ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡುವು ಮುಕ್ತಾಯ: ನಾಮಪತ್ರ ಸಲ್ಲಿಕೆ `ದಾಖಲೆ'

Last Updated 18 ಏಪ್ರಿಲ್ 2013, 9:01 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ತಾಲ್ಲೂಕಿನ ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ 12 ಅಭ್ಯರ್ಥಿಗಳು ಬುಧವಾರ ನಾಮಪತ್ರಗಳನ್ನು ಸಲ್ಲಿಸಿದರು.

ಬಿಜೆಪಿ, ಕೆಜೆಪಿ, ಬಿಎಸ್‌ಪಿ ಮತ್ತು ಪಕ್ಷೇತರರು ಸೇರಿದಂತೆ ನಾಮಪತ್ರ ಸಲ್ಲಿಸಲು ಹಲವರು ತಾಲ್ಲೂಕು ಕಚೇರಿಗೆ ಲಗ್ಗೆ ಇಟ್ಟರು.
ಬಿಜೆಪಿ ಅಭ್ಯರ್ಥಿ ಸಿದ್ದರಾಜು ಚುನಾವಣಾಧಿಕಾರಿ ಕುಮುದಾ ಗಿರೀಶ್ ಅವರಿಗೆ ನಾಮಪತ್ರ ಸಲ್ಲಿಸಿ ಮಾತನಾಡಿದರು. ತಾಲ್ಲೂಕಿನ ಎ್ಲ್ಲಲ ಗ್ರಾಮಗಳ ಮತದಾರರು ಅತ್ಯಂತ ವಿಶ್ವಾಸದಿಂದ ನನ್ನನ್ನು ಕಾಣುತ್ತಿದ್ದು, ಹೆಚ್ಚು ಮತದ ಅಂತರದಿಂದ ಜಯಗಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಪ್ರಮುಖ ಮೂರು ಜಲಾಶಯಗಳು ಇದ್ದರೂ ಇಲ್ಲಿಯ ಜನರಿಗೆ ಕುಡಿಯುವ ನೀರಿಗೆ ತೊಂದರೆ ಇದೆ. ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಮೊದಲ ಆದ್ಯತೆ ನೀಡುತ್ತೇನೆ ಎಂದರು. ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಮತ್ತು ಗಡಿ ಭದ್ರತಾ ಪಡೆಯ ಸಿಬ್ಬಂದಿ ಹರಸಾಹಸ ಮಾಡಿದರು.

ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಎ.ಆರ್.ಕೃಷ್ಣಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಮಧುಸೂದನ್, ತೋಂಟದಾರ್ಯ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಇದ್ದರು.

ತಾಲ್ಲೂಕು ಬಿಜೆಪಿಯ ಎಚ್.ಪಿ.ಶಿವರಾಜಪ್ಪ, ರುದ್ರಪ್ಪ, ಬಸವರಾಜಪ್ಪ, ಬಿ.ಎಂ.ಶಂಕರಲಿಂಗೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯಲಕ್ಷ್ಮೀ ಇದ್ದರು.

14 ಅಭ್ಯರ್ಥಿಗಳು ಕಣದಲ್ಲಿ: ತಾಲ್ಲೂಕಿನ ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ಚಿಕ್ಕಣ್ಣ, ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಜೆಡಿಎಸ್‌ನಿಂದ ಹುಣಸೂರಿನ ಮಾಜಿ ಶಾಸಕ ಚಿಕ್ಕಮಾದು, ಎಂ.ಸಿ.ದೊಡ್ಡನಾಯಕ ಹಾಗೂ ಸಿ.ಬಸವರಾಜು ನಾಮಪತ್ರ ಸಲ್ಲಿಸಿದ್ದಾರೆ.

ಕೆಜೆಪಿಯಿಂದ ಡಾ.ಎಚ್.ವಿ.ಕೃಷ್ಣಸ್ವಾಮಿ ಹಾಗೂ ಬಂಡಾಯ ಅಭ್ಯರ್ಥಿ ಕೆ.ಬಿ.ಶಾಂತಪ್ಪ ನಾಮಪತ್ರ ಸಲ್ಲಿಸಿದ್ದು, ಬಿಎಸ್‌ಪಿಯಿಂದ ಗೋಪಾಲ್‌ಪೂಜಾರಿ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಎಲ್.ಸೋಮಣ್ಣ ಹಾಗೂ ಪಕ್ಷೇತರರಾಗಿ ಎಚ್.ವಿ.ನಾರಾಯಣಸ್ವಾಮಿ, ಶಿವನಂಜು, ಸೋಮನಾಯಕ, ಸಿ.ಜಯಪ್ರಕಾಶ್, ಎಸ್.ಎಚ್.ಸುಭಾಷ್ ನಾಮಪತ್ರ ಸಲ್ಲಿಸಿದ್ದಾರೆ.

ಕೃಷ್ಣಸ್ವಾಮಿ ನಾಮಪತ್ರ ಸಲ್ಲಿಕೆ: ಎಚ್.ಡಿ.ಕೋಟೆ ತಾಲ್ಲೂಕಿನ ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕೆಜೆಪಿ ಅಭ್ಯರ್ಥಿ ಎಚ್.ವಿ.ಕೃಷ್ಣಸ್ವಾಮಿ ಬುಧವಾರ ನಾಮಪತ್ರ ಸಲ್ಲಿಸಿ ಮಾತನಾಡಿದರು.

ಎಚ್.ಡಿ.ಕೋಟೆ ಹಿಂದುಳಿದ ತಾಲ್ಲೂಕಾಗಿದ್ದು, ಇಲ್ಲಿ ಹೆಚ್ಚಿನ ಕಾರ್ಖಾನೆ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿ ಮಾಡುವ ಕನಸನ್ನು ಹೊಂದಿದ್ದೇನೆ ಎಂದರು.

ಕೆಜೆಪಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಜಿ.ರಾಮಕೃಷ್ಣಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ.ಶಿವಣ್ಣ, ಶಿವಮಾದಪ್ಪ, ಸಿದ್ದನಾಯಕ, ವಿಶ್ವಾರಾಧ್ಯ ಮೊದಲಾದವರು ಇದ್ದರು.

ಮೀಸಲಾತಿ ಕಸಿಯುವವರ ವಿರುದ್ಧ ಸ್ಪರ್ಧೆ: ಎಚ್.ಡಿ.ಕೋಟೆ ಶಾಸಕ ಚಿಕ್ಕಣ್ಣ ಅವರ ಜಾತಿ ದೃಢೀಕರಣ ಪತ್ರಕ್ಕೆ ಸಂಬಂಧಿಸಿ ಸಂಶಯ ವ್ಯಕ್ತ ಪಡಿಸಿದ್ದ ಎಸ್.ಎಚ್.ಸುಭಾಷ್ ಬುಧವಾರ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ನಾಮಪತ್ರ ಸಲ್ಲಿಸುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಕಸಿದು ಕೊಳ್ಳುತ್ತಿರುವುದನ್ನು ನಿಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ನಾಮಪತ್ರಗಳ ಪರಿಶೀಲನೆ ಗುರುವಾರ ನಡೆಯಲಿದ್ದು, ಶಾಸಕ ಚಿಕ್ಕಣ್ಣ ಮತ್ತು ವಿಧಾನ ಪರಿಷತ್ ಸದಸ್ಯ ಸಿದ್ದರಾಜು ಅವರ ಜಾತಿ ದೃಢೀಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಚುನಾವಣಾಧಿಕಾರಿಗಳಿಗೆ ನೀಡುವುದಾಗಿ ತಿಳಿಸಿದರು.

ಶಾಸಕ ಚಿಕ್ಕಣ್ಣ ಅವರ ಜಾತಿ ದೃಢೀಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಶಾಸಕ ಚಿಕ್ಕಣ್ಣ ಅವರು ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿರುವ ಬಗ್ಗೆ ದಾಖಲೆಗಳನ್ನು ಪಡೆದು ನ್ಯಾಯಾಲಯಕ್ಕೆ ನೀಡುವುದಾಗಿ ತಿಳಿಸಿದರು.

ಹುಣಸೂರು: 18ಅಭ್ಯರ್ಥಿಗಳು ಕಣದಲ್ಲಿ
ಹುಣಸೂರು: ವಿಧಾನಸಭೆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸುವ ಕೊನೆಯ ದಿನವಾದ ಬುಧವಾರ ಹುಣಸೂರು ಕ್ಷೇತ್ರದಿಂದ ಒಟ್ಟು 29 ನಾಮಪತ್ರಗಳು ಸಲ್ಲಿಕೆಯಾಗಿವೆ. 18 ಅಭ್ಯರ್ಥಿಗಳು 29 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಿದವರು: ಎಚ್.ಪಿ.ಮಂಜುನಾಥ್ (ಕಾಂಗ್ರೆಸ್), ಕುಮಾರಸ್ವಾಮಿ (ಜೆ.ಡಿ.ಎಸ್.) ಅಣ್ಣಯ್ಯನಾಯಕ (ಬಿಜೆಪಿ) ಮಂಜುನಾಥ ಅರಸು (ಕೆಜೆಪಿ) ಸಿ.ಟಿ.ರಾಜಣ್ಣ (ಪಕ್ಷೇತರ), ಪಿ.ಪ್ರಕಾಶ್ (ಲೋಕಜನಶಕ್ತಿ) ದೇವಪ್ಪ ನಾಯಕ (ಬಿಎಸ್‌ಆರ್ ಕಾಂಗ್ರೆಸ್) ಎಚ್.ಪಿ.ನಾಗರಾಜ್ (ಬಿಎಸ್‌ಪಿ), ತಿಮ್ಮೇಗೌಡ (ಪಕ್ಷೇತರ) ರಾಜೇಗೌಡ (ಪಕ್ಷೇತರ), ಪುಟ್ಟನಂಜಯ್ಯ (ಎಸ್‌ಡಿಪಿಐ), ಲೋಕೇಶ್ (ಎಸ್‌ಜೆಪಿ), ಬಿ.ರಾಜಣ್ಣ (ಪಕ್ಷೇತರ), ಕೆ.ರೇವಣ್ಣ (ಪಕ್ಷೇತರ), ಹುಣಸೂರು ಕೆ.ಚಂದ್ರಶೇಖರ್ (ಡೆಮೊಕ್ರಾಟಿಕ್ ಪ್ರಜಾ ಕ್ರಾಂತಿ) ಎಚ್.ಕೆ.ಭಾಗ್ಯಮ್ಮ (ಪಕ್ಷೇತರ), ಅಯ್ಯಪ್ಪಚಾರ್ (ಭಾರತೀಯ ಪ್ರಜಾಶಕ್ತಿ), ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಕುಮಾರಸ್ವಾಮಿ  ವಿರುದ್ಧ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಟಿ.ರಾಜಣ್ಣ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಕೊನೆಯ ದಿನ: ನಾಮಪತ್ರ ಸಲ್ಲಿಕೆ ಭರಾಟೆ: ವಿಧಾನಸಭೆಗೆ ಸ್ಪರ್ಧಿಸಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ವಾದ್ಯವೃಂದಗಳ ಸಮೇತ ಮಿನಿ ವಿಧಾನಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು.

ಕೆಜೆಪಿಯಿಂದ ದೇವರಾಜ ಅರಸು ಮೊಮ್ಮಗ, ಮಾಜಿ ಸಚಿವೆ ಚಂದ್ರಪಭಾ ಅರಸು ಪುತ್ರ ಮಂಜುನಾಥ ಅರಸು ಅವರು ಎಪಿಎಂಸಿ ಬಳಿಯ ತಾತಯ್ಯನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಿಳಿಕೆರೆ ರಾಜು ನೇತೃತ್ವದಲ್ಲಿ  ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಜೆಡಿಎಸ್ ಬಂಡಾಯ ಅಭ್ಯರ್ಥಿ ಎಂದು ಗುರುತಿಸಿಕೊಂಡಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಟಿ.ರಾಜಣ್ಣ ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ಎಸ್‌ಡಿಪಿಐ ಪಕ್ಷದ ಅಭ್ಯರ್ಥಿ ಪುಟ್ಟನಂಜಯ್ಯ ಆಟೊ ಮೆರವಣಿಗೆ ಮೂಲಕ ಕಾರ್ಯಕರ್ತರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಉಳಿದಂತೆ ಬಿಎಸ್‌ಆರ್, ಎಸ್‌ಜೆಪಿ ಪಕ್ಷದ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ನೀತಿ ಸಂಹಿತೆ ಉಲ್ಲಂಘನೆ: ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಚುನಾವಣಾ ಕಚೇರಿ ಎದುರಿನಲ್ಲೇ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು. ಈ ಬಗ್ಗೆ ಚುನಾವಣಾ ಅಧಿಕಾರಿಗಳು ಗಮನಹರಿಸಿಲ್ಲ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಸಾರ್ವಜನಿಕರು ದೂರಿದರು.

ಕೆ.ಆರ್.ಕ್ಷೇತ್ರ: 7ಮಂದಿ ಕಣದಲ್ಲಿ
ಕೆ.ಆರ್.ನಗರ: ಕೃಷ್ಣರಾಜನಗರ ವಿಧಾನಸಭೆ ಕ್ಷೇತ್ರದಲ್ಲಿ 7 ಅಭ್ಯರ್ಥಿಗಳಿಂದ 12 ನಾಮಪತ್ರಗಳು ಬುಧವಾರ ಸಲ್ಲಿಕೆಯಾಗಿವೆ.
ಜೆಡಿಎಸ್‌ನಿಂದ ಸಾ.ರಾ.ಮಹೇಶ್, ಕಾಂಗ್ರೆಸ್‌ನಿಂದ ದೊಡ್ಡಸ್ವಾಮೇಗೌಡ, ಬಿಜೆಪಿಯಿಂದ ಎಂ.ಪಿ.ಕುಮಾರ್, ಕೆಜೆಪಿಯಿಂದ ಕೆ.ಎನ್.ಬಸಂತ್ ನಂಜಪ್ಪ, ಬಿಎಸ್‌ಪಿಯಿಂದ ಲಕ್ಷ್ಮಣ್, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಮಹದೇವಸ್ವಾಮಿ ಮತ್ತು ಪಕ್ಷೇತರರಾಗಿ ಮಹದೇವ್ ಮತ್ತು ಶಿವರಾಜು ನಾಮಪತ್ರ ಸಲ್ಲಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಅವರು ಪತ್ನಿ ಅನಿತಾ ಮಹೇಶ್, ಮಾಜಿ ಸಚಿವ ಎಚ್.ಡಿ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಬುಧವಾರ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಸಾ.ರಾ.ಮಹೇಶ್ ಪತ್ರಕರ್ತರೊಂದಿಗೆ ಮಾತನಾಡಿ, ತಾಲ್ಲೂಕಿನಲ್ಲಿ ಕಳೆದ ಐದು ವರ್ಷಗಳಿಂದ ಮಾಡಿದ ನನ್ನ ಸೇವೆಯನ್ನು ಮತದಾರರು ಗುರುತಿಸಿದ್ದಾರೆ. ನಾಮಪತ್ರ ಸಲ್ಲಿಸುವಾಗ ಹಿಂದೆಂದೂ ನೋಡಿರದಷ್ಟು ಜನ ಬಂದಿದ್ದಾರೆ. ಇದರಿಂದ ನನ್ನ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ ಎಂದರು.

ಕೆಜೆಪಿ ಅಭ್ಯರ್ಥಿ ಕೆ.ಎನ್.ಬಸಂತ್ ನಂಜಪ್ಪ ಅವರು ತಂದೆ ಮಾಜಿ ಸಚಿವ ಎಸ್.ನಂಜಪ್ಪ ಮತ್ತು ತಾಯಿ ಲಲಿತಮ್ಮ, ಮುಖಂಡರಾದ ಕುಪ್ಪೆ ಪ್ರಕಾಶ್, ಲಾಯರ್ ಸತೀಶ್, ರಾಜಣ್ಣ, ಮಂಜುನಾಥ್, ಬಾಲೂರು ನಂಜುಂಡೇಗೌಡ, ಹೆಬ್ಬಾಳು ವೇಣು ಸೇರಿದಂತೆ ಹಲವರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಒಡ್ಡುವ ಆಸೆ ಆಮಿಷಗಳಿಗೆ ಮತದಾರರು ಒಳಗಾಗಬಾರದು ಎಂದರು.
ಬಿಜೆಪಿ ಅಭ್ಯರ್ಥಿ ಎಂ.ಪಿ.ಕುಮಾರ್ ಅವರು ತಾಲ್ಲೂಕು ಘಟಕದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮುಖಂಡರಾದ ಕೆ.ಸಿ.ಶಿವಕುಮಾರ್, ಡಾ.ದೇವಪಾಲ್, ಪುರಸಭೆ ಮಾಜಿ ಸದಸ್ಯ ಎನ್.ರವಿ, ಲಾಳನಹಳ್ಳಿ ಮಹೇಶ್ ಸೇರಿದಂತೆ ಇತರರೊಂದಿಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

13ವಾಹನಗಳು ವಶಕ್ಕೆ: ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಅವರು ಬುಧವಾರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅನುಮತಿ ಪಡೆಯದೇ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ವಾಹನಗಳಲ್ಲಿ ಜನರನ್ನು ತುಂಬಿಕೊಂಡು ಬಂದ ಆರೋಪದ ಮೇಲೆ ಪಟ್ಟಣದ ಪೊಲೀಸರು 13ವಾಹನಗಳನ್ನು ವಶಕ್ಕೆ ಪಡೆದುಕೊಂಡು ದೂರು ದಾಖಲಿಸಿಕೊಂಡಿದ್ದಾರೆ.

ಪಿರಿಯಾಪಟ್ಟಣ: 8ಮಂದಿ ಕಣದಲ್ಲಿ
ಪಿರಿಯಾಪಟ್ಟಣ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಸೇರಿದಂತೆ ಹಲವರು ನಾಮಪತ್ರ ಸಲ್ಲಿಸಿದರು.

ವಿಧಾನ ಸಭಾ ಚುನಾವಣೆಗೆ ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಅಕ್ಷರಶಃ ಜನಜಾತ್ರೆಯಾಗಿತ್ತು.  ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸಾವಿರಾರು ಜನ ಮೆರವಣಿಗೆಯಲ್ಲಿ ಸಾಗಿದರು. 

ಸೋಮವಾರ ಕೆಲವೇ ಕೆಲವು ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದ ಶಾಸಕ ಕೆ.ವೆಂಕಟೇಶ್ ಬುಧವಾರ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.

ಶಾಸಕರ ಪುತ್ರ ನಿತಿನ್ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಜುಲಾರಾಜ್, ಕಾವೇರಿ ಶೇಖರ್, ಮಾಜಿ ಸದಸ್ಯರಾದ ಎಸ್.ಟಿ.ರಾಜಶೇಖರ್, ಎಚ್.ಆರ್.ಗೋಪಾಲ್, ಎಪಿಎಂಸಿ ಅಧ್ಯಕ್ಷ ಹೊಲದಪ್ಪ, ಟಿಎಪಿಎಂಎಸ್ ಅಧ್ಯಕ್ಷ ಪುಟ್ಟರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಸ್.ರಾಮು ಸೇರಿದಂತೆ ಸಾವಿರಾರು ಮಂದಿ ಹಾಜರಿದ್ದರು.
ಮಾಜಿ ಶಾಸಕ ಎಚ್.ಸಿ.ಬಸವರಾಜ್ ಸಹ ಕೆಜೆಪಿ ಪಕ್ಷದಿಂದ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಅಭ್ಯರ್ಥಿ ಸಣ್ಣಮೊಗೆಗೌಡ ತಮ್ಮ ಬೆಂಬಲಿಗರೊಂದಿಗೆ ಪಟ್ಟಣದ ಮಸಣಿಕಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಉಪ್ಪಾರಗೇರಿಯಿಂದ ಮೆರವಣಿಗೆಯಲ್ಲಿ ಹೊರಟು ಬಿ.ಎಂ.ರಸ್ತೆಯ ಮುಖಾಂತರ ತಾಲ್ಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿ ಬಸವರಾಜ್‌ವಿಧಾನಪರಿಷತ್ ಸದಸ್ಯ ಸಿ.ಎಚ್.ವಿಜಯ್‌ಶಂಕರ್, ಮಾಜಿ ಶಾಸಕ ಮೇದಪ್ಪ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ.ಜಿ.ಅಪ್ಪಾಜಿಗೌಡ, ಮುಖಂಡರಾದ ಆರ್.ಟಿ.ಸತೀಶ್, ವಿಕ್ರಂರಾಜ್, ಕಷ್ಣಪ್ರಸಾದ್, ರಾಜೇಗೌಡ, ಬೆಮ್ಮತ್ತಿ ಕಷ್ಣ, ಅಣ್ಣೇಗೌಡ ಕಷ್ಣೇಗೌಡ ಹಾಜರಿದ್ದರು.  ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ ಸಾವಿರಾರು ಕಾರ್ಯಕರ್ತರೊಂದಿಗೆ ಮಸಣಿಕಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಬಿ.ಎಂ.ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ತಾಲ್ಲೂಕು ಕಚೇರಿಯಲ್ಲಿಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಪತ್ನಿ ಸುಭದ್ರಮ್ಮ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸುಚಿತ್ರಾ, ಸದಸ್ಯರಾದ ಎಂ.ಪಿ.ಚಂದ್ರೇಶ್, ಎಸ್.ಎ.ಶಿವಣ್ಣ, ಮುಖಂಡರಾದ ಜವರೇಗೌಡ, ಗೋವಿಂದೇಗೌಡ, ತಾ.ಪಂ.ಸದಸ್ಯ ಅತ್ತರ್‌ಮತೀನ್, ಶಂಕರೇಗೌಡ, ಪ್ರಕಾಶ್ ಹಾಜರಿದ್ದರು.

ಕೆಜೆಪಿ ಅಭ್ಯರ್ಥಿ ಎಚ್.ಸಿ.ಬಸವರಾಜ್ ಕೂಡ ಬುಧವಾರ ಮತ್ತೊಮ್ಮೆ  ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಮುಖಂಡರಾದ ಆರ್.ಎಸ್.ಕುಮಾರ ವಿಜಯ, ವಕೀಲ ಶಿವಸ್ವಾಮಿ ಇದ್ದರು.

ಭಾರತೀಯ ಪ್ರಜಾಪಕ್ಷದ ಅಭ್ಯರ್ಥಿ ಕಣಗಾಲು ಪುಟ್ಟರಾಜ್, ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ಶಶಿಕುಮಾರ್ ಕೂಡ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಕೊನೆಯ ದಿನದ ಹೊತ್ತಿಗೆ ಒಟ್ಟು 8 ಮಂದಿ ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.

ತಿ.ನರಸೀಪುರ: 10ಅಭ್ಯರ್ಥಿಗಳಿಂದ 16 ನಾಮಪತ್ರ ಸಲ್ಲಿಕೆ
ತಿ.ನರಸೀಪುರ: ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಬುಧವಾರ ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಸೇರಿದಂತೆ 10 ಅಭ್ಯರ್ಥಿಗಳಿಂದ ಒಟ್ಟು 16 ನಾಮಪತ್ರಗಳು ಸಲ್ಲಿಕೆಯಾಗಿವೆ.

ಪಟ್ಟಣದ ಗುಂಜಾನರಸಿಂಹ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಕೆಜೆಪಿ ಅಭ್ಯರ್ಥಿ ಪುಟ್ಟಬಸವಯ್ಯ ತಮ್ಮ ಅಪಾರ ಬೆಂಬಲಿಗರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ನಂತರ ಚುನಾವಣಾ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಎಚ್.ಎಲ್.ಪ್ರಭಾಕರ್ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಜೆಡಿಯು ನಿಂದ ಶ್ರಿನಿವಾಸ, ಬಿಎಸ್‌ಆರ್‌ನಿಂದ ಮಹಾದೇವ್, ಜೆಡಿಎಸ್‌ನಿಂದ ಸಾಮ್ರೋಟ್ (ಪರ್ಯಾಯ ಅಭ್ಯರ್ಥಿ), ಭಾರತೀಯ ಅಂಬೇಡ್ಕರ್ ಜನತಾ ಪಕ್ಷದಿಂದ ದೊಡ್ಡಮಾದಯ್ಯ, ಪಕ್ಷೇತರರಾಗಿ ಸಂಪತ್ ಕುಮಾರ್, ಕುಮಾರ ಕ್ರಾಂತಿ, ರೇಣುಕಾ, ನಿಂಗಯ್ಯ, ಬಿ.ಪಿ.ಸುರೇಂದ್ರ, ರಂಗಸ್ವಾಮಿ ನಾಮಪತ್ರಗಳನ್ನು ಸಲ್ಲಿಸಿದರು.

ಕಳೆದ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಡಾ.ಎಚ್.ಸಿ.ಮಹಾದೇವಪ್ಪ, ಬಿಜೆಪಿಯಿಂದ ಸಿ.ರಮೇಶ್, ಜೆಡಿಎಸ್‌ನಿಂದ ಎಂ.ಸಿ.ಸುಂದರೇಶ್, ಪಕ್ಷೇತರರಾಗಿ ನಂಜುಂಡಸ್ವಾಮಿ, ಮಾದಪ್ಪ ನಾಮಪತ್ರ ಸಲ್ಲಿಸಿದ್ದರು.

ಮಂಗಳವಾರ ಹಿಂದುಸ್ಥಾನ್ ನಿರ್ಮಾಣ ದಳದಿಂದ ಸಿದ್ದಯ್ಯ, ಪಕ್ಷೇತರರಾಗಿ ಶಾಂತರಾಜು, ಶಿವಶಂಕರ್, ಮಾದಪ್ಪ ಉಮೇದುವಾರಿಕೆ ಸಲ್ಲಿಸಿದ್ದರೆ, ಬಿ.ಎಂ.ಶ್ರಿಕಂಠವರ್ಧನ ಪಕ್ಷೇತರರಾಗಿ ಮೊದಲ ನಾಮಪತ್ರ ಸಲ್ಲಿಸಿದ್ದರು.

ವರುಣಾ ಕ್ಷೇತ್ರ: 32 ಅಭ್ಯರ್ಥಿಗಳು ಸ್ಪರ್ಧೆ- ನಂಜನಗೂಡಿಗೆ 16 ಮಂದಿ ನಾಮಪತ್ರ ಸಲ್ಲಿಕೆ 
ನಂಜನಗೂಡು: ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಬುಧವಾರ ವರುಣಾ ಕ್ಷೇತ್ರದಿಂದ ಬಿಜೆಪಿಯ ಎಸ್.ಡಿ.ಮಹೇಂದ್ರ ಸೇರಿ 17 ಮಂದಿ (ಈ ಪೈಕಿ ಇಬ್ಬರು ಎರಡನೇ ಬಾರಿಗೆ ಸಲ್ಲಿಕೆ) ಉಮೇದುವಾರಿಕೆ ಸಲ್ಲಿಸಿದರು. ನಂಜನಗೂಡು ಕ್ಷೇತ್ರದಿಂದ 6 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಈವರೆಗೆ ಒಟ್ಟಾರೆ ವರುಣಾದಲ್ಲಿ 32 ಅಭ್ಯರ್ಥಿಗಳು 51 ನಾಮಪತ್ರ, ನಂಜನಗೂಡಿನಲ್ಲಿ 16 ಮಂದಿ 26 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.

ವರುಣಾದಲ್ಲಿ ಜೆಡಿಎಸ್ ಅಭ್ಯರ್ಥಿಯಾದ ನಿವೃತ್ತ ಪೊಲೀಸ್ ಅಧಿಕಾರಿ ಎನ್.ಚಲುವರಾಜು ಸೋಮವಾರವೇ ನಾಮಪತ್ರ ಸಲ್ಲಿಸಿದ್ದು, ಬುಧವಾರ ಎರಡನೇ ಬಾರಿ ನಾಮಪತ್ರ ಸಲ್ಲಿಸಿದರು. ಅದೇ ರೀತಿ ಪಕ್ಷೇತರ ಅಭ್ಯರ್ಥಿ ಎಂ.ನಾಗೇಂದ್ರ ಮಂಗಳವಾರ ಮತ್ತು ಬುಧವಾರ ಉಮೇದುವಾರಿಕೆ ಸಲ್ಲಿಸಿದರು. ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕೆಜೆಪಿ, ಬಿಎಸ್‌ಪಿ, ಬಿಎಸ್‌ಆರ್ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಉಳಿದಂತೆ ರಿಪಬ್ಲಿಕನ್ ಪಕ್ಷ (ಎ), ಸಮಾಜವಾದಿ ಜನತಾ ಪಕ್ಷ, ಹಿಂದೂಸ್ತಾನ್ ನಿರ್ಮಾಣ ದಳ ಸೇರಿದಂತೆ ಇತರ ಪಕ್ಷಗಳು ಮತ್ತು ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ. ಗುರುವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ವಾಪಸ್ ಪಡೆಯಲು ಶನಿವಾರ ಕೊನೆದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT