ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ: 3 ಜಿಲ್ಲೆಗಳಲ್ಲಿ ಪರಿಸರ ಪುನಶ್ಚೇತನ

Last Updated 14 ಡಿಸೆಂಬರ್ 2012, 9:19 IST
ಅಕ್ಷರ ಗಾತ್ರ

ಬೆಂಗಳೂರು: ಗಣಿಗಾರಿಕೆಯಿಂದ ನಲುಗಿರುವ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಪರಿಸರ ವ್ಯವಸ್ಥೆಯ ಪುನರುಜ್ಜೀವನಕ್ಕಾಗಿ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಪರಿಷತ್ತಿನ ಮಹಾನಿರ್ದೇಶಕ ಡಾ.ವಿ.ಕೆ.ಬಹುಗುಣ ನೇತೃತ್ವದ ತಜ್ಞರ ತಂಡವು ಸಮಗ್ರ ಪರಿಸರ ನಿರ್ವಹಣಾ ಯೋಜನೆಯನ್ನು ಗುರುವಾರ ಅಂತಿಮಗೊಳಿಸಿದೆ.

ಮುಂದಿನ ಹತ್ತು ವರ್ಷಗಳಲ್ಲಿ ಇ-ಟೆಂಡರ್ ಮೂಲಕ ಅದಿರು ಕಂಪೆನಿಗಳಿಂದ ಸಂಗ್ರಹವಾಗುವ 30,286.37 ಕೋಟಿ ರೂಪಾಯಿಗಳನ್ನು ಮೂರು ಜಿಲ್ಲೆಗಳ ಪರಿಸರ ಪುನರುಜ್ಜೀವನಕ್ಕೆ ಬಳಸಲು ನಿರ್ಧರಿಸಲಾಗಿದೆ. ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ತಜ್ಞರ ತಂಡವು ಅಧ್ಯಯನ ಮಾಡಿ ಯೋಜನೆಯನ್ನು ಅಂತಿಮಗೊಳಿಸಿದೆ. ಬುಧವಾರ ಮತ್ತು ಗುರುವಾರ ತಂಡವು ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿದೆ. ಎರಡು ಜಿಲ್ಲೆಗಳಲ್ಲಿ ಜಿಲ್ಲಾಡಳಿತ, ಅಧಿಕಾರಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಈ ಮೊತ್ತದಲ್ಲಿ ಶೇ 62 ಮೊತ್ತವನ್ನು ಬಳ್ಳಾರಿ ಜಿಲ್ಲೆಗೆ, ಶೇ 24.5 ಮೊತ್ತವನ್ನು ಚಿತ್ರದುರ್ಗ ಜಿಲ್ಲೆಗೆ, ಶೇ 10.2 ಮೊತ್ತವನ್ನು ತುಮಕೂರು ಜಿಲ್ಲೆಗೆ, ಶೇ 3.4 ಮೊತ್ತವನ್ನು ಉಳಿದ ಪ್ರದೇಶಗಳು ಹಾಗೂ ಆಡಳಿತ ಉದ್ದೇಶಕ್ಕೆ ಬಳಸಲಾಗುವುದು. ಪ್ರತಿ ಜಿಲ್ಲೆಯಲ್ಲಿ ಶೇ 50 ಹಣವನ್ನು ಜಿಲ್ಲಾ ಅಥವಾ ವಲಯ ಮಟ್ಟದ ಚಟುವಟಿಕೆಗೆ, ಶೇ 30 ಮೊತ್ತವನ್ನು ಹೋಬಳಿ ಮಟ್ಟಕ್ಕೆ, ಶೇ 20 ಹಣವನ್ನು ಗ್ರಾಮ ಅಥವಾ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಬಳಸಲು ನಿರ್ಧರಿಸಲಾಗಿದೆ. ಈ ಮೊತ್ತವನ್ನು 11 ವಲಯಗಳಲ್ಲಿ ವ್ಯವಸ್ಥೆಯ ಪುನರುಜ್ಜೀವನಕ್ಕೆ ಬಳಸಲಾಗುವುದು.

ಯೋಜನೆಯ ಸಮಗ್ರ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಹಿರಿಯ ಅಧಿಕಾರಿಗಳ ತಂಡ (ಎಸ್‌ಪಿವಿ) ರಚಿಸಲಿದೆ. ಈ ತಂಡದ ಮೂಲಕ ಯೋಜನೆಯ ಸಮರ್ಪಕ ಅನುಷ್ಠಾನ, ಮೇಲ್ವಿಚಾರಣೆ, ಮೌಲ್ಯಮಾಪನ ಮಾಡಲಾಗುವುದು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ತಂಡಕ್ಕೆ ಮುಖ್ಯಸ್ಥರಾಗಿರುವರು. ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸದಸ್ಯರಾಗಿರುವರು.

ಗುರುವಾರ ಇಲ್ಲಿ ಡಾ.ವಿ.ಕೆ.ಬಹುಗುಣ ಪತ್ರಿಕಾಗೋಷ್ಠಿಯಲ್ಲಿ ಈ ಯೋಜನೆಯ ಮಾಹಿತಿ ನೀಡಿ, `ಸಾಮಾಜಿಕ- ಆರ್ಥಿಕ ಹಾಗೂ ಪರಿಸರವಿಜ್ಞಾನದ ಅಭಿವೃದ್ಧಿ ಯೋಜನೆಯ ಉದ್ದೇಶ. ಗಣಿಗಾರಿಕೆಯಿಂದ ಸಮಸ್ಯೆಗೆ ಸಿಲುಕಿದ ಜನರಿಗೆ ನೆರವಾಗಲು ಸುಸ್ಥಿರ ನಿರ್ವಹಣೆ, ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿಪಡಿಸುವುದು ಅಗತ್ಯ' ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT