ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಗ್ರಂಥಾಲಯ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ಗ್ರಂಥಾಲಯದ ಓಬೀರಾಯನ ಪರಿಕಲ್ಪನೆಗೆ ಹೊರತಾಗಿ ನಗರದ ಗಾಂಧೀಭವನ ಕಾಣುತ್ತಿದೆ. ಅಲ್ಲಿ ಪುಸ್ತಕ ಭಂಡಾರವೊಂದರ ಸ್ಥಾಪನೆಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದಾಗಿದೆ.

1965ರಲ್ಲಿ ಕರ್ನಾಟಕದಲ್ಲಿ ಗಾಂಧಿ ಸ್ಮಾರಕ ಭವನ ಆರಂಭವಾಯಿತು. ಗಾಂಧಿ ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸುವ ಆಕಾಂಕ್ಷಿಗಳಿಗೆ ಎಲ್ಲಾ ಪುಸ್ತಕಗಳು ಒಂದೆಡೆ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಅದು ಶುರುವಾದದ್ದು. 1956ರಲ್ಲಿ ಮೈಸೂರು ರಾಜ್ಯದಡಿ ಗಾಂಧಿ ಸ್ಮಾರಕ ನಿಧಿ ಸ್ಥಾಪನೆಯಾಗಿ 1963ರಲ್ಲಿ ನೋಂದಣಿಯಾಯಿತು. ಆಗಿನ ಕಾಲಕ್ಕೆ 3.87 ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಗಾಂಧಿಭವನ ಕಟ್ಟಡ ನಿರ್ಮಾಣವಾಗಿತ್ತು. ಆ ಬಳಿಕ ಸಿದ್ದವನಹಳ್ಳಿ ಕೃಷ್ಣಶರ್ಮ ಅವರ ಸಂಪಾದಕತ್ವದಲ್ಲಿ ಹಲವಾರು ಸಾಹಿತ್ಯದ ಕೃತಿಗಳನ್ನು ಪ್ರಕಟಿಸಲಾಯಿತು. ಈವರೆಗೆ  ಗಾಂಧಿ ಭವನವು ಒಟ್ಟು 10,502 ಕೃತಿಗಳನ್ನು ಹೊರತಂದಿದೆ.

ಸಾರ್ವಜನಿಕರ ಓದಿಗೆ ಅವಕಾಶವಿಲ್ಲದ ಈ ಭವನದಲ್ಲಿ ಗಾಂಧಿ ಕುರಿತ ಸಾವಿರಾರು ಪುಸ್ತಕಗಳು ಸೂಕ್ತ ನಿರ್ವಹಣೆ ಇಲ್ಲದೆ ರಾಶಿಯಾಗಿ ಬಿದ್ದಿದ್ದವು. ಅವುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಗ್ರಂಥಾಲಯದ ರೂಪ ನೀಡುವ ಜವಾಬ್ದಾರಿಯನ್ನು ಇಲಾಖೆ ಹೊತ್ತುಕೊಂಡಿತು. ಇದೀಗ ಮಹಾತ್ಮ ಗಾಂಧಿಗೆ ಸಂಬಂಧಿಸಿದ ಸುಮಾರು 45,000 ಗ್ರಂಥಗಳು ಇಲ್ಲಿ ಲಭ್ಯ. ಅಮೂಲ್ಯ ಹಾಗೂ ವಿರಳವಾದ ಪತ್ರಿಕಾ ಪ್ರಕಟಣೆಗಳು, 1931ರಲ್ಲಿ ಹೊರಬರುತ್ತಿದ್ದ `ಯಂಗ್ ಇಂಡಿಯಾ~ ಸಂಚಿಕೆಯ 14 ಸಂಪುಟಗಳು, ಕನ್ನಡ `ಹರಿಜನ~ ಪತ್ರಿಕೆಯ ಪ್ರತಿಗಳೂ ಗ್ರಂಥಾಲಯದಲ್ಲಿವೆ.

ಈ ಸಂಗ್ರಹವನ್ನು ಅನೇಕ ವಿಭಾಗಗಳಾಗಿ ವಿಂಗಡಿಸಲಾಗಿದೆ. ಗಾಂಧಿ ಸ್ವರಚಿತ ಕೃತಿಗಳನ್ನೆಲ್ಲಾ ಒಂದೆಡೆ ಸಿಗುವಂತೆ ಅಣಿಮಾಡಲಾಗಿದೆ. ಅವರ ರಚನೆಯ ಕನ್ನಡಕ್ಕೆ ಅನುವಾದಗೊಂಡ 478 ಕೃತಿಗಳಿವೆ. ಇಂಗ್ಲಿಷ್‌ನ 1368 ಹಾಗೂ ಹಿಂದಿಯ 573 ಪುಸ್ತಕಗಳೂ ಲಭ್ಯ. ಗಾಂಧಿಯವರ ಸಂಗ್ರಹ ಗ್ರಂಥದ 100 ಸಂಪುಟಗಳು, ಭೂದಾನ ಪತ್ರಿಕೆಗಳು, ಕೈಬರಹಗಳು, ಜರ್ಮನ್ ಭಾಷೆಯ ಪುಸ್ತಕಗಳು, ಶಬ್ದಕೋಶಗಳು, ಭಾರತೀಯ ವಿದ್ಯಾಭವನ ಗಾಂಧಿ ಬಗ್ಗೆ ಪ್ರಕಟಿಸಿದ 25 ಸಂಪುಟಗಳು, ಅಂಡರ್‌ಗ್ರೌಂಡ್ ಪತ್ರಿಕೆಗಳು, ಹಳೆ ಕಾಲದ ಪತ್ರಗಳು, ಮೊಮೆಂಟೊ, ವಿನೊಬಾ ಹಾಗೂ ಕುವೆಂಪುರವರ ಸಹಿಗಳ ಸಂಗ್ರಹ ಈ ಗ್ರಂಥಾಲಯದಲ್ಲಿದೆ.

ಇದಲ್ಲದೆ ಸ್ವಾತಂತ್ರ್ಯ ಸಂಗ್ರಾಮದ ಆಂದೋಲನದಲ್ಲಿ ಪಾಲ್ಗೊಂಡ ಅನೇಕ ರಾಷ್ಟ್ರೀಯ ನಾಯಕರ ಕೃತಿಗಳಿವೆ. ಖಾದಿ ಕುರಿತ 23 ಪುಸ್ತಕಗಳು, ರಬೀಂದ್ರನಾಥ ಟ್ಯಾಗೋರ್ ಬರೆದ 58 ಹಾಗೂ ನೆಹರೂ ವಿರಚಿತ 52 ಪುಸ್ತಕಗಳಿವೆ. 18ನೇ ದಶಕದ ನೂರಕ್ಕೂ ಅಧಿಕ ಪುಸ್ತಕಗಳೂ ಈ ಸಂಗ್ರಹದಲ್ಲಿವೆ.

ಗಾಂಧೀಜಿಗೆ ಸಂಬಂಧಿಸಿದ ಅನೇಕ ಸೀಡಿ, ಭಾಷಣದ ತುಣುಕು, ಸಾಕ್ಷಚಿತ್ರ ಹಾಗೂ ಚಲನಚಿತ್ರಗಳನ್ನು ಕೇಳಲು ಹಾಗೂ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮುಂದೆ ಇದೇ ಯೋಜನೆಯನ್ನು ವಿಸ್ತರಿಸಿ ಪ್ರತಿ ವಾರಾಂತ್ಯಕ್ಕೆ ಶಾಲಾ ವಿದ್ಯಾರ್ಥಿಗಳನ್ನು ಕರೆತಂದು ಪ್ರೊಜೆಕ್ಟರ್ ಮೂಲಕ ಸಾಕ್ಷ್ಯಚಿತ್ರ ಇಲ್ಲವೇ ಚಲನಚಿತ್ರಗಳನ್ನು  ಪ್ರದರ್ಶಿಸುವ ಪ್ರಯತ್ನವೂ ಇಲಾಖೆಯಿಂದ ನಡೆಯಲಿದೆ.

ಗಾಂಧೀಜಿ ಸಾಹಿತ್ಯ ಸಂಗ್ರಹದ ಮಟ್ಟಿಗೆ ಇದೊಂದು ವಿಶಿಷ್ಟ ಪ್ರಯತ್ನ. ಸ್ವ ಆಸಕ್ತಿಯಿಂದ, ಮಾಹಿತಿಗಾಗಿ ಇಲ್ಲವೇ ಸಂಶೋಧನೆಗಾಗಿ ಈ ಭಂಡಾರವನ್ನು ಬಳಸಿಕೊಳ್ಳಬಹುದು. ಇಂದಿನ ಯುವ ಪೀಳಿಗೆಯಲ್ಲಿ ಗಾಂಧಿ ಬಗ್ಗೆ ಕುಸಿಯುತ್ತಿರುವ ಆಸಕ್ತಿ ಹಾಗೂ ಸಂಪೂರ್ಣ ಅಧ್ಯಯನಕ್ಕೆ ಮಾಹಿತಿಯ ಕೊರತೆಯನ್ನು ನೀಗಿಸಲೆಂದೇ ಈ ಗ್ರಂಥಾಲಯ ತೆರೆಯಲಾಗಿದೆ ಎಂಬುದು ನಿರ್ದೇಶಕ ಕೆ.ಜಿ.ವೆಂಕಟೇಶ್ ಅವರ ಅಭಿಪ್ರಾಯ.

ಉದ್ಯಾನನಗರಿಯಲ್ಲಿ 150 ಶಾಖೆಗಳ ಮೂಲಕ ಸಾರ್ವಜನಿಕರಿಗೆ ಜ್ಞಾನಕ್ಷೀರ ಉಣಬಡಿಸುತ್ತಿರುವ ಗ್ರಂಥಾಲಯ ಇಲಾಖೆ ಇತ್ತೀಚೆಗಷ್ಟೇ ಜಯದೇವ ಆಸ್ಪತ್ರೆಯ ಆವರಣದಲ್ಲಿ ಶಾಖೆಯೊಂದನ್ನು ತೆರೆಯುವ ಮೂಲಕ ಓದುಗವರ್ಗದವರಿಂದ ಪ್ರಶಂಸೆ ಪಡೆದಿದೆ. ಕೆಎಸ್‌ಆರ್‌ಸಿಟಿ ಬಳಿ ಕಟ್ಟಡವೊಂದು ದೊರೆಯುವ ಸಾಧ್ಯತೆಗಳಿದ್ದು ಸದ್ಯದಲ್ಲೇ ಅಲ್ಲೂ ಒಂದು ಶಾಖೆ ಆರಂಭಗೊಳ್ಳಲಿದೆ.
ಗ್ರಂಥಾಲಯಗಳು ಜನಸಾಮಾನ್ಯನ ವಿಶ್ವವಿದ್ಯಾಲಯವಿದ್ದಂತೆ ಎಂಬ ಮಾತೊಂದಿದೆ. ಗಾಂಧಿ ಬಗ್ಗೆ ನಿಮಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿ, ಕುತೂಹಲ ಇದ್ದರೆ ತಡ ಏಕೆ...ಇಂದೇ ಬನ್ನಿ.. ಗಾಂಧಿ ಮಹಾತ್ಮನ ಕುರಿತು ಓದಿ...

ಗಾಂಧಿ ಸ್ಮಾರಕ ನಿಧಿ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ:
ಶುಕ್ರವಾರ ಮಹಾತ್ಮಾಗಾಂಧಿ ಶಾಖಾ ಗ್ರಂಥಾಲಯದ ಉದ್ಘಾಟನೆ. ಗ್ರಂಥಾಲಯ ಲೋಕಾರ್ಪಣೆ: ಸಚಿವರಾದ ರೇವುನಾಯಕ್ ಬೆಳಮಗಿ ಹಾಗೂ ಎಸ್.ಸುರೇಶ್ ಕುಮಾರ್. ಉದ್ಘಾಟನೆ: ಮೇಯರ್ ಪಿ. ಶಾರದಮ್ಮ.

ಅಧ್ಯಕ್ಷತೆ: ಶಾಸಕ ಆರ್.ರೋಷನ್ ಬೇಗ್. ಅತಿಥಿಗಳು: ಸಂಸದ  ಪಿ.ಸಿ.ಮೋಹನ್, ಪಾಲಿಕೆ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ.
ಸ್ಥಳ: ಗಾಂಧೀಭವನ, ಕುಮಾರ ಪಾರ್ಕ್ ಪೂರ್ವ. ಬೆಳಿಗ್ಗೆ 10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT