಕಿದೆ.

ದೇವಯಾನಿ ಖೋಬ್ರಾಗಡೆ ಅವರನ್ನು ಬಂಧಿಸಿದ ಬಳಿಕ ನಡೆಸಲಾಯಿತು ಎನ್ನಲಾದ ವಿವಸ್ತ್ರ ಶೋಧನೆಯ ಸಿಸಿಟಿವಿ ವಿಡಿಯೋ ದೃಶ್ಯಾವಳಿ 'ಅಪಾಯಕಾರಿ ಮತ್ತು ಪ್ರಚೋದನಾತ್ಮಕ  ಸೃಷ್ಟಿ' ಎಂದು ಅಮೆರಿಕ ಹೇಳಿದೆ.

'ಈ ವಿಡಿಯೋ ನಮಗೆ ತಿಳಿದಿರುವಂತೆ ಖೋಬ್ರಾಗಡೆ ಅವರಿಗೆ ಸಂಬಂಧಿಸಿದ ವಿಡಿಯೋ ದೃಶ್ಯಾವಳಿ ಅಲ್ಲ. ಇದನ್ನು ನಾವು ಅಪಾಯಕಾರಿ ಮತ್ತು ಪ್ರಚೋದನಾತ್ಮಕ ಸೃಷ್ಟಿ ಎಂದು ಕರೆಯುತ್ತೇವೆ' ಎಂದು ವಿದೇಶಾಂಗ ಇಲಾಖೆಯ ವಕ್ತಾರರಾದ ಮೇರಿ ಹಾರ್ಫ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿರುವ ಈ ವಿಡಿಯೋದಲ್ಲಿ ಅಧಿಕಾರಿಗಳು ಬಂಧಿತ ಮಹಿಳೆಯೊಬ್ಬರ ವಿವಸ್ಥ್ರ ಶೋಧ ನಡೆಸುವ ದೃಶ್ಯವಿತ್ತು. ಶೋಧನೆ ವೇಳೆ ಮಹಿಳೆ ಕಿರಿಚಾಡುತ್ತಿದ್ದ ದೃಶ್ಯ ಇದರಲ್ಲಿ ಇತ್ತು.

'ಕೆಲವು ಸುದ್ದಿ ಜಾಲ ತಾಣಗಳಲ್ಲಿ ಪ್ರಸಾರಗೊಂಡಿರುವ ಈ ಸೃಷ್ಟಿತ ವಿಡಿಯೋ ನಿಶ್ಚಿತವಾಗಿ ಅಧಿಕೃತತೆ ಬಗ್ಗೆ ದೃಢಪಡಿಸಿಕೊಂಡದ್ದಲ್ಲ ಎಂದು ನಾನು ಎಣಿಸುತ್ತೇನೆ. ಏಕೆಂದರೆ ಅದು ಅಧಿಕೃತವಾದದ್ದಲ್ಲ. ಇದು ಸಮಸ್ಯೆ ಹುಟ್ಟು ಹಾಕುವಂತಹುದು, ಬೇಜವ್ಬಾರಿಯದ್ದು ಮತ್ತು ಭಂಡ ದೈರ್ಯದ್ದು. ಈ ಅಪಾಯಕಾರಿ ಸೃಷ್ಟಿಯನ್ನು ನಾವು ಮತ್ತೊಮ್ಮೆ ಖಂಡಿಸುತ್ತೇವೆ. ಇದು ಅಕೆಯ ವಿಡಿಯೋ ಅಲ್ಲ ಎಂಬುದನ್ನು ಸ್ಪಷ್ಟ ಪಡಿಸಲು ನಾನು ಬಯಸುತ್ತೇನೆ' ಎಂದು ಹಾರ್ಫ್ ನುಡಿದರು.

ನ್ಯೂಯಾರ್ಕ್ ನಲ್ಲಿ ಡೆಪ್ಯುಟಿ ಕಾನ್ಸುಲ್ ಜನರಲ್ ಆಗಿದ್ದ 1999ರ ತ<ಡದ ಐಎಫ್ ಎಸ್ ಅಧಿಕಾರಿ ಖೋಬ್ರಾಗಡೆ ಅವರನ್ನು ಕಳೆದ ತಿಂಗಳು ಅವರ ಕೆಲಸದಾಕೆಯ ವೀಸಾ ಅರ್ಜಿಗೆ ಸಂಬಂಧಿಸಿದಂತೆ ತಪ್ಪು ಪ್ರಮಾಣಪತ್ರಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಬಂಧಿಸಲಾಗಿತ್ತು. ನಂತರ ಅವರನ್ನು 2,50,000 ಅಮೆರಿಕನ್ ಡಾಲರ್ ಗಳ ಖಾತರಿ ಪತ್ರದ ಮೇಲೆ ಬಿಡುಗಡೆ ಮಾಡಲಾಗಿತ್ತು.

ಈ ಬಂಧನದ ಸಮಯದಲ್ಲಿ 39ರ ಹರೆಯದ ರಾಜತಂತ್ರಜ್ಞೆಯನ್ನು ವಿವಸ್ತ್ರಶೋಧಕ್ಕೆ ಒಳಪಡಿಸಿದ್ದು ಹಾಗೂ ಕ್ರಿಮಿನಲ್ ಅಪರಾಧಿಗಳ ಜೊತೆಗೆ ಇರಿಸಿದ್ದು ಭಾರತ ಮತ್ತು ಅಮೆರಿಕದ ಮಧ್ಯೆ ಭಾರಿ ವಿವಾದಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT