ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣ್ಯರ ವಿಚಾರಣೆ ಜೈಲು ಆವರಣದಲ್ಲಿ ನಡೆಯಲಿ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್, ವಿಧಾನಸೌಧ, ರಾಜಭವನಕ್ಕೆ ಒದಗಿಸಿರುವಂತೆ ನಗರ ಸಿವಿಲ್ ಕೋರ್ಟ್‌ಗೂ ಭದ್ರತೆ ಒದಗಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ವಕೀಲರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಅಲ್ಲದೇ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ಚಿತ್ರನಟ ದರ್ಶನ್ ಮುಂತಾದ ಗಣ್ಯ ವ್ಯಕ್ತಿಗಳ ವಿಚಾರಣೆಯನ್ನು ಭದ್ರತೆ ದೃಷ್ಟಿಯಿಂದ ಫ್ರೀಡಂ ಪಾರ್ಕ್ ಇಲ್ಲವೇ ಕೇಂದ್ರ ಕಾರಾಗೃಹದಲ್ಲಿ ನೆರವೇರಿಸಲು ಆದೇಶಿಸುವಂತೆಯೂ `ಐದು ವರ್ಷಗಳ ಕಾನೂನು ಪದವೀಧರರ ಸಂಘ~ವು ಅರ್ಜಿಯಲ್ಲಿ ಕೋರಿದೆ.

ಸಿವಿಲ್ ಕೋರ್ಟ್ ಆವರಣದಲ್ಲಿಯೇ ಲೋಕಾಯುಕ್ತ, ಸಿಬಿಐ ವಿಶೇಷ ಕೋರ್ಟ್‌ಗಳು ಇರುವ ಹಿನ್ನೆಲೆಯಲ್ಲಿ ಅವರ ವಿಚಾರಣೆ ಈಗ ಅಲ್ಲಿಯೇ ನಡೆಯುತ್ತಿದೆ.

ಈ ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ನೋಟಿಸ್ ಜಾರಿಗೆ ಆದೇಶಿಸಿದೆ.

ಸಿವಿಲ್ ಕೋರ್ಟ್ ಆವರಣಕ್ಕೆ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಜನರು ಬರುತ್ತಾರೆ. ಆದರೆ ಭದ್ರತೆ ಮಾತ್ರ ಇಲ್ಲ. ಆವರಣದೊಳಕ್ಕೆ ಹಲವಾರು ವಾಹನಗಳು ಬರುತ್ತಿವೆ. ಬೀದಿ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚಿದೆ. ಕೋರ್ಟ್ ಆವರಣದೊಳಕ್ಕೆ ಇರುವ ಮಳಿಗೆಗಳಿಗೆ ಪರವಾನಗಿ ಇಲ್ಲ. ಇವೆಲ್ಲವನ್ನೂ ಸರಿಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಲಾಗಿದೆ.

ಬೆದರಿಕೆ: ರಕ್ಷಣೆ ವಿಸ್ತರಣೆ: ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ವಿರುದ್ಧ ಭೂಹಗರಣಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಿರುವ ಎನ್.ರಾಮಾಂಜನಪ್ಪ ಅವರಿಗೆ ನೀಡಲಾದ ಪೊಲೀಸ್ ರಕ್ಷಣೆಯನ್ನು ತನ್ನ ಮುಂದಿನ ಆದೇಶದವರೆಗೆ ವಿಸ್ತರಣೆ ಮಾಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಶುಕ್ರವಾರ ಆದೇಶಿಸಿದೆ.

ಇವರಿಗೆ 2010ರ ಡಿಸೆಂಬರ್‌ನಲ್ಲಿ ರಕ್ಷಣೆ ನೀಡಲಾಗಿತ್ತು. ಅದನ್ನು 2011ರ ಜುಲೈನಲ್ಲಿ ವಿಸ್ತರಣೆ ಮಾಡಲಾಗಿತ್ತು. ಕಳೆದ ಡಿ.10ರಂದು ಅದನ್ನು ಹಿಂದಕ್ಕೆ ಪಡೆಯಲಾಗಿದೆ. ಅದನ್ನು ರಾಮಾಂಜನಪ್ಪ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ರಕ್ಷಣೆ ಹಿಂದಕ್ಕೆ ಪಡೆದಿರುವ ಕುರಿತು ಮಾಹಿತಿ ನೀಡುವಂತೆ ಗುರುವಾರ ಸರ್ಕಾರಕ್ಕೆ ಕೋರ್ಟ್ ನಿರ್ದೇಶಿಸಿತು. ರಕ್ಷಣೆ ನೀಡಲು ಕೋರ್ಟ್ ನೀಡಿರುವ ಅವಧಿ ಫೆ.11ರಂದು ಮುಗಿದ ಹಿನ್ನೆಲೆಯಲ್ಲಿ ಹಿಂದಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರು ರಕ್ಷಣೆ ವಿಸ್ತರಣೆ ಮಾಡಲು ಆದೇಶಿಸಿದರು.

ಇಸ್ಕಾನ್‌ನಿಂದ ಮನವಿ: ನಗರದ ಪಶ್ಚಿಮ ಕಾರ್ಡ್ ರಸ್ತೆ ಬಳಿ ಇರುವ `ಇಸ್ಕಾನ್~ ದೇವಾಲಯ ಹಾಗೂ ಅದರ ಆಸ್ತಿಪಾಸ್ತಿಗೆ ಸಂಬಂಧಿಸಿದ ತೀರ್ಪಿನಲ್ಲಿ ತಮ್ಮ ವಿರುದ್ಧ ಹೈಕೋರ್ಟ್ ಆಡಿರುವ `ಕಟುನುಡಿ~ಗಳನ್ನು ತೆಗೆದುಹಾಕುವಂತೆ ಬೆಂಗಳೂರು ಇಸ್ಕಾನ್ ಅಧ್ಯಕ್ಷ ಮಧುಪಂಡಿತ ದಾಸ್, ಉಪಾಧ್ಯಕ್ಷ ಚಂಚಲಪತಿ ದಾಸ್ ಸೇರಿದಂತೆ ಇತರರು ಕೋರ್ಟ್ ಮೊರೆ ಹೋಗಿದ್ದಾರೆ.

ಈ ಸಂಬಂಧ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ವಿಭಾಗೀಯ ಪೀಠ `ಮುಂಬೈ-ಇಸ್ಕಾನ್~ಗೆ ನೋಟಿಸ್ ಜಾರಿಗೆ ಶುಕ್ರವಾರ ಆದೇಶಿಸಿದೆ.

ಬೆಂಗಳೂರು ಮತ್ತು ಮುಂಬೈ ಇಸ್ಕಾನ್ ನಡುವೆ ಈ ಜಟಾಪಟಿ ನಡೆದಿತ್ತು. `ಮುಂಬೈ ಇಸ್ಕಾನ್~ ಪರವಾಗಿ ಕೋರ್ಟ್ ತೀರ್ಪು ನೀಡಿದೆ. `ಮುಂಬೈ-ಇಸ್ಕಾನ್‌ಗೆ ಸೇರಿರುವ ಜಮೀನು ಇತ್ಯಾದಿ ಆಸ್ತಿ-ಪಾಸ್ತಿಗಳ ದಾಖಲೆಗಳಲ್ಲಿ ತಮ್ಮ ನಕಲಿ ಮೊಹರು ಹಾಕಿಸಿಕೊಳ್ಳುವಲ್ಲಿ ಬೆಂಗಳೂರು ಇಸ್ಕಾನ್ ಯಶಸ್ವಿಯಾಗಿದೆ.
ಮುಂಬೈ ಇಸ್ಕಾನ್ ಹೆಸರನ್ನು ದುರುಪಯೋಗಪಡಿಸಿಕೊಂಡು ಆಸ್ತಿ ತನ್ನ ವಶ ಮಾಡಿಕೊಂಡಿದೆ ಎಂದು ತೀರ್ಪಿನಲ್ಲಿ ಪೀಠ ತರಾಟೆಗೆ ತೆಗೆದುಕೊಂಡಿದೆ.

ಈ ವಿವಾದದಲ್ಲಿ ತಮ್ಮ ವಾದವನ್ನು ಆಲಿಸದೆ ಏಕಾಏಕಿ ಕಟು ಮಾತು ಹೇಳಲಾಗಿದೆ. ತಮ್ಮದು ಯಾವುದೇ ತಪ್ಪು ಇಲ್ಲ ಎನ್ನುವುದು ಅವರ ವಾದ. ವಿಚಾರಣೆ ಮುಂದೂಡಲಾಗಿದೆ.

ಶಾಸಕನ ಬಂಧನವಿಲ್ಲ
ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಗೆ ಒಳಗಾಗಿರುವ ನಗರದ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಅವರ ಪತ್ನಿ ವಾಣಿಶ್ರೀ ಅವರನ್ನು ಪೊಲೀಸರು ಬಂಧಿಸುವುದಿಲ್ಲ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು.

ತಮ್ಮನ್ನು ಪೊಲೀಸರು ಬಂಧಿಸುವ ಭಯದಿಂದ ನಿರೀಕ್ಷಣಾ ಜಾಮೀನು ಕೋರಿ ದಂಪತಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ವಕೀಲರು ಈ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಇತ್ಯರ್ಥಗೊಳಿಸಿದರು.

`ವಿಶ್ವನಾಥ್ ಸುಮಾರು 70 ಕೋಟಿ ರೂಪಾಯಿಗಳಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಕರ್ನಾಟಕ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸೇರಿರುವ ಸುಮಾರು ಮೂರೂವರೆ ಎಕರೆ ಜಮೀನನ್ನು ಹೆಸರಘಟ್ಟ ಹಾಗೂ ಶ್ರೀರಾಮನಹಳ್ಳಿಯಲ್ಲಿ ಹೊಂದಿದ್ದಾರೆ~ ಎನ್ನುವ ಆರೋಪ ಎದುರಿಸುತ್ತಿದ್ದಾರೆ. ದಂಪತಿ ವಿರುದ್ಧ ಶಶಿಧರ್ ಎನ್ನುವವರು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದೂರು ದಾಖಲು ಮಾಡಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಕೋರ್ಟ್ ಆದೇಶಿಸಿದೆ. ಇದರಿಂದ ಬಂಧನದ ಭೀತಿ ವಿಶ್ವನಾಥ್ ದಂಪತಿಗೆ ಎದುರಾಗಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT