ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡು ಚಿರತೆ ದಾರುಣ ಸಾವು

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅರಣ್ಯ ಇಲಾಖೆ ಕಾರ್ಯಾಚರಣೆ ವಿಫಲ

ಜಗಳೂರು (ದಾವಣಗೆರೆ ಜಿಲ್ಲೆ): ಚಿರತೆ ಹಿಡಿಯುವ ಅರಣ್ಯ ಇಲಾಖೆಯ ಕಾರ್ಯಾಚರಣೆ ವಿಫಲವಾಗಿ ಬಲಿಷ್ಠ ಗಂಡು ಚಿರತೆಯೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಮಾಗಡಿ ಗ್ರಾಮದ ಸಮೀಪ ಮಂಗಳವಾರ ನಡೆದಿದೆ.

ಸುಮಾರು 5 ವರ್ಷದ ಗಂಡು ಚಿರತೆಯನ್ನು ಸುರಕ್ಷಿತವಾಗಿ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ದಿನವಿಡೀ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿ ಅಂತಿಮವಾಗಿ ಚಿರತೆ ಸಾವಿನಲ್ಲಿ ಅಂತ್ಯ ಕಂಡಿತು.

ಘಟನೆ ವಿವರ: ರಂಗಯ್ಯನದುರ್ಗ ಕೊಂಡುಕುರಿ ವನ್ಯಧಾಮದ ಅಂಚಿನಲ್ಲಿರುವ ಮಾಗಡಿ ಕೆರೆ ಹಿಂಭಾಗದಲ್ಲಿ ಸೋಮವಾರ ಸಂಜೆ ಮೇಕೆಯನ್ನು ಹೊತ್ತೊಯ್ದ ಚಿರತೆ ಕೆರೆಯ ತೂಬಿನೊಳಗೆ ಸೇರಿಕೊಂಡಿತ್ತು. ಕುರಿ ಕಾಯುತ್ತಿದ್ದ ಹುಡುಗ ಈ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ. ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಕೆರೆಯ ತೂಬಿನ ಎರಡೂ  ದ್ವಾರಗಳನ್ನು ದೊಡ್ಡ ಕಲ್ಲುಗಳಿಂದ ಮುಚ್ಚಿದ್ದರು.  ಮಂಗಳವಾರ ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯುವ ಬೋನು ತಂದು ಒಂದು ದ್ವಾರಕ್ಕೆ ಅಳವಡಿಸಿದರು. ಮತ್ತೊಂದೆಡೆ ದೊಡ್ಡ ಕಲ್ಲುಗಳನ್ನು ಹಾಕಿಮುಚ್ಚಲಾಗಿತ್ತು. 

ತಾಸುಗಟ್ಟಲೆ ಕಾದರೂ ಚಿರತೆ ಹೊರಗೆ ಬರಲಿಲ್ಲ. ನಂತರ ಟೈರ್ ಹಾಗೂ ಒಣಮೆಣಸಿನ ಕಾಯಿಯನ್ನು ಮತ್ತೊಂದು ಬದಿಯ ದ್ವಾರದಲ್ಲಿ ಹಾಕಿ ಬೆಂಕಿ ಹಚ್ಚಲಾಯಿತು. ತೀವ್ರ ಹೊಗೆಯಿಂದ ಕಂಗೆಟ್ಟ ಚಿರತೆ ದ್ವಾರಕ್ಕೆ ಅಂಟಿಕೊಂಡಂತೆ ಇಡಲಾಗಿದ್ದ ಬೋನಿನೊಳಗೆ ಪ್ರವೇಶಿಸಿತು.  ತಾಸುಗಟ್ಟಲೇ ಕಾದು ಕುಳಿತಿದ್ದ ಅರಣ್ಯ ಸಿಬ್ಬಂದಿ ಆ ಕ್ಷಣದಲ್ಲಿ ಊಟಕ್ಕೆ ತೆರಳಿದ್ದರು. ಚಿರತೆ ಬಂತು ಎಂದು ಸ್ಥಳದಲ್ಲಿ ನೆರೆದಿದ್ದ ಜನರು ಕೂಗು ಹಾಕುತ್ತಾ, ಆತುರದಲ್ಲಿ ಬೋನಿನ ಬಾಗಿಲನ್ನು ಸರಿಯಾಗಿ ಮುಚ್ಚದ ಕಾರಣ ಚಿರತೆ ಮತ್ತೆ ತೂಬಿನೊಳಕ್ಕೆ ಹಿಂತಿರುಗಿತು.

ನಂತರ ಮತ್ತೊಂದು ಬದಿಯಿಂದ ಕಬ್ಬಿಣದ ಸಲಾಕೆಯನ್ನು ತೂರಿಸುತ್ತಾ, ಮತ್ತಷ್ಟು ಬೆಂಕಿ ಹಚ್ಚಿ ಹೊಗೆ ಹಾಕಲಾಯಿತು. ಸಂಜೆ 6ರ ವೇಳೆಗೆ ಸುಟ್ಟ ಟೈರ್‌ನ ಯಥೇಚ್ಛವಾದ ಕಾರ್ಬನ್ ಡೈಆಕ್ಸೈಡ್ ಹೊಗೆಯಿಂದಾಗಿ ತೀವ್ರ ಬಳಲಿದ್ದ ಚಿರತೆ ಗರ್ಜಿಸುತ್ತಾ ಬೋನು ಪ್ರವೇಶಿಸಲು ಮುಂದಾಯಿತು. ಚಿರತೆ ತಲೆಯನ್ನು ಬೋನಿನೊಳಗೆ ಹಾಕುತ್ತಿದ್ದಾಗ ಆತುರವಾಗಿ ಬೋನಿನ ಕಬ್ಬಿಣದ ಬಾಗಿಲನ್ನು ಜನರು ಮೇಲಿನಿಂದ ಬಲವಾಗಿ ಹಾಕಿದ್ದರಿಂದ ಕುತ್ತಿಗೆ ಭಾಗಕ್ಕೆ ಬೋನಿನ ಬಾಗಿಲು ಸಿಲುಕಿಕೊಂಡು ಚಿರತೆಯ ಪ್ರಾಣಪಕ್ಷಿ ಹಾರಿಹೋಯಿತು. ಚಿರತೆಯ ಕಿವಿ ಹಾಗೂ ಕತ್ತಿನ ಭಾಗದಲ್ಲಿ ಗಾಯದ ಗುರುತುಗಳು ಕಂಡು ಬಂದಿವೆ.

ಮಾತಿನ ಚಕಮಕಿ:  ಬೆಂಕಿ ಹಾಕುವುದು, ಸಲಾಕೆ ತೂರಿಸುವುದು ಬೇಡ ಎಂದು ಸ್ಥಳದಲ್ಲಿ ಹಾಜರಿದ್ದ ಉಪ ಅರಣ್ಯ ಸಂರಕ್ಷಾಣಧಿಕಾರಿ ಎಸ್.ಎನ್. ಮಳುವಳ್ಳಿ ಅವರು ಗ್ರಾಮಸ್ಥರಲ್ಲಿ ಕೈ ಮುಗಿದು ಮನವಿ ಮಾಡಿದರು. ಈ ಚಿರತೆ ಮಾಗಡಿ ಗ್ರಾಮದಲ್ಲಿ ಇದುವರೆಗೆ 30ಕ್ಕೂ ಹೆಚ್ಚು ಕುರಿ, ಮೇಕೆಗಳನ್ನು ತಿಂದಿದೆ. ಹಾಗೇ ಬಿಟ್ಟರೇ ಹೇಗೆ ಎಂದು ಗ್ರಾಮಸ್ಥರು ಅಧಿಕಾರಿ ಮೇಲೆಯೇ ಆಕ್ರೋಶ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT