ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಭೀರ್‌ಗೆ ಭಾರಿ ಬೆಲೆ

Last Updated 9 ಜನವರಿ 2011, 12:40 IST
ಅಕ್ಷರ ಗಾತ್ರ

ಬೆಂಗಳೂರು: ಅಬ್ಬರದ ಬ್ಯಾಟಿಂಗ್‌ನಿಂದ ಎಲ್ಲಾ ಪ್ರಕಾರದ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿರುವ ಗೌತಮ್ ಗಂಭೀರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಾಲ್ಕನೇ ಅವತರಣಿಕೆಯ ಆಟಗಾರರ ಹರಾಜಿನಲ್ಲಿ ಭಾರಿ ಬೆಲೆಗೆ ಕೋಲ್ಕತ್ತ ನೈಟ್ ರೈಡರ್ಸ್ ಪಾಲಾದರು

ಯೂಸುಫ್ ಪಠಾಣ್‌ಗೆ ಉನ್ನತ ಮೌಲ್ಯವನ್ನು ಫ್ರಾಂಚೈಸಿಗಳು ನೀಡುತ್ತಾರೆನ್ನುವ ನಿರೀಕ್ಷೆಯು ಶನಿವಾರ ನಡೆದ ಐಪಿಎಲ್ ಆಟಗಾರರ ಮೊದಲ ಸುತ್ತಿನ ಹರಾಜಿನಲ್ಲಿ ಹುಸಿಯಾಯಿತು. ದೆಹಲಿಯ ಬ್ಯಾಟ್ಸ್‌ಮನ್ ಗಂಭೀರ್‌ಗೆ ರೂ. 11.40 ಕೋಟಿ ಬೆಲೆ ತೆತ್ತು ಶಾರೂಖ್ ಖಾನ್ ಒಡೆತನದ ರೈಡರ್ಸ್ ಖರೀದಿ ಮಾಡಿತು.

ಟ್ವೆಂಟಿ-20 ಕ್ರಿಕೆಟ್‌ಗೆ ಅಗತ್ಯವಾದ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವ ಯೂಸುಫ್ ಪಠಾಣ್ ಹಾಗೂ ಕೊಡಗಿನ ‘ಬ್ಯಾಟಿಂಗ್ ಕಲಿ’ ರಾಬಿನ್ ಉತ್ತಪ್ಪ ಅವರು ಮೊದಲ ಸುತ್ತಿನಲ್ಲಿ ಬೆಲೆ ಏರಿಸಿಕೊಂಡ ಕ್ರಿಕೆಟಿಗರ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ನಿಂತರು. ಇವರಿಬ್ಬರೂ ರೂ. 9.66 ಕೋಟಿಗೆ ಮಾರಾಟವಾದರು. ಯೂಸುಫ್ ಅವರನ್ನೂ ನೈಟ್ ರೈಡರ್ಸ್ ಕೊಂಡುಕೊಂಡಿತು. ರಾಬಿನ್ ಬಗ್ಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಆರಂಭದಲ್ಲಿ ಆಸಕ್ತಿ ತೋರಿಸಿದರೂ, ಬೆಲೆ ಏರಿದಂತೆ ತಣ್ಣಗಾಯಿತು. ಆನಂತರ ಕೊಚ್ಚಿ, ಪುಣೆ ವಾರೀಯರ್ಸ್ ಹಾಗೂ ಪಂಜಾಬ್ ಫ್ರಾಂಚೈಸಿಗಳ ನಡುವೆ ನಡೆದ ಬೆಲೆ ಏರಿಸುವ ಸ್ಪರ್ಧೆಯಲ್ಲಿ ಯಶಸ್ವಿಯಾಗಿದ್ದು ಪುಣೆಯ ತಂಡ.

ಅಚ್ಚರಿಯೊಂದು ಹರಾಜು ಪ್ರಕ್ರಿಯೆಯ ಮೊದಲ ದಿನ ನಡೆಯಿತು. ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ವೆಸ್ಟ್ ಇಂಡೀಸ್‌ನ ಬ್ರಯನ್ ಲಾರಾ ಹಾಗೂ ಕ್ರಿಸ್ ಗೇಲ್ ಅವರಂಥ ಖ್ಯಾತನಾಮರ ಕಡೆಗೆ ಫ್ರಾಂಚೈಸಿಗಳು ತಿರುಗಿಯೂ ನೋಡಲಿಲ್ಲ. ಇವರಷ್ಟೇ ಅಲ್ಲ ತಮೀಮ್ ಇಕ್ಬಾಲ್, ಚಾಮರ ಕಪುಗೆಡೆರಾ, ಮುರಳಿ ಕಾರ್ತಿಕ್, ಅಜಂತಾ ಮೆಂಡಿಸ್, ಗ್ರೇಮ್ ಸ್ವಾನ್, ಜೇಮ್ಸ್ ಆ್ಯಂಡರ್ಸನ್, ದಿಲ್ಹಾರಾ ಫರ್ನಾಂಡೊ, ಲುಕ್ ರೈಟ್, ಮ್ಯಾಟ್ ಪ್ರಿಯೊರ್, ಮಾರ್ಕ್ ಬೌಷರ್, ಗ್ರೇಮ್ ಮ್ಯಾನೂ, ಹರ್ಷೆಲ್ ಗಿಬ್ಸ್ ಹಾಗೂ ಜೆಸ್ಸಿ ರೈಡರ್ ಅವರ ಸ್ಥಿತಿಯೂ ಹೀಗೆಯೇ ಆಯಿತು.

72 ಆಟಗಾರರನ್ನು ಮೊದಲ ಸುತ್ತಿನಲ್ಲಿಯೇ ವಿವಿಧ ತಂಡಗಳ ಒಡೆಯರು ಕೊಂಡುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT